ಸಾರ್ವಜನಿಕ ಭವಿಷ್ಯ ನಿಧಿ (PPF), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಸೇರಿದಂತೆ ಹಲವು ಸಣ್ಣ ಉಳಿತಾಯ ಯೋಜನೆಗಳು ನಮ್ಮಲ್ಲಿವೆ. ಈ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಿದ್ದರೆ ಅದರ ಮೆಚ್ಯೂರಿಟಿ ಅವಧಿ ಇತ್ಯಾದಿ ಕ್ರಮಗಳ ಬಗ್ಗೆ ಎಚ್ಚರದಿಂದರಬೇಕು. ಹಲವು ಬಾರಿ ನಾವು ಈ ಯೋಜನೆ ಅವಧಿ ಮುಗಿದ ಬಳಿಕವೂ ಏನೂ ಕ್ರಮ ಕೈಗೊಳ್ಳದೇ ಉಳಿದುಬಿಡುವುದುಂಟು. ಹೀಗೆ ನಿಷ್ಕ್ರಿಯಗೊಂಡ ಖಾತೆಗಳು INOP ಎಂಬ ಕೊಡ್ ಅಡಿಯಲ್ಲಿ ಫ್ರೀಜ್ ಆಗುತ್ತವೆ. ಮೆಚ್ಯೂರ್ ಆದರೂ ಯಾವುದೇ ವಿಸ್ತರಣೆ ಕಾಣದೇ ನಿಷ್ಕ್ರಿಯಗೊಂಡಿರುವ ಖಾತೆಗಳಿಗೆ ಇದು ಅನ್ವಯ ಆಗುತ್ತದೆ. ಇಲ್ಲಿ ಐನೋಪ್ ಎಂದರೆ 3ಕ್ಕೂ ಹೆಚ್ಚು ವರ್ಷ ಕಾಲ ತಟಸ್ಥಗೊಂಡಿರುವ ಖಾತೆಗಳೆಂದು ತಿಳಿಯಬಹುದು. ಈ ಮುಂಚೆ ಉಳಿತಾಯ ಯೋಜನೆಗಳ ಖಾತೆಗಳು ಮೆಚ್ಯೂರ್ ಆಗಿ 3 ವರ್ಷವಾದ ಬಳಿಕ ಪರಿಸಮಾಪ್ತಿಗೊಳಿಸಲಾಗುತ್ತಿತ್ತು. ಆದರೆ ಈಗ ಅಂಚೆ ಇಲಾಖೆ ಹೊಸ ಆದೇಶ ಹೊರಡಿಸಿದ್ದು ಇಂಥ ಖಾತೆಗಳನ್ನು ಮುಚ್ಚದೇ ಫ್ರೀಜ್ ಮಾಡಬೇಕೆಂದಿದೆ.
ಇನೋಪ್ ಸಂಕೇತದೊಂದಿಗೆ ಸ್ಥಗಿತಗೊಂಡ ಖಾತೆಗಳ ನಿರ್ವಹಣೆಗೆ ಕೆಲ ವಿಧಾನಗಳನ್ನು ಸೂಚಿಸಲಾಗಿದೆ. ಆ ಖಾತೆದಾರರು ಅಂಚೆ ಕಚೇರಿಗೆ ಹೋಗಿ ಪಿಒ ಪಾಸ್ ಬುಕ್, ಯೋಜನೆಯ ಸರ್ಟಿಫಿಕೇಟ್ ಅನ್ನು ನೀಡಬೇಕು. ಆಧಾರ್, ಪಾನ್, ಮೊಬೈಲ್ ನಂಬರ್ ಇತ್ಯಾದಿ ಅಗತ್ಯ ಕೆವೈಸಿ ದಾಖಲೆಗಳನ್ನು ಸಲ್ಲಿಸಬೇಕು. ಇದರ ಜೊತೆಗೆ ಅಕೌಂಟ್ ಕ್ಲೋಷರ್ ಫಾರ್ಮ್ (ಖಾತೆ ಮುಚ್ಚಲು ಅರ್ಜಿ) ಭರ್ತಿ ಮಾಡಿಕೊಡಬೇಕು. ಪೋಸ್ಟ್ ಆಫೀಸ್ ಉಳಿತಾಯ ಖಾತೆ ಸಂಖ್ಯೆ ಮತ್ತು ಪಾಸ್ ಬುಕ್ ನಕಲುಪ್ರತಿಯನ್ನು ನೀಡಬೇಕು. ಅಥವಾ ಬ್ಯಾಂಕ್ ಖಾತೆ ಮತ್ತು ಕ್ಯಾನ್ಸಲ್ ಚೆಕ್ ಅನ್ನು ಕೊಡಬೇಕು. ಖಾತೆದಾರರ ಪರವಾಗಿ ಬೇರೆಯವರೂ ಹೋಗಿ ಈ ದಾಖಲೆಗಳನ್ನು ಸಲ್ಲಿಸಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:25 am, Thu, 19 January 23