ಬ್ಯಾಂಕ್ ಸಾಲ ಸಿಗುತ್ತಿಲ್ಲವಾ? ಪರ್ಸನಲ್ ಲೋನ್​ಗಿಂತಲೂ ಕಡಿಮೆ ದರಕ್ಕೆ ನಿಮಗೆ ಸುಲಭವಾಗಿ ಸಿಗುತ್ತದೆ ಈ ಸಾಲ

|

Updated on: Nov 03, 2023 | 4:05 PM

Cheapest and Easiest Loan: ಚಿನ್ನ ಎಂಬುದು ಆಪತ್ಕಾಲದ ನಿಧಿ. ಚಿನ್ನದ ಮೇಲಿನ ಹೂಡಿಕೆಯಿಂದ ಯಾವತ್ತೂ ಮೋಸವಾಗುವುದಿಲ್ಲ. ನೀವು ಮಾರಿ ಹಣ ಮರಳಿ ಪಡೆಯಬಹುದು. ಅಡವಿಟ್ಟು ಸಾಲ ಪಡೆಯಬಹುದು. ಅದರೂ ಕಡಿಮೆ ಬಡ್ಡಿದರದಲ್ಲಿ. ಪರ್ಸನಲ್ ಲೋನ್​ಗಿಂತ ಬಹಳ ಕಡಿಮೆ ಬಡ್ಡಿದರದಲ್ಲಿ ಗೋಲ್ಡ್ ಲೋನ್​ಗಳು ಸಿಗುತ್ತವೆ. ಸಾಮಾನ್ಯವಾಗಿ ಒಂದೇ ಗಂಟೆಯಲ್ಲಿ ನಿಮಗೆ ಗೋಲ್ಡ್ ಲೋನ್ ಮಂಜೂರಾಗಿ ಹೋಗುತ್ತದೆ.

ಬ್ಯಾಂಕ್ ಸಾಲ ಸಿಗುತ್ತಿಲ್ಲವಾ? ಪರ್ಸನಲ್ ಲೋನ್​ಗಿಂತಲೂ ಕಡಿಮೆ ದರಕ್ಕೆ ನಿಮಗೆ ಸುಲಭವಾಗಿ ಸಿಗುತ್ತದೆ ಈ ಸಾಲ
ಬ್ಯಾಂಕು
Follow us on

ಬ್ಯಾಂಕುಗಳಲ್ಲಿ ಇವತ್ತು ಸಾಲ ಮಂಜೂರಾಗಬೇಕಾದರೆ, ಅಥವಾ ಬೇಗನೇ ಸಾಲ ಮಂಜೂರಾಗಬೇಕಾದರೆ ಕ್ರೆಡಿಟ್ ಸ್ಕೋರ್ ಉತ್ತಮವಾಗಿರುವುದು ಬಹಳ ಮುಖ್ಯ. ಅಂದರೆ, ನಿಮ್ಮ ಸಾಲ ನಿರ್ವಹಣೆಯ ಇತಿಹಾಸ (credit history) ಚೆನ್ನಾಗಿದ್ದರೆ ಬ್ಯಾಂಕುಗಳು ನಿಮಗೆ ಸುಲಭವಾಗಿ ಸಾಲಗಳನ್ನು ಕೊಡುತ್ತವೆ. ಒಂದು ವೇಳೆ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೆ ನಿಮ್ಮ ಅಡಮಾನ ಸಾಲ ಮಂಜೂರಾಗುವುದು ವಿಳಂಬ ಆಗಬಹುದು. ಬಡ್ಡಿ ದರವನ್ನು ಹೆಚ್ಚು ನಿಗದಿ ಮಾಡಲಾಗಿರುತ್ತದೆ. ಆದರೆ, ಚಿನ್ನದ ಮೇಲಿನ ಸಾಲದ (gold loan) ವಿಚಾರಕ್ಕೆ ಬಂದರೆ ನೀವೂ ಖುಷ್, ಬ್ಯಾಂಕೂ ಖುಷ್. ನಿಮ್ಮ ಕ್ರೆಡಿಟ್ ಸ್ಕೋರ್ ನೋಡುವ ಗೊಡವೆಗೆ ಬ್ಯಾಂಕ್ ಹೋಗೋದಿಲ್ಲ. ನಿಮಗೆ ಸುಲಭವಾಗಿ ಸಾಲ ಕೊಡುತ್ತವೆ.

ಚಿನ್ನ ಎಂಬುದು ಆಪತ್ಕಾಲದ ನಿಧಿ. ಚಿನ್ನದ ಮೇಲಿನ ಹೂಡಿಕೆಯಿಂದ ಯಾವತ್ತೂ ಮೋಸವಾಗುವುದಿಲ್ಲ. ನೀವು ಮಾರಿ ಹಣ ಮರಳಿ ಪಡೆಯಬಹುದು. ಅಡವಿಟ್ಟು ಸಾಲ ಪಡೆಯಬಹುದು. ಅದರೂ ಕಡಿಮೆ ಬಡ್ಡಿದರದಲ್ಲಿ. ಪರ್ಸನಲ್ ಲೋನ್​ಗಿಂತ ಬಹಳ ಕಡಿಮೆ ಬಡ್ಡಿದರದಲ್ಲಿ ಗೋಲ್ಡ್ ಲೋನ್​ಗಳು ಸಿಗುತ್ತವೆ. ಸಾಮಾನ್ಯವಾಗಿ ಒಂದೇ ಗಂಟೆಯಲ್ಲಿ ನಿಮಗೆ ಗೋಲ್ಡ್ ಲೋನ್ ಮಂಜೂರಾಗಿ ಹೋಗುತ್ತದೆ.

ಇದನ್ನೂ ಓದಿ: ದೀಪಾವಳಿಯ ಧನತ್ರಯೋದಶಿ ವೇಳೆ ಚಿನ್ನ ಖರೀದಿಸುತ್ತಿದ್ದೀರಾ? ಅದಕ್ಕೆ ಮುಂಚೆ ಈ ಸಲಹೆ ತಿಳಿದಿರಿ

ಬ್ಯಾಂಕುಗಳಿಗೂ ಕೂಡ ಗೋಲ್ಡ್ ಲೋನ್​ನಿಂದ ತಲೆನೋವು ಇರುವುದಿಲ್ಲ. ಇದು ಪಕ್ಕಾ ಸೆಕ್ಯೂರ್ಡ್ ಲೋನ್. ನೀವು ಸಾಲ ಮರುಪಾವತಿ ಮಾಡದೇ ಹೋದರೆ ಬ್ಯಾಂಕು ನಿಮ್ಮ ಚಿನ್ನವನ್ನು ಹರಾಜಿಗೆ ಹಾಕಿ ಸಾಲದ ಮೊತ್ತವನ್ನು ಮುರಿದುಕೊಳ್ಳುತ್ತದೆ. ಹೀಗಾಗಿ, ಒಡವೆ ಸಾಲ ಬಹಳ ಬೇಗ ಮಂಜೂರಾಗುತ್ತದೆ.

ಸಾಮಾನ್ಯವಾಗಿ ಚಿನ್ನದ ಅಂದಿನ ಮಾರುಕಟ್ಟೆ ಬೆಲೆಯ ಶೇ. 70ರಿಂದ 80ರಷ್ಟು ಮೊತ್ತವನ್ನು ಸಾಲವಾಗಿ ಕೊಡಲಾಗುತ್ತದೆ. ಕೆಲ ಪ್ರಮುಖ ಬ್ಯಾಂಕುಗಳು ಹಾಗೂ ಎನ್​ಬಿಎಫ್​ಸಿಗಳಲ್ಲಿ 1.5 ಕೋಟಿ ರೂವರೆಗೂ ಸಾಲ ಸಿಗಬಹುದು. ಸಹಕಾರಿ ಬ್ಯಾಂಕುಗಳಲ್ಲಿ ನೀವು ಸದಸ್ಯರಾಗಿದ್ದ ಐದು ಲಕ್ಷ ರೂವರೆಗೂ ಸಾಲ ಸಿಗಬಹುದು. ಸಾಲ ಮಂಜೂರು ಮಾಡಲು ಸಾಲದ ಮೊತ್ತದ ಮೇಲೆ ಶೇ. 0.5ರಷ್ಟು ಜಿಎಸ್​ಟಿ ಮತ್ತು ಕೆಲ ನೂರು ರೂಗಳಷ್ಟು ಪ್ರೋಸಸಿಂಗ್ ಶುಲ್ಕ ವಿಧಿಸಬಹುದು.

ಇದನ್ನೂ ಓದಿ: NPS: ನ್ಯಾಷನಲ್ ಪೆನ್ಷನ್ ಸ್ಕೀಮ್; ಹಣ ವಿತ್​ಡ್ರಾ ಮಾಡುವ ಕ್ರಮದಲ್ಲಿ ಬದಲಾವಣೆ? ಈ ಪ್ರಸ್ತಾಪ ಜಾರಿಯಾದರೆ ಪಿಂಚಣಿದಾರರಿಗೆ ಅನುಕೂಲ

ಬ್ಯಾಂಕುಗಳಲ್ಲಿ ಒಡವೆ ಸಾಲಕ್ಕೆ ಸದ್ಯ ಶೇ. 8ರಿಂದ 12ರಷ್ಟು ಬಡ್ಡಿ ದರ ಇವೆ. ಕೆಲ ಬ್ಯಾಂಕುಗಳಲ್ಲಿ ಹೆಚ್ಚಿನ ಬಡ್ಡಿದರ ಇರಬಹುದು. ಎಚ್​​ಡಿಎಫ್​ಸಿ ಬ್ಯಾಂಕ್​ನಲ್ಲಿ ಶೇ. 16ರವರೆಗೂ ಬಡ್ಡಿ ದರ ಇದೆ. ಕೋಟಕ್ ಮಹೀಂದ್ರ ಬ್ಯಾಂಕ್​ನಲ್ಲಿ ಶೇ. 24ರವರೆಗೂ ಬಡ್ಡಿ ವಿಧಿಸಲಾಗುತ್ತದೆ. ಆದರೆ ಬಹುತೇಕ ಬ್ಯಾಂಕುಗಳಲ್ಲಿ ಸರಾಸರಿಯಾಗಿ ಶೇ. 10ರಷ್ಟು ಬಡ್ಡಿದರ ಇದೆ.

ಆದರೆ, ಒಂದೇ ಹಿನ್ನಡೆ ಎಂದರೆ ಈ ಸಾಲವು ನಿಮ್ಮ ಕ್ರೆಡಿಟ್ ಸ್ಕೋರ್​ಗೆ ಲಿಂಕ್ ಆಗಿರುವುದಿಲ್ಲ. ನೀವು ಸರಿಯಾಗಿ ಸಾಲ ಮರುಪಾವತಿ ಮಾಡಿದರೂ ಕ್ರೆಡಿಟ್ ಸ್ಕೋರ್ ಉತ್ತಮಗೊಳ್ಳುವುದಿಲ್ಲ. ಮರುಪಾವತಿ ಮಾಡದೇ ಹೋದರೂ ಕ್ರೆಡಿಟ್ ಸ್ಕೋರ್ ಚಿಂತೆ ಪಡುವಂತಿಲ್ಲ. ಹಾಗೆಯೇ, ತೆರಿಗೆ ಉಳಿತಾಯಕ್ಕೆ ಈ ಒಡವೆ ಸಾಲವನ್ನು ಉಪಯೋಗಿಸಲು ಆಗುವುದಿಲ್ಲ. ನಿಮ್ಮ ಹೂಡಿಕೆಯಲ್ಲಿ ಈ ಸಾಲ ಪರಿಗಣನೆಗೆ ಬರುವುದೇ ಇಲ್ಲ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ