
ನವದೆಹಲಿ, ಸೆಪ್ಟೆಂಬರ್ 19: ಕ್ವಾಂಟ್ ಮ್ಯುಚುವಲ್ ಫಂಡ್ ಸಂಸ್ಥೆ (Mutual Fund) ಭಾರತದ ಮೊದಲ ಈಕ್ವಿಟಿ ಲಾಂಗ್-ಶಾರ್ಟ್ ಸ್ಪೆಷಲೈಸ್ಡ್ ಇನ್ವೆಸ್ಟ್ಮೆಂಟ್ ಫಂಡ್ ಅನ್ನು (Specialized Investment Fund) ಆರಂಭಿಸಿದೆ. ಕ್ಯುಎಸ್ಐಎಫ್ ಈಕ್ವಿಟಿ ಲಾಂಗ್-ಶಾರ್ಟ್ ಫಂಡ್ (QSIF Equity Long-short Fund) ಎಂದು ಹೆಸರಿಲಾಗಿರುವ ಈ ಫಂಡ್ನ ಎನ್ಎಫ್ಒ ಆಫರ್ ಅಕ್ಟೋಬರ್ 1ರವರೆಗೂ ಇದೆ. ಅಲಾಟ್ಮೆಂಟ್ ಆದ ಐದು ಕಾರ್ಯದಿನಗಳೊಳಗೆ ಈ ಫಂಡ್ನ ಯುನಿಟ್ಗಳು ಮಾರಾಟ ಮತ್ತು ಮರುಖರೀದಿಗೆ (repurchase) ಲಭ್ಯ ಇರುತ್ತವೆ.
ಸಂದೀಪ್ ಟಂಡನ್, ಲೋಕೇಶ್ ಗರ್ಗ್, ಸಮೀರ್ ಕಾಟೆ, ಅಂಕಿತ್ ಪಾಂಡೆ ಮತ್ತು ಸಂಜೀವ್ ಶರ್ಮಾ ಅವರಿರುವ ತಂಡವು ಈ ಫಂಡ್ ಅನ್ನು ನಿರ್ವಹಿಸುತ್ತದೆ.
ಕ್ವಾಂಟ್ನ ಈ ಹೊಸ ಫಂಡ್ ಶೇ. 65ಕ್ಕಿಂತ ಹೆಚ್ಚಿನ ಹಣವನ್ನು ಈಕ್ವಿಟಿಗಳಲ್ಲಿ ಇರಿಸುತ್ತದೆ. ಇದರ ಜೊತೆಗೆ ಡಿರೈವೇಟಿವ್, ಹೆಡ್ಜಿಂಗ್, ಬಾಂಡ್, ಟ್ರೆಷರಿ ಬಿಲ್ ಇತ್ಯಾದಿಗಳಲ್ಲಿ ನಿರ್ದಿಷ್ಟ ತಂತ್ರಾತ್ಮವಾಗಿ ಹೂಡಿಕೆ ಮಾಡುತ್ತದೆ. ನಿಫ್ಟಿ500 ಟೋಟಲ್ ರಿಟರ್ನ್ ಇಂಡೆಕ್ಸ್ ಇದರ ಬೆಂಚ್ ಮಾರ್ಕ್ ಆಗಿದೆ.
ಇದನ್ನೂ ಓದಿ: Income Tax Refund Delay: ಇನ್ನೂ ರೀಫಂಡ್ ಬಂದಿಲ್ಲವಾ? ಏನು ಕಾರಣ? ಬಡ್ಡಿ ಸಮೇತ ಸಿಗುತ್ತಾ ಹಣ?
ಇದು ಮ್ಯುಚುವಲ್ ಫಂಡ್ ಮತ್ತು ಪಿಎಂಎಸ್ (ಪೋರ್ಟ್ಫೋಲಿಯೋ ಮ್ಯಾನೇಜ್ಮೆಂಟ್ ಸರ್ವಿಸಸ್) ಅಂಶಗಳನ್ನು ಹೊಂದಿರುವ ಒಂದು ರೀತಿಯ ಫಂಡ್. ಹೆಚ್ಚು ರಿಸ್ಕ್ ತೆಗೆದುಕೊಂಡು ಹೆಚ್ಚು ರಿಟರ್ನ್ ಬಯಸುವ ಹೂಡಿಕೆದಾರರಿಗೆ ಸೂಕ್ತವಾದುದು.
ಮ್ಯುಚುವಲ್ ಫಂಡ್ಗಳು ವಿವಿಧ ನಿಯಮಗಳಿಗೆ ಕಟ್ಟುಬಿದ್ದಿರುತ್ತವೆ. ಇಂತಿಷ್ಟ ಪ್ರಮಾಣದಲ್ಲಿ ಈಕ್ವಿಟಿ, ಡೆಟ್ ಇತ್ಯಾದಿಯಲ್ಲಿ ಹೂಡಿಕೆ ಮಾಡಬೇಕು ಎಂಬ ಪೂರ್ವನಮೂದಿತ ನಿಯಮಗಳಿರುತ್ತವೆ. ಆ ಕಟ್ಟುಪಾಡುಗಳಲ್ಲೇ ಫಂಡ್ಗಳು ಹೂಡಿಕೆ ಮಾಡುತ್ತಿರುತ್ತವೆ.
ಇದಕ್ಕೆ ವ್ಯತಿರಿಕ್ತವಾಗಿ, ಪಿಎಂಎಸ್ಗಳು ಮುಕ್ತವಾಗಿ ಕೆಲಸ ಮಾಡುತ್ತವೆ. ಎಲ್ಲೆಲ್ಲಿ ಹೂಡಿಕೆ ಮಾಡಲಾಗುತ್ತದೆ ಎಂಬುದನ್ನು ಇವು ಬಹಿರಂಗಪಡಿಸಬೇಕಿಲ್ಲ. ಇದರಲ್ಲಿ ಕನಿಷ್ಠ ಹೂಡಿಕೆಯೇ 50 ಲಕ್ಷ ರೂ ಇರುತ್ತದೆ. ಶ್ರೀಮಂತರು ಮತ್ತು ಮೇಲ್ಮಧ್ಯಮ ವರ್ಗದವರಿಗೆ ಇದು ಬಹುತೇಕ ಸೀಮಿತವಾಗಿದೆ.
ಇದನ್ನೂ ಓದಿ: ಇಪಿಎಫ್ಒನಲ್ಲಿ ಹೊಸ ಫೀಚರ್ಸ್; ಪಾಸ್ಬುಕ್ ಲೈಟ್, ಟ್ರಾನ್ಸ್ಫರ್ ಸರ್ಟಿಫಿಕೇಟ್, ತ್ವರಿತ ಅನುಮೋದನೆ
ಆದರೆ, ಎಸ್ಐಎಫ್ ಅಥವಾ ಸ್ಪೆಷಲೈಸ್ಡ್ ಇನ್ವೆಸ್ಟ್ಮೆಂಟ್ ಫಂಡ್ಗಳಲ್ಲಿ ಕನಿಷ್ಠ ಹೂಡಿಕೆ 10 ಲಕ್ಷ ರೂ ಮಾತ್ರವೇ. ಇದು ಬಹುತೇಕ ಪಿಎಂಎಸ್ ರೀತಿಯ ಸ್ವಾತಂತ್ರ್ಯ ಹೊಂದಿರುತ್ತದೆ. ಕನಿಷ್ಠ ಹೂಡಿಕೆಯು ಕಡಿಮೆ ಇರುವುದರಿಂದ ಹೆಚ್ಚು ಜನರನ್ನು ಇದು ಆಕರ್ಷಿಸಬಲ್ಲುದು. ಫ್ಯೂಚರ್ಸ್ ಮತ್ತು ಆಪ್ಷನ್ಸ್ ಟ್ರೇಡಿಂಗ್ನಲ್ಲೂ ಪಾಲ್ಗೊಂಡು ಒಂದಷ್ಟು ರಿಸ್ಕ್ ಮ್ಯಾನೇಜ್ಮೆಂಟ್ ಮಾಡುವ ಪ್ರಯತ್ನ ಇದೆ.
ಪಿಎಂಎಸ್ನಲ್ಲಿ ಹೂಡಿಕೆದಾರರು ಇಷ್ಟಬಂದಂತೆ ಹೂಡಿಕೆ ಹಿಂಪಡೆಯಲು ಆಗುವುದಿಲ್ಲ. ನಿರ್ದಿಷ್ಟ ಲಾಕಿನ್ ಪೀರಿಯಡ್ ಇರುತ್ತದೆ. ಎಸ್ಐಎಫ್ನಲ್ಲಿ ಹೂಡಿಕೆದಾರರಿಗೆ ಆ ಸ್ವಾತಂತ್ರ್ಯ ಇರುತ್ತದೆ. ಹೀಗಾಗಿ, ಮುಂಬರುವ ದಿನಗಲ್ಲಿ ಎಸ್ಐಎಫ್ಗಳ ಜನಪ್ರಿಯತೆ ಹೆಚ್ಚಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ