ನವದೆಹಲಿ, ಫೆಬ್ರುವರಿ 1: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನ ವಹಿವಾಟು ಮೇಲೆ ಆರ್ಬಿಐ ನಿರ್ಬಂಧ (RBI restrictions) ಹಾಕಿರುವುದು ಬಹಳಷ್ಟು ಜನರನ್ನು ಗೊಂದಲಕ್ಕೆ ಕೆಡವಿದೆ. ಕೋಟ್ಯಂತರ ಜನರು ಪೇಟಿಎಂ ಬಳಕೆ ಮಾಡುತ್ತಿದ್ದು, ಅವರೀಗ ಆ್ಯಪ್ನಲ್ಲಿ ವಹಿವಾಟು ನಡೆಸಬೇಕೋ ಬೇಡವೋ ಎಂಬ ಸಂದಿಗ್ಧತೆಯಲ್ಲಿದ್ದಾರೆ. ಪೇಟಿಎಂ ಆ್ಯಪ್ನಲ್ಲಿ (Paytm) ಕೇವಲ ಯುಪಿಐ ವಹಿವಾಟು ಮಾತ್ರವಲ್ಲ, ಸಾಕಷ್ಟು ಸೇವೆಗಳು ಇವೆ. ಷೇರು ಮತ್ತು ಮ್ಯುಚುವಲ್ ಫಂಡ್ ವಹಿವಾಟು, ಟಿಕೆಟ್ ಬುಕಿಂಗ್, ಒನ್ಎನ್ಡಿಸಿ ಪ್ಲಾಟ್ಫಾರ್ಮ್, ಪೇಟಿಎಂ ಹೆಲ್ತ್, ಪೇಟಿಎಂ ಫಾಸ್ಟ್ಯಾಗ್ ಇತ್ಯಾದಿ ಸೇವೆಗಳಿವೆ. ಆದರೆ, ಆರ್ಬಿಐ ನಿರ್ಬಂಧ ಹಾಕಿರುವುದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ಗೆ (Paytm Payments Bank) ಮಾತ್ರವೇ. ಫಾಸ್ಟ್ಯಾಗ್, ವ್ಯಾಲಟ್ ಇತ್ಯಾದಿಯಲ್ಲಿ ನಿಮ್ಮ ಹಣ ಇದ್ದರೆ ಎಲ್ಲಿಯೂ ಹೋಗಲ್ಲ, ಚಿಂತೆ ಬೇಕಿಲ್ಲ.
ಬಹಳಷ್ಟು ಜನರು ಪೇಟಿಎಂ ವ್ಯಾಲಟ್ಗೆ ಹಾಗೂ ಫಾಸ್ಟ್ಯಾಗ್ಗೆ ಹಾಗೂ ಟ್ರಾನ್ಸಿಟ್ ಕಾರ್ಡ್ಗಳಿಗೆ ರೀಚಾರ್ಜ್ ಮಾಡಿಸಿರುತ್ತಾರೆ. ಆರ್ಬಿಐ ನಿರ್ಬಂಧ ಹಾಕಿರುವುದರಿಂದ ಇದರಲ್ಲಿರುವ ಹಣ ಹೋಗಬಹುದು ಎಂಬ ಸಹಜ ಭಯ ಎಲ್ಲರಲ್ಲೂ ಇದೆ. ಆದರೆ, ಈ ಪ್ರೀಪೇಡ್ ಇನ್ಸ್ಟ್ರುಮೆಂಟ್ಗಳಲ್ಲಿ ಹಾಕಲಾಗಿರುವ ಹಣ ಎಲ್ಲಿಯೂ ಹೋಗಲ್ಲ. ಆರ್ಬಿಐ ನಿರ್ಬಂಧದ ಪ್ರಕಾರ ಫೆಬ್ರುವರಿ 29ರವರೆಗೆ ಇವುಗಳಿಗೆ ಹಣ ತುಂಬಿಸಬಹುದು. ಅದಾದ ಬಳಿಕ ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ: ಹೊಸ ಡೆಪಾಸಿಟ್ ಪಡೆಯುವಂತಿಲ್ಲ; ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ಗೆ ಆರ್ಬಿಐ ನಿರ್ಬಂಧ; ಪೇಟಿಎಂ ಆ್ಯಪ್ ಬಳಸುವಂತಿಲ್ಲವಾ
ಈಗಾಗಲೇ ನೀವು ಫಾಸ್ಟ್ಯಾಗ್, ವ್ಯಾಲಟ್ ಇತ್ಯಾದಿಯಲ್ಲಿ ಹಣ ತುಂಬಿಸಿದ್ದರೆ ಚಿಂತೆ ಪಡಬೇಕಿಲ್ಲ. ನೀವದನ್ನು ಆಯಾಚಿತವಾಗಿ ಬಳಸಬಹುದು.
You can continue using the existing balances on your Paytm FASTag. We started our journey of working with other banks over the last two years, which we will now accelerate pic.twitter.com/clsDLVUD1N
— Paytm (@Paytm) February 1, 2024
‘ನೀವು ಪೇಟಿಎಂ ಫಾಸ್ಟ್ಯಾಗ್ನಲ್ಲಿ ಹಣ ಇದ್ದರೆ ಅದರ ಬಳಕೆಯನ್ನು ಮುಂದುವರಿಸಬಹುದು. ಕಳೆದ ಎರಡು ವರ್ಷದಲ್ಲಿ ಇತರ ಬ್ಯಾಂಕುಗಳೊಂದಿಗೆ ನಮ್ಮ ಪ್ರಯಾಣ ಆರಂಭಿಸಿದ್ದೆವು. ಈಗ ಆ ಪ್ರಕ್ರಿಯೆಯನ್ನು ಚುರುಕುಗೊಳಿಸುತ್ತೇವೆ,’ ಎಂದು ಪೇಟಿಎಂ ತನ್ನ ಎಕ್ಸ್ ಪ್ಲಾಟ್ಫಾರ್ಮ್ನಲ್ಲಿ ಪೋಸ್ಟ್ ಮಾಡಿದೆ.
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನಲ್ಲಿ ನೀವು ಖಾತೆ ಹೊಂದಿದ್ದು ಅದರಲ್ಲಿ ಹಣ ಹೊಂದಿದ್ದರೂ ಕೂಡ ಚಿಂತೆ ಪಡಬೇಕಿಲ್ಲ. ಹೊಸದಾಗಿ ಅಕೌಂಟ್ಗೆ ಠೇವಣಿ ಹಾಕುವ ಬದಲು, ಇರುವ ಹಣವನ್ನು ಬಳಕೆ ಮಾಡಿ, ಅಥವಾ ಬೇರೆ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಬಹುದು. ನಿಮ್ಮ ಹಣ ಏನೂ ಆಗುವುದಿಲ್ಲ. ಪೇಟಿಎಂ ಕೂಡ ಆರ್ಬಿಐನ ಎಲ್ಲಾ ನಿಬಂಧನೆಗಳನ್ನು ಪಾಲಿಸುವುದಾಗಿ ಹೇಳಿದೆ.
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ಗೆ ನಿರ್ಬಂಧ ಹಾಕಿದ್ದು ಯಾಕೆ?
ಬಾಹ್ಯ ಆಡಿಟರ್ಗಳು ನಡೆಸಿದ ಪರಿಶೀಲನೆ ವೇಳೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನಿಂದ ಕೆಲ ನಿಯಮ ಉಲ್ಲಂಘನೆಗಳಾಗಿರುವುದು ಕಂಡು ಬಂದಿದೆ. ಬ್ಯಾಂಕಿಂಗ್ ರೆಗ್ಯುಲೇಶನ್ ಕಾಯ್ದೆಯ ಸೆಕ್ಷನ್ 35ಎ ಅಡಿಯಲ್ಲಿ ಪೇಮೆಂಟ್ಸ್ ಬ್ಯಾಂಕ್ ವಿರುದ್ಧ ಆರ್ಬಿಐ ಕ್ರಮ ಕೈಗೊಂಡಿದೆ.
ಇದನ್ನೂ ಓದಿ: ಸ್ಟೆಮ್ ಕೋರ್ಸ್‌ಗಳಲ್ಲಿ ಮಹಿಳೆಯರ ದಾಖಲಾತಿ ಶೇ 28 ಹೆಚ್ಚಾಗಿದೆ: ನಿರ್ಮಲಾ ಸೀತಾರಾಮನ್
ಪೇಟಿಎಂನಲ್ಲಿ ಷೇರು ಮಾರುಕಟ್ಟೆ, ಮ್ಯುಚುವಲ್ ಫಂಡ್ ಇತ್ಯಾದಿ ವಹಿವಾಟು ಸೇವೆ ಇದೆ. ಇದು ಪೇಟಿಎಂ ಮನಿ ಎಂಬ ಬೇರೆ ಪ್ಲಾಟ್ಫಾರ್ಮ್ನಲ್ಲಿ ಆಗುತ್ತದೆ. ಈ ಪೇಟಿಎಂ ಮನಿ ಎಂಬುದು ಸೆಬಿ ಅಧೀನಕ್ಕೆ ಒಳಪಟ್ಟಿರುತ್ತದೆ. ಹೀಗಾಗಿ, ಆರ್ಬಿಐ ಹಾಕಿದ ನಿರ್ಬಂಧವು ಪೇಟಿಎಂ ಮನಿಗೆ ಅನ್ವಯ ಆಗುವುದಿಲ್ಲ.
ಇದಲ್ಲದೇ ಪೇಟಿಎಂನಲ್ಲಿ ಯುಪಿಐ ಸೇವೆ ಬಳಸಲು ಅಡ್ಡಿ ಇಲ್ಲ. ಪೇಟಿಎಂ ತನ್ನ ಯುಪಿಐ ಸೇವೆಗಾಗಿ ಪೇಮೆಂಟ್ಸ್ ಬ್ಯಾಂಕ್ ಅನ್ನು ಜೋಡಿಸಿಕೊಂಡಿತ್ತು. ಈಗ ಬೇರೆ ಬ್ಯಾಂಕುಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಯತ್ನಿಸುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:29 pm, Thu, 1 February 24