ಡಿಜಿಟಲ್ ಇಂಡಿಯಾ ಮಿಷನ್ಗೆ 6 ವರ್ಷದ ಸಂಭ್ರಮ; ಎಲ್ಲ ವಹಿವಾಟುಗಳ ಮೇಲೂ ಪೇಟಿಎಂನಿಂದ ಕ್ಯಾಶ್‌ಬ್ಯಾಕ್ ಆಫರ್
ಡಿಜಿಟಲ್ ಇಂಡಿಯಾ ಮಿಷನ್ಗೆ 6 ವರ್ಷದ ಸಂಭ್ರಮ. ಈ ಸಂದರ್ಭದಲ್ಲಿ ಪೇಟಿಎಂನಿಂದ ಎಲ್ಲ ವಹಿವಾಟಿನ ಮೇಲೂ ಖಾತ್ರಿ ಕ್ಯಾಶ್‌ಬ್ಯಾಕ್ ಅನ್ನು ಪೇಟಿಎಂ ಡಿಜಿಟಲ್ ಪೇಮೆಂಟ್ ಆ್ಯಪ್ನಿಂದ ಘೋಷಣೆ ಮಾಡಲಾಗಿದೆ.
ಡಿಜಿಟಲ್ ಪೇಮೆಂಟ್ ಅಪ್ಲಿಕೇಷನ್ ಆದ ಪೇಟಿಎಂನಿಂದ ಭಾರತದಲ್ಲಿ ಗ್ಯಾರಂಟೀಡ್ (ಖಾತ್ರಿ) ಕ್ಯಾಶ್‌ಬ್ಯಾಕ್ ಆಫರ್ ತರಲಾಗಿದೆ. ಡಿಜಿಟಲ್ ಇಂಡಿಯಾ ಮಿಷನ್ ಆರಂಭಿಸಿದ ಆರನೇ ವರ್ಷಾಚರಣೆ ನಿಮಿತ್ತವಾಗಿ ಈ ಆಫರ್ ನೀಡಲಾಗುತ್ತಿದೆ. ಶುಕ್ರವಾರದಂದು ಕಂಪೆನಿಯು ತಿಳಿಸಿರುವ ಪ್ರಕಾರ, ಆ್ಯಪ್ ಮೂಲಕ ವರ್ತಕರು ಹಾಗೂ ಗ್ರಾಹಕರು ನಡೆಸುವ ವಹಿವಾಟಿನ ಮೇಲೆ ಕ್ಯಾಶ್‌ಬ್ಯಾಕ್ ನೀಡುವ ಸಲುವಾಗಿಯೇ 50 ಕೋಟಿ ರೂಪಾಯಿಯನ್ನು ಎತ್ತಿಡಲಾಗಿದೆ. ಈಗ ಬಳಕೆದಾರರು ಪೇಟಿಎಂ ಆ್ಯಪ್ ಬಳಸಿ ನಡೆಸುವ ಪ್ರತಿ ವ್ಯವಹಾರಕ್ಕೆ ಕ್ಯಾಶ್‌ಬ್ಯಾಕ್ ದೊರೆಯುತ್ತದೆ ಎಂದು ಕಂಪೆನಿ ಹೇಳಿದೆ. ಮಳಿಗೆಗಳಲ್ಲಿ ಪೇಟಿಎಂ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪಾವತಿಸುವ ಗ್ರಾಹಕರಿಗೂ ಕ್ಯಾಶ್‌ಬ್ಯಾಕ್ ಸಿಗುತ್ತದೆ. ಕಳೆದ ವರ್ಷ ಕಂಪೆನಿಯಿಂದ “ಆಲ್ ಇನ್ ಒನ್ ಕ್ಯೂಆರ್ ಕೋಡ್” ಆರಂಭಿಸಲಾಗಿದೆ. ಎಲ್ಲ ಯುಪಿಐ ಆಧಾರಿತ ಆ್ಯಪ್ಗಳ ಮೂಲಕವೂ ವರ್ತಕರು ಹಣವನ್ನು ಸ್ವೀಕರಿಸಲು ಇದರಿಂದ ಸಹಾಯ ಆಗುತ್ತದೆ. ಈ ಮೂಲಕವಾಗಿ ಪೇಟಿಎಂ ಆ್ಯಪ್ನ ಮೂಲಕ ಗ್ರಾಹಕರು ಯಾವುದೇ ಯುಪಿಐನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಹಣ ಪಾವತಿಸಬಹುದು.
ಇನ್ನು ಪೇಟಿಎಂನಿಂದ ವರ್ತಕರಿಗಾಗಿ ವಿಶೇಷ ಯೋಜನೆ ತರಲಾಗಿದೆ. ಯಾರು ಪೇಟಿಎಂ ಆ್ಯಪ್ ಬಳಸಿ ಹೆಚ್ಚಿನ ವಹಿವಾಟನ್ನು ನಡೆಸುತ್ತಾರೋ ಅಂಥವರಿಗೆ ಸರ್ಟಿಫಿಕೇಟ್ಗಳು ಮತ್ತು ಅದ್ಭುತ ರಿವಾರ್ಡ್ಗಳಾದ ಸೌಂಡ್ಬಾಕ್ಸ್ ಹಾಗೂ ಐಒಟಿ ಸಾಧನಗಳು ದೊರೆಯುತ್ತವೆ. ಡಿಜಿಟೈಸೇಷನ್ ಬಳಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ವರ್ತಕರಿಗೆ ಕಂಪೆನಿಯಿಂದ ತರಬೇತಿ ನೀಡಲಾಗುತ್ತದೆ. 200 ಜಿಲ್ಲೆಗಳಲ್ಲಿ ವರ್ತಕರ ಜತೆಗೆ ಫೀಲ್ಡಿಗೆ ಇಳಿದು ಚಟುವಟಿಕೆ ನಡೆಸುವುದಕ್ಕೆ ಯೋಜನೆ ರೂಪಿಸಿದೆ. ಖಾತ್ರಿಯಾದ ಕ್ಯಾಶ್‌ಬ್ಯಾಕ್ ಜತೆಗೆ ಬಿಜಿನೆಸ್ ಅಪ್ಲಿಕೇಷನ್ ಮೂಲಕ ಅರ್ಹ ವರ್ತಕರಿಗೆ ಶೇ 50ರ ರಿಯಾಯಿತಿಯಲ್ಲಿ ಸೌಂಡ್ಬಾಕ್ಸ್ ಒದಗಿಸುತ್ತದೆ. ಅಂದಹಾಗೆ ಈ ಗ್ಯಾರಂಟೀಡ್ ಕ್ಯಾಶ್‌ಬ್ಯಾಕ್ ಮುಂದಿನ ಆರು ತಿಂಗಳು ಇರುತ್ತದೆ.
“ಭಾರತವು ತನ್ನ ಡಿಜಿಟಲ್ ಇಂಡಿಯಾ ಮಿಷನ್‌ನಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಇದು ತಾಂತ್ರಿಕ ಪ್ರಗತಿಯೊಂದಿಗೆ ಎಲ್ಲರ ಸಬಲೀಕರಣ ಮಾಡುತ್ತದೆ. ಈ ಮಿಷನ್ ದೇಶದ ಬೆಳೆಯುತ್ತಿರುವ ಆರ್ಥಿಕತೆಗೆ ಕೊಡುಗೆ ನೀಡುತ್ತದೆ. ನಮ್ಮ ದೇಶದಲ್ಲಿ ಡಿಜಿಟಲ್ ಪಾವತಿಗಳನ್ನು ಮರು ವ್ಯಾಖ್ಯಾನಿಸುವ ಮೂಲಕ ಡಿಜಿಟಲ್ ರೂಪಾಂತರದ ಮುಂಚೂಣಿಯಲ್ಲಿ ನಾವಿದ್ದೇವೆ ಎಂದು ಗೌರವಿಸಲಾಗುತ್ತದೆ. ಭಾರತದ ಬೆಳವಣಿಗೆಯ ಹೃದಯಭಾಗದಲ್ಲಿ ಇರುವ ಮತ್ತು ಡಿಜಿಟಲ್ ಇಂಡಿಯಾವನ್ನು ಯಶಸ್ವಿಗೊಳಿಸಿದ ಉನ್ನತ ವ್ಯಾಪಾರಿಗಳನ್ನು ಗುರುತಿಸುವುದು ಪೇಟಿಎಂನ ಖಾತ್ರಿಪಡಿಸಿದ ಕ್ಯಾಶ್‌ಬ್ಯಾಕ್ ಪ್ರಸ್ತಾವದ ಗುರಿಯಾಗಿದೆ,”ಎಂದು ಪೇಟಿಎಂನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸ್ಥಾಪಕ ವಿಜಯ್ ಶೇಖರ್ ಶರ್ಮಾ ಹೇಳಿದ್ದಾರೆ.
ದೇಶದಲ್ಲಿ ನೋಟು ನಿಚೇಧದ ನಂತರದಲ್ಲಿ ತ್ವರಿತ ಮತ್ತು ಸುಲಭವಾದ ಡಿಜಿಟಲ್ ಪಾವತಿ ವ್ಯವಸ್ಥೆಗೆ ಹೊಂದಿಕೊಳ್ಳುವುದಕ್ಕೆ ಸಾವಿರಾರು ಗ್ರಾಹಕರು ಮತ್ತು ವ್ಯಾಪಾರಿಗಳನ್ನು ಪೇಟಿಎಂ ಸಬಲೀಕರಣಗೊಳಿಸಿದೆ. ಕೆಲವೇ ವರ್ಷಗಳಲ್ಲಿ, ಪೇಟಿಎಂ ಬಹು-ಸ್ಟಾಕ್ ಪಾವತಿ ಆರ್ಕಿಟೆಕ್ಚರ್ ರೂಪಿಸಿದೆ. ಇದರಲ್ಲಿ ಪೇಟಿಎಂ ವಾಲೆಟ್, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳು, ಯುಪಿಐ, ನೆಟ್ ಬ್ಯಾಂಕಿಂಗ್, ಪೇಟಿಎಂ ಪೋಸ್ಟ್‌ಪೇಯ್ಡ್ ಸೇರಿವೆ.
ಪೇಟಿಎಂ ಮಾಲೀಕತ್ವ ಹೊಂದಿರುವುದು ಮತ್ತು ನಿರ್ವಹಿಸುತ್ತಿರುವುದು ಒನ್ 97 ಕಮ್ಯುನಿಕೇಷನ್ಸ್. ಇದೀಗ ಪೇಟಿಎಂನಿಂದ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ರೂಪದಲ್ಲಿ ಹೊಸ ಷೇರುಗಳ ಮಾರಾಟ ಮೂಲಕ 12,000 ಕೋಟಿ ರೂಪಾಯಿ ಸಂಗ್ರಹಿಸಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: Paytm IPO: ಭಾರತದ ಅತಿದೊಡ್ಡ ಐಪಿಒಗೆ ಪೇಟಿಎಂ ಸಿದ್ಧತೆ; 21 ಸಾವಿರ ಕೋಟಿ ರೂ.ಗೂ ಹೆಚ್ಚು ಸಂಗ್ರಹಕ್ಕೆ ಇಂದು ತೀರ್ಮಾನ
(Digital payment app Paytm announced guaranteed cashback on the occasion of 6th year of Digital India mission)
Published On - 6:00 pm, Fri, 2 July 21