ಕ್ರೆಡಿಟ್ ಸ್ಕೋರ್ ಬಹಳ ಮುಖ್ಯ. ಉತ್ತಮ ಸ್ಕೋರ್ ಇದ್ದರೆ ನಿಮಗೆ ಸುಲಭವಾಗಿ ಸಾಲ ಸಿಗುತ್ತದೆ. ಅದರಲ್ಲೂ ತುರ್ತಾಗಿ ನಿಮಗೆ ಪರ್ಸನಲ್ ಲೋನ್ ಬೇಕಾಗಿದ್ದರೆ ಕ್ರೆಡಿಟ್ ಸ್ಕೋರ್ ಬಹಳ ಸಹಾಯಕ್ಕೆ ಬರುತ್ತದೆ. ಕಡಿಮೆ ಬಡ್ಡಿದರಕ್ಕೆ ಹೆಚ್ಚು ಮೊತ್ತದ ಸಾಲ ಕೊಡಲು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ಸಿದ್ಧ ಇರುತ್ತವೆ. ಈಗ ವೃತ್ತಿಜೀವನ ಆರಂಭಿಸುತ್ತಿರುವ ಯುವಕರು ಕ್ರೆಡಿಟ್ ಸ್ಕೋರ್ನ ಮಹತ್ವ ಅರಿಯುವುದು ಮುಖ್ಯ. ಸಾಲದ ಅವಶ್ಯಕತೆ ಈಗ ಇಲ್ಲವಾದರೂ ಭವಿಷ್ಯದ ದೃಷ್ಟಿಯಿಂದ ಹಣಕಾಸು ಆರೋಗ್ಯದ ಸಂಕೇತವಾಗಿರುವ ಕ್ರೆಡಿಟ್ ಸ್ಕೋರ್ ಅನ್ನು ಉತ್ತಮ ಮಟ್ಟಕ್ಕೆ ಕೊಂಡೊಯ್ಯುವುದು ಅವಶ್ಯಕ. ಈ ಹಿನ್ನೆಲೆಯಲ್ಲಿ ಕ್ರೆಡಿಟ್ ಸ್ಕೋರ್ ಹೆಚ್ಚಿಸುವ ಕೆಲ ಸರಳ ಉಪಾಯಗಳನ್ನು ಯಾರು ಬೇಕಾದರೂ ಅಳವಡಿಸಿಕೊಳ್ಳಬಹುದು.
ನೀವು ಸಾಲ ಮರುಪಾವತಿ, ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಇತ್ಯಾದಿಯನ್ನು ಹೇಗೆ ಮಾಡುತ್ತೀರಿ ಮತ್ತು ವಿಳಂಬರಹಿತವಾಗಿ ಮಾಡುತ್ತೀರಿ ಎಂಬುದರ ಮೇಲೆ ಕ್ರೆಡಿಟ್ ಸ್ಕೋರ್ ಅನ್ನು ಏಜೆನ್ಸಿಗಳು ನೀಡುತ್ತವೆ. 300 ರಿಂದ 850 ಅಂಕಗಳ ಶ್ರೇಣಿಯಲ್ಲಿ ಸ್ಕೋರ್ ಇರುತ್ತದೆ. 650ಕ್ಕಿಂತ ಮೇಲ್ಪಟ್ಟ ಸ್ಕೋರ್ ಅನ್ನು ಉತ್ತಮ ಎಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ: ಹಣಕಾಸು ಸ್ವಾತಂತ್ರ್ಯ ಕಲ್ಪಿಸುವ FIRE ಪ್ಲಾನ್; ಜೀವನ ಆನಂದಿಸಲು ಇದು ಸೂಪರ್ ಸೂತ್ರವಾ?
ಸಾಲ ಅಥವಾ ಕ್ರೆಡಿಟ್ ಕಾರ್ಡ್ ಬಳಸದೇ ಇದ್ದವರಿಗೆ ಕ್ರೆಡಿಟ್ ಸ್ಕೋರ್ ಇರುವುದಿಲ್ಲ. ಅವರ ಸಿಬಿಲ್ ಸ್ಕೋರ್ ಮೈನಸ್ 1 ಎಂದು ತೋರಿಸಬಹುದು. ಇಂಥವರು ಕ್ರೆಡಿಟ್ ಸ್ಕೋರ್ ಪಡೆಯುವುದು ಹೇಗೆ ಎನ್ನುವ ಟಿಪ್ಸ್ ಇಲ್ಲಿದೆ…
ನೀವು ಕ್ರೆಡಿಟ್ ಸ್ಕೋರ್ ಪಡೆಯಲು ಸಾಲ ಮಾಡಿ ಅದನ್ನು ತೀರಿಸುವುದು ಅವಶ್ಯಕ. ಸಣ್ಣ ಮೊತ್ತದ ಸಾಲ ಮಾಡಿ ಅದನ್ನು ಸಕಾಲಕ್ಕೆ ತೀರಿಸಿರಿ. ಉದಾಹರಣೆಗೆ, ಐವತ್ತು ಸಾವಿರ ರೂ ಸಾಲ ಪಡೆದು, ಮಾಸಿಕ ಇಎಂಐ ಅನ್ನು ತಪ್ಪದೇ ಕಟ್ಟಿರಿ ಇದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಾಗುತ್ತಾ ಹೋಗುತ್ತದೆ. ಅದು ಮುಗಿದ ಬಳಿಕ ಮತ್ತೆ ಸಣ್ಣದಾದ ಹೊಸ ಸಾಲ ಮಾಡಬಹುದು. ಇವೆಲ್ಲವೂ ಕ್ರೆಡಿಟ್ ಸ್ಕೋರ್ ಹೆಚ್ಚಳಕ್ಕೆ ಸಹಾಯವಾಗುತ್ತದೆ.
ನೀವು ಕ್ರೆಡಿಟ್ ಕಾರ್ಡ್ ಪಡೆದು ಅದನ್ನು ಸ್ವಲ್ಪ ಸ್ವಲ್ಪವೇ ಬಳಸಿರಿ. ಅದರ ಬಿಲ್ ಅನ್ನು ಸಕಾಲಕ್ಕೆ ಪಾವತಿಸುವುದನ್ನು ಮರೆಯಬೇಡಿ. ನಿಮ್ಮ ಕಾರ್ಡ್ನ ಕ್ರೆಡಿಟ್ ಮಿತಿಯ ಶೇ. 40ಕ್ಕಿಂತ ಕಡಿಮೆ ಮೊತ್ತವನ್ನು ಮಾತ್ರ ವ್ಯಯಿಸಿ. ನಿಮಗೆ ಹೆಚ್ಚು ಶಾಪಿಂಗ್ ಮಾಡಬೇಕೆಂದಿದ್ದರೆ ಇನ್ನೊಂದು ಕಾರ್ಡ್ ಪಡೆಯಿರಿ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ