ಕ್ರೆಡಿಟ್ ಸ್ಕೋರ್ ಮಾತ್ರವಲ್ಲ, ನಿಮ್ಮ ಡಿಟಿಐ ಅನ್ನೂ ಪರಿಶೀಲಿಸುತ್ತವೆ ಬ್ಯಾಂಕುಗಳು; ಏನಿದು ಡಿಟಿಐ?
Credit score and DTI score for personal loan: ಬ್ಯಾಂಕುಗಳು ಪರ್ಸನಲ್ ಲೋನ್ ನೀಡುವ ವಿಚಾರದಲ್ಲಿ ಬಹಳ ಹುಷಾರಾಗಿರುತ್ತವೆ. ಬಹಳ ರಿಸ್ಕ್ ಇರುವ ಲೋನ್ ಇದು. ಯಾರಂದವರಿಗೆ, ಕೇಳಿದಷ್ಟು ಪರ್ಸನಲ್ ಲೋನ್ ಕೊಡುವುದಿಲ್ಲ. ಕೂಲಂಕಷವಾಗಿ ಪರಿಗಣಿಸಿ ರಿಸ್ಕ್ ಅಂಶಗಳನ್ನು ಗಮನಿಸಿ ಸಾಲ ಬಿಡುಗಡೆ ಮಾಡಲಾಗುತ್ತದೆ. ಈ ವೇಳೆ ಕ್ರೆಡಿಟ್ ಸ್ಕೋರ್ ಮತ್ತು ಡಿಟಿಐ ಅಂಶ ಹೆಚ್ಚಾಗಿ ಗಣನೆಗೆ ಬರುತ್ತವೆ.

ಬ್ಯಾಂಕುಗಳಿಗೆ ಪ್ರಮುಖ ಆದಾಯ ಮೂಲವೇ ಸಾಲಗಳು. ಬ್ಯಾಂಕಿಗೆ ಗೃಹ ಸಾಲ, ಒಡವೆ ಸಾಲ ಇತ್ಯಾದಿ ಅಡಮಾನದ ಸಾಲಗಳು ಬಹಳ ಸೇಫ್. ಆದರೆ, ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ (Personal Loan) ಬಹಳ ರಿಸ್ಕಿ ಅಸೆಟ್ ಎನಿಸುತ್ತದೆ. ಹೀಗಾಗಿ, ವೈಯಕ್ತಿಕ ಸಾಲ ನೀಡುವಾಗ ಬ್ಯಾಂಕ್ ಬಹಳ ಎಚ್ಚರಿಕೆ ವಹಿಸುತ್ತವೆ. ಗ್ರಾಹಕರ ಕ್ರೆಡಿಟ್ ರಿಪೋರ್ಟ್ ಅನ್ನು ಗಂಭೀರವಾಗಿ ಪರಿಶೀಲಿಸುತ್ತವೆ. ಅದರಲ್ಲಿ ಮುಖ್ಯವಾದುದು ಗ್ರಾಹಕರ ಕ್ರೆಡಿಟ್ ಸ್ಕೋರ್ ಮತ್ತು ಡಿಟಿಐ ಸ್ಕೋರ್. ಈ ಎರಡು ಅಂಶಗಳಲ್ಲಿ ಭರವಸೆ ಮೂಡಿಸುವ ಗ್ರಾಹಕರಿಗೆ ಸುಲಭದಲ್ಲಿ ಮತ್ತು ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗುತ್ತದೆ. ಇಲ್ಲವಾದರೆ, ಬ್ಯಾಂಕು ಹೆಚ್ಚಿನ ಬಡ್ಡಿದರದಲ್ಲಿ ಕಡಿಮೆ ಪ್ರಮಾಣದ ಸಾಲ ಬಿಡುಗಡೆ ಮಾಡಬಹುದು.
ಏನಿದು ಡಿಟಿಐ ಸ್ಕೋರ್?
ಡಿಟಿಐ ಎಂಬುದು ಡೆಟ್ ಟು ಇನ್ಕಮ್ ರೇಶಿಯೋ (DTI- Debt to Income ratio). ಅಂದರೆ, ಇದು ಆದಾಯ ಮತ್ತು ಸಾಲದ ಅನುಪಾತ. ಗ್ರಾಹಕನ ಆದಾಯದಲ್ಲಿ ಸಾಲ ಎಷ್ಟಿದೆ ಅಥವಾ ಎಷ್ಟಾಗುತ್ತದೆ ಎಂಬುದನ್ನು ಬ್ಯಾಂಕ್ ಗಣನೆಗೆ ತೆಗೆದುಕೊಳ್ಳುತ್ತದೆ.
ಇದನ್ನೂ ಓದಿ: ಪಿಎಫ್ ಅರ್ಹತೆಗೆ ವೇತನ ಮಿತಿ 15,000 ರೂನಿಂದ 25,000 ರೂಗೆ ಏರಿಸಲು ಸರ್ಕಾರದಿಂದ ಚಿಂತನೆ
ಹೆಚ್ಚಿನ ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳು ಶೇ. 40ಕ್ಕಿಂತ ಕಡಿಮೆ ಡಿಟಿಐ ಇರುವುದನ್ನು ಖಾತ್ರಿಪಡಿಸಿಕೊಳ್ಳುತ್ತವೆ. ಗ್ರಾಹಕರ ಆದಾಯ ಹೆಚ್ಚಿದ್ದರೆ ಶೇ. 50 ಡಿಟಿಐ ಕೂಡ ಬ್ಯಾಂಕುಗಳಿಗೆ ಓಕೆ.
ಉದಾಹರಣೆಗೆ, ನಿಮ್ಮ ಮಾಸಿಕ ಆದಾಯ 60,000 ರೂ ಇದೆ ಎಂದಿಟ್ಟುಕೊಳ್ಳಿ. ನಿಮ್ಮ ವಿವಿಧ ಸಾಲಗಳ ಇಎಂಐ, ಕ್ರೆಡಿಟ್ ಕಾರ್ಡ್ ಬಿಲ್ ಇವೆಲ್ಲವೂ ತಿಂಗಳಿಗೆ 30,000 ರೂ ಇದ್ದಾಗ ನಿಮ್ಮ ಡಿಟಿಐ ಅನುಪಾತ 50 ಆಗುತ್ತದೆ. ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಇದಕ್ಕಿಂತ ಹೆಚ್ಚಿನ ಸಾಲದ ಹೊರೆ ಹೊರುವುದು ಕಷ್ಟವಾಗುತ್ತದೆ. ಸಾಲದ ಹೊರೆ ಹಾಗೂ ಅದನ್ನು ನಿಭಾಯಿಸುವ ಶಕ್ತಿಯನ್ನು ಸೂಚಿಸುವ ಡಿಟಿಐ ಅನುಪಾತ ಬ್ಯಾಂಕುಗಳಿಗೆ ಬಹಳ ಮುಖ್ಯ ಎನಿಸುತ್ತದೆ.
ಇದನ್ನೂ ಓದಿ: ಸದ್ಯ ಷೇರುಪೇಟೆ ಸುರಕ್ಷಿತ ಇಲ್ಲ; ಕಾದಿದೆ ವಿಪತ್ತು: ವ್ಯಾಲ್ಯುಯೇಶನ್ ಎಕ್ಸ್ಪರ್ಟ್ ದಾಮೋದರನ್ ಆತಂಕ
ನಿಮ್ಮ ಆದಾಯ 60,000 ರೂ ಇದ್ದು, ನಿಮ್ಮ ಇತರ ಸಾಲ ಬಾಧ್ಯತೆ 10,000 ರೂ ಇದ್ದಾಗ ಬ್ಯಾಂಕು ಡಿಟಿಐ ಅನುಪಾತ ಶೇ. 30-40 ಮೀರದಂತೆ ನಿರ್ದಿಷ್ಟ ಪ್ರಮಾಣದ ಸಾಲ ನೀಡಲು ಮುಂದಾಗಬಹುದು. ಮೇಲಿನ ನಿದರ್ಶನದಲ್ಲಿ ಶೇ. 40 ಡಿಟಿಐ ಎಂದರೆ 24,000 ರೂ ಆಗುತ್ತದೆ. ನಿಮ್ಮ ಈಗಿನ ಸಾಲ ಬಾಧ್ಯತೆ ಮಾಸಿಕ 10,000 ರೂ ಇದೆ ಎಂದಾದರೆ ಇನ್ನೂ 14,000 ರೂ ಇಎಂಐ ಕಟ್ಟುವ ಸಾಮರ್ಥ್ಯ ನಿಮಗಿದೆ ಎಂಬುದನ್ನು ಬ್ಯಾಂಕು ಪರಿಗಣಿಸುತ್ತದೆ. ಮಾಸಿಕ 14,000 ರೂ ಆಸುಪಾಸಿನಲ್ಲಿ ಇಎಂಐ ಬರುವಷ್ಟು ಪ್ರಮಾಣದ ಸಾಲವನ್ನು ನಿಮಗೆ ಕೊಡಲು ಬ್ಯಾಂಕು ಸಿದ್ಧ ಇರುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




