ಸೆಬಿ ಸೂಚನೆ ಬಳಿಕ ಟ್ರಾನ್ಸಾಕ್ಷನ್ ಶುಲ್ಕ ಪರಿಷ್ಕರಿಸಿದ ಬಿಎಸ್​ಇ, ಎನ್​ಎಸ್​ಇ; ಹೊಸ ದರಗಳ ವಿವರ ಇಲ್ಲಿದೆ

|

Updated on: Sep 29, 2024 | 12:28 PM

BSE and NSE revises transaction fees: ಷೇರುವಿನಿಮಯ ಕೇಂದ್ರಗಳು, ಡೆಪಾಸಿಟರಿಗಳು, ಕ್ಲಿಯರಿಂಗ್ ಸಂಸ್ಥೆಗಳು ಇತ್ಯಾದಿ ಮಾರುಕಟ್ಟೆ ಇನ್​ಫ್ರಾಸ್ಟ್ರಕ್ಚರ್ ಸದಸ್ಯರೆಲ್ಲರೂ ಏಕರೀತಿಯ ಶುಲ್ಕ ವಿಧಿಸಬೇಕು ಎಂದು ಸೆಬಿ ನಿಯಮ ಮಾಡಿದೆ. ಈ ಹಿನ್ನೆಲೆಯಲ್ಲಿ ಷೇರು ವಿನಿಮಯ ಕೇಂದ್ರಗಳು ಕ್ಯಾಷ್ ಮತ್ತು ಡಿರೈವೇಟಿವ್ ಸೆಗ್ಮೆಂಟ್​ಗಳಲ್ಲಿ ಕೆಲ ವಹಿವಾಟು ಶುಲ್ಕಗಳನ್ನು ಪರಿಷ್ಕರಿಸಿವೆ. ಅಕ್ಟೋಬರ್ 1, ಮಂಗಳವಾರದಿಂದ ಹೊಸ ದರಗಳು ಅನುಷ್ಠಾನಕ್ಕೆ ಬರಲಿವೆ.

ಸೆಬಿ ಸೂಚನೆ ಬಳಿಕ ಟ್ರಾನ್ಸಾಕ್ಷನ್ ಶುಲ್ಕ ಪರಿಷ್ಕರಿಸಿದ ಬಿಎಸ್​ಇ, ಎನ್​ಎಸ್​ಇ; ಹೊಸ ದರಗಳ ವಿವರ ಇಲ್ಲಿದೆ
ಷೇರು ಮಾರುಕಟ್ಟೆ
Follow us on

ನವದೆಹಲಿ, ಸೆಪ್ಟೆಂಬರ್ 29: ಷೇರು ಮಾರುಕಟ್ಟೆಯ ಎಲ್ಲಾ ಸಂಸ್ಥೆಗಳೂ ಏಕಸ್ವರೂಪದ ಶುಲ್ಕ ವ್ಯವಸ್ಥೆ ಹೊಂದಿರಬೇಕು ಎಂದು ಸೆಬಿ ಕಡ್ಡಾಯಪಡಿಸಿದ ಹಿನ್ನೆಲೆಯಲ್ಲಿ ಷೇರು ವಿನಿಮಯ ಕೇಂದ್ರಗಳಾದ ಬಿಎಸ್​ಇ ಮತ್ತು ಎನ್​ಎಸ್​ಇ ತಮ್ಮಲ್ಲಿನ ವಿವಿಧ ಸೆಗ್ಮೆಂಟ್​ಗಳ ಟ್ರಾನ್ಸಾಕ್ಷನ್ ಶುಲ್ಕಗಳನ್ನು ಪರಿಷ್ಕರಿಸಿವೆ. ಅಕ್ಟೋಬರ್ 1ರಿಂದ ಹೊಸ ದರಗಳು ಜಾರಿಗೆ ಬರಲಿವೆ. ಕ್ಯಾಷ್ ಸೆಗ್ಮೆಂಟ್, ಈಕ್ವಿಟಿ ಡಿರೈವೇಟಿವ್ಸ್​ಗಳ ವಿವಿಧ ಸೆಗ್ಮೆಂಟ್​ಗಳಲ್ಲಿ ವಹಿವಾಟು ಶುಲ್ಕಗಳಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಈಕ್ವಿಟಿ ಡಿರೈವೇಟಿವ್​ಗಳಲ್ಲಿ ಫ್ಯೂಚರ್ಸ್ ಮತ್ತು ಆಪ್ಷನ್ಸ್ ಟ್ರೇಡಿಂಗ್​ಗಳಿದ್ದು ಅದರ ವಹಿವಾಟು ಶುಲ್ಕಗಳಲ್ಲಿ ಬದಲಾವಣೆ ಇದೆ.

ಬಿಎಸ್​ಇಯಿಂದ ಟ್ರಾನ್ಸಾಕ್ಷನ್ ಫೀ ಪರಿಷ್ಕರಣೆ ವಿವರ

ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಅಥವಾ ಬಿಎಸ್​ಇನಲ್ಲಿ ಈಕ್ವಿಟಿ ಡಿರೈವೇಟಿವ್ಸ್ ಸೆಗ್ಮೆಂಟ್​ನಲ್ಲಿ ಸೆನ್ಸೆಕ್ಸ್ ಮತ್ತು ಬ್ಯಾಂಕೆಕ್ಸ್ ಕಾಂಟ್ರಾಕ್ಟ್​ಗಳಲ್ಲಿ, ಒಂದು ಕೋಟಿ ರೂನಷ್ಟು ಪ್ರೀಮಿಯಮ್ ಟರ್ನೋವರ್​ಗೆ 3,250 ರೂ ಟ್ರಾನ್ಸಾಕ್ಷನ್ ಫೀಯನ್ನು ಹೆಚ್ಚಿಸಲಾಗಿದೆ. ಆದರೆ, ಬಿಎಸ್​ಇಯನ ಈಕ್ವಿಟಿ ಡಿರೈವೇಟಿವ್ಸ್ ಸೆಗ್ಮೆಂಟ್​ನ ಇತರ ಕಾಂಟ್ರಾಕ್ಟ್​ಗಳ ಟ್ರೇಡಿಂಗ್​ನಲ್ಲಿ ಟ್ರಾನ್ಸಾಕ್ಷನ್ ಫೀ ಬದಲಾಗುತ್ತಿಲ್ಲ.

ಇದನ್ನೂ ಓದಿ: ಫಾರೆಕ್ಸ್ ರಿಸರ್ವ್ಸ್ ಸತತ ಆರನೇ ವಾರವೂ ಏರಿಕೆ; 700 ಬಿಲಿಯನ್ ಡಾಲರ್ ಮೈಲಿಗಲ್ಲಿಗೆ ಸಮೀಪ

ಬಿಎಸ್​ಇನಲ್ಲಿ ಸೆನ್ಸೆಕ್ಸ್ 50 ಆಪ್ಷನ್ಸ್ ಮತ್ತು ಸ್ಟಾಕ್ ಆಪ್ಷನ್ಸ್ ಟ್ರೇಡಿಂಗ್​ನಲ್ಲಿ ಒಂದು ಕೋಟಿ ರೂ ಪ್ರೀಮಿಯಮ್ ಟರ್ನೋವರ್​ಗೆ 500 ರೂ ಟ್ರಾನ್ಸಾಕ್ಷನ್ ಫೀ ಇರಲಿದೆ. ಇನ್ನೊಂದೆಡೆ, ಇಂಡೆಕ್ಸ್ ಮತ್ತು ಸ್ಟಾಕ್ ಫ್ಯೂಚರ್ಸ್​ನ ವಹಿವಾಟಿಗೆ ಇರುವ ಶುಲ್ಕದಲ್ಲಿ ಬದಲಾವಣೆ ಮಾಡಲಾಗುತ್ತಿಲ್ಲ.

ಎನ್​ಎಸ್​ಇ ಟ್ರಾನ್ಸಾಕ್ಷನ್ ಫೀನಲ್ಲಿ ಏನು ಬದಲಾವಣೆ?

ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ತನ್ನ ಕ್ಯಾಷ್ ಮಾರ್ಕೆಟ್​ನಲ್ಲಿ ಟ್ರಾನ್ಸಾಕ್ಷನ್ ಫೀ ಪರಿಷ್ಕರಿಸಿದೆ. ಒಂದು ಲಕ್ಷ ರೂ ಮೌಲ್ಯದ ವಹಿವಾಟಿಗೆ 2.97 ರೂ ಫೀ ವಿಧಿಸುತ್ತಿದೆ. ಈಕ್ವಿಟಿ ಫ್ಯೂಚರ್ಸ್​ನಲ್ಲಿ ಒಂದು ಲಕ್ಷ ಮೌಲ್ಯದ ವಹಿವಾಟಿಗೆ 1.73 ರೂ ಶುಲ್ಕ ಇರುತ್ತದೆ. ಈಕ್ವಿಟಿ ಆಪ್ಷನ್ಸ್​ನಲ್ಲಿ ಪ್ರತೀ ಒಂದು ಲಕ್ಷ ರೂ ಮೌಲ್ಯದ ಪ್ರೀಮಿಯಮ್​ಗೆ 35.03 ರೂ ಟ್ರಾನ್ಸಾಕ್ಷನ್ ಫೀ ಇರಲಿದೆ.

ಇದನ್ನೂ ಓದಿ: Thinking Hats IPO: ಬಂಡವಾಳ ಕೇಳಿದ್ದು 15 ಕೋಟಿ ರೂ , ಬಿಡ್ ಸಲ್ಲಿಕೆಯಾಗಿದ್ದು ಎರಡೂವರೆ ಸಾವಿರ ಕೋಟಿಗೂ ಹೆಚ್ಚು

ಕರೆನ್ಸಿ ಡಿರೈವೇಟಿವ್ಸ್ ಸೆಗ್ಮೆಂಟ್​ನಲ್ಲಿ ಫ್ಯೂಚರ್ಸ್ ಕಾಂಟ್ರಾಕ್ಟ್​ನಲ್ಲಿ ಒಂದು ಲಕ್ಷ ರೂ ಮೌಲ್ಯದ ಟ್ರೇಡಿಂಗ್​ಗೆ 35 ಪೈಸೆ ಫೀ ಇರುತ್ತದೆ. ಆಪ್ಷನ್ಸ್ ಕಾಂಟ್ರಾಕ್ಟ್​ನಲ್ಲಿ ಒಂದು ಲಕ್ಷರೂ ಮೌಲ್ಯದ ಪ್ರೀಮಿಯಮ್​ಗೆ 31.10 ರೂ ಫೀ ಇರುತ್ತದೆ.

ಈ ಮೇಲಿನ ಬದಲಾವಣೆಗಳು ಅಕ್ಟೋಬರ್ 1, ಮಂಗಳವಾರದಿಂದ ಜಾರಿಗೆ ಬರಲಿವೆ. ಮಾರ್ಕೆಟ್ ಇನ್​ಫ್ರಾಸ್ಟ್ರಕ್ಚರ್ ಸಂಸ್ಥೆಗಳು ಏಕ ರೀತಿಯ ಶುಲ್ಕ ವ್ಯವಸ್ಥೆ ಹೊಂದಿರಬೇಕು ಎಂದು ಸೆಬಿ ಜುಲೈ ತಿಂಗಳಲ್ಲಿ ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಿತ್ತು. ಸದ್ಯ, ಟ್ರೇಡಿಂಗ್ ಪ್ರಮಾಣ ಆಧಾರಿತ ಸ್ಲ್ಯಾಬ್ ಸಿಸ್ಟಂ ಪ್ರಕಾರ ವಹಿವಾಟು ಶುಲ್ಕ ನಡೆಸಲಾಗುತ್ತಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ