AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mutual Funds: ರಾಶಿ ರಾಶಿ ಮ್ಯುಚುವಲ್ ಫಂಡ್​ಗಳ ಮಧ್ಯೆ ಯಾವುದರಲ್ಲಿ ಹೂಡಿಕೆ ಮಾಡುವುದು?

7 different types of mutual funds: ಮ್ಯುಚುವಲ್ ಫಂಡ್​ಗಳು ಭಾರತದಲ್ಲಿ ಜನಪ್ರಿಯ ಮತ್ತು ನೆಚ್ಚಿನ ಹೂಡಿಕೆಸ್ಥಳಗಳಾಗಿವೆ. ಕೋಟ್ಯಂತರ ಜನರು ಇದರಲ್ಲಿ ಹೂಡಿಕೆ ಮಾಡುತ್ತಾರೆ. ಭಾರತದಲ್ಲಿ 2,500ಕ್ಕೂ ಅಧಿಕ ಮ್ಯೂಚುವಲ್ ಫಂಡ್ ಸ್ಕೀಮ್​ಗಳಿದ್ದು ಅವುಗಳಲ್ಲಿ ಯಾವುದರ ಮೇಲೆ ಹೂಡಿಕೆ ಮಾಡುವುದು? ಫಂಡ್​ಗಳ ಬಗ್ಗೆ ಮಾಹಿತಿಯನ್ನು ಸರಳಗೊಳಿಸಿ ಇಲ್ಲಿ ವಿವರಿಸುವ ಪ್ರಯತ್ನವಾಗಿದೆ.

Mutual Funds: ರಾಶಿ ರಾಶಿ ಮ್ಯುಚುವಲ್ ಫಂಡ್​ಗಳ ಮಧ್ಯೆ ಯಾವುದರಲ್ಲಿ ಹೂಡಿಕೆ ಮಾಡುವುದು?
ಮ್ಯೂಚುವಲ್ ಫಂಡ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 21, 2025 | 12:37 PM

Share

ಸಾಮಾನ್ಯ ಹೂಡಿಕೆದಾರರಿಗೆ ಸುಲಭವಾದ ಮತ್ತು ಸೂಕ್ತವಾದ ಹೂಡಿಕೆಸ್ಥಳವೆಂದರೆ ಅದು ಮ್ಯೂಚುವಲ್ ಫಂಡ್. ಹೂಡಿಕೆಗೆ ತೀರಾ ಹೆಚ್ಚಿನ ರಿಸ್ಕ್ ಇರುವುದಿಲ್ಲ. ಮ್ಯೂಚುವಲ್ ಫಂಡ್​ನಲ್ಲಿ (Mutual Funds) ವಿವಿಧ ಹೂಡಿಕೆದಾರರ ಹಣವನ್ನು ವಿವಿಧ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಈಗ ಭಾರತದಲ್ಲಿ 45ಕ್ಕೂ ಹೆಚ್ಚು ಮ್ಯೂಚುವಲ್ ಫಂಡ್ ಸಂಸ್ಥೆಗಳು (AMC- Asset Management Company) ಇದ್ದು, ಇವುಗಳು ನಿರ್ವಹಿಸುತ್ತಿರುವ ಮ್ಯುಚುವಲ್ ಫಂಡ್ ಸ್ಕೀಮ್​ಗಳ ಸಂಖ್ಯೆ 2,500ಕ್ಕೂ ಅಧಿಕ. ಈ ರಾಶಿ ಫಂಡ್​ಗಳ ಪೈಕಿ ಯಾವುದರಲ್ಲಿ ಹೂಡಿಕೆ ಮಾಡುವುದು? ಇದನ್ನು ತಿಳಿಯುವ ಮುನ್ನ ಮ್ಯೂಚುವಲ್ ಫಂಡ್​ನಲ್ಲಿ ಎಷ್ಟು ರೀತಿಯ ಫಂಡ್​ಗಳಿವೆ, ಅವುಗಳ ರಿಸ್ಕ್ ಮತ್ತು ರಿಟರ್ನ್ ಸಾಧ್ಯತೆ ಎಷ್ಟು ಎಂಬುದನ್ನು ತಿಳಿಯುವ ಪ್ರಯತ್ನ ಇಲ್ಲಿದೆ.

ಭಾರತದಲ್ಲಿರುವ ಏಳು ರೀತಿಯ ಮ್ಯೂಚುವಲ್ ಫಂಡ್​ಗಳು

  1. ಲಾರ್ಜ್ ಕ್ಯಾಪ್ ಫಂಡ್​ಗಳು
  2. ಮಿಡ್ ಕ್ಯಾಪ್ ಫಂಡ್​​ಗಳು
  3. ಸ್ಮಾಲ್ ಕ್ಯಾಪ್ ಫಂಡ್​ಗಳು
  4. ಫ್ಲೆಕ್ಸಿ ಕ್ಯಾಪ್ ಮತ್ತು ಮಲ್ಟಿ ಕ್ಯಾಪ್ ಫಂಡ್​ಗಳು
  5. ಕನ್ಸರ್ವೇಟಿವ್ ಹೈಬ್ರಿಡ್ ಫಂಡ್​ಗಳು
  6. ಅಗ್ರೆಸ್ಸಿವ್ ಹೈಬ್ರಿಡ್ ಫಂಡ್​ಗಳು
  7. ಡೆಟ್ ಫಂಡ್​ಗಳು

ಇಲ್ಲಿ ಲಾರ್ಜ್ ಕ್ಯಾಪ್, ಮಿಡಲ್ ಕ್ಯಾಪ್, ಸ್ಮಾಲ್ ಕ್ಯಾಪ್ ಎಂದರೇನು? ಕ್ಯಾಪ್ ಎಂದರೆ ಕ್ಯಾಪಿಟಲ್. ಷೇರು ಮಾರುಕಟ್ಟೆಯಲ್ಲಿ ಅತ್ಯಧಿಕ ಮೌಲ್ಯದ ಷೇರುಗಳನ್ನು ಹೊಂದಿರುವ ಕಂಪನಿಗಳನ್ನು ಲಾರ್ಜ್ ಕ್ಯಾಪ್ ಎನ್ನುವುದು. ಒಟ್ಟು ಷೇರು ಬಂಡವಾಳ 20,000 ಕೋಟಿ ರೂಗಿಂತ ಹೆಚ್ಚು ಇದ್ದರೆ ಅಂಥದ್ದನ್ನು ಲಾರ್ಜ್ ಕ್ಯಾಪ್ ಷೇರು ಎಂದು ಪರಿಗಣಿಸಲಾಗುತ್ತದೆ. ಇಂಥ ಷೇರುಗಳಲ್ಲಿ ಹೂಡಿಕೆ ಮಾಡುವ ಮ್ಯೂಚುವಲ್ ಫಂಡ್​ಗಳನ್ನು ಲಾರ್ಜ್ ಕ್ಯಾಪ್ ಫಂಡ್​ಗಳೆನ್ನುತ್ತಾರೆ.

ಇದನ್ನೂ ಓದಿ: 20-25 ವರ್ಷದ ಯುವಕರು ಕಲಿಯಬೇಕಾದ ಪ್ರಮುಖ ಹಣಕಾಸು ಪಾಠಗಳು

5,000 ಕೋಟಿ ರೂಗಿಂತ ಕಡಿಮೆ ಮಾರುಕಟ್ಟೆ ಬಂಡವಾಳ ಇರುವ ಕಂಪನಿಯನ್ನು ಸ್ಮಾಲ್ ಕ್ಯಾಪ್ ಕಂಪನಿ ಎಂದು ಪರಿಗಣಿಸಲಾಗುತ್ತದೆ. ಲಾರ್ಜ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ನಡುವಿನದ್ದು ಮಿಡ್ ಕ್ಯಾಪ್ ಕಂಪನಿಗಳು.

ಇಲ್ಲಿ ಲಾರ್ಜ್ ಕ್ಯಾಪ್ ಷೇರುಗಳಲ್ಲಿ ಹೂಡಿಕೆ ಮಾಡುವುದು ಹೆಚ್ಚಿನ ರಿಸ್ಕ್ ಹೊಂದಿರುವುದಿಲ್ಲ. ಮಿಡ್ ಕ್ಯಾಪ್ ಕಂಪನಿಗಳು ಭವಿಷ್ಯದ ಸ್ಟಾರ್ ಎನಿಸುತ್ತವೆ. ತುಸು ಹೆಚ್ಚು ರಿಸ್ಕ್ ಇರುತ್ತದೆ. ಹೆಚ್ಚು ರಿಟರ್ನ್ ಕೊಡಬಲ್ಲುವುದು. ಆದರೆ, ತುಂಬಾ ರಿಸ್ಕ್ ಇರುವ, ಆದರೆ ಅತ್ಯಧಿಕ ರಿಟರ್ನ್ ಕೊಡಬಲ್ಲಂಥವು ಸ್ಮಾಲ್ ಕ್ಯಾಪ್ ಷೇರುಗಳು. ನೀವು ದೀರ್ಘಾವಧಿ ಹೂಡಿಕೆ ಮಾಡಬೇಕೆಂದಿದ್ದರೆ ಸ್ಮಾಲ್ ಕ್ಯಾಪ್ ಅಥವಾ ಮಿಡ್ ಕ್ಯಾಪ್ ಫಂಡ್​ಗಳಲ್ಲಿ ಹೂಡಿಕೆ ಮಾಡಬಹುದು.

ಫ್ಲೆಕ್ಸಿ ಕ್ಯಾಪ್ ಮತ್ತು ಮಲ್ಟಿ ಕ್ಯಾಪ್ ಫಂಡ್​ಗಳು ಮ್ಯಾನೇಜರ್​ಗಳ ವಿವೇಚನೆಯಿಂದ ನಿರ್ವಹಿಸಲ್ಪಡುತ್ತವೆ. ಮಾರುಕಟ್ಟೆಯ ಲಯಕ್ಕೆ ಅನುಗುಣವಾಗಿ ಈ ಫಂಡ್​ಗಳು ಷೇರುಗಳನ್ನು ಆಯ್ಕೆ ಮಾಡುತ್ತವೆ. ಫಂಡ್ ಮ್ಯಾನೇಜರ್​ಗಳ ಮೇಲೆ ನಿಮಗೆ ನಂಬಿಕೆ ಇದ್ದರೆ ಫ್ಲೆಕ್ಸಿ ಕ್ಯಾಪ್ ಅಥವಾ ಮಲ್ಟಿ ಕ್ಯಾಪ್ ಫಂಡ್​ಗಳಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ರಿಟರ್ನ್ಸ್ ಸಿಗುವ ಅವಕಾಶ ಹೆಚ್ಚಿರುತ್ತದೆ.

ಇದನ್ನೂ ಓದಿ: ರಿಯಲ್ ಎಸ್ಟೇಟ್ ಸೇರಿ ಶ್ರೀಮಂತಿಕೆ ಹೆಚ್ಚಿಸಬಲ್ಲ ಮೂರು ಕ್ಷೇತ್ರಗಳಿವು: ಸಿಎ ಕೌಶಿಕ್ ಅನಿಸಿಕೆ

ಡೆಟ್ ಫಂಡ್​ಗಳು ಸರ್ಕಾರೀ ಬಾಂಡ್, ಕಾರ್ಪೊರೇಟ್ ಬಾಂಡ್ ಇತ್ಯಾದಿ ನಿಶ್ಚಿತ ಆದಾಯದ ಸೆಕ್ಯೂರಿಟೀಸ್ ಮೇಲೆ ಹೂಡಿಕೆ ಮಾಡುತ್ತವೆ. ಫಿಕ್ಸೆಡ್ ಡೆಪಾಸಿಟ್​ಗಿಂತ ತುಸು ಹೆಚ್ಚಿನ ರಿಟರ್ನ್ ಅನ್ನು ನಿರೀಕ್ಷಿಸಬಹುದು.

ಹೈಬ್ರಿಡ್ ಫಂಡ್​ಗಳು ಈಕ್ವಿಟಿ ಹಾಗೂ ಡೆಟ್ ಈ ಎರಡು ಕಡೆ ಹೂಡಿಕೆ ಮಾಡುತ್ತವೆ. ಡೆಟ್ ಫಂಡ್​ಗಿಂತ ತುಸು ಹೆಚ್ಚಿನ ರಿಟರ್ನ್ ತರಬಲ್ಲುವು.

ಯಾವುದರಲ್ಲಿ ಹೂಡಿಕೆ ಮಾಡುವುದು?

ಕಡಿಮೆ ಅವಧಿಗೆ ಹೂಡಿಕೆ ಮಾಡುತ್ತಿದ್ದರೆ ಹೈಬ್ರಿಡ್ ಫಂಡ್ ಅಥವಾ ಡೆಟ್ ಫಂಡ್​ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ದೀರ್ಘಾವಧಿ ಹೂಡಿಕೆಗೆ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಕ್ತ. ಅದರ ರಿಸ್ಕ್ ಎದುರಿಸಲು ಕಷ್ಟ ಎನಿಸಿದಲ್ಲಿ ಫ್ಲೆಕ್ಸಿ ಕ್ಯಾಪ್ ಅಥವಾ ಮಲ್ಟಿಕ್ಯಾಪ್ ಫಂಡ್​ಗಳ ಮೊರೆ ಹೋಗಬಹುದು.

(ಗಮನಿಸಿ: ಮೇಲೆ ನೀಡಿರುವ ಮಾಹಿತಿ ಕೇವಲ ತಿಳಿವಳಿಕೆಗಾಗಿ ಮಾತ್ರ. ನಿರ್ದಿಷ್ಟ ಹೂಡಿಕೆಗೆ ಶಿಫಾರಸು ಮಾಡುವುದಿಲ್ಲ. ಹೂಡಿಕೆ ಬಗ್ಗೆ ನಿರ್ದಿಷ್ಟ ಸಲಹೆಗೆ ಸೆಬಿ ಮಾನ್ಯತೆ ಪಡೆದ ಸಲಹೆಗಾರರನ್ನು ಸಂಪರ್ಕಿಸಬಹುದು.)

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ