Corporate FD: ಕಾರ್ಪೊರೇಟ್ ಠೇವಣಿ ಎಂದರೇನು? ಬ್ಯಾಂಕ್ ಎಫ್​​ಡಿಗೂ ಅದಕ್ಕೂ ಏನು ವ್ಯತ್ಯಾಸ? ಯಾವುದು ಉತ್ತಮ?

|

Updated on: Dec 15, 2023 | 1:50 PM

Fixed Deposit Schemes: ಕಾರ್ಪೊರೇಟ್ ಎಫ್​ಡಿ ಎಂಬುದು ಬ್ಯಾಂಕೇತರ ಹಣಕಾಸು ಸಂಸ್ಥೆಗಳಾದ ಎನ್​ಬಿಎಫ್​ಸಿಗಳು ನೀಡುವ ಫಿಕ್ಸೆಡ್ ಡೆಪಾಸಿಟ್ ಪ್ಲಾನ್​ಗಳು. ಬ್ಯಾಂಕ್​ನಲ್ಲಿರುವ ಎಫ್​ಡಿ ದರಗಳಿಗೆ ಹೋಲಿಸಿದರೆ ಕಾರ್ಪೊರೇಟ್ ಎಫ್​ಡಿಗಳಲ್ಲಿ ಬಡ್ಡಿದರ ತುಸು ಹೆಚ್ಚು ಇರುತ್ತದೆ. ಎನ್​ಬಿಎಫ್​ಸಿಗಳಿಗೆ ಹೋಲಿಸಿದರೆ ಬ್ಯಾಂಕುಗಳಲ್ಲಿ ಹೂಡಿಕೆ ಹೆಚ್ಚು ಸುರಕ್ಷಿತವಾಗಿದೆ.

Corporate FD: ಕಾರ್ಪೊರೇಟ್ ಠೇವಣಿ ಎಂದರೇನು? ಬ್ಯಾಂಕ್ ಎಫ್​​ಡಿಗೂ ಅದಕ್ಕೂ ಏನು ವ್ಯತ್ಯಾಸ? ಯಾವುದು ಉತ್ತಮ?
ಫಿಕ್ಸೆಡ್ ಡೆಪಾಸಿಟ್
Follow us on

ಫಿಕ್ಸೆಡ್ ಡೆಪಾಸಿಟ್ ಬಹಳ ಸಾಮಾನ್ಯವಾಗಿ ಬಳಕೆಯಲ್ಲಿರುವ ಹೂಡಿಕೆ ಯೋಜನೆ. ಹೆಚ್ಚಿನ ಫಿಕ್ಸೆಡ್ ಡೆಪಾಸಿಟ್​ಗಳು ಬ್ಯಾಂಕುಗಳಲ್ಲಿ ಇವೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳೂ (NBFCs) ಕೂಡ ನಿಶ್ಚಿತ ಠೇವಣಿಗಳನ್ನು ಆಫರ್ ಮಾಡುತ್ತವೆ. ಅದೇ ಕಾರ್ಪೊರೇಟ್ ಎಫ್​ಡಿ. ಕಾರ್ಪೊರೇಟ್ ಬಾಂಡ್ ಮತ್ತು ಕಾರ್ಪೊರೇಟ್ ಎಫ್​ಡಿ ಬಗ್ಗೆ ಗೊಂದಲ ಬೇಡ. ಕಾರ್ಪೊರೇಟ್ ಬಾಂಡ್ ಎನ್ನುವುದು ಯಾವುದೇ ಬಿಸಿನೆಸ್ ಸಂಸ್ಥೆ ನೀಡುವ ಸಾಲಪತ್ರ. ಆದರೆ, ಕಾರ್ಪೊರೇಟ್ ಎಫ್​ಡಿ (corporate fd) ಎಂಬುದು ಎನ್​ಬಿಎಫ್​ಸಿಗಳು ನೀಡುವ ಠೇವಣಿ ಸ್ಕೀಮ್. ಬ್ಯಾಂಕ್ ಎಫ್​ಡಿ ಮತ್ತು ಕಾರ್ಪೊರೇಟ್ ಎಫ್​ಡಿಗಳಲ್ಲಿ ಹೆಚ್ಚಿನ ವ್ಯತ್ಯಾಸವೇನಿಲ್ಲ. ಬಡ್ಡಿದರ, ಅಪಾಯ ಸಾಧ್ಯತೆ, ತೆರಿಗೆ ಕಡಿತ ಇವು ಪ್ರಮುಖ ಅಂಶಗಳಾಗಿವೆ.

ಬ್ಯಾಂಕ್ ಎಫ್​ಡಿ ಮತ್ತು ಕಾರ್ಪೊರೇಟ್ ಎಫ್​ಡಿಯಲ್ಲಿ ಯಾವುದು ಉತ್ತಮ?

ವಾಣಿಜ್ಯ ಬ್ಯಾಂಕುಗಳು ಹೆಚ್ಚು ಸುರಕ್ಷಿತ ಎನಿಸಿರುವುದರಿಂದ ಬ್ಯಾಂಕ್ ಗ್ರಾಹಕರ ಮೊದಲ ಆಯ್ಕೆ ಆಗಿರುತ್ತವೆ. ಆದರೆ, ಎನ್​ಬಿಎಫ್​ಸಿಗಳಿಗೆ ಈ ಅನುಕೂಲ ಇಲ್ಲ. ಅದಕ್ಕೆ ಗ್ರಾಹಕರನ್ನು ಸೆಳೆಯಲು ಎನ್​ಬಿಎಫ್​ಸಿಗಳು ತಮ್ಮ ಠೇವಣಿಗಳಿಗೆ ಹೆಚ್ಚು ಬಡ್ಡಿ ಆಫರ್ ಮಾಡುತ್ತವೆ. ಅಂತೆಯೇ, ಕಾರ್ಪೊರೇಟ್ ಎಫ್​ಡಿಗಳಿಗೆ ಹೆಚ್ಚಿನ ಬಡ್ಡಿ ದರ ಇರುತ್ತದೆ.

ಇದನ್ನೂ ಓದಿ: ಎಫ್​ಡಿಯಿಂದ ಮಾಸಿಕ ಆದಾಯ ಸೃಷ್ಟಿಸಲು ಸಾಧ್ಯವೇ? ನಿಶ್ಚಿತ ಠೇವಣಿ ಬಗ್ಗೆ ತಿಳಿಯಬೇಕಾದ ಕೆಲ ಸಂಗತಿಗಳು

ಗ್ರಾಹಕರು ಯೋಚಿಸಬೇಕಾದ ಇನ್ನೊಂದು ಸಂಗತಿ ಎಂದರೆ ಅದು ಸುರಕ್ಷತೆಯದ್ದು. ಬ್ಯಾಂಕುಗಳಲ್ಲಿ ಸಾರ್ವಜನಿಕರ 5,00,000 ರೂವರೆಗಿನ ಠೇವಣಿಗೆ ಗ್ಯಾರಂಟಿ ಇದೆ. ಅಂದರೆ, ಬ್ಯಾಂಕು ದಿವಾಳಿ ಎದ್ದರೂ ಅಷ್ಟು ಹಣಕ್ಕೆ ಗ್ಯಾರಂಟಿ ಇರುತ್ತದೆ. ಇದು ಎನ್​ಬಿಎಫ್​ಸಿಗಳ ವಿಚಾರದಲ್ಲಿ ಇಲ್ಲ. ಹೀಗಾಗಿ, ಕಾರ್ಪೊರೇಟ್ ಎಫ್​ಡಿಯಲ್ಲಿ ರಿಸ್ಕ್ ಹೆಚ್ಚು.

ಒಂದು ವೇಳೆ ಕಾರ್ಪೊರೇಟ್ ಎಫ್​ಡಿಯಲ್ಲಿ ಹಣ ಇಡಬೇಕೆಂದು ಗ್ರಾಹಕರು ಆಲೋಚಿಸಿದಾಗ ಯಾವ ಎನ್​ಬಿಎಫ್​ಸಿ ಎಂಬುದನ್ನು ಮೊದಲು ಯೋಚಿಸಬೇಕು. ಉತ್ತಮ ರೇಟಿಂಗ್ ಇರುವ ಎನ್​ಬಿಎಫ್​ಸಿ ಹೆಚ್ಚು ಸುರಕ್ಷಿತ ಎನಿಸುತ್ತದೆ.

ಇನ್ನೊಂದು ಸಂಗತಿ ಎಂದರೆ ಟಿಡಿಎಸ್​ನದ್ದು. ಎಫ್​ಡಿಯಿಂದ ನಿಮ್ಮ ವರ್ಷದ ಬಡ್ಡಿ ಆದಾಯ 40,000 ರೂ ದಾಟಿದರೆ ಅದಕ್ಕೆ ಶೇ. 10ರಷ್ಟು ಟಿಡಿಎಸ್ ತೆರಿಗೆ ಕಡಿತ ಆಗುತ್ತದೆ. ನಿಮ್ಮ ವರ್ಷದ ಒಟ್ಟೂ ಆದಾಯವು ತೆರಿಗೆ ಗುಂಪಿಗಿಂತ ಕಡಿಮೆ ಇದ್ದರೆ ಫಾರ್ಮ್ 15ಜಿ ಅಥವಾ ಫಾರ್ಮ್ 15ಎಚ್ ಭರ್ತಿ ಮಾಡಿ ಸಲ್ಲಿಸಿದರೆ ಟಿಡಿಎಸ್ ತಪ್ಪಿಸಬಹುದು. ಈ ಅವಕಾಶ ಕಾರ್ಪೊರೇಟ್ ಎಫ್​ಡಿಗೆ ಇರುವುದಿಲ್ಲ.

ಇದನ್ನೂ ಓದಿ: ಶೇ. 8ರವರೆಗೂ ಬಡ್ಡಿ; ಈ ಮೂರು ಬ್ಯಾಂಕ್​ಗಳ ಸ್ಪೆಷಲ್ ಠೇವಣಿ ಪ್ಲಾನ್​ಗಳಿಗೆ ಡಿಸೆಂಬರ್ 31 ಡೆಡ್​ಲೈನ್

ಕಾರ್ಪೊರೇಟ್ ಎಫ್​ಡಿಯ ಅನುಕೂಲವೇನು?

ಬ್ಯಾಂಕಿಗಿಂತ ಕಾರ್ಪೊರೇಟ್ ಎಫ್​ಡಿಯಲ್ಲಿರುವ ಉತ್ತಮ ಅಂಶ ಇರುವುದು ಅದರ ಹೆಚ್ಚಿನ ಬಡ್ಡಿದರದಲ್ಲಿ ಎಂಬುದು ಒಂದು. ಫ್ಲೆಕ್ಸಿಬಿಲಿಟಿ ಅಂಶವೂ ಇನ್ನೊಂದು. ಠೇವಣಿ ಜೊತೆಯೇ ಬಡ್ಡಿಯೂ ಸೇರ್ಪಡೆಯಾಗುತ್ತಾ ಹೋಗಿ ಕೊನೆಯಲ್ಲಿ ಒಟ್ಟಿಗೆ ರಿಟರ್ನ್ ಸಿಗುವಂತೆ ಮಾಡಬಹುದು. ಅಥವಾ ವಿವಿಧ ಅವಧಿಯಲ್ಲಿ ಬಡ್ಡಿ ಹಿಂಪಡೆಯುವ ಅವಕಾಶ ಪಡೆಯಬಹುದು. ಬಡ್ಡಿಯನ್ನು ಮಾಸಿಕವಾಗಿ ಪಡೆಯಬಹುದು, ಮೂರು ತಿಂಗಳಿಗೊಮ್ಮೆ ಪಡೆಯಬಹುದು, ಅಥವಾ ಆರು ತಿಂಗಳಿಗೊಮ್ಮೆ ಪಡೆಯಬಹುದು, ಅಥವಾ ವರ್ಷಕ್ಕೊಮ್ಮೆ ಪಡೆಯಬಹುದು. ಈ ರೀತಿಯ ಆಯ್ಕೆಗಳು ಕಾರ್ಪೊರೇಟ್ ಎಫ್​ಡಿಗಳಲ್ಲಿ ಇರುತ್ತವೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ