Paytm: 2150 ರೂಪಾಯಿಯಂತೆ ವಿತರಿಸಿದ್ದ ಪೇಟಿಎಂನ ಒಂದು ಷೇರು ಈಗ ರೂ.1064ಕ್ಕೆ ವಹಿವಾಟು; ಶೇ 51ರಷ್ಟು ಕುಸಿತ

ಪ್ರತಿ ಷೇರಿಗೆ 2150 ರೂಪಾಯಿಯಂತೆ ವಿತರಣೆ ಮಾಡಿದ್ದ ಪೇಟಿಎಂ ಷೇರಿನ ಬೆಲೆ ಶೇ 51ರಷ್ಟು ಇಳಿಕೆಯಾಗಿ 1064 ರೂಪಾಯಿಯನ್ನು ತಲುಪಿದೆ.

Paytm: 2150 ರೂಪಾಯಿಯಂತೆ ವಿತರಿಸಿದ್ದ ಪೇಟಿಎಂನ ಒಂದು ಷೇರು ಈಗ ರೂ.1064ಕ್ಕೆ ವಹಿವಾಟು; ಶೇ 51ರಷ್ಟು ಕುಸಿತ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jan 13, 2022 | 11:39 PM

ಡಿಜಿಟಲ್ ಪೇಮೆಂಟ್​ ಕಂಪೆನಿ ಪೇಟಿಎಂನ ಮಾತೃ ಸಂಸ್ಥೆಯಾದ ಒನ್​97 ಕಮ್ಯುನಿಕೇಷನ್ಸ್ (One97 Communications) ಷೇರುಗಳು ಗುರುವಾರದ ದಿನದ ವಹಿವಾಟಿನಲ್ಲಿ ಬಿಎಸ್ಇ ಸೆನ್ಸೆಕ್ಸ್​ನಲ್ಲಿ 1063.75 ರೂಪಾಯಿಗೆ ತಲುಪಿತು. ಆ ಮೂಲಕವಾಗಿ ಅದರ ವಿತರಣೆ ಬೆಲೆಯಾಗಿದ್ದ 2,150 ರೂಪಾಯಿಯಿಂದ ಶೇಕಡಾ 51ರಷ್ಟು ಕುಸಿತ ಕಂಡಂತಾಯಿತು. ಸತತ ಎಂಟನೇ ಟ್ರೇಡಿಂಗ್ ಸೆಷನ್​ನಲ್ಲಿ ಈ ಸ್ಟಾಕ್ ಬೆಲೆ ಕುಸಿತವನ್ನು ಕಾಣುತ್ತಿದ್ದು, ಈ ಅವಧಿಯಲ್ಲಿ ಶೇಕಡಾ 21ರಷ್ಟು ಇಳಿಕೆ ಕಂಡಿದೆ. ಅಂದಹಾಗೆ ನವೆಂಬರ್ 18, 2021ರಂದು ಷೇರು ಮಾರುಕಟ್ಟೆಗೆ ಈ ಸ್ಟಾಕ್ ಪದಾರ್ಪಣೆ ಮಾಡಿತು. ಸ್ಟಾಕ್ ಬೆಲೆಯಲ್ಲಿನ ತೀವ್ರ ಕುಸಿತ ಕಂಡಿರುವುದರಿಂದ ಕಂಪೆನಿಯು ತನ್ನ ಇಶ್ಯೂ ಬೆಲೆಯ ವೇಳೆ ಇದ್ದ ಮಾರುಕಟ್ಟೆ ಮೌಲ್ಯ ರೂ. 1.39 ಲಕ್ಷ ಕೋಟಿ ಮೌಲ್ಯದಿಂದ ರೂ. 70,418 ಕೋಟಿ ಕಳೆದುಕೊಂಡಿದೆ.

ಪೇಟಿಎಂನ ಮಾರುಕಟ್ಟೆ ಬಂಡವಾಳ ಮೌಲ್ಯವು ಜನವರಿ 13ನೇ ತಾರೀಕಿನ ಗುರುವಾರದಂದು ಕನಿಷ್ಠ 68,960 ಕೋಟಿ ರೂಪಾಯಿ ತಲುಪಿತ್ತು. ಒಟ್ಟಾರೆಯಾಗಿ ಮಾರುಕಟ್ಟೆ ಬಂಡವಾಳ ಶ್ರೇಯಾಂಕದಲ್ಲಿ ಕಂಪೆನಿಯು 77ನೇ ಸ್ಥಾನದಲ್ಲಿದೆ ಎಂದು ಬಿಎಸ್ಇ ಅಂಕಿ-ಅಂಶಗಳು ತೋರಿಸಿವೆ. ಇನ್ನು ಪೇಟಿಎಂ ಷೇರು ಲಿಸ್ಟಿಂಗ್ ಆದ ದಿನದಂದು ಮಾರುಕಟ್ಟೆ ಬಂಡವಾಳ ಮೌಲ್ಯದ ಶ್ರೇಯಾಂಕದಲ್ಲಿ 50ನೇ ಸ್ಥಾನದಲ್ಲಿತ್ತು. ಬ್ರೋಕರೇಜ್ ಸಂಸ್ಥೆ ಮಾಕ್ವಾರಿ ಸೋಮವಾರ One97 ಕಮ್ಯುನಿಕೇಷನ್ಸ್‌ನ ಮತ್ತೊಂದು ವರದಿ ಪ್ರಕಟಿಸಿತು, ಅದರ ‘ಅಂಡರ್‌ಪರ್ಫಾರ್ಮ್’ ರೇಟಿಂಗ್ ಅನ್ನು ಉಳಿಸಿಕೊಂಡಿದ್ದು, ಸ್ಟಾಕ್‌ನ ಬೆಲೆಯ ಗುರಿಯನ್ನು ರೂ. 900 ಕ್ಕೆ ಕಡಿತಗೊಳಿಸಿದೆ.

“ಕಡಿಮೆ ಆದಾಯ, ಹೆಚ್ಚಿನ ಉದ್ಯೋಗಿ ಮತ್ತು ಸಾಫ್ಟ್‌ವೇರ್ ವೆಚ್ಚಗಳ ಕಾರಣದಿಂದ FY22-25Eಗಾಗಿ ನಮ್ಮ ಗಳಿಕೆಯನ್ನು (ನಮ್ಮ ನಷ್ಟದ ಅಂದಾಜುಗಳನ್ನು ಹೆಚ್ಚಿಸಿ) ಶೇ 16-27ರಷ್ಟು ಕಡಿತಗೊಳಿಸಿದ್ದೇವೆ. 11.5x ಗುಣಕದಲ್ಲಿ (ಬೆಲೆಯಿಂದ ಮಾರಾಟದ ಅನುಪಾತಕ್ಕೆ) (ಹಿಂದಿನ 13.5x ನಿಂದ) ಮತ್ತು ಕಡಿಮೆ ಮಾರಾಟ ಸಂಖ್ಯೆಗಳಿಂದಾಗಿ ನಮ್ಮ TP (ಗುರಿ ಬೆಲೆ) ಶೇ 25ರಷ್ಟು ತೀವ್ರವಾಗಿ ಕಡಿತಗೊಳಿಸಿದ್ದೇವೆ,” ಎಂದು ಬ್ರೋಕರೇಜ್ ಹೇಳಿದೆ. ಕಂಪೆನಿಯ ಮೇಲ್​ಸ್ತರದ ಮ್ಯಾನೇಜ್​ಮೆಂಟ್​ನಲ್ಲಿ ಉದ್ಯೋಗ ತ್ಯಜಿಸುತ್ತಿರುವ ಪ್ರಮಾಣ ಹೆಚ್ಚಾಗಿದೆ. ಕಳೆದ ವರ್ಷದಲ್ಲಿ ಅದರ ಸರಾಸರಿ ವ್ಯಾಪಾರಿ ಸಾಲದ ಗಾತ್ರವು ರೂ. 5,000ಕ್ಕಿಂತ ಕಡಿಮೆ ಮಟ್ಟದಲ್ಲಿದೆ ಮತ್ತು ಫಿನ್‌ಟೆಕ್ ಹಾಗೂ ವಿಮಾ ವಲಯಗಳಲ್ಲಿನ ನಿಯಂತ್ರಕ ಅನಿಶ್ಚಿತತೆಯ ಬಗ್ಗೆ ಕಳವಳಗಳು ಎಂಬಂತೆ ಹೇಳಿದೆ.

ಆದರೆ. ಸ್ಥೂಲ ಆರ್ಥಿಕ ಅಂಶಗಳಿಂದಾಗಿ ಕಂಪೆನಿಯ ಷೇರು ಮಾರುಕಟ್ಟೆ ಕಾರ್ಯಕ್ಷಮತೆಯು ಕಳೆದ ಆರು ತಿಂಗಳಿನಿಂದ ಈ ವಲಯದ ಜಾಗತಿಕ ಮಟ್ಟದ ಇತರ ಫಿನ್​ಟೆಕ್​ ಕಂಪೆನಿಗಳ ಸಾಧನೆಗೆ ಅನುಗುಣವಾಗಿಯೇ ಇದೆ ಎಂದು ಪೇಟಿಎಂ ಸಿಇಒ ವಿಜಯ್ ಶೇಖರ್ ಶರ್ಮಾ ಬುಧವಾರ ಹೇಳಿದ್ದಾರೆ. “ಪರಿಮಾಣಾತ್ಮಕವಾಗಿ ಸರಾಗಗೊಳಿಸುವುದು, ಅಮೆರಿಕದ ವಿತ್ತೀಯ ನೀತಿ ಮತ್ತು ಇತರ ಅಂಶಗಳ ಕಾರಣದಿಂದಾಗಿ ಉಚಿತ ಹಣದಂತಹ ಮ್ಯಾಕ್ರೋ ಅಂಶಗಳು ಐಪಿಒ ಬೆಲೆಯ ವಿಷಯದಲ್ಲಿ ಮಾರುಕಟ್ಟೆಯಲ್ಲಿ ಭಾರೀ ಇಳಿಕೆಹೆ ಕಾರಣವಾಯಿತು. ಪೇಟಿಎಂ ಷೇರುಗಳು ಕಳೆದ ಆರು ತಿಂಗಳಲ್ಲಿ ಜಾಗತಿಕ ಮಟ್ಟದಲ್ಲಿನ ಅದೇ ರೀತಿಯ ಕಂಪೆನಿಗಳ ಪ್ರತಿಕ್ರಿಯೆಗೆ ಸಮಾನವಾದ ಪ್ರತಿಕ್ರಿಯೆಯನ್ನು ಪಡೆದಿವೆ. ಆದರೆ ಅದು ಸಂಪೂರ್ಣ ತಾರ್ಕಿಕವಲ್ಲ. ಐಪಿಒ ಏನಾಯಿತು ಎಂಬುದು ಇನ್ನೂ ಪ್ರಶ್ನೆಯಾಗಿದೆ,” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಒಂದೇ ದಿನಕ್ಕೆ ಹೂಡಿಕೆದಾರರು ಬರುವುದಿಲ್ಲ: ಷೇರುಪೇಟೆಯಲ್ಲಿ ಕುಸಿತದ ನಂತರ ಪೇಟಿಎಂ ಕಾರ್ಯತಂತ್ರ ವಿವರಿಸಿದ ಸಿಇಒ ವಿಜಯ್ ಶೇಖರ್ ಶರ್ಮಾ