ಬೆಳಗ್ಗೆ ಖರೀದಿಸಿ, ಮಧ್ಯಾಹ್ನ ಮಾರೋದು ಹೂಡಿಕೆ ಅಲ್ಲ: ಮನಿ9 ಸಮಿಟ್​ನಲ್ಲಿ ಎನ್​ಎಸ್​ಇ ಸಿಇಒ ಆಶೀಶ್ ಚೌಹಾಣ್ ಕಿವಿಮಾತು

|

Updated on: Mar 06, 2025 | 10:56 AM

NSE CEO Ashish Kumar Chauhan speaks at Money9 Financial Freedom Summit 2025: ಕಿರು ಅವಧಿಗೆ ಹೂಡಿಕೆ ಯಾವತ್ತೂ ಇರಬಾರದು. ದೀರ್ಘಾವಧಿ ಹೂಡಿಕೆ ಮಾಡಬೇಕು ಎಂದು ಯುವಜನರಿಗೆ ನ್ಯಾಷನಲ್ ಸ್ಟಾಕ್ ಎಕ್ಸ್​​ಚೇಂಜ್ ಸಿಇಒ ಆಶೀಶ್ ಚೌಹಾಣ್ ತಿಳಿಹೇಳಿದ್ದಾರೆ. ಇಂಟ್ರಾಡೇ ಟ್ರೇಡಿಂಗ್ ಮತ್ತು ಎಫ್ ಅಂಡ್ ಒ ಟ್ರೇಡಿಂಗ್​​ಗಳಿಂದ ದೂರ ಇರುವಂತೆ ಅವರು ಪರೋಕ್ಷವಾಗಿ ಮನವಿ ಮಾಡಿದ್ದಾರೆ. ಟಿವಿ9 ನೆಟ್ವರ್ಕ್ ಆಯೋಜಿಸಿದ ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್ 2025 ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಬೆಳಗ್ಗೆ ಖರೀದಿಸಿ, ಮಧ್ಯಾಹ್ನ ಮಾರೋದು ಹೂಡಿಕೆ ಅಲ್ಲ: ಮನಿ9 ಸಮಿಟ್​ನಲ್ಲಿ ಎನ್​ಎಸ್​ಇ ಸಿಇಒ ಆಶೀಶ್ ಚೌಹಾಣ್ ಕಿವಿಮಾತು
ಆಶೀಶ್ ಚೌಹಾಣ್
Follow us on

ಮುಂಬೈ, ಮಾರ್ಚ್ 5: ಭಾರತದ ಯುವಕರು ತಂತ್ರಜ್ಞಾನ ಅಳವಡಿಕೆಯಲ್ಲಿ ಪ್ರಾಜ್ಞರಾಗಿದ್ದಾರೆ. ವಿಶ್ವದ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತಕ್ಕೆ ಯುವಶಕ್ತಿ ದೊಡ್ಡ ವರದಾನವಾಗಿದೆ ಎಂದು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನ ಸಿಇಒ ಮತ್ತು ಎಂಡಿ ಆಶೀಶ್ ಕುಮಾರ್ ಚೌಹಾಣ್ ಹೇಳಿದ್ದಾರೆ. ಮೂರನೇ ಮನಿ9 ಫೈನಾನ್ಷಿಯಲ್ ಫ್ರೀಡಂ ಶೃಂಗಸಭೆಯಲ್ಲಿ (Money9 Financial Freedom Summit 2025) ಭಾರತೀಯ ಆರ್ಥಿಕತೆಯಲ್ಲಿ ರೀಟೇಲ್ ಹೂಡಿಕೆದಾರರ ಪಾತ್ರದ ಕುರಿತ ಸೆಷನ್​ವೊಂದರಲ್ಲಿ ಮಾತನಾಡುತ್ತಿದ್ದ ಅವರು, ಭಾರತದ ಯುವಜನರಿಗೆ ಹೂಡಿಕೆಯ ಕುರಿತು ಅರಿವು ಮೂಡಿಸಲು ಯತ್ನಿಸಿದರು.

‘ಲಾಭದಾಸೆಗೆ ಷೇರುಗಳನ್ನು ಬೆಳಗ್ಗೆ ಖರೀದಿಸಿ, ಮಧ್ಯಾಹ್ನ ಮಾರಲು ಯತ್ನಿಸಬೇಡಿ. ಅದನ್ನು ಹೂಡಿಕೆ ಅನ್ನೋದಿಲ್ಲ. ಈ ಟಿಪ್ಸ್​ಗಳನ್ನು (ಷೇರು ಖರೀದಿಗೆ) ನಂಬ ಬೇಡಿ. ವಾಟ್ಸಾಪ್ ಸಲಹೆಗಳನ್ನೂ ನಂಬ ಬೇಡಿ’ ಎಂದು ಎನ್​ಎಸ್​ಇ ಸಿಇಒ ಹೇಳಿದರು.

ಇದನ್ನೂ ಓದಿ: ಮಹಾರಾಷ್ಟ್ರ ಬಹಳ ಬೇಗ ಟ್ರಿಲಿಯನ್ ಡಾಲರ್ ಆರ್ಥಿಕತೆಯ ರಾಜ್ಯವಾಗಲಿದೆ: ಸಿಎಂ ದೇವೇಂದ್ರ ಫಡ್ನವಿಸ್

‘ಭಾರತದ ಷೇರು ಮಾರುಕಟ್ಟೆಯಲ್ಲಿ 11 ಕೋಟಿಗೂ ಅಧಿಕ ಹೂಡಿಕೆದಾರರಿದ್ದಾರೆ. ಹಲವು ದೇಶಗಳ ಜನಸಂಖ್ಯೆಗಿಂತ ಹೆಚ್ಚು ಹೂಡಿಕೆದಾರರು ಭಾರತದಲ್ಲಿದ್ದಾರೆ. ಇದು ಆರಂಭ ಮಾತ್ರ. ಹದಿನೈದು ವರ್ಷದಲ್ಲಿ ಭಾರತದಲ್ಲಿ ಹೂಡಿಕೆದಾರರ ಸಂಖ್ಯೆ 50-70 ಕೋಟಿಗೆ ಏರಲು ಸಾಧ್ಯ’ ಎಂದು ಆಶೀಶ್ ಕುಮಾರ್ ಚೌಹಾಣ್ ತಿಳಿಸಿದರು.

12,000 ಡಾಲರ್ ತಲಾದಾಯ ಇರುವ ಚೀನಾದಲ್ಲಿ ಷೇರು ಮಾರುಕಟ್ಟೆ ಕುಸಿದಾಗ ಸರ್ಕಾರವೇ ಖರೀದಿ ಮಾಡುತ್ತದೆ. ಕೇವಲ 3,000 ಡಾಲರ್ ತಲಾದಾಯ ಇರುವ ಭಾರತದಲ್ಲಿ ಬಡವರೇ ಮಾರುಕಟ್ಟೆ ಬೆಳೆಸುತ್ತಿದ್ದಾರೆ ಎಂದು ಎನ್​​ಎಸ್​​ಇ ಮುಖ್ಯಸ್ಥರು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಮೋದಿ ನಾಯಕತ್ವದಲ್ಲಿ ಹೊಸ ವಿಶ್ವ ಶ್ರೇಣಿಯಲ್ಲಿ ಭಾರತಕ್ಕೆ ವಿಶೇಷ ಸ್ಥಾನಮಾನ: ಟಿವಿ9 ನೆಟ್ವರ್ಕ್ ಸಿಇಒ ಬರುಣ್ ದಾಸ್

11 ಕೋಟಿ ನೊಂದಾಯಿತ ಹೂಡಿಕೆದಾರರು

ನ್ಯಾಷನಲ್ ಸ್ಟಾಕ್ ಎಕ್ಸ್​​ಚೇಂಜ್​ನಲ್ಲಿ ನೊಂದಾಯಿಸುತ್ತಿರುವ ಹೂಡಿಕೆದಾರರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಕಳೆದ ಐದು ತಿಂಗಳಲ್ಲಿ ಬರೋಬ್ಬರಿ 1 ಕೋಟಿ ಹೊಸ ಹೂಡಿಕೆದಾರರು ಸೇರ್ಪಡೆಯಾಗಿದ್ದಾರೆ. ಇದರೊಂದಿಗೆ ಎನ್​ಎಸ್​ಇನಲ್ಲಿ ನೊಂದಾಯಿತ ಅನನ್ಯ ಹೂಡಿಕೆದಾರರ ಸಂಖ್ಯೆ 11 ಕೋಟಿ ಗಡಿ ಮುಟ್ಟಿದೆ. ಪ್ರತೀ ದಿನವೂ ಕಡಿಮೆ ಎಂದರೂ 47,000 ದಿಂದ 73,000 ವರೆಗೆ ಹೊಸ ಹೂಡಿಕೆದಾರರು ನೊಂದಾಯಿಸಿಕೊಳ್ಳುತ್ತಿದ್ದಾರೆ. ಎನ್​ಎಸ್​ಇನಲ್ಲಿ ನೊಂದಾಯಿತವಾದ ಒಟ್ಟು ಟ್ರೇಡಿಂಗ್ ಅಕೌಂಟ್​​ಗಳ ಸಂಖ್ಯೆ 21 ಕೋಟಿ ತಲುಪಿರುವುದು ಇನ್ನೊಂದು ಮೈಲಿಗಲ್ಲು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:56 pm, Wed, 5 March 25