ಡಿಜಿಟಲ್ ಪೇಮೆಂಟ್ಸ್ ಅಂಡ್ ಫೈನಾನ್ಷಿಯಲ್ ಸರ್ವೀಸಸ್ ಪ್ಲಾಟ್ಫಾರ್ಮ್ ಆದ ಪೇಟಿಎಂನಿಂದ ಸೋಮವಾರ ಪೋಸ್ಟ್ಪೇಯ್ಡ್ ಮಿನಿ ಆರಂಭಿಸಲಾಗಿದೆ. Buy Now, Pay Later ಎಂಬ ಸೇವೆಯ ವಿಸ್ತರಣೆ ಭಾಗವಾಗಿ ಇದನ್ನು ಅನಾವರಣಗೊಳಿಸಲಾಗಿದೆ. ಯಾರಿಗೆ ಕೈಗೆಟುಕುವ ರೀತಿಯ ಸಾಲ ಬೇಕಾಗುತ್ತದೋ ಅಂಥವರಿಗೆ ಇದರಿಂದ ಅನುಕೂಲ ಆಗಲಿದೆ. ಸಣ್ಣ ಮೊತ್ತದ ಸಾಲವು ಬಳಕೆದಾರರಿಗೆ ಆರಾಮದಾಯಕವಾಗಿರುತ್ತದೆ. ಜತೆಗೆ ಈಗಿನ ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಕುಟುಂಬದ ಖರ್ಚುಗಳು ನಿಭಾಯಿಸಲು ನಗದು ಲಭ್ಯವಾಗುತ್ತದೆ. ಈ ಸೇವೆಯನ್ನು ಆದಿತ್ಯ ಬಿರ್ಲಾ ಫೈನಾನ್ಸ್ ಸಹಯೋಗದಲ್ಲಿ ಆರಂಭಿಸಲಾಗಿದೆ. ಈ ಸಣ್ಣ ಮೊತ್ತದ ಸಾಲದ ಮರುಪಾವತಿಗೆ 30 ದಿನದ ಅವಕಾಶ ಇರುತ್ತದೆ. ಅದರ ಮೇಲೆ ಶೂನ್ಯ ಬಡ್ಡಿ ದರ ಇರಲಿದೆ. ಯಾವುದೇ ವಾರ್ಷಿಕ ಶುಲ್ಕ ಅಥವಾ ಆ್ಯಕ್ಟಿವೇಷನ್ ದರಗಳು ಇಲ್ಲ. ಕನಿಷ್ಠ ಪ್ರಮಾಣದ ಕನ್ವೀನಿಯೆನ್ಸ್ ಶುಲ್ಕ ಮಾತ್ರ ಇರುತ್ತದೆ.
ಪೇಟಿಎಂ ಲೆಂಡಿಂಗ್ ಸಿಇಒ ಭಾವೇಶ್ ಗುಪ್ತಾ ಮಾತನಾಡಿ, ಸಾಲ ಪಡೆಯುವುದಕ್ಕೆ ಹೊಸಬರಾದವರಿಗೆ ನಾವು ಸಹಾಯ ಮಾಡುವುದಕ್ಕೆ ಬಯಸುತ್ತೇವೆ. ಆರ್ಥಿಕ ಶಿಸ್ತು ಅಭಿವೃದ್ಧಿ ಮಾಡಿಕೊಳ್ಳಲು ನೆರವು ನೀಡಲು ಇಚ್ಛಿಸುತ್ತೇವೆ. ಪೋಸ್ಟ್ಪೇಯ್ಸ್ ಮೂಲಕವಾಗಿ ದೇಶದ ಆರ್ಥಿಕತೆಯಲ್ಲಿ ಬಳಕೆ ಹೆಚ್ಚಿಸುವುದಕ್ಕೆ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮ ಹೊಸ ಪೋಸ್ಟ್ ಪೇಯ್ಡ್ ಮಿನಿ ಸೇವೆಯು ಬಳಕೆದಾರರಿಗೆ ಸರಿಯಾದ ಸಮಯಕ್ಕೆ ಬಿಲ್ಗಳನ್ನು ಪಾವತಿಸಿ, ನಗದು ನಿರ್ವಹಣೆಗೆ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
ಪೇಟಿಎಂನಿಂದ ಪೋಸ್ಟ್ಪೇಯ್ಡ್ ಮಿನಿ ಆರಂಭಿಸುವುದರೊಂದಿಗೆ 250 ರೂಪಾಯಿಯಿಂದ 1000 ರೂಪಾಯಿ ತನಕ ಸಾಲವನ್ನು ಒದಗಿಸುತ್ತದೆ. ಈಗಾಗಲೇ ಇರುವ ಪೇಟಿಎಂ ಪೋಸ್ಟ್ಪೇಯ್ಡ್ ಇನ್ಸ್ಟಂಟ್ ಸಾಲ ರೂ. 60,000 ಜತೆಗೆ ಈಗ ಹೊಸದಾಗಿ ಸೇರ್ಪಡೆ ಆಗಿದೆ. ಇದರಿಂದ ಬಳಕೆದಾರರ ತಿಂಗಳ ವೆಚ್ಚವನ್ನು ಪಾವತಿಸಲು ಇದರಿಂದ ನೆರವಾಗುತ್ತದೆ. ಮೊಬೈಲ್ ಬಿಲ್, ಡಿಟಿಎಚ್ ರೀಚಾರ್ಜ್, ಗ್ಯಾಸ್ ಸಿಲಿಂಡರ್ ಬುಕ್ಕಿಂಗ್, ಎಲೆಕ್ಟ್ರಿಸಿಟಿ, ನೀರಿನ ಬಿಲ್, ಪೇಟಿಎಂ ಮಾಲ್ನಲ್ಲಿ ಶಾಪಿಂಗ್ ಮತ್ತಿತರ ಕೆಲಸಗಳಿಗೆ ನೆರವಾಗುತ್ತದೆ.
ದೇಶದಲ್ಲಿನ ಆನ್ಲೈನ್- ಆಫ್ಲೈನ್ ಮರ್ಚಂಟ್ ಮಳಿಗೆಗಳಲ್ಲಿ ಬಳಕೆದಾರರು ಪಾವತಿಸಬಹುದು. ಪೇಟಿಎಂ ಪೋಸ್ಟ್ಪೇಯ್ಡ್ ಸದ್ಯಕ್ಕೆ ದೇಶದ ಸಾವಿರಾರು ಪೆಟ್ರೋಲ್ ಬಂಕ್ಗಳಲ್ಲಿ, ಕಿರಾಣಿ ಅಂಗಡಿಗಳಲ್ಲಿ ಅಥವಾ ಫಾರ್ಮಸಿಗಳಲ್ಲಿ, ಹೆಸರಾಂತ ಮಳಿಗೆಗಳು, ಇಂಟರ್ನೆಟ್ ಆ್ಯಪ್ಗಳು ಮತ್ತಿತರ ಕಡೆಗಳಲ್ಲಿ ಸ್ವೀಕರಿಸಲಾಗುತ್ತದೆ. ಭಾರತದ 550ಕ್ಕೂ ಹೆಚ್ಚು ನಗರಗಳಲ್ಲಿ ಪೇಟಿಎಂ ಪೋಸ್ಟ್ಪೇಯ್ಡ್ ಲಭ್ಯ ಇದೆ.
ಐಪಿಒ ಮೂಲಕವಾಗಿ 22 ಸಾವಿರ ಕೋಟಿ ರೂಪಾಯಿ ಸಂಗ್ರಹಿಸುವುದಕ್ಕೆ ಮೇ ತಿಂಗಳಲ್ಲಿ ಪೇಟಿಎಂ ಮಂಡಳಿಯಿಂದ ತಾತ್ವಿಕ ಒಪ್ಪಿಗೆ ಪಡೆಯಲಾಗಿದೆ. ಒಂದು ವೇಳೆ ಇದು ಯಶಸ್ವಿಯಾದಲ್ಲಿ ಭಾರತೀಯ ಕಂಪೆನಿಗಳಲ್ಲೇ ಅತಿ ದೊಡ್ಡ ಐಪಿಒ ಆಗಲಿದೆ. ಇನ್ನು ಪೇಟಿಎಂ 25ರಿಂದ 30 ಬಿಲಿಯನ್ ಯುಎಸ್ಡಿ ಮೌಲ್ಯಮಾಪನದ ಗುರಿಯನ್ನು ಇರಿಸಿಕೊಂಡಿದೆ. ಸದ್ಯಕ್ಕೆ ಕಂಪೆನಿಯ ಮೌಲ್ಯಮಾಪನ 16 ಬಿಲಿಯನ್ ಯುಎಸ್ಡಿ ಇದೆ.
ಇದನ್ನೂ ಓದಿ: ಡಿಜಿಟಲ್ ಇಂಡಿಯಾ ಮಿಷನ್ಗೆ 6 ವರ್ಷದ ಸಂಭ್ರಮ; ಎಲ್ಲ ವಹಿವಾಟುಗಳ ಮೇಲೂ ಪೇಟಿಎಂನಿಂದ ಕ್ಯಾಶ್ಬ್ಯಾಕ್ ಆಫರ್
(Paytm launched post paid mini scheme on Monday. Here is the details of the loan scheme)