ಪೇಟಿಎಂ (Paytm) ಬ್ರ್ಯಾಂಡ್ನ ಮಾತೃಸಂಸ್ಥೆಯಾದ ಒನ್97 ಕಮ್ಯುನಿಕೇಷನ್ಸ್ (One97 Communications) ಜನವರಿ 19ನೇ ತಾರೀಕಿನ ಬುಧವಾರದಂದು ಸಾರ್ವಕಾಲಿಕ ಕನಿಷ್ಠ ಮಟ್ಟ 990 ರುಪಾಯಿ ಮುಟ್ಟಿದ್ದು, ದುರ್ಬಲ ಮಾರುಕಟ್ಟೆಯಲ್ಲಿ ಶೇಕಡಾ 5ರ ತನಕ ಕುಸಿತ ಕಂಡಿದೆ. ಕಳೆದ ಕೆಲ ಸಮಯದಿಂದಲೇ ಪೇಟಿಎಂ ಷೇರು ಇಳಿಕೆ ಹಾದಿಯಲ್ಲಿದೆ. ಕಳೆದ 12 ಟ್ರೇಡಿಂಗ್ ಸೆಷನ್ ಪೈಕಿ 11ರಲ್ಲಿ ಕುಸಿತ ದಾಖಲಿಸಿ, ಶೇ 26ರಷ್ಟು ದರ ಇಳಿಕೆ ಆಗಿದೆ. ಇನ್ನು ಐಪಿಒ ವಿತರಣೆ ಬೆಲೆಗೆ ಹೋಲಿಸಿ ನೋಡುವುದಾದರೆ ಶೇ 54ರಷ್ಟು ದರ ಇಳಿದಿದೆ.
ಈ ಸ್ಟಾಕ್ ಈಗ ಮತ್ತಷ್ಟು ಆತಂಕಕ್ಕೆ ದೂಡುವಂಥ ದರವಾದ 900 ರೂಪಾಯಿಯತ್ತ ಸಾಗುತ್ತಿದೆ. ಪೇಟಿಎಂ ಲಿಸ್ಟಿಂಗ್ ಆದಾಗಲೇ ಈ ಮೊತ್ತದ ಅಂದಾಜನ್ನು ಮಾಡಲಾಗಿತ್ತು. ಒನ್97 ಕಮ್ಯುನಿಕೇಷನ್ಸ್ ಭಾರತದ ಷೇರು ಮಾರುಕಟ್ಟೆಯ ಅತಿ ದೊಡ್ಡ ಐಪಿಒ ಆಗಿತ್ತು. ಎರಡು ತಿಂಗಳ ಹಿಂದೆ ಭಾರೀ ನಿರೀಕ್ಷೆಗಳೊಂದಿಗೆ ಲಿಸ್ಟಿಂಗ್ ಆಗಿತ್ತು. ಆದರೆ ಆ ನಂತರದಲ್ಲಿ ಸನ್ನಿವೇಶ ಬದಲಾಯಿತು. ಮರ್ಚೆಂಟ್ ಬ್ಯಾಂಕರ್ಗಳಿಗೆ ಸಂಬಂಧಿಸಿದ ವಿಶ್ಲೇಷಕರು ಸಹ ಪೇಟಿಎಂ ಐಪಿಒ ದರಕ್ಕಿಂತ ಕಡಿಮೆ ಗುರಿ ಇರಿಸಿದ್ದಾರೆ.
ಸದ್ಯದ ಮಟ್ಟಿಗೆ ಸಕಾರಾತ್ಮಕವಾದ- ಏರಿಕೆ ಗುರಿ ಅಂದರೆ, ಈಗಿನ ಮಾರುಕಟ್ಟೆ ಬೆಲೆಯು ಹತ್ತಿರ ಹತ್ತಿರ ದುಪ್ಪಟ್ಟು 1,875 ರೂಪಾಯಿ ತಲುಪಬಹುದು. ಜನವರಿ 19ನೇ ತಾರೀಕಿನ ದಿನಾಂತ್ಯಕ್ಕೆ ಪೇಟಿಎಂ ಎನ್ಎಸ್ಇಯಲ್ಲಿ 997.35 ರೂಪಾಯಿ ದಿನಾಂತ್ಯದ ವಹಿವಾಟು ಮುಗಿಸಿದೆ. ಇನ್ನು ದಿನದ ಕನಿಷ್ಠ ಮಟ್ಟವಾದ 990 ರೂಪಾಯಿ ಕಂಡಿದೆ. ಈಚೆಗೆ ಕಂಪೆನಿ ಹೇಳಿರುವಂತೆ, ಸಾಲ ನೀಡುವ ವ್ಯವಹಾರದಲ್ಲಿ ಅದ್ಭುತ ಬೆಳವಣಿಗೆ ಕಂಡಿದೆ. ಪೇಟಿಎಂ ಸಿಇಒ ವಿಜಯ್ ಶೇಖರ್ ಶರ್ಮಾ ಮಾತನಾಡಿ, ಮಾರುಕಟ್ಟೆಯು ಕಂಪೆನಿಯ ಪಾವತಿ ವ್ಯವಹಾರವನ್ನು ಕಡಿಮೆ ಅಂದಾಜು ಮಾಡುತ್ತಿದೆ ಎಂದಿದ್ದಾರೆ. ಆದರೆ ಇವ್ಯಾವುದೂ ಭಾರೀ ಇಳಿಕೆಯನ್ನು ತಡೆಯುವುದಕ್ಕೆ ಸಹಾಯ ಮಾಡಲ್ಲ.
(ಇಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಆಯಾ ಲೇಖಕರವು. ಇದಕ್ಕೂ ಟಿವಿ9ಕನ್ನಡ ಡಿಜಿಟಲ್ಗೂ ಸಂಬಂಧ ಇಲ್ಲ. ಹಣಕಾಸಿನ ವಿಚಾರ ಆದ್ದರಿಂದ ತಜ್ಞರ ಸಲಹೆ ಪಡೆದು, ಸೂಕ್ತ ನಿರ್ಧಾರ ಕೈಗೊಳ್ಳಬೇಕು)