ಬೆಲೆ ಏರಿಕೆ ಸಮಸ್ಯೆಯ ನಡುವೆ ಸಂಬಳದಾರರ ಜೀವನಪಾಡು (Life of salaried person) ಬಲು ಕಷ್ಟವಾಗಿದೆ. ಮನೆ ಬಾಡಿಗೆ, ಕ್ರೆಡಿಟ್ ಕಾರ್ಡ್ ಬಿಲ್ಲು, ಸಾಲಗಳ ಕಂತು, ಮೊಬೈಲುಗಳ ಬಿಲ್ಲು, ಶಾಲಾ ಕಾಲೇಜು ಫೀಸು, ಇನ್ಷೂರೆನ್ಸ್ ಬಿಲ್ಲು, ಇದರ ಮಧ್ಯೆ ಹೂಡಿಕೆಗೆ ಒಂದಷ್ಟು ಹಣ, ಹೀಗೆ ಸಂಬಳದ ಬಹುತೇಕ ಭಾಗ ಖರ್ಚಾಗಿ ಹೋಗುತ್ತದೆ. ಏರುತ್ತಿರುವ ಆಹಾರ, ಪೆಟ್ರೋಲ್ ಇತ್ಯಾದಿ ಅಗತ್ಯ ವಸ್ತುಗಳ ಬೆಲೆ ಸಂಬಳದಾರರನ್ನು ಹತಾಶರನ್ನಾಗಿ ಮಾಡುತ್ತದೆ. ಈ ಮಧ್ಯೆ ವರ್ಷಕ್ಕೆ 10 ಲಕ್ಷ ರೂ ಸಂಬಳ ಪಡೆಯುವ ಜನರು ಶೇ 15 ಅಥವಾ ಶೇ 20ರಷ್ಟು ಆದಾಯ ತೆರಿಗೆ ಕಟ್ಟಬೇಕಾದ ಸ್ಥಿತಿ ಬೇರೆ. 10,0,001 ರೂ ಸಂಬಳ ಪಡೆಯುವವರಿಗೆ ಕಡಿತವಾಗುವ ತೆರಿಗೆ ಮೊತ್ತ (Taxable amount) ಬರೋಬ್ಬರಿ 2 ಲಕ್ಷ ರೂ. ಎಂಥವರಿಗಾದರೂ ಚುರುಕ್ಕೆನಿಸುವ ಸಂಗತಿ ಇದು.
ಇಷ್ಟು ದೊಡ್ಡ ತೆರಿಗೆ ಮೊತ್ತವನ್ನು ಕಡಿಮೆಗೊಳಿಸುವ ನ್ಯಾಯಯುತ ಮಾರ್ಗೋಪಾಯಗಳು ಕೆಲವಿವೆ. ಕೆಲ ಅಗತ್ಯ ವೆಚ್ಚಗಳು ಮತ್ತು ಹೂಡಿಕೆಗಳಿಗೆ ಸರ್ಕಾರ ತೆರಿಗೆ ವಿನಾಯಿತಿ ಕೊಡುತ್ತದೆ. ಸಾಮಾನ್ಯವಾಗಿ ಪ್ರತಿಯೊಬ್ಬರೂ ಮಾಡಬಲ್ಲಂತಹ ಕೆಲ ಆಯ್ಕೆಗಳು ಈ ಮುಂದಿವೆ.
ಇದು ಹೌಸ್ ರೆಂಟ್ ಅಲೋಯನ್ಸ್ (HRA- House Rent Allowance) ಅಥವಾ ಮನೆ ಬಾಡಿಗೆ ಭತ್ಯೆ. ಬಹುತೇಕ ಪ್ರತಿಯೊಬ್ಬರ ಸಂಬಳದಲ್ಲೂ ಇದು ಬೇಸಿಕೆ ಸ್ಯಾಲರಿ ಮತ್ತಿತರ ಅಂಶಗಳೊಂದಿಗೆ ಅಡಕವಾಗಿರುತ್ತದೆ. ಈ ಹೆಚ್ಚಿನ ಎಚ್ಆರ್ಎ ಹಣಕ್ಕೆ ತೆರಿಗೆ ವಿನಾಯಿತಿ ಇರುತ್ತದೆ. ನೀವು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೆ ಮನೆ ಬಾಡಿಗೆ ಭತ್ಯೆ ಹಣಕ್ಕೆ ಶೇ 50ರವರೆಗೂ ತೆರಿಗೆ ವಿನಾಯಿತಿ ಪಡೆಯಬಹುದು. ಉದಾಹರಣೆಗೆ ನೀವು ಶೇ 20ರಷ್ಟು ಟಿಡಿಎಸ್ ಪಾವತಿದಾರರ ಗುಂಪಿಗೆ ಸೇರಿದವರಾಗಿದ್ದೀರಿ ಅಂದಿಟ್ಟುಕೊಳ್ಳಿ. ನಿಮ್ಮ ಮಾಸಿಕ ಸಂಬಳದಲ್ಲಿ ಎಚ್ ಆರ್ ಎ ಹಣ 15 ಸಾವಿರ ರೂ ಎಂದಾಗಿದ್ದರೆ ಅದಕ್ಕೆ ಬೀಳುವ ತೆರಿಗೆ ಹಣ 3 ಸಾವಿರ ರೂ ಆಗಿರುತ್ತದೆ. ನೀವು ಮನೆ ಬಾಡಿಗೆ ಪಾವತಿಯ ದಾಖಲೆಯನ್ನು ಸಲ್ಲಿಸಿದರೆ ಸುಮಾರು ಒಂದೂವರೆ ಸಾವಿರ ರೂವರೆಗೂ ತೆರಿಗೆ ಕಡಿತವನ್ನು ತಪ್ಪಿಸಬಹುದು.
ಈಗಂತೂ ಹಲವು ಕಂಪನಿಗಳು ದೇಶದ ವಿವಿಧೆಡೆ ಕಚೇರಿಗಳನ್ನು ಹೊಂದಿರುತ್ತವೆ. ಉದ್ಯೋಗಿಗಳು ಕೆಲ ಬಾರಿ ವಿವಿಧ ಕಾರಣಗಳಿಗೆ ಸ್ಥಳಾಂತರಗೊಳ್ಳಬೇಕಾಗುತ್ತದೆ. ಅದರಲ್ಲೂ ಬ್ಯಾಂಕ್ ಇತ್ಯಾದಿ ಸರ್ಕಾರಿ ಸಂಸ್ಥೆಗಳಲ್ಲಿ ಇದು ಸಾಮಾನ್ಯ. ಅಧಿಕೃತ ಕಾರಣಗಳಿಂದ ಒಬ್ಬ ಉದ್ಯೋಗಿ ಒಂದು ಊರಿಂದ ಇನ್ನೊಂದು ಊರಿಗೆ ಸ್ಥಳಾಂತರಗೊಂಡಾಗ, ಪ್ರಯಾಣ, ವಸತಿ, ಪ್ಯಾಕೇಜಿಂಗ್ ಇತ್ಯಾದಿ 15 ದಿನಗಳವರೆಗಿನ ಪೂರಕ ಖರ್ಚು ವೆಚ್ಚಗಳ ಮೊತ್ತಕ್ಕೆ ಆದಾಯ ತೆರಿಗೆಯಿಂದ ವಿನಾಯಿತಿ ಪಡೆಯಬಹುದು.
ಇದು ಬಹಳ ಮಂದಿಯ ಅರಿವಿಗೆ ಇರುವುದಿಲ್ಲ. ದಿನಪತ್ರಿಕೆ, ನಿಯತಕಾಲಿಕೆ, ಪುಸ್ತಕ ಇತ್ಯಾದಿ ಖರೀದಿಗೆ ಮಾಡುವ ವೆಚ್ಚವು ಪುಸ್ತಕ ಭತ್ಯೆಗೆ (Books, Newspaper and Magazine Allowance) ಸೇರುತ್ತವೆ. ಇದಕ್ಕೂ ನಿರ್ದಿಷ್ಟ ಮಟ್ಟದಲ್ಲಿ ತೆರಿಗೆ ವಿನಾಯಿತಿ ಇರುತ್ತದೆ.
ಮಕ್ಕಳ ಶಿಕ್ಷಣ ಮತ್ತು ಟ್ಯೂಷನ್ ಶುಲ್ಕದ ವೆಚ್ಚಕ್ಕೆ ತೆರಿಗೆ ವಿನಾಯಿತಿ ಪಡೆಯಬಹುದು. ಶಿಕ್ಷಣ ಭತ್ಯೆ ಅಡಿಯಲ್ಲಿ ಪ್ರತೀ ಮಗುವಿಗೆ ತಿಂಗಳಿಗೆ 100 ರೂನಷ್ಟು ವಿನಾಯಿತಿ ಪಡೆಯಬಹುದು. ಇನ್ನು, ಆದಾಯ ತೆರಿಗೆಯ ಸೆಕ್ಷನ್ 80ಸಿ ಅಡಿಯಲ್ಲಿ ಮಕ್ಕಳ ಟ್ಯೂಷನ್ ಫೀಸ್ ವೆಚ್ಚಕ್ಕೆ ಒಂದೂವರೆ ಲಕ್ಷ ರೂವರೆಗೂ ತೆರಿಗೆ ವಿನಾಯಿತಿ ಗಿಟ್ಟಿಸಿಕೊಳ್ಳಬಹುದು.
ನೀವು ಪ್ರವಾಸ ಹೋದ ಖರ್ಚಿಗೆ ತೆರಿಗೆ ವಿನಾಯಿತಿ ಪಡೆಯಬಹುದು. ನಿಮ್ಮೊಬ್ಬರದ್ದು ಮಾತ್ರವಲ್ಲ ಕುಟುಂಬಸಮೇತ ಕೈಗೊಂಡ ಪ್ರವಾಸದ ಖರ್ಚನ್ನು ತೋರಿಸಿದರೆ ಆ ಹಣಕ್ಕೆ ತೆರಿಗೆ ಬೀಳುವುದಿಲ್ಲ. 4 ವರ್ಷದಲ್ಲಿ ಇಂಥ ಎರಡು ಪ್ರವಾಸಗಳ ಖರ್ಚಿಗೆ ತೆರಿಗೆ ವಿನಾಯಿತಿ ದೊರಕಿಸಿಕೊಳ್ಳಲು ಸಾಧ್ಯ.
ಇವುಗಳ ಜೊತೆಗೆ ಇನ್ಷೂರೆನ್ಸ್ ಸ್ಕೀಮ್, ಮೆಡಿಕಲ್ ಇನ್ಷೂರೆನ್ಸ್, ಸರ್ಕಾರಿ ಬಾಂಡ್ ಇತ್ಯಾದಿಗಳಲ್ಲಿ ಮಾಡುವ ಹೂಡಿಕೆಯ ಹಣಕ್ಕೂ ತೆರಿಗೆ ವಿನಾಯಿತಿ ಪಡೆಯಬಹುದು. ನಿಮಗೆ ಬರುವ ವಾರ್ಷಿಕ 10,00,001 ರೂ ಸಂಬಳದಲ್ಲಿ ತೆರಿಗೆ ವಿನಾಯಿತಿಗಳಿರುವ ವೆಚ್ಚ 6 ಲಕ್ಷ ರೂ ಇದೆ ಎಂದಾದರೆ ಉಳಿದ 4 ಲಕ್ಷ ರೂ ಹಣಕ್ಕೆ ಮಾತ್ರ ತೆರಿಗೆ ವಿಧಿಸಲಾಗುತ್ತದೆ. ನೀವು ಇವುಗಳನ್ನು ವಾರ್ಷಿಕವಾಗಿ ಸಲ್ಲಿಸುವ ಟಿಡಿಎಸ್ ರಿಟರ್ನ್ಸ್ ಮೂಲಕವೂ ತೆರಿಗೆ ವಿನಾಯಿತಿ ಮೊತ್ತವನ್ನು ಮರಳಿಪಡೆಯುವ ಅವಕಾಶ ಇರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:00 pm, Wed, 18 January 23