ಫೇಸ್ಬುಕ್, ಇನ್ಸ್ಟಾಗ್ರಾಮ್, ಹಲವು ವಿಡಿಯೋ ಪ್ಲಾಟ್ಫಾರ್ಮ್ಗಳಲ್ಲಿ ಗ್ರಾಹಕರು ಹಣ ಮಾಡುವ ಅವಕಾಶ ಬಹಳಷ್ಟಿದೆ. ಈ ಕಾರಣಕ್ಕೆ ಬಹಳ ಮಂದಿ ಆ ಪ್ಲಾಟ್ಫಾರ್ಮ್ಗಳನ್ನು ಬಳಸುತ್ತಾರೆ. ಟ್ವಿಟ್ಟರ್ನಲ್ಲಿ ಇಂಥ ಅವಕಾಶ ಕಡಿಮೆ ಎಂದು ಹಲವರು ದೂರಿದ್ದರು. ಇತ್ತೀಚಿನ ದಿನಗಳಲ್ಲಿ ಟ್ವಿಟ್ಟರ್ನಲ್ಲಿ ಹಣ ಗಳಿಕೆಗೆ (Monetisation) ಹಲವು ಅವಕಾಶಗಳನ್ನು ಮಾಡಿಕೊಡಲಾಗುತ್ತಿದೆ. ಟ್ವಿಟ್ಟರ್ ಅನ್ನು ಹೆಚ್ಚು ಆಕರ್ಷಕವಾಗಿಸಲು ಮತ್ತು ಜನರನ್ನು ಸೆಳೆಯಲು ಹೊಸ ಫೀಚರ್ ರೂಪಿಸಲಾಗುತ್ತದೆ. ಇದರ ಪ್ರಕಾರ ಟ್ವೀಟ್ಗಳಿಗೆ ಪ್ರತಿಕ್ರಿಯೆಯಾಗಿ ಪ್ರಕಟವಾಗುವ ಜಾಹೀರಾತುಗಳಿಂದ ಬಳಕೆದಾರನು ಹಣ ಮಾಡುವ ಅವಕಾಶ ಸಿಗಲಿದೆ. ಈ ಬಗ್ಗೆ ಸ್ವತಃ ಟ್ವಿಟ್ಟರ್ ಮುಖ್ಯಸ್ಥ ಎಲಾನ್ ಮಸ್ಕ್ (Elon Musk) ಅವರೇ ಮಾಹಿತಿ ನೀಡಿದ್ದಾರೆ.
‘ಇನ್ನು ಕೆಲ ವಾರಗಳಲ್ಲಿ ಎಕ್ಸ್ ಅಥವಾ ಟ್ವಿಟ್ಟರ್ ಕ್ರಿಯೇಟರುಗಳಿಗೆ ಬರುವ ರಿಪ್ಲೈಗಳಲ್ಲಿ ಪ್ರಕಟಿಸಲಾಗುವ ಜಾಹೀರಾತುಗಳಿಗೆ ಹಣ ನೀಡತೊಡಗುತ್ತದೆ…’ ಎಂದು ಜೂನ್ 10ರಂದು ಅವರು ತಮ್ಮ ಟ್ವೀಟ್ವೊಂದರಲ್ಲಿ ತಿಳಿಸಿದ್ದಾರೆ. ನೀವು ಒಂದು ಟ್ವೀಟ್ಗೆ ಬರುವ ಪ್ರತಿಕ್ರಿಯೆಗಳನ್ನು ಓದುವಾಗ ಮಧ್ಯೆ ಮಧ್ಯೆ ಜಾಹೀರಾತುಗಳು ಪ್ರದರ್ಶಿತಗೊಂಡಿರುವುದನ್ನು ನೋಡಿರಬಹುದು. ಈ ಜಾಹೀರಾತುಗಳು ಟ್ವಿಟ್ಟರ್ನ ಪ್ರಮುಖ ಆದಾಯಮೂಲಗಳಾಗಿವೆ. ಇದರಲ್ಲಿ ಬರುವ ಆದಾಯವನ್ನು ಆ ಟ್ವೀಟ್ ಮಾಡಿದ ಕ್ರಿಯೇಟರ್ಗೆ ನೀಡಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: Tech Tips: ನಿಮ್ಮ ಫೇಸ್ಬುಕ್ ಪ್ರೊಫೈಲ್ ಯಾರೆಲ್ಲ ನೋಡುತ್ತಿದ್ದಾರೆಂದು ತಿಳಿಯಬೇಕೆ?: ಇಲ್ಲಿದೆ ಟ್ರಿಕ್
ಆದರೆ, ಎಲ್ಲಾ ಟ್ವಿಟ್ಟರ್ ಬಳಕೆದಾರರಿಗೂ ಈ ಸೌಲಭ್ಯ ಇಲ್ಲ. ಅಕೌಟ್ ವೆರಿಫೈ ಆಗಿರುವ ಬಳಕೆದಾರರಿಗೆ ಮಾತ್ರ ಈ ಅವಕಾಶ ಇರುತ್ತದೆ. ಇದಲ್ಲದೇ, ಮೊದಲ ಬ್ಲಾಕ್ ಪೇಮೆಂಟ್ 5 ಮಿಲಿಯನ್ ಡಾಲರ್ ಆಗಿರುತ್ತದೆ. ಅಂದರೆ ಟ್ವಿಟ್ಟರ್ ಬಳಕೆದಾರ ಇಂಥ ಜಾಹೀರಾತುಗಳಿಂದ ಗಳಿಸಿದ ಹಣ 5 ಮಿಲಿಯನ್ ಡಾಲರ್ (ಸುಮಾರು 41 ಲಕ್ಷ ರೂ) ಆದಾಗ ಪೇಮೆಂಟ್ ನಡೆಯುತ್ತದೆ.
ಟ್ವಿಟ್ಟರ್ನಲ್ಲಿ ಅಕೌಂಟ್ ವೆರಿಫೈ ಆಗಬೇಕೆಂದರೆ ಮಾಸಿಕ ಸಬ್ಸ್ಕ್ರಿಪ್ಷನ್ ಸ್ಕೀಮ್ ಪಡೆಯಬೇಕು. ತಿಂಗಳಿಗೆ 650 ರೂ ಅಥವಾ ವರ್ಷಕ್ಕೆ 6,800 ರೂ ಪಾವತಿಸಿ ಸದಸ್ಯತ್ವ ಪಡೆಯಬೇಕು. ಈ ರೀತಿಯ ಪೇಯ್ಡ್ ಸದಸ್ಯರಿಗೆ ಹಲವು ವಿಶೇಷ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಈ ಸ್ಕೀಮ್ ಅನ್ನು ಇನ್ನಷ್ಟು ಆಕರ್ಷಕಗೊಳಿಸಲು ಈಗ ಟ್ವೀಟ್ ರಿಪ್ಲೈಗಳಲ್ಲಿನ ಜಾಹೀರಾತುಗಳಿಂದ ಬರುವ ಆದಾಯವನ್ನು ಹಂಚಿಕೊಳ್ಳುವ ಯೋಜನೆಯೂ ಸೇರಿದೆ.
ಇಲಾನ್ ಮಸ್ಕ್ ಅವರು ಟ್ವಿಟ್ಟರ್ ಅನ್ನು ಖರೀದಿಸಿದ ಬಳಿಕ ಬಹಳಷ್ಟು ಬದಲಾವಣೆಗಳನ್ನು ಮಾಡಿದ್ದಾರೆ. ನಷ್ಟದಲ್ಲಿದ್ದ ಟ್ವಿಟ್ಟರ್ ಅನ್ನು ಲಾಭದ ಹಳಿಗೆ ತರಲು ಬಹಳಷ್ಟು ಕಸರತ್ತು ನಡೆಸಿದ್ದಾರೆ. ಟ್ವಿಟ್ಟರ್ ಎಂಬ ಗೂಡಿಗೆ ಕೈಹಾಕಿದ ಬಳಿಕ ಅವರು ಬಹಳಷ್ಟು ಷೇರುಸಂಪತ್ತು ಕಳೆದುಕೊಳ್ಳಬೇಕಾಯಿತು. ವಿಶ್ವದ ನಂಬರ್ ಒನ್ ಶ್ರೀಮಂತ ಎನಿಸಿದ್ದ ಅವರು ರಾತ್ರೋರಾತ್ರಿ ನಂಬರ್ ಒನ್ ಪಟ್ಟ ಕಳೆದುಕೊಂಡಿದ್ದರು. ಇತ್ತೀಚೆಗೆ ಅವರು ಮತ್ತೊಮ್ಮೆ ವಿಶ್ವದ ಅತಿದೊಡ್ಡ ಶ್ರೀಮಂತ ಎನಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ