ಕೇಂದ್ರ ಬಜೆಟ್ನಲ್ಲಿ (Budget 2023) ಹೊಸ ತೆರಿಗೆ ಪದ್ಧತಿಯನ್ನು ಘೋಷಿಸಲಾಗಿದ್ದು, 7 ಲಕ್ಷ ರೂ.ವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ (Tax Exemption) ನೀಡಲಾಗಿದೆ. ಆದಾಗ್ಯೂ ಹಳೆಯ ತೆರಿಗೆ ಪದ್ಧತಿ ಮುಂದುವರಿಯಲಿದ್ದು, ಅದರಡಿಯಲ್ಲಿ 3 ಲಕ್ಷ ರೂ.ಗಿಂತ ಹೆಚ್ಚಿನ ಆದಾಯಕ್ಕೆ ತೆರಿಗೆ ವಿಧಿಸಲಾಗುತ್ತಿದೆ. ಆದರೆ, ಹಳೆಯ ತೆರಿಗೆ ಪದ್ಧತಿಯಲ್ಲಿ 3 ಲಕ್ಷ ರೂ.ಗಿಂತ ಹೆಚ್ಚಿನ ಆದಾಯಕ್ಕೂ ಆದಾಯ ತೆರಿಗೆ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯಲು ಅವಕಾಶವಿದೆ. ತೆರಿಗೆ ಹೊಣೆಗಾರಿಕೆಯನ್ನು ಕಡಿಮೆ ಮಾಡಿಕೊಳ್ಳಲು ಅನೇಕ ಆಯ್ಕೆಗಳಿವೆ. ಆದರೆ, ಅದಕ್ಕೆ ಕೆಲವೊಂದು ದಾಖಲೆಗಳನ್ನು (Documents) ಒದಗಿಸಬೇಕಾಗುತ್ತದೆ. ಇನ್ಕಂ ಟ್ಯಾಕ್ಸ್ ರಿಟರ್ನ್ಸ್ ಅಥವಾ ಐಟಿಆರ್ (ITR) ಸಲ್ಲಿಸುವಾಗ ಯಾವೆಲ್ಲ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ ಎಂಬ ಮಾಹಿತಿ ಇಲ್ಲಿ ನೀಡಲಾಗಿದೆ.
ತೆರಿಗೆದಾರರು ತಮ್ಮ ಒಟ್ಟು ವೇತನದ ವಿವರ ಮತ್ತು ಇತರ ಮೂಲಗಳಿಂದ ಬಂದ ಆದಾಯದ ಬಗ್ಗೆ ಮಾಹಿತಿ ನೀಡಬೇಕೆಂದು ಆದಾಯ ತೆರಿಗೆ ಇಲಾಖೆ ಬಯಸುತ್ತದೆ. ಇದಕ್ಕಾಗಿ ತೆರಿಗೆ ಪಾವತಿದಾರರು ದಾಖಲೆಗಳನ್ನು ಸಕಾಲಿಕವಾಗಿ ಸಂಗ್ರಹಿಸಿ ಇಟ್ಟುಕೊಳ್ಳುವುದು ಉತ್ತಮ. ಐಟಿಆರ್ ಫೈಲ್ ಮಾಡುವ ಸಂದರ್ಭದಲ್ಲಿ ಬಳಿ ಇರಬೇಕಾದ ದಾಖಲೆಗಳ ವಿವರ ಇಲ್ಲಿದೆ.
ಐಟಿಆರ್ ಫೈಲ್ ಮಾಡುವಾಗ ಪ್ರತಿಯೊಬ್ಬರೂ ಆಧಾರ್ ಮತ್ತು ಪ್ಯಾನ್ ಕಾರ್ಡ್ ವಿವರ ಒದಗಿಸಬೇಕಾಗುತ್ತದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139ಎಎ ಅನ್ವಯ ಆಧಾರ್ ವಿವರ ಒದಗಿಸುವುದು ಕಡ್ಡಾಯವಾಗಿದೆ.
ವೇತನದಾರ ವರ್ಗಕ್ಕೆ ಐಟಿಆರ್ ಫೈಲ್ ಮಾಡುವಲ್ಲಿ ಅತಿಮುಖ್ಯವಾಗಿ ಬೇಕಾಗುವ ದಾಖಲೆ ಫಾರ್ಮ್ 16. ಇದು ಉದ್ಯೋಗದಾತ ಕಂಪನಿಗಳು ಉದ್ಯೋಗಿಯ ವೇತನದಿಂದ ಟಿಡಿಎಸ್ ಕಡಿತವಾಗಿರುವುದಕ್ಕೆ ಸಂಬಂಧಿಸಿದಂತೆ ನೀಡುವ ಪ್ರಮಾಣಪತ್ರವಾಗಿದೆ. ಕಡಿತವಾಗಿರುವ ಟಿಡಿಎಸ್ ಅನ್ನು ರಿಕ್ಲೇಮ್ ಮಾಡಬೇಕಿದ್ದರೂ ಇದು ಅಗತ್ಯವಾಗಿದೆ.
ವೇತನದ ವಿವರ ಅಥವಾ ಸಾಲರಿ ಸ್ಲಿಪ್ ಕೂಡ ಐಟಿಆರ್ ಸಲ್ಲಿಸುವಾಗ ಬೇಕಾದ ಮತ್ತೊಂದು ದಾಖಲೆಯಾಗಿದೆ. ಇದರಲ್ಲಿ ಹೌಸ್ ರೆಂಟ್ ಅಲೋಯೆನ್ಸ್, ಟ್ರಾನ್ಸ್ಪೋರ್ಟ್ ಅಲೋಯೆನ್ಸ್ ಹಾಗೂ ಇತರ ಅಲೋಯೆನ್ಸ್ಗಳ ಮಾಹಿತಿ ಇರುವುದರಿಂದ ತೆರಿಗೆ ಲೆಕ್ಕಾಚಾರದ ದೃಷ್ಟಿಯಿಂದ ಇದು ಅತೀ ಅಗತ್ಯ ದಾಖಲೆಯಾಗಿದೆ.
ಬ್ಯಾಂಕ್ ಖಾತೆಗಳಿಂದ ನೀವು ಸ್ವೀಕರಿಸುವ ಬಡ್ಡಿ, ಅಂಚೆ ಕಚೇರಿ ಉಳಿತಾಯ ಯೋಜನೆಗಳಲ್ಲಿ ಮಾಡಿರುವ ಹೂಡಿಕೆಗೆ ಬರುವ ಬಡ್ಡಿ ಹಾಗೂ ಸ್ಥಿರ ಠೇವಣಿ (ಎಫ್ಡಿ) ಬಡ್ಡಿ ತೆರಿಗೆ ವ್ಯಾಪ್ತಿಗೆ ಬರುತ್ತವೆ. ಹೀಗಾಗಿ ಇವುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಐಟಿಆರ್ ಸಲ್ಲಿಕೆ ವೇಳೆ ಒದಗಿಸಬೇಕಾಗುತ್ತದೆ.
ಸೆಕ್ಷನ್ 80ಸಿ, 80ಸಿಸಿಸಿಡಿ (1), ತೆರಿಗೆ ಉಳಿತಾಯ ಹೂಡಿಕೆ ದಾಖಲೆಗಳು ತೆರಿಗೆ ಕಡಿತದ ಸಾಧ್ಯತೆಯನ್ನು ಕಡಿಮೆ ಮಾಡಲು ಸಹಕಾರಿ. ಇಪಿಎಫ್, ಪಿಪಿಎಫ್, ಜೀವ ವಿಮೆಗೆ ಸಂಬಂಧಿಸಿದ ದಾಖಲೆಗಳನ್ನು ಐಟಿಆರ್ ಸಲ್ಲಿಸುವ ವೇಳೆ ಒದಗಿಸಬೇಕಾಗುತ್ತದೆ. ತೆರಿಗೆ ವಿನಾಯಿತಿ ಪಡೆಯುವುದಕ್ಕೆ ಇದು ಅನಿವಾರ್ಯವೂ ಹೌದು. ಈ ಸೆಕ್ಷನ್ಗಳ ಅಡಿಯಲ್ಲಿ 1.5 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ.
ಆರೋಗ್ಯ ವಿಮೆ ಪ್ರೀಮಿಯಂ ರಸೀದಿ ಕೂಡ ಐಟಿಆರ್ ಸಲ್ಲಿಕೆ ವೇಳೆ ಬೇಕಾಗುತ್ತದೆ. ಇದಕ್ಕೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಡಿ ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯಲು ಅವಕಾಶವಿದೆ. ಗರಿಷ್ಠ 25,000 ರೂ.ವರೆಗೆ ತೆರಿಗೆ ವಿನಾಯಿತಿ ಪಡೆಯಲು ಅವಕಾಶವಿದೆ. ತಂದೆ-ತಾಯಿ 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು ಅವರಿಗೂ ಆರೋಗ್ಯ ವಿಮೆ ಮಾಡಿಸಿದ್ದಲ್ಲಿ 50,000 ರೂ.ವರೆಗೆ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ.
ಷೇರು ಮಾರುಕಟ್ಟೆ ಹೂಡಿಕೆ, ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡಿದ್ದಲ್ಲಿ ಅದರಿಂದ ಗಳಿಸಿದ ಮೊತ್ತಕ್ಕೆ ಸಂಬಂಧಿಸಿದ ದಾಖಲೆ ಐಟಿಆರ್ ಸಲ್ಲಿಕೆ ವೇಳೆ ಬೇಕಾಗುತ್ತದೆ. ಇಷ್ಟೇ ಅಲ್ಲದೆ, ಮನೆ, ಕಟ್ಟಡ ಅಥವಾ ಆಸ್ತಿ ಮಾರಾಟ ಮಾಡಿದ್ದರೆ ಅದಕ್ಕೆ ಸಂಬಂಧಿಸಿದ ದಾಖಲೆಗಳು, ಮ್ಯೂಚುವಲ್ ಫಂಡ್ ಹೌಸ್ಗಳು ಅಥವಾ ಮಧ್ಯವರ್ತಿಗಳ ಸ್ಟೇಟ್ಮೆಂಟ್ ಬೇಕಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ