ನವದೆಹಲಿ: ಪ್ಯಾನ್ ನಂಬರ್ ಮತ್ತು ಆಧಾರ್ ನಂಬರ್ಗಳನ್ನು ಲಿಂಕ್ ಮಾಡಲು (Aadhaar-PAN Linking) ಜೂನ್ 30ಕ್ಕೆ ಡೆಡ್ಲೈನ್ ಇದೆ. ಇವತ್ತೂ ಸೇರಿ ಎರಡೇ ದಿನ ಮಾತ್ರ ಬಾಕಿ ಇರುವುದು. ಈವರೆಗೆ ಎಷ್ಟು ಪ್ಯಾನ್ ಕಾರ್ಡ್ಗಳು ಆಧಾರ್ಗೆ ಲಿಂಕ್ ಆಗಿವೆ ಎಂಬ ಮಾಹಿತಿ ಇಲ್ಲ. ಮಾರ್ಚ್ನಲ್ಲಿ ಆದಾಯ ತೆರಿಗೆ ಇಲಾಖೆ (Income Tax Dept) ಕೊಟ್ಟ ಮಾಹಿತಿ ಪ್ರಕಾರ 51 ಕೋಟಿಗೂ ಅಧಿಕ ಪ್ಯಾನ್ ಕಾರ್ಡ್ಗಳು ಆಧಾರ್ಗೆ ಜೋಡಿತವಾಗಿವೆ. ಅಲ್ಲಿಂದೀಚೆ ಬಹಳಷ್ಟು ಪ್ಯಾನ್ ನಂಬರ್ಗಳು ಆಧಾರ್ಗೆ ಲಿಂಕ್ ಆಗಿವೆ. ಆದರೂ ವಿವಿಧ ಕಾರಣಗಳಿಂದ ಇನ್ನೂ ಹಲವರು ಲಿಂಕ್ ಮಾಡಿಲ್ಲ. ಇಬ್ಬರು ಅಥವಾ ಹೆಚ್ಚಿನ ಮಂದಿಗೆ ಒಂದೇ ಪ್ಯಾನ್ ನಂಬರ್ ಅಲಾಟ್ ಮಾಡಿರುವುದು ಹೀಗೆ ಹಲವು ಸಮಸ್ಯೆಗಳು ಲಿಂಕ್ ಕಾರ್ಯಕ್ಕೆ ಅಡ್ಡಿಯಾಗಿವೆ. ಸರ್ವರ್ ಸಮಸ್ಯೆಯಿಂದಲೂ ಹಲವರಿಗೆ ಲಿಂಕ್ ಮಾಡಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಡೆಡ್ಲೈನ್ ವಿಸ್ತರಿಸುವ ಸಾಧ್ಯತೆ ಇದೆ ಎಂಬಂತಹ ಸುದ್ದಿ ಕೇಳಿಬರುತ್ತಿದೆ.
2017ರಲ್ಲಿ ಆದಾಯ ತೆರಿಗೆ ಇಲಾಖೆಯು ಪ್ಯಾನ್ ಮತ್ತು ಆಧಾರ್ ಲಿಂಕ್ ಕಡ್ಡಾಯ ಆಗಬೇಕು ಎಂದು ನಿಯಮ ಹೊರಡಿಸಿತು. 2017ರ ಜುಲೈ 1ಕ್ಕೆ ಮುಂಚೆ ಪ್ಯಾನ್ ನಂಬರ್ ಹೊಂದಿರುವವರು ಅದನ್ನು ಆಧಾರ್ಗೆ ಲಿಂಕ್ ಮಾಡಬೇಕೆಂದು ಕಡ್ಡಾಯಪಡಿಸಲಾಯಿತು. ಜುಲೈ 1ರಿಂದ ವಿತರಿಸಲಾದ ಪ್ಯಾನ್ ನಂಬರ್ಗೆ ಡೀಫಾಲ್ಟ್ ಆಗಿ ಆಧಾರ್ ಲಿಂಕ್ ಮಾಡಲಾಗುತ್ತಿತ್ತು. ಅದ್ದರಿಂದ 2017 ಜುಲೈ 1ಕ್ಕೆ ಮುಂಚಿನ ಪ್ಯಾನ್ ನಂಬರ್ಗಳಿಗೆ ಆಧಾರ್ ಲಿಂಕ್ ಮಾಡುವುದು ಅಗತ್ಯವಾಗಿತ್ತು. ಒಬ್ಬರಿಗೆ ಹಲವು ಪ್ಯಾನ್ ಕಾರ್ಡ್ಗಳು ಹಾಗು ಹಲವರಿಗೆ ಒಂದೇ ಪ್ಯಾನ್ ನಂಬರ್ ಸಿಕ್ಕಿದ್ದು ಗೊಂದಲವಾಗಿತ್ತು. ಈ ಹಿನ್ನೆಲೆಯಲ್ಲಿ ಆಧಾರ್ ಜೊತೆ ಪ್ಯಾನ್ ಜೋಡಿಸುವುದನ್ನು ಕಡ್ಡಾಯ ಮಾಡಲಾಗಿತ್ತು.
2017ರಲ್ಲಿ ಆರಂಭಗೊಂಡ ಪ್ಯಾನ್ ನಂಬರ್ ಮತ್ತು ಆಧಾರ್ ನಂಬರ್ ಜೋಡಣೆಯ ಕಾರ್ಯದಲ್ಲಿ ಹಲವು ಬಾರಿ ಡೆಡ್ಲೈನ್ ವಿಸ್ತರಣೆ ಆಗಿದೆ. 2019 ಸೆಪ್ಟಂಬರ್ 30ರವರೆಗೂ ಮೊದಲಿಗೆ ಕಾಲಾವಕಾಶ ಕೊಡಲಾಗಿತ್ತು. ಆ ಬಳಿಕ ಹಲವು ಬಾರಿ ಈ ಗಡುವು ವಿಸ್ತರಣೆ ಆಗಿದೆ. ಈಗ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಿಸಬೇಕಾದರೆ 1,000 ರೂ ಪಾವತಿಸಬೇಕು. ಅದಕ್ಕೂ ಈಗ 2023 ಜೂನ್ 30 ಡೆಡ್ಲೈನ್ ಆಗಿದೆ. ತಾಂತ್ರಿಕ ದೋಷ ಮತ್ತಿತರ ತೊಂದರೆಗಳಿಂದಾಗಿ ಈ ಡೆಡ್ಲೈನ್ ವಿಸ್ತರಣೆ ಆಗಬಹುದು ಎಂಬ ನಿರೀಕ್ಷೆಯಲ್ಲಿ ಹಲವರಿದ್ದಾರೆ.
ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡುವುದು ಹೇಗೆ?
ಆದಾಯ ತೆರಿಗೆಯ ಇಫೈಲಿಂಗ್ ವೆಬ್ಸೈಟ್ಗೆ ಹೋದರೆ ಮುಖ್ಯಪುಟದ ಎಡಬದಿಯಲ್ಲಿ ಲಿಂಕ್ ಆಧಾರ್ ಬಟನ್ ಕಾಣಬಹುದು. ಅಲ್ಲಿ ನಿಮಗೆ ಪ್ಯಾನ್ ಮತ್ತು ಆಧಾರ್ ಜೋಡಣೆಯ ಅವಕಾಶ ಇದೆ. ನಿಮ್ಮ ಆಧಾರ್ ಕಾರ್ಡ್ಗೆ ಜೋಡಿತವಾದ ಮೊಬೈಲ್ ನಂಬರ್ಗೆ ಬರುವ ಒಟಿಪಿಯ ಮೂಲಕ ಲಿಂಕ್ ಕಾರ್ಯವನ್ನು ಪೂರ್ಣಗೊಳಿಸಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:56 am, Thu, 29 June 23