ನವದೆಹಲಿ: ಅಕ್ಷಯ ತೃತೀಯ ದಿನದಂದು (Akshaya Tritiya 2023) ಚಿನ್ನ ಅಥವಾ ಬೆಳ್ಳಿ ಖರೀದಿಸಿದರೆ ಮನೆಯಲ್ಲಿ ಸಂಪತ್ತು ಸಮೃದ್ಧಿಯಾಗಿರುತ್ತದೆ ಎಂಬ ನಂಬಿಕೆ ಜನರಲ್ಲಿ ಇದೆ. ಈ ವರ್ಷ ಅಕ್ಷಯ ತೃತೀಯ ಏಪ್ರಿಲ್ 22, ಶನಿವಾರದಂದು ಇದೆ. ಈ ಹಿನ್ನೆಲೆಯಲ್ಲಿ ಜನರನ್ನು ಪೈಪೋಟಿಯ ಮೇಲೆ ಆಕರ್ಷಿಸಲು ವಿವಿಧ ಒಡವೆ ವ್ಯಾಪಾರಿಗಳು ಮುಗಿಬಿದ್ದಿದ್ದಾರೆ. ಹೀಗಾಗಿ, ಚಿನ್ನ, ಬೆಳ್ಳಿ ಮತ್ತು ವಜ್ರದ ಆಭರಣಗಳ ಖರೀದಿ ಮೇಲೆ ವಿವಿಧ ಆಭರಣದಂಗಡಿಗಳು ತರಹಾವೇರಿ ಡಿಸ್ಕೌಂಟ್ಗಳನ್ನು ಆಫರ್ ಮಾಡಿದ್ದಾರೆ. ಚಿನ್ನದ ಬೆಲೆ ಏರಿಕೆ ಮಧ್ಯೆ ಈ ಡಿಸ್ಕೌಂಟ್ಗಳು ಜನರನ್ನು ಅಕ್ಷಯ ತೃತೀಯ ದಿನದಂದು ಒಡವೆ ಅಂಗಡಿಗಳಿಗೆ ಎಡತಾಕುವಂತೆ ಮಾಡಬಹುದು. ಕೆಲವರು ಗಿಫ್ಟ್ ವೋಚರ್ ಮೂಲಕ ರಿಯಾಯಿತಿ ಕೊಟ್ಟರೆ, ಇನ್ನೂ ಕೆಲವರು ನೇರವಾಗಿಯೇ ಡಿಸ್ಕೌಂಟ್ ಬೆಲೆಯಲ್ಲಿ ಆಭರಣ ಮಾರುತ್ತಿದ್ದಾರೆ. ಇಂತಹ ಕೆಲ ಆಭರಣ ವ್ಯಾಪಾರಿಗಳ ಅಕ್ಷಯ ತೃತೀಯ ನಿಮಿತ್ತದ ಡಿಸ್ಕೌಂಟ್ನ ವಿವರ ಇಲ್ಲಿದೆ:
ಬೆಂಗಳೂರು ಸೇರಿದಂತೆ ದೇಶಾದ್ಯಂತ ಮಳಿಗೆಗಳನ್ನು ಹೊಂದಿರುವ ಜಾಯ್ ಅಲೂಕ್ಕಾಸ್ ಸಂಸ್ಥೆ ಅಕ್ಷಯ ತೃತೀಯ ದಿನದಂದು ಗಿಫ್ಟ್ ವೋಚರ್ಗಳ ಮೂಲಕ ಜನರನ್ನು ಆಕರ್ಷಿಸುತ್ತಿದೆ. 10,000 ರೂಗೂ ಹೆಚ್ಚು ಬೆಲೆಯ ಬೆಳ್ಳಿ ಆಭರಣಗಳನ್ನು ಖರೀದಿಸಿದರೆ 500 ರೂ ಗಿಫ್ಟ್ ವೋಚರ್ ಅನ್ನು ಉಚಿತವಾಗಿ ಒದಗಿಸುವುದಾಗಿ ಹೇಳಿದೆ. 50,000 ರೂಗೂ ಹೆಚ್ಚು ಮೌಲ್ಯದ ಚಿನ್ನದ ಒಡವೆಗಳನ್ನು ಖರೀದಿಸಿದರೆ 1,000 ರೂ ಮೌಲ್ಯದ ಗಿಫ್ಟ್ ವೋಚರ್ ಕೊಡಲಿದೆ. ಹಾಗೆಯೇ, 50,000 ರೂ ಮೌಲ್ಯದ ವಜ್ರದ ಒಡವೆಗಳನ್ನು ಖರೀದಿಸಿದರೆ 2,000 ರೂ ಮೌಲ್ಯದ ವೋಚರ್ಗಳು ಸಿಗುತ್ತವೆ.
ಗಮನಿಸಬೇಕಾದ ಸಂಗತಿ ಎಂದರೆ, ಇಲ್ಲಿ ಒಡವೆಗಳನ್ನು ಖರೀದಿಸಿದರೆ ಮಾತ್ರ ಈ ಗಿಫ್ಟ್ ವೋಚರ್ ಭಾಗ್ಯ ಸಿಗುತ್ತದೆ. ಚಿನ್ನ ಮತ್ತು ಬೆಳ್ಳಿಯ ಗಟ್ಟಿ, ನಾಣ್ಯ, ಬಾರ್ ಇತ್ಯಾದಿ ಖರೀದಿಸಿದರೆ ಈ ಆಫರ್ ಸಿಗುವುದಿಲ್ಲ. ದೇಶಾದ್ಯಂತ ಇರುವ ಜಾಯಲುಕ್ಕಾಸ್ ಶೋರೂಮುಗಳಲ್ಲಿ ಚಿನ್ನ, ಬೆಳ್ಳಿ, ವಜ್ರದ ಆಭರಣಗಳನ್ನು ಖರೀದಿಸಿದರೆ ಈ ಗಿಫ್ಟ್ ವೋಚರ್ ಆಫರ್ ಪಡೆಯಬಹುದು. ಅದರ ವೆಬ್ಸೈಟ್ ಮೂಲಕವೂ ನೀವು ಒಡವೆಗಳನ್ನು ಬುಕ್ ಮಾಡಿ ಈ ಆಫರ್ ಸ್ವೀಕರಿಸಬಹುದು. 2023, ಏಪ್ರಿಲ್ 23ರವರೆಗೂ ಈ ಆಫರ್ ಇದೆ.
ಟಾಟಾ ಪಾಲುದಾರಿಕೆ ಇರುವ ವಜ್ರದ ಅಂಗಡಿ ಕ್ಯಾರಟ್ಲೇನ್ನಲ್ಲಿ ಅಕ್ಷಯ ತೃತೀಯ ದಿನಕ್ಕೆ ಭರ್ಜರಿ ಶೇ. 20ರಷ್ಟು ರಿಯಾಯಿತಿಯ ಅಮೋಘ ಆಫರ್ ಮುಂದಿಟ್ಟಿದೆ. ಎಸ್ಬಿಐ ಕ್ರೆಡಿಟ್ ಕಾರ್ಡ್ ಬಳಸಿ ಹಣ ಪಾವತಿ ಮಾಡಿದರೆ ಇನ್ನಷ್ಟು ಶೇ. 5 ಡಿಸ್ಕೌಂಟ್ ಸಿಗುತ್ತದೆ. 2023 ಏಪ್ರಿಲ್ 22ರವರೆಗೂ ಈ ಆಫರ್ ಇದೆ.
ಇದನ್ನೂ ಓದಿ: Mukesh Ambani: ಅಂಬಾನಿ ಹುಟ್ಟಾ ಶ್ರೀಮಂತರಲ್ಲ; ಪೆಟ್ರೋಲ್ ಬಂಕ್ ಕಾರ್ಮಿಕನ ಮಗನಾಗಿ ಮುಕೇಶ್ ಅಂಬಾನಿ ಬೆಳೆದ ರೋಚಕ ಕಥೆ
ಮಿಥುನ್ ಸಾಚೇತಿ ಮತ್ತು ಶ್ರೀನಿವಾಸ ಗೋಪಾಲನ್ ಮಾಲಕತ್ವದ Caratlane ಸಂಸ್ಥೆ ವಜ್ರದ ಉತ್ಪನ್ನಗಳನ್ನು ಬಹಳ ಕಡಿಮೆ ಬೆಲೆಗೆ ಮಾರುತ್ತದೆ. 2016ರಲ್ಲಿ ಟಾಟಾ ಗ್ರೂಪ್ಗೆ ಸೇರಿದ ಟೈಟಾನ್ ಸಂಸ್ಥೆ ಕೆರಟ್ಲೇನ್ ಕಂಪನಿಯ ಶೇ. 62ರಷ್ಟು ಪಾಲನ್ನು ಖರೀದಿಸಿತು. ಈಗ ಟೈಟಾನ್ ಒಡೆತನದ ತಾನಿಷ್ಕ್ ಜ್ಯುವೆಲರೀಸ್ ಮತ್ತು ಕೆರಟ್ಲೇನ್ ಎರಡೂ ಪಾರ್ಟ್ನರ್ ಕಂಪನಿಗಳೆನಿಸಿವೆ.
ಟಾಟಾ ಒಡೆತನದ ತಾನಿಷ್ಕ್ ಜ್ಯುವೆಲರೀಸ್ ಅಂಗಡಿಗಳಲ್ಲಿ ಅಕ್ಷಯ ತೃತೀಯ ದಿನದ ನಿಮಿತ್ತವಾಗಿ ಚಿನ್ನ ಮತ್ತು ವಜ್ರದ ಆಭರಣಗಳ ಮೇಕಿಂಗ್ ಚಾರ್ಜಸ್ ಮೇಲೆ ಶೇ. 20ರಷ್ಟು ರಿಯಾಯಿತಿ ಕೊಡುವುದಾಗಿ ಆಫರ್ ಇಟ್ಟಿದೆ.
ಇನ್ನು, ಪಿಪಿ ಜ್ಯುವೆಲರ್ಸ್ ಇನ್ನೂ ಒಂದು ಹೆಜ್ಜೆ ಉದಾರಿಯಾಗಿದ್ದು, ಅಕ್ಷಯ ತೃತೀಯ ದಿನದಂದು ಮೇಕಿಂಗ್ ಚಾರ್ಜಸ್ ಮೇಲೆ ಶೇ. 50ರಷ್ಟು ರಿಯಾಯಿತಿಯ ಆಫರ್ ಕೊಟ್ಟಿದೆ.
ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಮಳಿಗೆಗಳಲ್ಲಿ ಇನ್ನೂ ಭರ್ಜರಿ ಕೊಡುಗೆಗಳು ಅಕ್ಷಯ ತೃತೀಯಕ್ಕೆ ಜನರಿಗಾಗಿ ಕಾದಿವೆ. 30,000 ರೂ ಮೌಲ್ಯದ ಚಿನ್ನದ ಆಭರಣ ಖರೀದಿಸಿದರೆ 100 ಎಂಜಿ (ಮಿಲಿಗ್ರಾಮ್) ತೂಕದ ಗೋಲ್ಡ್ ಕಾಯಿನ್ ಗಿಫ್ಟ್ ಆಗಿ ಸಿಗುತ್ತದೆ. ವಜ್ರ, ಪೊಲ್ಕಿ ಡಿಸೈನ್, ಜೆಮ್ಸ್ಟೋನ್ಗಳನ್ನು 30,000 ರೂ ಮೊತ್ತದಷ್ಟು ಖರೀದಿಸಿದರೆ 250 ಎಂಜಿ ಗೋಲ್ಡ್ ಕಾಯಿನ್ ನೀಡಲಾಗುತ್ತದೆ. ಇಲ್ಲಿ ಎಂಜಿ ಎಂದರೆ ಮಿಲಿಗ್ರಾಮ್. 1,000 ಎಂಜಿ ಸೇರಿದರೆ 1 ಗ್ರಾಮ್ ಆಗುತ್ತದೆ.
ಮಲಬಾರ್ ಗೋಲ್ಡ್ನಲ್ಲಿ ಈ ಗೋಲ್ಡ್ ಕಾಯಿನ್ ಗಿಫ್ಟ್ ಜೊತೆಗೆ ಎಚ್ಡಿಎಫ್ಸಿ ಬ್ಯಾಂಕ್ ಗ್ರಾಹಕರಿಗೆ ಡಬಲ್ ಧಮಾಕ ಸಿಗುತ್ತದೆ. ಎಚ್ಡಿಎಫ್ಸಿ ಕಾರ್ಡ್ ಬಳಸಿ ಇಲ್ಲಿ ಒಡವೆಗಳನ್ನು ಖರೀದಿಸಿದರೆ ಶೇ. 5ರಷ್ಟು ಕ್ಯಾಷ್ಬ್ಯಾಕ್ ಸಿಗುತ್ತದೆ. 2023 ಏಪ್ರಿಲ್ 23ರವರೆಗೂ ಈ ಆಫರ್ ಇದೆ.
ಬೆಂಗಳೂರು ಮೂಲದ ಮೆಲೋರಾ ಜ್ಯುವೆಲರ್ಸ್ ಸಂಸ್ಥೆ (Melorra Jewellers) ಅಕ್ಷಯ ತೃತೀಯ ದಿನಕ್ಕೆಂದು ಚಿನ್ನಾಭರಣಗಳ ಮೇಕಿಂಗ್ ಚಾರ್ಜಸ್ ಮೇಲೆ ಶೇ. 50ರಷ್ಟು ಡಿಸ್ಕೌಂಟ್ ಆಫರ್ ಮಾಡಿದೆ. ಇನ್ನು, ವಜ್ರಗಳ ಮೇಲೆ ನೇರವಾಗಿ ಶೇ. 25ರಷ್ಟು ರಿಯಾಯಿತಿ ಕೊಡುತ್ತಿದೆ. ಇದು ಸಾಲದು ಎಂಬಂತೆ ಐಸಿಐಸಿಐನ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳನ್ನು ಸ್ವೈಪ್ ಮಾಡಿ ಒಡವೆ ಖರೀದಿಸಿದರೆ ನೇರವಾಗಿ ಶೇ. 10ರಷ್ಟು ಡಿಸ್ಕೌಂಟ್ ಕೊಡಲಾಗುತ್ತಿದೆ. ಪ್ರೀಪೇಯ್ಡ್ ಆರ್ಡರ್ಗಳ ಮೇಲೆ ಹೆಚ್ಚುವರಿ ಶೇ. 2 ರಿಯಾಯಿತಿಯನ್ನೂ ಕೊಡಲಾಗುತ್ತಿದೆ.
ಕಲ್ಯಾಣ್ ಜ್ಯುವೆಲರ್ಸ್ ಮಾಲಕತ್ವದ ಕ್ಯಾಂಡೆರೆ ಜ್ಯುವೆಲರ್ಸ್ ಕೂಡ ಅಕ್ಷಯ ತೃತೀಯಕ್ಕೆ ವಿಶೇಷ ಆಫರ್ಗಳನ್ನು ಮುಂದಿಟ್ಟು ಗ್ರಾಹಕರನ್ನು ಸೆಳೆಯುತ್ತಿದೆ. ಇಲ್ಲಿ ಡೈಮಂಡ್ ಒಡವೆ ಮೇಲೆ ನೂರು ಪ್ರತಿಶತದಷ್ಟು ಲೈಫ್ಟೈಮ್ ಎಕ್ಸ್ಚೇಂಜ್ ವ್ಯಾಲ್ಯೂ ಆಫರ್ ಮಾಡಿದೆ. ಏಪ್ರಿಲ್ 23ರವರೆಗೂ ಈ ಆಫರ್ ಇರುತ್ತದೆ. ಇದರ ಜೊತೆಗೆ ಚಿನ್ನ ಮತ್ತು ವಜ್ರದ ಆಭರಣಗಳ ಮೇಲಿನ ಮೆಕಿಂಗ್ ಚಾರ್ಜಸ್ ಅನ್ನು ರದ್ದು ಮಾಡಿದೆ. ಎಲ್ಲಾ ಪ್ರಮುಖ ಬ್ಯಾಂಕುಗಳ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳನ್ನು ಬಳಸಿ ಇಲ್ಲಿ ಶಾಪಿಂಗ್ ಮಾಡಿದರೆ ಶೇ. 3ರಷ್ಟು ಡಿಸ್ಕೌಂಟ್ ಕೂಡ ಸಿಗುತ್ತದೆ.