ಟ್ರಿಮ್ ಮಾಡಿಕೊಳ್ಳುತ್ತಿರುವ ಪೇಟಿಎಂ; ಸಿನಿಮಾ ಮತ್ತು ಈವೆಂಟ್​​ಗಳ ಟಿಕೆಟ್ ಮಾರಾಟದ ಬಿಸಿನೆಸ್ ಜೊಮಾಟೊಗೆ ಮಾರಲು ಸಜ್ಜು

|

Updated on: Jun 16, 2024 | 3:54 PM

Paytm-Zomato deal for sale of ticketing business: ಒನ್97 ಕಮ್ಯೂನಿಕೇಶನ್ಸ್​ಗೆ ಸೇರಿದ ಪೇಟಿಎಂ ಸಂಸ್ಥೆಯ ಸಿನಿಮಾ ಮತ್ತು ಇವೆಂಟ್​ಗಳ ಟಿಕೆಟ್ ಬುಕಿಂಗ್ ಬಿಸಿನೆಸ್ ಅನ್ನು ಖರೀದಿಸಲು ಜೊಮಾಟೊ ಮುಂದಾಗಿದೆ. ಲಾಭದ ಹಳಿಗೆ ಬರಲು ಒದ್ದಾಡುತ್ತಿರುವ ಪೇಟಿಎಂ ಸಂಸ್ಥೆ ಕೆಲವೇ ಕೋರ್ ಬಿಸಿನೆಸ್​​ಗಳತ್ತ ಗಮನ ಹರಿಸಲು ನಿರ್ಧರಿಸಲಾಗಿದ್ದು, ಈ ನಿಟ್ಟಿನಲ್ಲಿ ಟಿಕೆಟ್ ಬುಕಿಂಗ್ ವಿಭಾಗವನ್ನು ಮಾರಲು ಮುಂದಾಗಿದೆ.

ಟ್ರಿಮ್ ಮಾಡಿಕೊಳ್ಳುತ್ತಿರುವ ಪೇಟಿಎಂ; ಸಿನಿಮಾ ಮತ್ತು ಈವೆಂಟ್​​ಗಳ ಟಿಕೆಟ್ ಮಾರಾಟದ ಬಿಸಿನೆಸ್ ಜೊಮಾಟೊಗೆ ಮಾರಲು ಸಜ್ಜು
ಪೇಟಿಎಂ
Follow us on

ನವದೆಹಲಿ, ಜೂನ್ 16: ನಷ್ಟದ ಹೊರೆಯಿಂದ ತಪ್ಪಿಸಿಕೊಳ್ಳಲು ಪರದಾಡುತ್ತಿರುವ ಪೇಟಿಎಂ ಸಂಸ್ಥೆ (Paytm) ಇದೀಗ ತನಗೆ ತೀರಾ ಅಗತ್ಯವಾಗಿರುವ ಬಿಸಿನೆಸ್​ಗಳತ್ತ ಗಮನ ಹರಿಸುವ ತಂತ್ರಕ್ಕೆ ಮೊರೆಹೋಗಿದೆ. ಈ ಹಿನ್ನೆಲೆಯಲ್ಲಿ ತನಗೆ ಅನಗತ್ಯವಾಗಿರುವ ಕೆಲ ಬಿಸಿನೆಸ್​​ಗಳಿಂದ ದೂರ ಉಳಿಯಲು ನಿರ್ಧರಿಸಿದೆ. ಇದರ ಭಾಗವಾಗಿ ಸಿನಿಮಾ ಮತ್ತು ಈವೆಂಟ್​​ಗಳ ಟಿಕೆಟ್ ಮಾರಾಟದ ಬಿಸಿನೆಸ್ ಅನ್ನು ಮಾರಾಟ ಮಾಡುತ್ತಿದೆ. ಈ ಸಂಬಂಧ ಜೊಮಾಟೋದೊಂದಿಗೆ ಪೇಟಿಎಂ ಮಾತುಕತೆ ನಡೆಸುತ್ತಿದೆ ಎಂದು ಬ್ಲೂಮ್​ಬರ್ಗ್ ನ್ಯೂಸ್ ಏಜೆನ್ಸಿಯ ವರದಿಯೊಂದರಲ್ಲಿ ತಿಳಿಸಲಾಗಿದೆ.

ಮೂಲಗಳಿಂದ ಮಾಹಿತಿ ಉಲ್ಲೇಖಿಸಿರುವ ಈ ವರದಿ ಪ್ರಕಾರ ಒನ್97 ಕಮ್ಯೂನಿಕೇಶನ್ಸ್ ಹಾಗೂ ಜೊಮಾಟೋ ನಡುವಿನ ಮಾತುಕತೆ ಬಹುತೇಕ ಅಂತಿಮ ಹಂತದಲ್ಲಿದೆ ಎನ್ನಲಾಗುತ್ತಿದೆ. ಪೇಟಿಎಂನ ಈ ಟಿಕೆಟ್ ಡಿವಿಶನ್ ಅನ್ನು ಖರೀದಿಸಲು ಜೊಮಾಟೋ ಮಾತ್ರವಲ್ಲ, ಬೇರೆ ಹಲವು ಸಂಸ್ಥೆಗಳೂ ಆಸಕ್ತಿ ತೋರಿವೆಯಂತೆ. ಜೊಮಾಟೊದೊಂದಿಗಿನ ಮಾತುಕತೆ ಫಲಪ್ರದವಾಗದೇ ಇದ್ದಲ್ಲಿ ಬೇರೆ ಆಸಕ್ತಿ ಕಂಪನಿಗಳ ಜೊತೆ ಪೇಟಿಎಂ ಮಾತುಕತೆ ನಡೆಸಬಹುದು.

ಇದನ್ನೂ ಓದಿ: ಓಪನ್ ಮಾರ್ಕೆಟ್​ನಲ್ಲಿ ಅದಾನಿ ಎಂಟರ್ಪ್ರೈಸಸ್​ನ ಷೇರುಗಳನ್ನು ಖರೀದಿಸಿದ ಗೌತಮ್ ಅದಾನಿ

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವಿಚಾರ ದೊಡ್ಡ ತಲೆನೋವು

ಪೇಟಿಎಂ ಮೊದಲಿಂದಲೂ ಲಾಭದ ಹಳಿಗೆ ಬಂದಿಲ್ಲವಾದರೂ ಭವಿಷ್ಯದಲ್ಲಿ ಲಾಭದಾಯಕ ಕಂಪನಿ ಎನಿಸುವ ಎಲ್ಲಾ ಲಕ್ಷಣಗಳನ್ನು ಮತ್ತು ಫೀಚರ್​ಗಳನ್ನು ಹೊಂದಿತ್ತು. ಆದರೆ, ಅದರ ಅಂಗಸಂಸ್ಥೆಯಾಗಿದ್ದ ಪೇಮೆಂಟ್ಸ್ ಬ್ಯಾಂಕ್ ಮೇಲೆ ಆರ್​ಬಿಐ ನಿರ್ಬಂಧ ಹೇರಿದ್ದು ಪೇಟಿಎಂಗೆ ಇನ್ನಿಲ್ಲದ ಪೆಟ್ಟು ಕೊಟ್ಟಿರುವುದು ಹೌದು. ಅದರ ಪೇಮೆಂಟ್ಸ್ ರಚನೆಯ ಸ್ವರೂಪವೇ ಬುಡಮೇಲು ಮಾಡಿಕೊಳ್ಳಬೇಕಾಯಿತು. ಬೇರೆ ಬೇರೆ ಬ್ಯಾಂಕುಗಳ ಜೊತೆ ಪೇಟಿಎಂ ಹೊಂದಾಣಿಕೆ ಮಾಡಿಕೊಳ್ಳುವಂತಾಗಿದೆ. ಅದರ ಹಲವು ವರ್ತಕ ಗ್ರಾಹಕರು ಕೈಬಿಟ್ಟು ಹೋಗುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಪೇಟಿಎಂ ಸಂಸ್ಥೆ ತನ್ನ ಕೋರ್ ಬಿಸಿನೆಸ್​ಗಳತ್ತ ಗಮನ ಹರಿಸುವುದು ಅದಕ್ಕೆ ಅಗತ್ಯವಾಗಿದೆ. ಈಗ ಸಿನಿಮಾ ಮತ್ತು ಇವೆಂಟ್ ಟಿಕೆಟಿಂಗ್ ಬಿಸಿನೆಸ್ ಅನ್ನು ಬಿಟ್ಟು ಕೊಟ್ಟ ಬಳಿಕ ಅದು ತನ್ನ ಬಿಸಿನೆಸ್​ಗೆ ಬಹಳ ಮುಖ್ಯವಾಗಿರುವ ವರ್ತಕರನ್ನು ಆಕರ್ಷಿಸಲು ಟ್ರಾವಲ್, ಕ್ಯಾಷ್​ಬ್ಯಾಕ್ ಇತ್ಯಾದಿ ಸೆಕ್ಟರ್​ಗಳತ್ತ ಅದು ಗಮನ ಹರಿಸಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ: 3,500 ಪೇಟಿಎಂ ಉದ್ಯೋಗಿಗಳ ಲೇ ಆಫ್; ಬೇರೆಡೆ ಕೆಲಸ ಕೊಡಿಸಲು ಕಂಪನಿಯಿಂದಲೇ ನೆರವು

ಅತ್ತ ಜೊಮಾಟೊ ಕೂಡ ಬದಲಾವಣೆ ಮತ್ತು ವಿಸ್ತರಣೆಯ ತವಕದಲ್ಲಿದೆ. ಫೂಡ್ ಡೆಲಿವರಿ ಸೇವೆಯಿಂದ ಆರಂಭವಾದ ಜೊಮಾಟೋ ಈಗ ಬೇರೆ ಬೇರೆ ಸೇವೆಗಳಿಗೆ ವಿಸ್ತರಿಸಿದೆ. ಪೇಟಿಎಂನ ಟಿಕೆಟ್ ಬಿಸಿನೆಸ್ ಜೊಮಾಟೊಗೆ ಅನುಕೂಲ ತರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ