ಒಮ್ಮೆಯೂ ಸಾಲ ಮಾಡದವನಿಗೆ ಸಿಗಲ್ವಾ ಸಾಲ? ಇರಲ್ವಾ ಕ್ರೆಡಿಟ್ ಸ್ಕೋರ್? ಇಲ್ಲಿದೆ ಉತ್ತರ

Importance of having credit score: ಜೀವನದಲ್ಲಿ ಒಮ್ಮೆಯೂ ಸಾಲ ಮಾಡದ ಅಥವಾ ಕ್ರೆಡಿಟ್ ಕಾರ್ಡ್ ಪಡೆಯದ ವ್ಯಕ್ತಿಗಳಿಗೆ ಕ್ರೆಡಿಟ್ ಸ್ಕೋರ್ ದಾಖಲಾಗಿರುವುದಿಲ್ಲ. ಕ್ರೆಡಿಟ್ ಸ್ಕೋರ್ ಇಲ್ಲದ ವ್ಯಕ್ತಿಗಳಿಗೆ ಸಾಲ ನೀಡಲು ಬ್ಯಾಂಕುಗಳು ಅನುಮಾನಿಸಬಹುದು. ಈ ಕ್ರೆಡಿಟ್ ಸ್ಕೋರ್ ಪಡೆಯಲು ಮತ್ತು ಉತ್ತಮ ಸ್ಕೋರ್ ನಿಮ್ಮದಾಗಿಸಲು ಒಂದಷ್ಟು ಟಿಪ್ಸ್ ಇಲ್ಲಿದೆ...

ಒಮ್ಮೆಯೂ ಸಾಲ ಮಾಡದವನಿಗೆ ಸಿಗಲ್ವಾ ಸಾಲ? ಇರಲ್ವಾ ಕ್ರೆಡಿಟ್ ಸ್ಕೋರ್? ಇಲ್ಲಿದೆ ಉತ್ತರ
ಸಾಲ ನಿರ್ವಹಣೆ

Updated on: Apr 14, 2025 | 4:59 PM

ನೀವು ಗಮನಿಸಿ ನೋಡಿ… ಪದೇ ಪದೇ ಸಾಲ ಮಾಡುತ್ತಿರುವವನಿಗೆ ಬ್ಯಾಂಕುಗಳು ಬಗೆಬಗೆದು ಸಾಲ ಕೊಡುತ್ತವೆ. ಆದರೆ, ಜೀವನದಲ್ಲಿ ಒಮ್ಮೆಯೂ ಸಾಲ ಮಾಡದ ವ್ಯಕ್ತಿಯು ಸಾಲಕ್ಕಾಗಿ ಅರ್ಜಿ ಹಾಕಿದರೆ, ಬ್ಯಾಂಕುಗಳು ಮೀನ ಮೇಷ ಎಣಿಸುತ್ತವೆ. ಇದು ನಿಮಗೆ ಅಚ್ಚರಿ ಎನಿಸಿದರೂ ಒಂದಷ್ಟು ಮಟ್ಟಕ್ಕೆ ನಿಜ. ಕಾರಣ ಏನೆಂದರೆ, ಬ್ಯಾಂಕುಗಳು ಒಬ್ಬ ವ್ಯಕ್ತಿಗೆ ಸಾಲ ಕೊಡುವಾಗ ಆತನ ಕ್ರೆಡಿಟ್ ಸ್ಕೋರ್ (Credit score) ಪರಿಶೀಲಿಸುತ್ತವೆ. ಅದರಲ್ಲೂ ಅಡಮಾನರಹಿತ ಸಾಲಗಳ ವಿಚಾರದಲ್ಲಿ ಕ್ರೆಡಿಟ್ ಸ್ಕೋರ್ ಮಾನದಂಡ ಬಹಳ ಮುಖ್ಯ. ಇಲ್ಲಿ ಒಮ್ಮೆಯೂ ಸಾಲ ಮಾಡದ ವ್ಯಕ್ತಿಗೆ ಕ್ರೆಡಿಟ್ ಸ್ಕೋರ್ ಇರುವುದೇ ಇಲ್ಲ. ಹೀಗಾಗಿ, ಬ್ಯಾಂಕುಗಳು ಸಾಲ ಕೊಡಲು ಹಿಂದೇಟು ಹಾಕಬಹುದು.

ಕ್ರೆಡಿಟ್ ಸ್ಕೋರ್ ಇಲ್ಲದಿದ್ದರೆ ಏನಂತೆ?

ಒಬ್ಬ ವ್ಯಕ್ತಿ ಒಮ್ಮೆಯೂ ಸಾಲ ಮಾಡಿಲ್ಲ ಎಂದರೆ ಎರಡು ಸಾಧ್ಯತೆ ಇರುತ್ತದೆ. ಒಂದು, ಆತ ಸಾಲದ ಅಗತ್ಯ ಇಲ್ಲದಂತೆ ಉತ್ತಮ ಹಣಕಾಸು ನಿರ್ವಹಣೆ ಮಾಡುತ್ತಿರಬಹುದು. ಎರಡನೆಯದು ಎಂದರೆ, ಒಮ್ಮಿಂದೊಮ್ಮೆ ಆತನಿಗೆ ಸಾಲದ ಅಗತ್ಯತೆ ಬಂದಿರಬಹುದು. ಮೊದಲ ಬಾರಿಯ ಸಾಲಕ್ಕೆ ಆತ ಹೇಗೆ ಸ್ಪಂದಿಸುತ್ತಾನೆ, ಸಾಲದ ಕಂತನ್ನು ಸರಿಯಾಗಿ ಕಟ್ಟುತ್ತಾನೋ ಇಲ್ಲವೋ ಎನ್ನುವುದು ಬ್ಯಾಂಕಿಗೆ ಖಾತ್ರಿ ಇರುವುದಿಲ್ಲ.

ಇದನ್ನೂ ಓದಿ: 1 ಪರ್ಸೆಂಟ್ ತಂತ್ರ: ಇದು ಹಣಕಾಸು ಭದ್ರತೆಗೆ ನಿತಿನ್ ಕಾಮತ್ ಸೂತ್ರ

ಇದನ್ನೂ ಓದಿ
ಹಣಕಾಸು ಭದ್ರತೆಗೆ 1% ತಂತ್ರ: ನಿತಿನ್ ಕಾಮತ್
ಪಿಪಿಎಫ್ ಬಡ್ಡಿದರ ಹೇಗೆ ಕೆಲಸ ಮಾಡುತ್ತದೆ? ಇಲ್ಲಿದೆ ಮಾಹಿತಿ
ಕ್ರೆಡಿಟ್ ಸ್ಕೋರ್ ಹೊಸ ನಿಯಮಗಳ ಪ್ರಯೋಜನಗಳೇನು?
ಮೊಬೈಲ್ ಬಿಲ್​ಗೂ ಕ್ರೆಡಿಟ್ ಸ್ಕೋರ್​ಗೂ ಇದ್ಯಾ ಸಂಬಂಧ?

ಕ್ರೆಡಿಟ್ ಸ್ಕೋರ್ ಇಲ್ಲದ ವ್ಯಕ್ತಿಯನ್ನು ಕ್ರೆಡಿಟ್ ಬ್ಯೂರೋ ಸಂಸ್ಥೆಗಳು ನ್ಯೂ ಟು ಕ್ರೆಡಿಟ್ ಎಂದು ವರ್ಗೀಕರಿಸುತ್ತವೆ. ಇಂಥ ಸಂದರ್ಭದಲ್ಲಿ ಬ್ಯಾಂಕುಗಳು ಆ ವ್ಯಕ್ತಿಗೆ ಸಣ್ಣ ಮೊತ್ತದ ಸಾಲ ಕೊಡಬಹುದು. ಆದರೆ, ದೊಡ್ಡ ಸಾಲ ಕೊಡುವ ಸಾಧ್ಯತೆ ಬಹಳ ಕಡಿಮೆ. ಕೊಟ್ಟರೂ ಅಧಿಕ ಬಡ್ಡಿ ವಿಧಿಸುತ್ತವೆ. ಅಥವಾ ಯಾರಾದರೂ ಶೂರಿಟಿ ನೀಡಲು ತಯಾರಿದ್ದರೆ ಸಾಲ ಕೊಡುತ್ತವೆ.

ಕ್ರೆಡಿಟ್ ಸ್ಕೋರ್ ಬೆಳೆಸುವುದು ಹೇಗೆ?

ನಿಮಗೆ ಕ್ರೆಡಿಟ್ ಸ್ಕೋರ್ ದಾಖಲೆಯೇ ಇಲ್ಲದಿದ್ದರೆ ಅದನ್ನು ಆರಂಭಿಸುವ ಬಗೆಗಳಿಗೆ. ಒಂದು ಕ್ರೆಡಿಟ್ ಕಾರ್ಡ್ ಪಡೆದು ಅದರಲ್ಲಿ ಅಲ್ಪಸ್ವಲ್ಪ ವೆಚ್ಚ ಮಾಡುತ್ತಾ ಹೋಗಿ. ಹಾಗೆಯೇ, ಕ್ರೆಡಿಟ್ ಕಾರ್ಡ್ ಬಿಲ್​ಗಳನ್ನು ನಿಗದಿತ ದಿನದೊಳಗೆ ಕಟ್ಟುವುದನ್ನು ಮರೆಯಬೇಡಿ. ಹೀಗೆ ಮಾಡಿದರೆ, ನಿಮಗೆ ಕ್ರೆಡಿಟ್ ಸ್ಕೋರ್ ಬೆಳೆಯುತ್ತಾ ಹೋಗುತ್ತದೆ.

ಇನ್ನೊಂದು ವಿಧಾನ ಎಂದರೆ, ಟಿವಿ, ಫ್ರಿಡ್ಜ್, ವಾಹನ ಇತ್ಯಾದಿಯನ್ನು ಖರೀದಿಸುತ್ತಿದ್ದರೆ ಇಎಂಐ ಅಥವಾ ಸಾಲ ಪಡೆದು, ಸಕಾಲಕ್ಕೆ ಅದನ್ನು ತೀರಿಸಿ. ಇದರಿಂದಲೂ ಕ್ರೆಡಿಟ್ ಸ್ಕೋರ್ ಬೆಳೆಯುತ್ತದೆ.

ಇದನ್ನೂ ಓದಿ: ಪಿಪಿಎಫ್: ಎಲ್ಲಾ 15 ವರ್ಷಕ್ಕೂ ಒಂದೇ ಬಡ್ಡಿದರವಾ? ವರ್ಷದ ಕೊನೆಯಲ್ಲಿ ಮಾಡಿದ ಹೂಡಿಕೆಗೆ ಇಡೀ ವರ್ಷದ ಬಡ್ಡಿ ಸಿಗುತ್ತಾ? ಇಲ್ಲಿದೆ ಡೀಟೇಲ್ಸ್

ಮತ್ತೊಂದು ವಿಧಾನ ಎಂದರೆ, ತೀರಾ ಸಣ್ಣ ಮೊತ್ತದ ಸಾಲವನ್ನು ಪಡೆದು, ಅದರ ಕಂತುಗಳನ್ನು ಸಕಾಲಕ್ಕೆ ಕಟ್ಟುತ್ತಾ ಹೋಗಿ.

ಈ ಎಲ್ಲಾ ವಿಧಾನಗಳಲ್ಲಿ ಮುಖ್ಯವಾದುದು ನೀವು ಹೇಗೆ ಸಾಲವನ್ನು ನಿರ್ವಹಿಸುತ್ತೀರಿ ಎಂಬುದು. ಕ್ರೆಡಿಟ್ ಸ್ಕೋರ್ ನಿಮ್ಮ ಸಾಲ ನಿರ್ವಹಣೆಯ ಜವಾಬ್ದಾರಿಯನ್ನು ಪ್ರತಿಬಿಂಬಿಸುತ್ತದೆ. 650ಕ್ಕೂ ಹೆಚ್ಚು ಕ್ರೆಡಿಟ್ ಸ್ಕೋರ್ ಇದ್ದರೆ ನಿಮಗೆ ಸಾಲ ಸಿಗುವುದು ಸುಲಭವಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ