ಮಹಾರಾಷ್ಟ್ರ ಬಹಳ ಬೇಗ ಟ್ರಿಲಿಯನ್ ಡಾಲರ್ ಆರ್ಥಿಕತೆಯ ರಾಜ್ಯವಾಗಲಿದೆ: ಸಿಎಂ ದೇವೇಂದ್ರ ಫಡ್ನವಿಸ್
Maharashtra CM Devendra Fadnavis speaks at Money9 Financial Freedom Summit 2025: 2030ರೊಳಗೆ ಮಹಾರಾಷ್ಟ್ರ ರಾಜ್ಯದ ಆರ್ಥಿಕತೆ ಒಂದು ಟ್ರಿಲಿಯನ್ ಡಾಲರ್ ಗಾತ್ರದ್ದಾಗಲಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ. ಹಿಂದಿನ ಮಹಾರಾಷ್ಟ್ರ ವಿಕಾಸ್ ಆಘಾಡಿ ಸರ್ಕಾರದ ಕಳಪೆ ಆಡಳಿತ ನಿರ್ವಹಣೆ ಹಾಗೂ ಕೋವಿಡ್ ಕಾರಣಕ್ಕೆ ಮಹಾರಾಷ್ಟ್ರದ ಗುರಿ ಸಾಧನೆ ತುಸು ವಿಳಂಬವಾಗಿದೆ ಎಂದೂ ಅವರು ಹೇಳಿದ್ದಾರೆ. ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್ 2025ನಲ್ಲಿ ಸಂದರ್ಶನದಲ್ಲಿ ಅವರು ಪಾಲ್ಗೊಂಡು ಮಾತನಾಡುತ್ತಿದ್ದರು.

ಮುಂಬೈ, ಮಾರ್ಚ್ 5: ಮುಂದಿನ ಐದು ವರ್ಷದೊಳಗೆ ಮಹಾರಾಷ್ಟ್ರ ಒಂದು ಟ್ರಿಲಿಯನ್ ಡಾಲರ್ ಗಾತ್ರದ ಆರ್ಥಿಕತೆಯ ರಾಜ್ಯವಾಗಲಿದೆ. ಆ ಗುರಿಗೆ ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಆ ರಾಜ್ಯದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ (Devendra Fadnavis) ಹೇಳಿದ್ದಾರೆ. ಟಿವಿ9 ನೆಟ್ವರ್ಕ್ ಆಯೋಜಿಸಿದ ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್ 2025 (Money9 Financial Freedom Summit 2025) ಉದ್ಘಾಟಿಸಿ, ಬಳಿಕ ಸಂದರ್ಶನದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಫಡ್ನವಿಸ್, 2030ರೊಳಗೆ ಏನೇ ಆದರೂ ತಮ್ಮ ರಾಜ್ಯದ ಆರ್ಥಿಕತೆ ಟ್ರಿಲಿಯನ್ ಡಾಲರ್ ಮುಟ್ಟಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
2028ಕ್ಕೆ ಟ್ರಿಲಿಯನ್ ಡಾಲರ್ ಆರ್ಥಿಕತೆ ಮುಟ್ಟಬೇಕೆಂಬ ಗುರಿ ಇತ್ತು. ಆದರೆ, ಕೋವಿಡ್ ಸಾಂಕ್ರಾಮಿಕ ರೋಗ ಹಾಗೂ ಎಂವಿಎ ಮೈತ್ರಿಕೂಟ ಸರ್ಕಾರದ ಕಳಪೆ ಆಡಳಿತ ಕಾರಣಗಳಿಗೆ ಎರಡು ವರ್ಷ ವ್ಯರ್ಥವಾಗಿ ಹೋದವು. 2030ರೊಳಗೆ ಖಂಡಿತವಾಗಿ ಗುರಿ ಮುಟ್ಟುತ್ತೇವೆ ಎಂದು ಹೇಳಿದ ಅವರು, ಮಹಾರಾಷ್ಟ್ರ ರಾಜ್ಯದಿಂದ ಹೂಡಿಕೆಗಳು ಬೇರೆ ರಾಜ್ಯಗಳಿಗೆ ಹೋಗುತ್ತಿವೆ ಎನ್ನುವ ಆರೋಪವನ್ನು ತಳ್ಳಿಹಾಕಿದ್ದಾರೆ.
ಇದನ್ನೂ ಓದಿ: ಮೋದಿ ನಾಯಕತ್ವದಲ್ಲಿ ಹೊಸ ವಿಶ್ವ ಶ್ರೇಣಿಯಲ್ಲಿ ಭಾರತಕ್ಕೆ ವಿಶೇಷ ಸ್ಥಾನಮಾನ: ಟಿವಿ9 ನೆಟ್ವರ್ಕ್ ಸಿಇಒ ಬರುಣ್ ದಾಸ್
‘ಡಾವೋಸ್ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗದಲ್ಲಿ ಹೂಡಿಕೆಗಾಗಿ ಆರು ರಾಜ್ಯಗಳು ಸ್ಪರ್ಧೆ ಮಾಡಿದ್ದವು. ಈ ಪೈಕಿ ಮಹಾರಾಷ್ಟ್ರ ರಾಜ್ಯವೊಂದೇ 16 ಲಕ್ಷ ಕೋಟಿ ರೂ ಹೂಡಿಕೆ ಗಿಟ್ಟಿಸಿತು. ಬೇರೆ ರಾಜ್ಯಗಳಿಗೆ ಒಂದು ಲಕ್ಷ ಕೋಟಿ ರೂ ಹೂಡಿಕೆಯೂ ಸಿಗಲಿಲ್ಲ. 2023, 2024 ಮತ್ತು ಈಗ 2025ರಲ್ಲಿ ಮಹಾರಾಷ್ಟ್ರ ರಾಜ್ಯಕ್ಕೆ ಅತಿಹೆಚ್ಚು ವಿದೇಶೀ ಹೂಡಿಕೆಗಳು ಬಂದಿವೆ ಎಂದು ಆರ್ಬಿಐ ದತ್ತಾಂಶ ಹೇಳುತ್ತಿದೆ. ನಾವು ಮೊದಲ ಸ್ಥಾನದಲ್ಲಿ ಹಿಂದೆ ಇದ್ದೆವು. ಈಗಲೂ ಇದ್ದೇವೆ. ಮುಂದೆಯೂ ಅಗ್ರಜರಾಗಿಯೇ ಇರುತ್ತೇವೆ’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಹೂಡಿಕೆದಾರರಿಗೆ ಭರವಸೆ ಮೂಡಿಸುವಂತೆ ಪ್ರಬಲ ಕಾನೂನು ವ್ಯವಸ್ಥೆ ಇದೆ. ಹೂಡಿಕೆದಾರರಿಗೆ ತೊಂದರೆ ಕೊಡುವವರ ವಿರುದ್ಧ ಸರ್ಕಾರ ಎಂಕೋಕಾ ಕಾಯ್ದೆ ಅಡಿ ಕ್ರಮ ತೆಗೆದುಕೊಳ್ಳುತ್ತದೆ ಎಂದೂ ಸಿಎಂ ತಿಳಿಸಿದ್ದಾರೆ.
ಇದನ್ನೂ ಓದಿ: ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್ 2025, ಕಾರ್ಯಕ್ರಮ ಲೈವ್ ವೀಕ್ಷಿಸಿ
ಮಹಾರಾಷ್ಟ್ರ ರಾಜ್ಯದಲ್ಲಿ ಇನ್ಫ್ರಾಸ್ಟ್ರಕ್ಚರ್ ಅಭಿವೃದ್ಧಿ ಬಹಳ ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವುದನ್ನು ಅವರು ವಿವರಿಸಿದ್ದಾರೆ. ವಿಮಾನ ನಿಲ್ದಾಣಗಳು, ಬಂದರುಗಳು, ಹೆದ್ದಾರಿ ಇತ್ಯಾದಿ ಮೂಲಸೌಕರ್ಯಗಳ ನಿರ್ಮಾಣದಿಂದ ರಾಜ್ಯದ ಬೆಳವಣಿಗೆಗೆ ಹೇಗೆ ಪುಷ್ಟಿ ಸಿಗಲಿದೆ ಎನ್ನುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:07 pm, Wed, 5 March 25