ದೀಪಾವಳಿಯ ಧನತ್ರಯೋದಶಿ ವೇಳೆ ಚಿನ್ನ ಖರೀದಿಸುತ್ತಿದ್ದೀರಾ? ಅದಕ್ಕೆ ಮುಂಚೆ ಈ ಸಲಹೆ ತಿಳಿದಿರಿ

Tips To Buy Gold In Dhanteras: ಚಿನ್ನದ ಮೇಲಿನ ಹೂಡಿಕೆ ಯಾವತ್ತಿದ್ದರೂ ನಷ್ಟ ತರುವಂಥದ್ದಲ್ಲ. ಹೀಗಾಗಿ, ಯಾವುದೇ ಎರಡನೇ ಯೋಚನೆ ಇಲ್ಲದೇ ಚಿನ್ನದ ಖರೀದಿಗೆ ನೀವು ಮುಂದಾಗಬಹುದು. ಒಡವೆ ಅಗತ್ಯವಿದ್ದರೆ ಖರೀದಿಸಿ. ಹಾಗೆ ಸುಮ್ಮನೆ ಚಿನ್ನ ಕಲೆಹಾಕುವುದಿದ್ದರೆ 24 ಕ್ಯಾರಟ್​ನ ಚಿನ್ನದ ನಾಣ್ಯ, ಗಟ್ಟಿ ಇತ್ಯಾದಿಗಳನ್ನು ಖರೀದಿಸಿ ಇಟ್ಟುಕೊಳ್ಳಬಹುದು. ಯಾವ ದಿನವೇ ನೀವು ಚಿನ್ನ ಖರೀದಿಸಲು ಹೋದರೂ ಕೆಲ ಅಗತ್ಯ ಸಂಗತಿಗಳನ್ನು ತಪ್ಪದೇ ತಿಳಿದಿರಿ.

ದೀಪಾವಳಿಯ ಧನತ್ರಯೋದಶಿ ವೇಳೆ ಚಿನ್ನ ಖರೀದಿಸುತ್ತಿದ್ದೀರಾ? ಅದಕ್ಕೆ ಮುಂಚೆ ಈ ಸಲಹೆ ತಿಳಿದಿರಿ
ಒಡವೆ ಅಂಗಡಿ
Follow us
|

Updated on: Nov 03, 2023 | 2:28 PM

ದೀಪಾವಳಿ ಹಬ್ಬ ಸಮೀಪಿಸುತ್ತಿದ್ದು ಇನ್ನೊಂದು ವಾರ ಬಾಕಿ ಇದೆ. ಮುಂದಿನ ಗುರುವಾರ (ನವೆಂಬರ್ 10) ಧನತೇರಸ್ ಮೂಲಕ ದೀಪಾವಳಿ ಹಬ್ಬ ಆರಂಭವಾಗುತ್ತದೆ. ಧನತೇರಸ್ ಅಥವಾ ಧನತ್ರಯೋದಶಿ (Dhanteras / Dhana Trayodashi) ದಿನದಂದು ಹೂಡಿಕೆ ಮಾಡಿದರೆ ಶ್ರೇಷ್ಠ ಎಂದು ಹೇಳಲಾಗುತ್ತದೆ. ಹೀಗಾಗಿ, ಅಂದು ಚಿನ್ನ ಖರೀದಿಸಿದರೆ ಮನೆಯಲ್ಲಿ ಲಕ್ಷ್ಮೀ ಒಲಿಯುತ್ತಾಳೆ ಎನ್ನುವ ನಂಬಿಕೆ ಇದೆ. ಅದೇನೇ ಇದ್ದರೂ ಚಿನ್ನದ ಮೇಲಿನ ಹೂಡಿಕೆ ಯಾವತ್ತಿದ್ದರೂ ನಷ್ಟ ತರುವಂಥದ್ದಲ್ಲ. ಹೀಗಾಗಿ, ಯಾವುದೇ ಎರಡನೇ ಯೋಚನೆ ಇಲ್ಲದೇ ಚಿನ್ನದ ಖರೀದಿಗೆ ನೀವು ಮುಂದಾಗಬಹುದು. ಒಡವೆ ಅಗತ್ಯವಿದ್ದರೆ ಖರೀದಿಸಿ. ಹಾಗೆ ಸುಮ್ಮನೆ ಚಿನ್ನ ಕಲೆಹಾಕುವುದಿದ್ದರೆ 24 ಕ್ಯಾರಟ್​ನ ಚಿನ್ನದ ನಾಣ್ಯ, ಗಟ್ಟಿ ಇತ್ಯಾದಿಗಳನ್ನು ಖರೀದಿಸಿ ಇಟ್ಟುಕೊಳ್ಳಬಹುದು.

ಯಾವ ದಿನವೇ ನೀವು ಚಿನ್ನ ಖರೀದಿಸಲು ಹೋದರೂ ಕೆಲ ಅಗತ್ಯ ಸಂಗತಿಗಳನ್ನು ತಪ್ಪದೇ ತಿಳಿದಿರಿ. ಬೆಲೆ, ಚಿನ್ನದ ಶುದ್ಧತೆ, ಸರ್ಟಿಫಿಕೇಶನ್ ಇವೆಲ್ಲವನ್ನೂ ನೀವು ಗಮನದಲ್ಲಿರಿಸಿಕೊಳ್ಳಬೇಕು. ಚಿನ್ನ ಖರೀದಿಸುವಾಗ ಈ ಮುಂದಿನ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಿ.

ಪ್ರಮಾಣಿತ ಚಿನ್ನವಾ ನೋಡಿ

ಈಗ ಚಿನ್ನವನ್ನು ಬಿಐಎಸ್ ಹಾಲ್ಮಾರ್ಕ್ ಗುರುತಿಲ್ಲದೇ ಮಾರುವಂತಿಲ್ಲ. ಈ ಗುರುತಿನಲ್ಲಿ ಚಿನ್ನದ ಶುದ್ಧತೆ ಎಷ್ಟಿದೆ, ಪರೀಕ್ಷಾ ಕೇಂದ್ರದ ಗುರುತು, ಒಡವೆ ತಯಾರಕರ ಗುರುತು ಹಾಗು ವರ್ಷ ಇವಿಷ್ಟೂ ನಮೂದಾಗಿರುತ್ತದೆ. ಈ ರೀತಿ ಹಾಲ್ಮಾರ್ಕ್ ಅಚ್ಚು ಇರುವ ಚಿನ್ನವನ್ನು ಮಾತ್ರ ಖರೀದಿಸಬೇಕು.

ಇದನ್ನೂ ಓದಿ: Gold Silver Price on 3 November: ಸತತ ಮೂರು ಬಾರಿ ಇಳಿಕೆ ಬಳಿಕ ಏರಿದ ಚಿನ್ನದ ಬೆಲೆ; ಇಲ್ಲಿದೆ ಇವತ್ತಿನ ಚಿನ್ನ, ಬೆಳ್ಳಿ ದರಪಟ್ಟಿ

ಚಿನ್ನದ ಶುದ್ಧತೆ ಗಮನಿಸಿ…

ಚಿನ್ನದ ಗಟ್ಟಿ ಸಾಮಾನ್ಯವಾಗಿ 24 ಕ್ಯಾರಟ್​ನ ಅಪರಂಜಿ ಚಿನ್ನದಾಗಿರುತ್ತದೆ. ಒಡವೆ ತಯಾರಿಸಲು ಚಿನ್ನದ ಶುದ್ಧತೆಯನ್ನು ಕಡಿಮೆ ಮಾಡಿ ಬೇರೆ ಲೋಹಗಳನ್ನು ಅಲ್ಪವಾಗಿ ಸೇರಿಸಬೇಕಾಗುತ್ತದೆ. ಅಂತೆಯೇ, 22 ಕ್ಯಾರಟ್, 18 ಕ್ಯಾರಟ್, 16 ಕ್ಯಾರಟ್ ಹೀಗೆ ಬೇರೆ ಬೇರೆ ಶುದ್ಧತಾ ಮಟ್ಟದ ಚಿನ್ನಗಳಿರುತ್ತವೆ. ಶುದ್ಧತೆ ಕಡಿಮೆ ಆದಂತೆ ಬೆಲೆಯೂ ಕಡಿಮೆ ಆಗುತ್ತಾ ಹೋಗುತ್ತದೆ. ಬಹುತೇಕ ಆಭರಣಗಳು 22 ಕ್ಯಾರಟ್ ಶುದ್ಧತೆ ಹೊಂದಿರುತ್ತವೆ. ಅದೇ ದರದಲ್ಲಿ ಕಡಿಮೆ ಶುದ್ಧತೆಯ ಚಿನ್ನದ ಆಭರಣವನ್ನು ಮಾರಲಾಗುತ್ತಿದೆಯಾ ಎಚ್ಚರ ವಹಿಸಿ…

ಚಿನ್ನದ ಬೆಲೆ ತಿಳಿದುಕೊಂಡಿರಿ…

ನೀವು ಒಡವೆ ಅಂಗಡಿಗೆ ಹೋಗುವ ಮುನ್ನ ಚಿನ್ನದ ಆವತ್ತಿನ ಮಾರುಕಟ್ಟೆ ಬೆಲೆ ತಿಳಿದುಕೊಂಡಿರಿ. ಕೆಲ ಒಡವೆ ಅಂಗಡಿಯವರು ಹೆಚ್ಚಿನ ಮೇಕಿಂಗ್ ಚಾರ್ಜಸ್ ಹಾಕುತ್ತಾರೆ. ಕಡಿಮೆ ಮೇಕಿಂಗ್ ಚಾರ್ಜಸ್ ಇರುವ ಅಂಗಡಿಯಲ್ಲಿ ಆಭರಣ ಖರೀದಿಸುವ ಆಲೋಚನೆ ಮಾಡಬಹುದು. ಹಬ್ಬದ ಸೀಸನ್​ನಲ್ಲಿ ಕೆಲ ಆಭರಣದಂಗಡಿಯವರು ಡಿಸ್ಕೌಂಟ್ ಕೊಡಬಹುದು. ಅದರ ಮೇಲೂ ಕಣ್ಣಿಟ್ಟಿರಿ.

ಇದನ್ನೂ ಓದಿ: ಚಿನ್ನ ಖರೀದಿಸುವ ಮುನ್ನ ಈ ಆ್ಯಪ್ ಇನ್​ಸ್ಟಾಲ್ ಮಾಡಿ: ಅಸಲಿಯೋ-ನಕಲಿಯೋ ತಿಳಿದುಕೊಳ್ಳಿ

ದಾಖಲೆಗಳನ್ನು ಇಟ್ಟುಕೊಳ್ಳಿ…

ಒಡವೆಯನ್ನು ಮುಂದೊಮ್ಮೆ ವಾಪಸ್ ಕೊಟ್ಟರೆ ಎಷ್ಟಕ್ಕೆ ತೆಗೆದುಕೊಳ್ಳುತ್ತೀರಿ ಎಂಬುದನ್ನು ನೀವು ಚಿನ್ನ ಖರೀದಿಸುವ ಮುನ್ನ ತಪ್ಪದೇ ವಿಚಾರಿಸಿ. ಅಶುದ್ಧ ಅಂಶಗಳನ್ನು ತ್ಯಜಿಸಿ ಉಳಿದ ಚಿನ್ನವನ್ನು ಅಂದಿನ ಮಾರುಕಟ್ಟೆ ಬೆಲೆಗೆ ಕೊಳ್ಳಲಾಗುತ್ತದೆ.

ಹಾಗೆಯೇ, ಒಡವೆ ಖರೀದಿಸಿದಾಗ ಬಿಲ್ ತಪ್ಪದೇ ಪಡೆದುಕೊಳ್ಳಿ. ಅದರಲ್ಲಿ ಒಡವೆಯ ಬೆಲೆ, ಶುದ್ಧತೆ, ತೂಕ, ಮೇಕಿಂಗ್ ಚಾರ್ಜಸ್ ಇತ್ಯಾದಿ ಒಳಗೊಂಡಿದೆಯಾ ಗಮನಿಸಿ. ಈ ದಾಖಲೆಯನ್ನು ತಪ್ಪದೇ ಮನೆಯಲ್ಲಿ ಇಟ್ಟುಕೊಳ್ಳಿ. ಮುಂದೆ ಚಿನ್ನ ಮಾರುವಾಗ ಬೇಕಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ