ಕ್ರೆಡಿಟ್ ಕಾರ್ಡ್ ಸರಿಯಾಗಿ ಬಳಸಿದ್ರೆ ಹಣದ ಚೀಲ; ತಪ್ಪು ಮಾಡಿದರೆ ಸಾಲದ ಶೂಲ; ಕಾರ್ಡ್ ಬಳಸಿ ಲಾಭ ಮಾಡುವುದು ಹೇಗೆ ನೋಡಿ

|

Updated on: Aug 20, 2024 | 4:06 PM

Credit card tips: ಕ್ರೆಡಿಟ್ ಕಾರ್ಡ್ ವೆಚ್ಚಕ್ಕೆ ಯಾವಾಗ ದಂಡ ಹಾಕಲಾಗುತ್ತದೆ, ಬಡ್ಡಿ ಯಾವಾಗ ಹಾಕಲಾಗುತ್ತದೆ ಎಂಬಿತ್ಯಾದಿ ಅಂಶಗಳನ್ನು ಅರಿಯದೇ ಹೋದರೆ ಕಷ್ಟ. ಹಣಕಾಸು ಶಿಸ್ತು ಇಲ್ಲದೇ ಹೋದರೆ ಮತ್ತು ಕ್ರೆಡಿಟ್ ಕಾರ್ಡ್ ಬಗ್ಗೆ ಅರಿವು ಇಲ್ಲದೇ ಹೋದರೆ ಸಾಲದ ಶೂಲಕ್ಕೆ ಸಿಲುಕಬಹುದು. ಇತಿಮಿತಿಯಲ್ಲಿ ನೀವು ಕ್ರೆಡಿಟ್ ಕಾರ್ಡ್ ಬಳಸಿದರೆ ಕ್ಯಾಷ್ ಬ್ಯಾಕ್, ರಿವಾರ್ಡ್ ಪಾಯಿಂಟ್ಸ್ ಪಡೆಯಬಹುದು.

ಕ್ರೆಡಿಟ್ ಕಾರ್ಡ್ ಸರಿಯಾಗಿ ಬಳಸಿದ್ರೆ ಹಣದ ಚೀಲ; ತಪ್ಪು ಮಾಡಿದರೆ ಸಾಲದ ಶೂಲ; ಕಾರ್ಡ್ ಬಳಸಿ ಲಾಭ ಮಾಡುವುದು ಹೇಗೆ ನೋಡಿ
ಕ್ರೆಡಿಟ್ ಕಾರ್ಡ್
Follow us on

ಕ್ರೆಡಿಟ್ ಕಾರ್ಡ್ ಎಂದರೆ ಬಹಳ ಜನರು ಬೆಚ್ಚಿ ಬೀಳುತ್ತಾರೆ. ಅದರ ಸಹವಾಸ ಬೇಡಪ್ಪ ಎಂದು ದೂರ ಓಡುತ್ತಾರೆ. ಅದಕ್ಕೆ ಕಾರಣ, ಕ್ರೆಡಿಟ್ ಕಾರ್ಡ್ ಯಥೇಚ್ಛ ಬಳಸಿ ನೋಡ ನೋಡುತ್ತಿದ್ದಂತೆಯೇ ಸಾಲದ ಶೂಲಕ್ಕೆ ಸಿಲುಕಿ ಬಿಡಿಸಿಕೊಳ್ಳಲು ಆಗದೇ ಒದ್ದಾಡಿದ ಅನುಭವ ಅವರನ್ನು ಹೀಗೆ ಮಾಡಿರಬಹುದು. ಕ್ರೆಡಿಟ್ ಕಾರ್ಡ್​ನಂತಹ ಸಾಧನವನ್ನು ಸರಿಯಾಗಿ ಉಪಯೋಗಿಸಲು ಬಾರದವರಿಗೆ ಮತ್ತು ಹಣಕಾಸು ಶಿಸ್ತು ಹೊಂದಿಲ್ಲದವರಿಗೆ ಅದು ಶೂಲವೇ ಸರಿ. ಆದರೆ, ಇದೇ ಕಾರ್ಡು ಬುದ್ಧಿವಂತರಿಗೆ ಸಾಕಷ್ಟು ಹಣದ ಲಾಭ ಕೊಡುವ ಯಂತ್ರವೂ ಹೌದು.

ಕ್ರೆಡಿಟ್ ಕಾರ್ಡ್ ಹೇಗೆ ಡೇಂಜರ್ ಆಗಬಹುದು?

ಕ್ರೆಡಿಟ್ ಕಾರ್ಡ್​ನಿಂದ ನೀವು ಮಾಡುವ ವೆಚ್ಚವು ಸಾಲ ಆಗಿರುತ್ತದೆ. ಆದರೆ, ಈ ಸಾಲ ನಿರ್ದಿಷ್ಟ ಅವಧಿಯವರೆಗೆ ಬಡ್ಡಿರಹಿತವಾಗಿರುತ್ತದೆ. ಅಂದರೆ ಬಿಲ್ಲಿಂಗ್​ನ ಕೊನೆಯ ದಿನದವರೆಗೂ ಬಡ್ಡಿ ಇರುವುದಿಲ್ಲ. ಶೂನ್ಯ ಬಡ್ಡಿ ಆಗಿರುತ್ತದೆ. ಬಿಲ್ ಗಡುವಿನೊಳಗೆ ಪಾವತಿಸದೇ ಹೋದರೆ ಆ ಹಣಕ್ಕೆ ಬಹಳ ಅಧಿಕ ಬಡ್ಡಿ ಹಾಕಲಾಗುತ್ತದೆ. ಇದು ತಿಂಗಳಿಗೆ ಶೇ. 3ರವರೆಗೂ ಬಡ್ಡಿ ಹಾಕಬಹುದು.

ಎಲ್ಲದಕ್ಕೂ ಕ್ರೆಡಿಟ್ ಕಾರ್ಡ್ ಬಳಸುವವರು ತಮ್ಮ ಮರುಪಾವತಿ ಶಕ್ತಿ ಎಷ್ಟು ಎಂಬುದನ್ನು ಮರೆತೇ ಹೋಗುತ್ತಾರೆ. ಆ ಕಾರ್ಡ್ ಬಳಕೆಗೆ ಅಡಿಕ್ಟ್ ಆಗಿಬಿಟ್ಟಿರುತ್ತಾರೆ. ಬಿಲ್ ಬಂದಾಗ ಪೂರ್ಣ ಮೊತ್ತ ಪಾವತಿಸದೇ ಕನಿಷ್ಠ ಮೊತ್ತ ಪಾವತಿಸುವವರು ಬಹಳ ಇದ್ದಾರೆ. ಮಿನಿಮಮ್ ಅಮೌಂಟ್ ಪಾವತಿಸಿದರೂ ಉಳಿದ ಹಣಕ್ಕೆ ಬಡ್ಡಿ ಹಾಕಲಾಗುತ್ತದೆ.

ಬಡ್ಡಿ ಹಣ ಬೆಳೆದುಕೊಂಡು ಹೋಗುವುದು ಒಂದು ಕಡೆಯಾದರೆ, ಕ್ರೆಡಿಟ್ ಬಳಸಿ ಕೈಮೀರಿದಷ್ಟು ಖರ್ಚು ಮಾಡುವುದು ಇನ್ನೊಂದೆಡೆ ಆಗುತ್ತಿರುತ್ತದೆ. ಇದರಿಂದ ಸಾಲದ ಹೊರೆ ಹೆಚ್ಚುತ್ತಾ ಹೋಗುತ್ತದೆ.

ಇದನ್ನೂ ಓದಿ: ಹೂಡಿಕೆಗೆ ಚಿನ್ನವಾ, ಬೆಳ್ಳಿಯಾ? ಯಾವುದು ಹೆಚ್ಚು ಲಾಭ ತರಬಲ್ಲುದು? ಇಲ್ಲಿದೆ ಹೋಲಿಕೆ

ಕ್ರೆಡಿಟ್ ಕಾರ್ಡ್ ಅನ್ನು ಜಾಣ್ಮೆಯಿಂದ ಬಳಸಿ ಹಣ ಗಳಿಸಬಹುದು…

ಕ್ರೆಡಿಟ್ ಕಾರ್ಡ್ ಅನ್ನು ನೀವು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡರೆ ಉತ್ತಮ ಲಾಭ ಮಾಡಬಹುದು. ಮೊದಲಿಗೆ ನಿಮ್ಮ ವೆಚ್ಚದ ಪ್ಯಾಟರ್ನ್ ಎಂಥದ್ದು ಎಂದು ಅವಲೋಕಿಸಿ. ಉದಾಹರಣೆಗೆ, ರೈಲ್ವೆ ಬುಕಿಂಗ್, ಬಸ್ ಬುಕಿಂಗ್, ಹೋಟೆಲ್ ಬುಕಿಂಗ್, ಪೆಟ್ರೋಲ್ ಬಳಕೆ, ದಿನಸಿ ವಸ್ತುಗಳ ಖರೀದಿ ಇತ್ಯಾದಿ ಯಾವ್ಯಾವುದಕ್ಕೆ ಖರ್ಚು ಇದೆ ಎಂದು ಗಮನಿಸಿ. ಅದಕ್ಕೆ ಹೊಂದಿಕೆಯಾಗುವ ಕ್ರೆಡಿಟ್ ಕಾರ್ಡ್ ಅನ್ನು ಪಡೆಯಿರಿ. ಈ ರೀತಿಯ ನಿರ್ದಿಷ್ಟ ಪ್ರಾಕಾರದ ಕ್ರೆಡಿಟ್ ಕಾರ್ಡ್​ಗಳು ಆ ನಿರ್ದಿಷ್ಟ ಬಳಕೆಗೆ ರಿವಾರ್ಡ್ ಪಾಯಿಂಟ್ಸ್ ಮತ್ತು ಕ್ಯಾಷ್ ಬ್ಯಾಕ್ ನೀಡುತ್ತವೆ.

ಈ ಕ್ಯಾಷ್ ಬ್ಯಾಕ್ ಮತ್ತು ರಿವಾರ್ಡ್ ಪಾಯಿಂಟ್​​ಗಳೇ ನಿಮಗೆ ಲಾಭದ ಕುದುರೆಗಳಾಗುತ್ತವೆ. ಕೆಲವೊಂದು ವಸ್ತುಗಳ ಖರೀದಿಗೆ ಶೇ. 1ರಿಂದ 3ರಷ್ಟು ಡಿಸ್ಕೌಂಟ್ ಇರುತ್ತದೆ. ಇಂಥವೆಲ್ಲವನ್ನೂ ನೀವು ಬಳಸಬಹುದು.

ಇದನ್ನೂ ಓದಿ: ಬ್ಯಾಂಕುಗಳು ಕಮಿಷನ್ ಆಸೆಗೆ ಯುನಿಟ್ ಇನ್ಷೂರೆನ್ಸ್ ಪ್ಲಾನ್ ಪ್ರೊಮೋಟ್ ಮಾಡ್ತಿವೆ: ನಿತಿನ್ ಕಾಮತ್ ಅಸಮಾಧಾನ

ಇಲ್ಲಿ ಎಚ್ಚರ ವಹಿಸಬೇಕಾದ ಸಂಗತಿ ಎಂದರೆ ರಿವಾರ್ಡ್ ಪಾಯಿಂಟ್ ಅಥವಾ ಡಿಸ್ಕೌಂಟ್ ಆಸೆಗೆ ಬಿದ್ದು ಅನಗತ್ಯವಾದ ವಸ್ತುಗಳ ಖರೀದಿಗೆ ಹೋಗುವುದನ್ನು ತಪ್ಪಿಸುವುದು ಉತ್ತಮ. ಹೀಗಾಗಿ, ನೀವು ಏನು ಖರ್ಚು ಮಾಡುತ್ತೀರಿ ಅದು ನಿಮಗೆ ಅಗತ್ಯದ್ದಾಗಿರಬೇಕು. ಇಲ್ಲದಿದ್ದರೆ ಒಂದು ಸಾವಿರ ರೂ ಡಿಸ್ಕೌಂಟ್ ಆಸೆಗೆ ಹೋಗಿ 50,000 ರೂ ಹಣ ಪೋಲಾಗಿ ಹೋಗುತ್ತದೆ.

ನೀವು ಕ್ರೆಡಿಟ್ ಕಾರ್ಡ್ ಬಳಸಿ ಪಡೆಯುವ ಕ್ಯಾಷ್​ಬ್ಯಾಕ್ ಹಣವನ್ನು ಕಲೆಹಾಕಿ ಅದನ್ನು ಪ್ರತ್ಯೇಕವಾಗಿ ಕೂಡಿಡುತ್ತಾ ಹೋಗಿ, ಯಾವುದರಲ್ಲಾದರೂ ಹೂಡಿಕೆ ಮಾಡಿರಿ. ನಿಮಗೇ ಅಚ್ಚರಿ ಅಗುವಂತೆ ಹಣ ಬೆಳೆಯುತ್ತಾ ಹೋಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ