ಹೂಡಿಕೆಗೆ ಚಿನ್ನವಾ, ಬೆಳ್ಳಿಯಾ? ಯಾವುದು ಹೆಚ್ಚು ಲಾಭ ತರಬಲ್ಲುದು? ಇಲ್ಲಿದೆ ಹೋಲಿಕೆ
Good investment option, Gold or Silver?: ಹೂಡಿಕೆದಾರರಿಗೆ ಪರ್ಯಾಯ ಆಯ್ಕೆಗಳಲ್ಲಿ ಚಿನ್ನ ಮತ್ತು ಬೆಳ್ಳಿ ಲೋಹಗಳು ಸೇರಿವೆ. ಚಿನ್ನ ಸಾಂಪ್ರದಾಯಿಕವಾಗಿ ಹೆಚ್ಚು ಬೇಡಿಕೆಯಲ್ಲಿರುವ ವಸ್ತು. ಬೆಳ್ಳಿ ಹೂಡಿಕೆ ವಸ್ತುವಾಗಿ ಇತ್ತೀಚೆಗೆ ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ. ಈ ಎರಡು ಲೋಹಗಳಲ್ಲಿ ಪ್ರಸಕ್ತ ಸಂದರ್ಭದಲ್ಲಿ ಹೂಡಿಕೆಗೆ ಯಾವುದು ಉತ್ತಮ ಎನ್ನುವ ವಿಚಾರದ ಬಗ್ಗೆ ಒಂದು ನೋಟ ಇಲ್ಲಿದೆ...
ಚಿನ್ನ, ವಜ್ರ, ಬೆಳ್ಳಿ ಇತ್ಯಾದಿ ಅಮೂಲ್ಯ ಲೋಹಗಳನ್ನು ಆಭರಣಕ್ಕಾಗಿ ಖರೀದಿಸುವವರು ಹೆಚ್ಚು. ಹಾಗೆಯೇ, ಚಿನ್ನ ಮತ್ತು ಬೆಳ್ಳಿಯನ್ನು ಹೂಡಿಕೆಯಾಗಿ ಪರಿಗಣಿಸುವವರೂ ಬಹಳ ಜನರು ಇದ್ದಾರೆ. ಹೂಡಿಕೆಗೆ ಚಿನ್ನ ಹೆಚ್ಚು ಜನಪ್ರಿಯವಾಗಿದೆ. ಬೆಳ್ಳಿ ಇತ್ತೀಚೆಗೆ ಜನಪ್ರಿಯತೆ ಗಳಿಸುತ್ತಿದೆ. ಭಾರತದಲ್ಲಿ ಆಮದು ಸುಂಕ ಕಡಿಮೆಗೊಂಡ ಪರಿಣಾಮ ಇತ್ತೀಚೆಗೆ ಬೆಲೆ ಹೆಚ್ಚು ಇಳಿಕೆ ಕಂಡಿದೆಯಾದರೂ ಜಾಗತಿಕವಾಗಿ ಅದು ಸ್ಥಿರತೆ ಪಡೆದಿದೆ. ಬೆಳ್ಳಿ ಬೆಲೆ ಮಂದಗತಿಯಲ್ಲಿ ಸಾಗುತ್ತಿದೆ. ಪ್ರಸಕ್ತ ಸಂದರ್ಭದಲ್ಲಿ ಚಿನ್ನ ಅಥವಾ ಬೆಳ್ಳಿ ಮೇಲೆ ಹೂಡಿಕೆ ಮಾಡಬಯಸುವವರಿಗೆ ಯಾವ ಆಯ್ಕೆ ಉತ್ತಮ?
ಚಿನ್ನದ ಬೆಲೆ ಮುಂದಿನ ದಿನಗಳಲ್ಲಿ ಹೇಗೆ?
ಚಿನ್ನದ ವಿಚಾರ ನೋಡುವುದಾದರೆ, ಬಹಳಷ್ಟು ದೇಶಗಳ ಸೆಂಟ್ರಲ್ ಬ್ಯಾಂಕುಗಳು ಚಿನ್ನವನ್ನು ಖರೀದಿಸುತ್ತಿರುವುದರಿಂದ ಈ ಹಳದಿ ಲೋಹಕ್ಕೆ ಬೇಡಿಕೆ ಹೆಚ್ಚುತ್ತಿದೆ. ಬೆಲೆಯೂ ಏರುತ್ತಿದೆ. ಅಮೆರಿಕನ್ ಚಿನಿವಾರ ಪೇಟೆಯಲ್ಲಿ ಒಂದು ಔನ್ಸ್ ಚಿನ್ನಕ್ಕೆ 2,500 ಡಅಲರ್ ಇದೆ. ಒಂದು ಗ್ರಾಮ್ಗೆ 81 ಡಾಲರ್ ಇದೆ. ರುಪಾಯಿ ಲೆಕ್ಕದಲ್ಲಿ 6,794 ರೂ ಇದೆ.
ಇದನ್ನೂ ಓದಿ: ಕಡಿಮೆ ಬೆಲೆಗೆ ಒಳ್ಳೆಯ ಲಾಭ ತರಬಲ್ಲ ಮಲ್ಟಿಬ್ಯಾಗರ್ ಷೇರು ಪತ್ತೆ ಮಾಡುವುದು ಹೇಗೆ?
ಪ್ರೋಬಿಸ್ ಸೆಕ್ಯೂರಿಟೀಸ್ನ ಜೋನಾತನ್ ಬಾರಾಟ್ ಪ್ರಕಾರ ಚಿನ್ನದ ಬೆಲೆ ಮುಂದಿನ ದಿನಗಳಲ್ಲಿ ಔನ್ಸ್ಗೆ 2,550 ಡಾಲರ್ಗೆ ಹೋಗಬಹುದು. ಇನ್ನು, ಅಮೆರಿಕದ ಫೆಡರಲ್ ರಿಸರ್ವ್ ಸಂಸ್ಥೆ ಬಡ್ಡಿದರವನ್ನು ಕಡಿತಗೊಳಿಸಿದ್ದೇ ಆದಲ್ಲಿ ಚಿನ್ನಕ್ಕೆ ಇನ್ನಷ್ಟು ಡಿಮ್ಯಾಂಡ್ ಸೃಷ್ಟಿಯಾಗಿ ಬೆಲೆ ಇನ್ನೂ ಅಧಿಕ ಆಗಬಹುದು. ಹೀಗಾಗಿ, ಹೂಡಿಕೆದಾರರು ಚಿನ್ನದ ಮೇಲೆ ಹಣ ಹಾಕಲು ತೊಂದರೆ ಕಾಣುವುದಿಲ್ಲ ಎನ್ನುವುದು ಪರಿಣಿತರ ಅನಿಸಿಕೆ.
ಬೆಳ್ಳಿಯಲ್ಲಿ ಹೂಡಿಕೆ ಸರಿಯಾ?
ಬೆಳ್ಳಿ ಬೆಲೆ ಜಾಗತಕ ಮಾರುಕಟ್ಟೆಯಲ್ಲಿ ಒಂದು ಔನ್ಸ್ಗೆ 25 ಡಾಲರ್ ದರದಲ್ಲಿ ಮಾರಾಟವಾಗುತ್ತಿದೆ. ಇಲ್ಲಿ ಒಂದು ಔನ್ಸ್ ಎಂದರೆ ಸುಮಾರು 28.35 ಗ್ರಾಮ್. 13 ವರ್ಷದ ಹಿಂದಿನ ದರಕ್ಕೆ ಹೋಲಿಸಿದರೆ 25 ಡಾಲರ್ ಬಹಳ ಕಡಿಮೆ ಆಯಿತು. 2011ರಲ್ಲಿ ಒಂದು ಔನ್ಸ್ ಬೆಳ್ಳಿಯ ಬೆಲೆ 50 ಡಾಲರ್ ಇತ್ತು. ಪರಿಣಿತರ ಪ್ರಕಾರ ಬೆಳ್ಳಿ ಬೆಲೆ ಸಹಜವಾಗಿ ತನ್ನ ಗರಿಷ್ಠ ಮಟ್ಟಕ್ಕೆ ಹೋಗುವ ಎಲ್ಲಾ ಸಾಧ್ಯತೆ ಕಾಣುತ್ತಿದೆ.
ಇದನ್ನೂ ಓದಿ: ಹಣಕಾಸು ಸ್ವಾತಂತ್ರ್ಯ ಕಲ್ಪಿಸುವ FIRE ಪ್ಲಾನ್; ಜೀವನ ಆನಂದಿಸಲು ಇದು ಸೂಪರ್ ಸೂತ್ರವಾ?
ಅಮೆರಿಕದಲ್ಲಿ ಬಡ್ಡಿದರ ಕಡಿಮೆ ಆದರೆ ಚಿನ್ನದಂತೆ ಬೆಳ್ಳಿಗೂ ಬೇಡಿಕೆ ಹೆಚ್ಚಲಿದೆ. ಸದ್ಯದ ಸಂದರ್ಭದಲ್ಲಿ ಚಿನ್ನಕ್ಕಿಂತ ಬೆಳ್ಳಿಯು ಹೂಡಿಕೆದಾರರಿಗೆ ಹೆಚ್ಚು ರಿಟರ್ನ್ ಕೊಡಬಹುದು ಎಂಬುದು ಜೋನಾತನ್ ಬಾರಾಟ್ ಅನಿಸಿಕೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:53 am, Tue, 20 August 24