ಪಿಎಫ್ ಹಣಕ್ಕೆ ಟ್ಯಾಕ್ಸ್ ಅನ್ವಯ ಆಗುತ್ತಾ? ವಿತ್​ಡ್ರಾ ಮಾಡಿದಾಗ ಟ್ಯಾಕ್ಸ್ ಎಷ್ಟು? ನೀವು ತಿಳಿದಿರಬೇಕಾದ ಸಂಗತಿಗಳಿವು…

Different tax rules on EPF contributions and withdrawals: ಉದ್ಯೋಗಿಗಳ ಭವಿಷ್ಯ ನಿಧಿ ಅಥವಾ ಇಪಿಎಫ್ ಅಕೌಂಟ್​ಗೆ ವರ್ಷದಲ್ಲಿ ಜಮೆಯಾಗುವ ಹಣಕ್ಕೆ ಬೇರೆ ಬೇರೆ ರೀತಿಯಲ್ಲಿ ಟ್ಯಾಕ್ಸ್ ಅನ್ವಯ ಆಗುತ್ತದೆ. ಉದ್ಯೋಗಿಗಳ ಕೊಡುಗೆ, ಉದ್ಯೋಗದಾತರ ಕೊಡುಗೆ ಮತ್ತು ಬಡ್ಡಿ ಕೊಡುಗೆ ಈ ಮೂರಕ್ಕೂ ಟ್ಯಾಕ್ಸ್ ನಿಯಮ ಬೇರೆ ಬೇರೆ. ಹಾಗೆಯೇ, ಪಿಎಫ್ ಹಣ ವಿತ್​ಡ್ರಾ ಮಾಡಿದಾಗಲೂ ಕೂಡ ಬೇರೆ ಬೇರೆ ಟ್ಯಾಕ್ಸ್ ರೂಲ್ಸ್ ಇವೆ. ಅದರ ವಿವರ ಇಲ್ಲಿದೆ.

ಪಿಎಫ್ ಹಣಕ್ಕೆ ಟ್ಯಾಕ್ಸ್ ಅನ್ವಯ ಆಗುತ್ತಾ? ವಿತ್​ಡ್ರಾ ಮಾಡಿದಾಗ ಟ್ಯಾಕ್ಸ್ ಎಷ್ಟು? ನೀವು ತಿಳಿದಿರಬೇಕಾದ ಸಂಗತಿಗಳಿವು...
ಇಪಿಎಫ್

Updated on: Jan 09, 2026 | 12:16 PM

ಇಪಿಎಫ್ (EPF) ಎಂಬುದು ಕಾರ್ಮಿಕರು ಅಥವಾ ಉದ್ಯೋಗಿಗಳ ನಿವೃತ್ತಿ ಭವಿಷ್ಯಕ್ಕೆಂದು ರೂಪಿಸಲಾಗಿರುವ ರಿಟೈರ್ಮೆಂಟ್ ಸ್ಕೀಮ್. ಇದರಲ್ಲಿ ಉದ್ಯೋಗಿಯ ಮೂಲವೇತನದ ಶೇ. 12ರಷ್ಟನ್ನು ಮುರಿದುಕೊಂಡು ಇಪಿಎಫ್ ಅಕೌಂಟ್​ಗೆ ವರ್ಗಾಯಿಸಲಾಗುತ್ತದೆ. ಉದ್ಯೋಗದಾತರು ಅಥವಾ ಕಂಪನಿಯು ಕೂಡ ಶೇ. 12ರಷ್ಟನ್ನು ತಮ್ಮ ಪಾಲಿನ ಕೊಡುಗೆಯಾಗಿ ಇಪಿಎಫ್ ಫಂಡ್​ಗೆ ಸೇರಿಸುತ್ತದೆ. ವಾಲಂಟರಿ ಪಿಎಫ್ ಸ್ಕೀಮ್ ಅಡಿಯಲ್ಲಿ ಉದ್ಯೋಗಿಗಳು ಬಯಸಿದರೆ ಶೇ. 12ಕ್ಕಿಂತ ಹೆಚ್ಚಿನ ಮೊತ್ತವನ್ನು ಇಪಿಎಫ್ ಅಕೌಂಟ್​ಗೆ ಹಾಕುತ್ತಾ ಹೋಗಬಹುದು ಪ್ರತೀ ತಿಂಗಳು. ಈ ರೀತಿ ಇಪಿಎಫ್ ಅಕೌಂಟ್​ನಲ್ಲಿ ಜಮೆಯಾದ ಹಣಕ್ಕೆ ಸರ್ಕಾರ ಪ್ರತೀ ವರ್ಷ ಬಡ್ಡಿ ತುಂಬುತ್ತಾ ಹೋಗುತ್ತದೆ. ಉದ್ಯೋಗಿ, ಕೊಡುಗೆ ಮತ್ತು ಸರ್ಕಾರದಿಂದ ಬರುವ ಕೊಡುಗೆಗಳಿಂದ ಇಪಿಎಫ್ ಅಕೌಂಟ್ ಸಮೃದ್ಧಗೊಂಡು ಬೆಳೆಯುತ್ತಾ ಹೋಗುತ್ತದೆ. ಹಾಗಾದರೆ, ಇಷ್ಟೂ ಆದಾಯಕ್ಕೆ ತೆರಿಗೆ ಇರುವುದಿಲ್ಲವಾ? ಇಪಿಎಫ್​ಗೆ ಯಾವಾಗ ಟ್ಯಾಕ್ಸ್ ಅನ್ವಯ ಆಗುತ್ತೆ, ಹೇಗೆ ಆಗುತ್ತೆ ಎನ್ನುವ ವಿವರ ಇಲ್ಲಿದೆ.

ಇಪಿಎಫ್​ನ ನಿಮ್ಮ ಅಕೌಂಟ್​ನಲ್ಲಿ ಮೂರು ರೀತಿಯ ಕೊಡುಗೆಗಳಿರುತ್ತವೆ. ಉದ್ಯೋಗಿ, ಉದ್ಯೋಗದಾತರು ಮತ್ತು ಬಡ್ಡಿ ಹಣ, ಈ ಮೂರು ಕೊಡುಗೆಗಳಿರುತ್ತವೆ. ಈ ಮೂರಕ್ಕೂ ಕೂಡ ಟ್ಯಾಕ್ಸ್ ಬೇರೆ ಬೇರೆ ರೀತಿಯಲ್ಲಿ ಕೆಲಸ ಮಾಡುತ್ತದೆ.

ಉದ್ಯೋಗಿಯ ಪಿಎಫ್ ಕೊಡುಗೆಗೆ ಟ್ಯಾಕ್ಸ್ ಡಿಡಕ್ಷನ್

ಉದ್ಯೋಗಿಯ ಪಿಎಫ್ ಕೊಡುಗೆಯ ಹಣಕ್ಕೆ ಸೆಕ್ಷನ್ 80ಸಿ ಅಡಿಯಲ್ಲಿ ಡಿಡಕ್ಷನ್ ಅವಕಾಶ ಇರುತ್ತದೆ. ಉದ್ಯೋಗಿಯ ಪಿಎಫ್ ಕೊಡುಗೆ ವರ್ಷದಲ್ಲಿ 1.5 ಲಕ್ಷ ರೂವರೆಗೂ ಇದ್ದರೆ ಅದಕ್ಕೆ ಡಿಡಕ್ಷನ್ ಕ್ಲೇಮ್ ಮಾಡಬಹುದು.

ಇದನ್ನೂ ಓದಿ: ಲಕ್ಷ ರೂ ಸಂಬಳ ಪಡೆಯುತ್ತಿರುವ ಪಾಕಿಸ್ತಾನೀಯರ ಸಂಖ್ಯೆ ಎಷ್ಟು ಗೊತ್ತಾ?

ಉದ್ಯೋಗದಾತರಿಂದ 7.5 ಲಕ್ಷ ರೂವರೆಗಿನ ಕೊಡುಗೆಗೆ ಟ್ಯಾಕ್ಸ್ ಇಲ್ಲ

ಕಂಪನಿಯ ಕೊಡುಗೆಗೆ ವಿಭಿನ್ನವಾಗಿ ಟ್ಯಾಕ್ಸ್ ಅನ್ವಯ ಆಗುತ್ತದೆ. ಅಕೌಂಟ್​ಗೆ ಇವರಿಂದ ಹಣ ಜಮೆಯಾಗುವಾಗ ಟ್ಯಾಕ್ಸ್ ಕಡಿತ ಆಗುವುದಿಲ್ಲ. ಆದರೆ, ಒಂದು ವರ್ಷದಲ್ಲಿ ಇಪಿಎಫ್, ಎನ್​ಪಿಎಸ್ ಇತ್ಯಾದಿ ಸ್ಕೀಮ್​ಗಳಿಗೆ ಕಂಪನಿ 7.5 ಲಕ್ಷ ರೂಗಿಂತ ಹೆಚ್ಚಿನ ಕೊಡುಗೆ ಕೊಟ್ಟಿದ್ದರೆ ಆಗ ಹೆಚ್ಚುವರಿ ಹಣವು ಟ್ಯಾಕ್ಸಬಲ್ ಇನ್ಕಮ್ ಆಗುತ್ತದೆ. ಆ ಹೆಚ್ಚುವರಿ ಹಣಕ್ಕೆ ಸಿಗುವ ಬಡ್ಡಿಯೂ ಕೂಡ ಟ್ಯಾಕ್ಸಬಲ್ ಎನಿಸುತ್ತದೆ. ಭಾರತದಲ್ಲಿರುವ ಹೆಚ್ಚಿನ ಉದ್ಯೋಗಿಗಳ ಸಂಬಳವು ಆ ಮಟ್ಟದಲ್ಲಿರುವುದಿಲ್ಲವಾದ್ದರಿಂದ ಚಿಂತಿಸುವ ಅಗತ್ಯ ಇಲ್ಲ.

ವರ್ಷದಲ್ಲಿ ಬಡ್ಡಿ ಹಣ 2.5 ಲಕ್ಷ ರೂಗಿಂತ ಹೆಚ್ಚಿದ್ದರೆ ಟ್ಯಾಕ್ಸ್

ಇನ್ನು, ಇಪಿಎಫ್ ಅಕೌಂಟ್​ನಲ್ಲಿರುವ ಹಣಕ್ಕೆ ಸರ್ಕಾರದಿಂದ ಸಿಗುವ ಬಡ್ಡಿ ಟ್ಯಾಕ್ಸಬಲ್ ಆಗಿರುತ್ತದೆ. ಉದ್ಯೋಗಿಯ ಇಪಿಎಫ್ ಕೊಡುಗೆ ಒಂದು ಹಣಕಾಸು ವರ್ಷದಲ್ಲಿ 2.5 ಲಕ್ಷ ರೂ ಮೀರಿದ್ದರೆ, ಹೆಚ್ಚುವರಿ ಮೊತ್ತಕ್ಕೆ ಸಿಗುವ ಬಡ್ಡಿಯು ಟ್ಯಾಕ್ಸಬಲ್ ಇನ್ಕಮ್ ಎನಿಸುತ್ತದೆ. ಉದಾಹರಣೆಗೆ, ಒಂದು ವರ್ಷದಲ್ಲಿ ನಿಮ್ಮ ಇಪಿಎಫ್ ಕೊಡುಗೆ 3 ಲಕ್ಷ ರೂ ಇದ್ದಲ್ಲಿ 50,000 ರೂಗೆ ಸಿಗುವ ಬಡ್ಡಿಯು ಟ್ಯಾಕ್ಸಬಲ್ ಇನ್ಕಮ್ ಎನಿಸುತ್ತದೆ.

ಇಪಿಎಫ್ ಹಣ ವಿತ್​ಡ್ರಾ ಮಾಡಿದರೆ ಎಷ್ಟು ಟ್ಯಾಕ್ಸ್…

ನೀವು ಇಪಿಎಫ್ ಹಣವನ್ನು ವಿತ್​ಡ್ರಾ ಮಾಡುವುದು ಈಗ ಹೆಚ್ಚು ಸುಲಭ. ಆದರೆ, ಐದು ವರ್ಷದ ಸೇವೆ ಮುಗಿಯುವುದರೊಳಗೆ ಪಿಎಫ್ ಹಣ ವಿತ್​ಡ್ರಾ ಮಾಡಿದರೆ ಅದಕ್ಕೆ ಟ್ಯಾಕ್ಸ್ ಅನ್ವಯ ಆಗುತ್ತದೆ. 5 ವರ್ಷ ಸೇವೆ ಪೂರ್ಣಗೊಂಡ ನಂತರ ವಿತ್​ಡ್ರಾ ಮಾಡುವ ಪಿಎಫ್ ಹಣಕ್ಕೆ ಯಾವುದೇ ಟ್ಯಾಕ್ಸ್ ಇರುವುದಿಲ್ಲ.

ಇದನ್ನೂ ಓದಿ: ಈ ಬಾರಿ ಬಹಳ ಜನರಿಗೆ ಸಿಕ್ಕಿಲ್ಲ ಇನ್ಕಮ್ ಟ್ಯಾಕ್ಸ್ ರೀಫಂಡ್; ಏನು ಕಾರಣ?

ಇಲ್ಲಿ ಐದು ವರ್ಷದ ಸೇವಾವಧಿ ಎಂದರೆ ಒಂದೇ ಕಂಪನಿಯಲ್ಲೇ ಐದು ವರ್ಷ ನಿರಂತರ ಇರಬೇಕೆಂದಿಲ್ಲ. ಬೇರೆ ಬೇರೆ ಕಂಪನಿಗಳಲ್ಲಿ ಕೆಲಸ ಮಾಡಿ ಅಲ್ಲೆಲ್ಲಾ ಇಪಿಎಫ್ ಅಕೌಂಟ್ ಹೊಂದಿದ್ದರೂ ಸಾಕು, ಅಷ್ಟೂ ಅವಧಿಯನ್ನು ಕ್ರೋಢೀಕರಿಸಬಹುದು.

ಪಿಎಫ್ ವಿತ್​ಡ್ರಾಯಲ್​ಗೆ ಟಿಡಿಎಸ್

ಒಂದು ವೇಳೆ ಐದು ವರ್ಷ ಸೇವಾವಧಿ ಪೂರ್ಣಗೊಳ್ಳುವ ಮುನ್ನ ಪಿಎಫ್ ವಿತ್​ಡ್ರಾ ಮಾಡಿದರೆ ಟಿಡಿಎಸ್ ಅನ್ವಯ ಆಗುತ್ತದೆ. 50,000 ರೂ ಒಳಗಿನ ಹಣವಾದರೆ ಟ್ಯಾಕ್ಸ್ ಇರುವುದಿಲ್ಲ. ಹೆಚ್ಚಿನ ಮೊತ್ತಕ್ಕೆ ಟಿಡಿಎಸ್ ಕಡಿತ ಆಗುತ್ತದೆ.

ಪ್ಯಾನ್ ನಂಬರ್ ಇದ್ದರೆ ಶೇ 10 ಟಿಡಿಎಸ್ ಮಾತ್ರವೇ ಕಡಿತ ಆಗುತ್ತದೆ. ಪ್ಯಾನ್ ಸಲ್ಲಿಸದಿದ್ದರೆ ಶೇ. 30ರವರೆಗೂ ಟಿಡಿಎಸ್ ಕಡಿತ ಆಗುತ್ತದೆ. ಅಕಸ್ಮಾತ್ ನಿಮ್ಮ ಹಣಕ್ಕೆ ಟಿಡಿಎಸ್ ಮುರಿದುಕೊಂಡಿದ್ದರೆ ನೀವು ಐಟಿ ರಿಟರ್ನ್ ಸಲ್ಲಿಸುವಾಗ ರೀಫಂಡ್ ಕ್ಲೇಮ್ ಮಾಡಬಹುದು. ಹೀಗೆ ಮಾಡಬೇಕೆಂದರೆ ನಿಮ್ಮ ಆ ವರ್ಷದ ಒಟ್ಟೂ ಟ್ಯಾಕ್ಸಬಲ್ ಇನ್ಕಮ್ ಟ್ಯಾಕ್ಸ್ ಎಕ್ಸೆಂಪ್ಷನ್ ಲಿಮಿಟ್​ನಲ್ಲಿ ಇರಬೇಕಾಗುತ್ತದೆ.

ಪಿಎಫ್ ವಿತ್​ಡ್ರಾ ಮಾಡುವಾಗ ಟಿಡಿಎಸ್ ಕಡಿತ ಆಗಬಾರದು ಎಂದಿದ್ದಲ್ಲಿ ಫಾರ್ಮ್ 15ಜಿ ಅಥವಾ 15ಎಚ್ ಅನ್ನು ಸಲ್ಲಿಸಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ