PF Rules; ಪಿಎಫ್ ಅರ್ಹತೆಗೆ ವೇತನ ಮಿತಿ 15,000 ರೂನಿಂದ 25,000 ರೂಗೆ ಏರಿಸಲು ಸರ್ಕಾರದಿಂದ ಚಿಂತನೆ
EPF rules, salary limit to be raised to Rs 25,000: ಇಪಿಎಫ್ ಸ್ಕೀಮ್ಗೆ ಅರ್ಹತೆ ಪಡೆಯಲು ನಿಗದಿಪಡಿಸಲಾದ 15,000 ರೂ ವೇತನ ಮಿತಿಯನ್ನು ಹೆಚ್ಚಿಸುವ ಪ್ರಸ್ತಾಪ ಸರ್ಕಾರದ ಮುಂದಿದೆ. ಈ ಮಿತಿಯನ್ನು 25,000 ರೂಗೆ ಏರಿಸುವ ಸಾಧ್ಯತೆ ಇದೆ. ಅಂದರೆ, 25,000 ರೂ ಹಾಗೂ ಅದಕ್ಕಿಂತ ಕಡಿಮೆ ಸಂಬಳದ ಉದ್ಯೋಗಿಗಳಿಗೆ ಕಂಪನಿಗಳು ಕಡ್ಡಾಯವಾಗಿ ಇಪಿಎಫ್ ಅಕೌಂಟ್ ತೆರೆಯಬೇಕಾಗುತ್ತದೆ.

ನವದೆಹಲಿ, ನವೆಂಬರ್ 21: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಮತ್ತೊಮ್ಮೆ ತನ್ನ ನೀತಿಯಲ್ಲಿ ಕೆಲ ಬದಲಾವಣೆಗಳನ್ನು ಮಾಡಲು ಹೊರಟಿದೆ. ಇಪಿಎಫ್ ಮತ್ತು ಇಪಿಎಸ್ಗೆ ಸಂಬಳದ ಮಿತಿಯನ್ನು (salary limit) 15,000 ರೂನಿಂದ 25,000 ರೂಗೆ ಏರಿಸುವ ಪ್ರಸ್ತಾಪವೊಂದು ಸರ್ಕಾರದ ಮುಂದಿದೆ. ಇದೇನಾದರೂ ಜಾರಿಗೆ ಬಂದಲ್ಲಿ ಹೆಚ್ಚಿನ ಉದ್ಯೋಗಿಗಳು ಇಪಿಎಫ್ ವ್ಯಾಪ್ತಿಗೆ ಬರಲಿದ್ದಾರೆ. ಹಾಗೆಯೇ, ಇಪಿಎಫ್ ಅಕೌಂಟ್ಗಳಿಗೆ ಹೆಚ್ಚಿನ ಕೊಡುಗೆ ಸಿಗಲಿದೆ.
2014ಕ್ಕೆ ಮುಂಚೆ ಪಿಎಫ್ಗೆ ಅರ್ಹರಾಗಲು ಸಂಬಳದ ಮಿತಿ 6,500 ರೂ ಇತ್ತು. 2014ರಲ್ಲಿ ಅದನ್ನು 15,000 ರೂಗೆ ಏರಿಸಲಾಯಿತು. ಇದರಿಂದಾಗಿ ಲಕ್ಷಾಂತರ ಉದ್ಯೋಗಿಗಳಿಗೆ ಇಪಿಎಫ್ ಭಾಗ್ಯ ಸಿಕ್ಕಂತಾಗಿತ್ತು. ಈಗ 25,000 ರೂಗೆ ಮಿತಿ ಹೆಚ್ಚಿಸಿದರೆ ಇನ್ನೂ ಹಲವಾರು ಉದ್ಯೋಗಿಗಳಿಗೆ ಇಪಿಎಫ್ ಸರ್ವಿಸ್ನ ಅವಕಾಶ ಸಿಗುತ್ತದೆ.
ಇದನ್ನೂ ಓದಿ: ಸದ್ಯ ಷೇರುಪೇಟೆ ಸುರಕ್ಷಿತ ಇಲ್ಲ; ಕಾದಿದೆ ವಿಪತ್ತು: ವ್ಯಾಲ್ಯುಯೇಶನ್ ಎಕ್ಸ್ಪರ್ಟ್ ದಾಮೋದರನ್ ಆತಂಕ
ಇಪಿಎಫ್ನಲ್ಲಿ ಸಂಬಳದ ಮಿತಿ ಹೇಗೆ ಕೆಲಸ ಮಾಡುತ್ತದೆ?
ಈಗ ಇಪಿಎಫ್ಗೆ ಅರ್ಹತೆ ಪಡೆಯಲು ವೇತನ ಮಿತಿ 15,000 ರೂ ಇದೆ. ಮೂಲವೇತನ ಮತ್ತು ಭತ್ಯೆ ಎರಡೂ ಸೇರಿ ಮಾಸಿಕ 15,000 ರೂ ವೇತನ ಎಂದು ಮಿತಿ ಹಾಕಲಾಗಿದೆ. ಅಂದರೆ, ಈ 15,000 ರೂಗಿಂತ ಕಡಿಮೆ ವೇತನ ಇದ್ದವರಿಗೆ ಕಂಪನಿಗಳು ಇಪಿಎಫ್ ಅಕೌಂಟ್ ತೆರೆಯುವುದು ಕಡ್ಡಾಯ.
ಈ ಮಿತಿಗಿಂತ ಹೆಚ್ಚು ಸಂಬಳ ಇರುವ ಉದ್ಯೋಗಿಗಳಿಗೆ ಕಂಪನಿಗಳು ಇಪಿಎಫ್ ಅಕೌಂಟ್ ತೆರೆಯಬೇಕೆಂಬುದು ಕಡ್ಡಾಯವೇನಿಲ್ಲ. ಅದು ಐಚ್ಛಿಕ ಮಾತ್ರ. ಅಂದರೆ, ಕಂಪನಿ ಅಧಿಕ ಸಂಬಳದ ಉದ್ಯೋಗಿಗೆ ಅವರ ಅನುಮತಿ ಪ್ರಕಾರ ಇಪಿಎಫ್ ಅಕೌಂಟ್ ತೆರೆಯಬಹುದು ಅಥವಾ ತೆರೆಯದೇ ಇರಬಹುದು. ಅದನ್ನು ಪ್ರಶ್ನೆ ಮಾಡಲು ಆಗುವುದಿಲ್ಲ.
ಇದನ್ನೂ ಓದಿ: ರಾಶಿ ರಾಶಿ ಮ್ಯುಚುವಲ್ ಫಂಡ್ಗಳ ಮಧ್ಯೆ ಯಾವುದರಲ್ಲಿ ಹೂಡಿಕೆ ಮಾಡುವುದು?
ಇಪಿಎಫ್ನ ವೇತನ ಮಿತಿ ಹೆಚ್ಚಿಸಿದರೆ ಉದ್ಯೋಗಿಗೆ ಏನುಪಯೋಗ?
ಸದ್ಯ 15,000 ರೂ ವೇತನ ಮಿತಿಯಲ್ಲಿ ಕಂಪನಿಯು ಉದ್ಯೋಗಿಯ ಇಪಿಎಫ್ ಖಾತೆಗೆ ಶೇ. 12ರಷ್ಟು ಕೊಡುಗೆ ನೀಡುತ್ತದೆ. ಕಂಪನಿ ವತಿಯಿಂದ 1,800 ರೂ ಸಂದಾಯವಾಗುತ್ತದೆ. ಉದ್ಯೋಗಿಯ ಸಂಬಳ 15,000 ರೂಗಿಂತ ಹೆಚ್ಚಿದ್ದಾಗಲೂ ಕಂಪನಿಯ ಕೊಡುಗೆ 1,800 ರೂಗಿಂತ ಹೆಚ್ಚಿರುವಂತಿಲ್ಲ.
ಈಗ ವೇತನ ಮಿತಿಯನ್ನು 25,000 ರೂಗೆ ಏರಿಸಿದಲ್ಲಿ ಆಗ ಕಂಪನಿಯು ಕಡ್ಡಾಯವಾಗಿ ಮಾಡಬೇಕಾದ ಕೊಡುಗೆಯೂ ಏರುತ್ತದೆ. 25,000 ರೂಗೆ ಶೇ. 12 ಕೊಡುಗೆ ಎಂದರೆ 3,000 ರೂ ಆಗುತ್ತದೆ. 25,000 ರೂ ಹಾಗು ಹೆಚ್ಚಿನ ವೇತನ ಪಡೆಯುತ್ತಿರುವ ಉದ್ಯೋಗಿಗಳಿಗೆ ಕಂಪನಿ ಕಡೆಯಿಂದ ಸಿಗುವ ಮಾಸಿಕ ಕೊಡುಗೆ 1,800 ರೂನಿಂದ 3,000 ರೂಗೆ ಏರುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:34 pm, Fri, 21 November 25




