ಸಾಮಾನ್ಯ ಹೂಡಿಕೆ ಯೋಜನೆಗಳಲ್ಲಿ ಎಫ್ಡಿ ಮುಂಚೂಣಿಯಲ್ಲಿದೆ. ಹೆಚ್ಚಿನ ಜನರು ಈಗಲೂ ನಿಶ್ಚಿತ ಠೇವಣಿಗಳಲ್ಲಿ (fixed deposits) ಹೂಡಿಕೆಗೆ ಆದ್ಯತೆ ಕೊಡುತ್ತಾರೆ. ಆರ್ಬಿಐ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಭಾರತದ ವಿವಿಧ ಬ್ಯಾಂಕುಗಳಲ್ಲಿ 160 ಲಕ್ಷ ಕೋಟಿ ರೂಗೂ ಹೆಚ್ಚು ಮೊತ್ತದ ಹಣ ಎಫ್ಡಿಗಳಲ್ಲಿ ಹೂಡಿಕೆ ಆಗಿವೆಯಂತೆ. ಈಗ ಎಫ್ಡಿಗಳಿಗೆ ಬ್ಯಾಂಕುಗಳು ಶೇ. 6.2ರಿಂದ ಶೇ. 8ರವರೆಗೂ ಬಡ್ಡಿ ಕೊಡುತ್ತವೆ. ಆದರೆ, ಕೆಲ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಅಥವಾ ಎನ್ಬಿಎಫ್ಸಿಗಳು (NBFCs) ಶೇ. 10ರವರೆಗೂ ಬಡ್ಡಿ ಆಫರ್ ಮಾಡುವುದನ್ನು ನೀವು ಗಮನಿಸಿರಬಹುದು. ಬ್ಯಾಂಕುಗಳಿಗಿಂತ ಎನ್ಬಿಎಫ್ಸಿಗಳಲ್ಲಿ ಠೇವಣಿ ದರ ಹೆಚ್ಚು ಇರುವುದು ಯಾಕೆ? ಈ ಪ್ರಶ್ನೆಗೆ ಉತ್ತರ ತಿಳಿಯಲು ಎನ್ಬಿಎಫ್ಸಿ ಮತ್ತು ಬ್ಯಾಂಕ್ ನಡುವಿನ ವ್ಯತ್ಯಾಸ ಏನು ಎಂಬುದು ಗೊತ್ತಿರಬೇಕು.
ಕೆಲ ಬ್ಯಾಂಕಿಂಗ್ ಸೇವೆಗಳನ್ನು ಪರಿಣಾಮಕಾರಿಯಾಗಿ ನೀಡಲು ಅನುವಾಗಬೇಕೆನ್ನುವುದು ಎನ್ಬಿಎಫ್ಸಿಗಳ ಉಗಮಕ್ಕೆ ನಾಂದಿ ಹಾಡಿತ್ತು. ಬ್ಯಾಂಕುಗಳ ಹಲವು ಚಟುವಟಿಕೆಗಳನ್ನು ಎನ್ಬಿಎಫ್ಸಿಗಳು ನಡೆಸುತ್ತವೆ. ಗ್ರಾಹಕರಿಗೆ ಸಾಲ ಒದಗಿಸುತ್ತವೆ.
ಬ್ಯಾಂಕುಗಳು ಆರ್ಬಿಐನ ಹಲವು ಕಟ್ಟುಪಾಡು ಮತ್ತು ಸೌಲಭ್ಯಗಳಿಗೆ ಒಳಪಟ್ಟಿರುತ್ತವೆ. ಆದರೆ, ಎನ್ಬಿಎಫ್ಸಿಗಳಿಗೆ ಅಷ್ಟು ಕಟ್ಟುಪಾಡು ಮತ್ತು ಸೌಲಭ್ಯಗಳು ಇರುವುದಿಲ್ಲ. ಉದಾಹರಣೆಗೆ, ಬ್ಯಾಂಕುಗಳು ಕಾಸಾ (CASA- Current Account and Savings Account) ಖಾತೆಗಳನ್ನು ಗ್ರಾಹಕರಿಗೆ ನೀಡಬಹುದು. ಅಂದರೆ, ಉಳಿತಾಯ ಖಾತೆ ಮತ್ತು ಚಾಲ್ತಿ ಖಾತೆಗಳನ್ನು ಆಫರ್ ಮಾಡಬಹುದು. ಬ್ಯಾಂಕುಗಳಿಗೆ ಕಡಿಮೆ ದರದಲ್ಲಿ ಬಂಡವಾಳ ಸಂಗ್ರಹಿಸಲು ಈ ಖಾತೆಗಳೇ ಮೂಲವಾಗಿರುತ್ತವೆ. ಯಾಕೆಂದರೆ ಚಾಲ್ತಿ ಖಾತೆಯಲ್ಲಿರುವ ಹಣಕ್ಕೆ ಬ್ಯಾಂಕ್ ಯಾವ ಬಡ್ಡಿ ಕೊಡುವುದಿಲ್ಲ. ಸೇವಿಂಗ್ಸ್ ಅಕೌಂಟ್ನಲ್ಲಿರುವ ಹಣಕ್ಕೆ ಅಬ್ಬಬ್ಬಾ ಎಂದರೆ ಗರಿಷ್ಠ ಶೇ. 4ರವರೆಗೂ ಮಾತ್ರವೇ ಬಡ್ಡಿ ನೀಡಬಹುದು. ಜನರ ಉಳಿತಾಯ ಹಣದ ಹೆಚ್ಚಿನ ಭಾಗವು ಈ ಎಸ್ಬಿ ಖಾತೆಗಳಲ್ಲಿ ಇರುತ್ತವೆ. ಹೀಗಾಗಿ ಬ್ಯಾಂಕುಗಳಿಗೆ ಸುಲಭವಾಗಿ ಬಂಡವಾಳ ಸಿಗುತ್ತದೆ.
ಇದನ್ನೂ ಓದಿ: ಹಬ್ಬದ ಸೀಸನ್ನಲ್ಲಿ ಶಾಪಿಂಗ್ ಟಿಪ್ಸ್; ಡಿಸ್ಕೌಂಟ್, ಕ್ಯಾಶ್ಬ್ಯಾಕ್, ಕೂಪನ್ ಇವೆಲ್ಲವನ್ನೂ ಸರಿಯಾಗಿ ಬಳಸುವುದು ಹೇಗೆ?
ಎನ್ಬಿಎಫ್ಸಿಗಳಿಗೆ ಈ ಭಾಗ್ಯ ಇರುವುದಿಲ್ಲ. ಕರೆಂಟ್ ಅಕೌಂಟ್ ಆಗಲೀ ಸೇವಿಂಗ್ಸ್ ಅಕೌಂಟ್ ಆಗಲೀ ಎನ್ಬಿಎಫ್ಸಿಗಳು ತೆರೆಯಲು ಅವಕಾಶ ಇರುವುದಿಲ್ಲ. ಬಂಡವಾಳ ಸಂಗ್ರಹಿಸಲು ಇವು ಬೇರೆ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ. ಸಾಲಪತ್ರಗಳು ಒಂದು ಪ್ರಮುಖ ವಿಧಾನ. ಹಾಗೆಯೇ ವಿದೇಶೀ ಬಂಡವಾಳ ಪಡೆಯುವ ಅವಕಾಶ ಇರುತ್ತದೆ. ಇವೆಲ್ಲವೂ ಕೂಡ ಅಧಿಕ ಬಡ್ಡಿ ಬೇಡುವ ವಿಧಾನಗಳು. ಇದರ ಜೊತೆಗೆ ಎನ್ಬಿಎಫ್ಸಿಗಳು ಫಿಕ್ಸೆಡ್ ಡೆಪಾಸಿಟ್ ಮೂಲಕವೂ ಬಂಡವಾಳ ಪಡೆಯುತ್ತವೆ. ಎಫ್ಡಿಗಳನ್ನು ಆಕರ್ಷಿಸಲು ಬ್ಯಾಂಕುಗಳಿಗಿಂತ ಹೆಚ್ಚು ಬಡ್ಡಿ ಆಫರ್ ಮಾಡುವುದು ಎನ್ಬಿಎಫ್ಸಿಗಳಿಗೆ ಅನಿವಾರ್ಯ.
ಬ್ಯಾಂಕುಗಳಾದರೆ ಆರ್ಬಿಐನ ಗ್ಯಾರಂಟಿ ಇದೆ. 5 ಲಕ್ಷ ರೂವರೆಗಿನ ಠೇವಣಿಗಳಿಗೆ ಆರ್ಬಿಐ ಇನ್ಷೂರೆನ್ಸ್ ಒದಗಿಸುತ್ತದೆ. ಅಂದರೆ ನೀವು ಬ್ಯಾಂಕ್ನಲ್ಲಿ ಇಡುವ 5 ಲಕ್ಷ ರೂ ಹಣಕ್ಕೆ ಗ್ಯಾರಂಟಿ ಇರುತ್ತದೆ. ಈ ಗ್ಯಾರಂಟಿಯು ಎನ್ಬಿಎಫ್ಸಿ ವಿಚಾರದಲ್ಲಿ ಇರುವುದಿಲ್ಲ.
ನೀವು ಅಧಿಕ ಮೊತ್ತದ ಹಣವನ್ನು ಎನ್ಬಿಎಫ್ಸಿಯಲ್ಲಿ ಹೂಡಿಕೆ ಮಾಡಬೇಕೆಂದಿದ್ದರೆ ಮೊದಲು ಆ ಸಂಸ್ಥೆಯ ಕ್ರೆಡಿಟ್ ರೇಟಿಂಗ್ ಪರಿಶೀಲಿಸಬೇಕಾಗುತ್ತದೆ. ವಿವಿಧ ಹಣಕಾಸು ಸಂಸ್ಥೆಗಳು ಎನ್ಬಿಎಫ್ಸಿಗಳಿಗೆ ರೇಟಿಂಗ್ ನೀಡುತ್ತವೆ. ಮೂಡೀಸ್ ಸಂಸ್ಥೆಯ ಕ್ರಿಸಿಲ್ ಸೇರಿದಂತೆ ವಿವಿಧ ರೇಟಿಂಗ್ ಏಜೆನ್ಸಿಗಳು ಈ ಸೇವೆ ಒದಗಿಸುತ್ತವೆ. ಆದಿತ್ಯ ಬಿರ್ಲಾ ಫೈನಾನ್ಸ್ ಇತ್ಯಾದಿ ಎನ್ಬಿಎಫ್ಸಿಗಳಿಗೆ ಟಾಪ್ ರೇಟಿಂಗ್ ಇದೆ. ಕಡಿಮೆ ರೇಟಿಂಗ್ ಇರುವ ಎನ್ಬಿಎಫ್ಸಿಗಳಲ್ಲಿ ನೀವು ಹಣ ಇರಿಸುವುದು ಸುರಕ್ಷಿತವಲ್ಲ ಎಂಬುದು ಮೇಲ್ನೋಟಕ್ಕೆಯೇ ಗೊತ್ತಾಗಿಹೋಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ