
ಭಾರತೀಯರು, ಅದರಲ್ಲೂ ಮಹಿಳೆಯರು ತಮ್ಮ ಸೇವಿಂಗ್ಸ್ ಹಣದಲ್ಲಿ ಒಡವೆಗಳನ್ನು (gold jewelleries) ಖರೀದಿಸಲು ಆದ್ಯತೆ ನೀಡುತ್ತಾರೆ. ಸಾಲು ಸಾಲಾಗಿ ಚೀಟಿಗಳನ್ನು ಕಟ್ಟುತ್ತಾ ಒಡವೆಗಳನ್ನು ಮಾಡಿಸುತ್ತಾರೆ. ಕಷ್ಟಕಾಲಕ್ಕೆ ಚಿನ್ನ ಆಗುತ್ತೆ ಎನ್ನುವ ಆಶಯ. ಅದು ಒಂದು ರೀತಿಯಲ್ಲಿ ನಿಜ. ಸುಲಭ ಸಾಲಕ್ಕೆ ಒಡವೆಗಳು ನೆರವಾಗುತ್ತವೆ. ಆದರೆ, ಹೂಡಿಕೆಗೆಂದು ಒಡವೆ ಖರೀದಿಸುವುದು ಮಾತ್ರ ತಪ್ಪು ನಿರ್ಧಾರ.
ಚಿನ್ನದ ಆಭರಣಗಳು 22 ಕ್ಯಾರಟ್ ಹಾಗೂ ಅದಕ್ಕೂ ಕಡಿಮೆ ಮಟ್ಟದ್ದಾಗಿರುತ್ತವೆ. ಅದರ ಚಿನ್ನದ ಶುದ್ಧತೆ ಶೇ. 91.6 ಹಾಗೂ ಕಡಿಮೆಯದ್ದಿರುತ್ತದೆ. ಮೇಕಿಂಗ್ ಚಾರ್ಜಸ್, ಜಿಎಸ್ಟಿ ಇತ್ಯಾದಿಗಳು ಅದರ ಬೆಲೆಯನ್ನು ಉಬ್ಬಿಸುತ್ತವೆ.
ಇದನ್ನೂ ಓದಿ: ಗೋಲ್ಡ್ ಬಾಂಡ್ ಸ್ಕೀಮ್ನಲ್ಲಿ ಹಣ ಹಾಕಿದವರಿಗೆ ಭರ್ಜರಿ ಲಾಭ; ಎಸ್ಜಿಬಿ 2019-20 ಸರಣಿಯ ಪ್ರೀಮೆಚ್ಯೂರ್ ರಿಡೆಂಪ್ಷನ್ ಘೋಷಣೆ
ನೀವು ಮಾರುವಾಗ ಮತ್ತೆ ಜಿಎಸ್ಟಿ ಕಟ್ಟಬೇಕು. ವೇಸ್ಟೇಜ್ಗಳನ್ನು ಕಳೆಯುತ್ತಾರೆ. ಶುದ್ಧ ಚಿನ್ನಕ್ಕೆ ಮಾತ್ರ ಬೆಲೆ ಸಿಗುತ್ತದೆ. ನೀವು ಖರೀದಿಸುವ ಬೆಲೆಗಿಂತಲೂ ಮಾರುವ ಬೆಲೆ ಬಹಳ ಅಂತರ ಇರುತ್ತದೆ. ಕೆಲ ಆಭರಣದಂಗಡಿಗಳು ಶೇ. 60ರಷ್ಟು ಬೆಲೆಗೆ ಮಾತ್ರ ಒಡವೆಗಳನ್ನು ಕೊಳ್ಳುವುದುಂಟು.
ನೀವು ಹೂಡಿಕೆಗೆಂದು ಒಡವೆಗಳನ್ನು ಖರೀದಿಸುತ್ತಿದ್ದರೆ, ನಿಮ್ಮ ಬಂಡವಾಳ ಪೂರ್ಣ ವಾಪಸ್ ಬರಲು ಐದಾರು ವರ್ಷವೇ ಆದೀತು.
ಚಿನ್ನದ ಆಭರಣಗಳು ಅಗತ್ಯ ಇದ್ದರೆ ಮಾತ್ರ ಖರೀದಿಸುವುದು ಉತ್ತಮ. ನೆಕ್ಲೇಸ್, ಕಿವಿಯೋಲೆ ಇತ್ಯಾದಿ ಸೌಂದರ್ಯವರ್ಧಕವಾಗಿ ಚಿನ್ನಾಭರಣಗಳನ್ನು ಖರೀದಿಸಬಹುದು. ಅದೂ ನೀವು ನಿಯಮಿತವಾಗಿ ಬಳಸುವಂತಿದ್ದರೆ ಮಾತ್ರ. ಪ್ರತಿಷ್ಠೆಗಾಗಿ ಆಭರಣ ಖರೀದಿಸುವುದು ವ್ಯರ್ಥ ಹೂಡಿಕೆ ಎನ್ನುತ್ತಾರೆ ತಜ್ಞರು.
ಇದನ್ನೂ ಓದಿ: ಗೋಲ್ಡ್ ಇಟಿಎಫ್ಗಳ ಮೇಲೆ ಹಣದ ಹೊಳೆ; ಭರಪೂರ ಲಾಭ ತರುವ ಇದರ ಮೇಲೆ ಹೂಡಿಕೆ ಹೇಗೆ?
ಚಿನ್ನದ ಮೇಲೆ ಹೂಡಿಕೆ ಮಾಡಲು ಕೆಲ ಪ್ರಮುಖ ಮಾರ್ಗಗಳಿವೆ. 24 ಕ್ಯಾರಟ್ ಚಿನ್ನದ ಮೇಲೆ ಹೂಡಿಕೆ ಮಾಡಬೇಕು. ಚಿನ್ನದ ನಾಣ್ಯ, ಗಟ್ಟಿ ಇತ್ಯಾದಿಗಳನ್ನು ಖರೀದಿಸಬಹುದು. ಭೌತಿಕ ಚಿನ್ನ ಇಟ್ಟುಕೊಳ್ಳುವುದು ಅಪಾಯಕಾರಿ ಎಂದನಿಸಿದಲ್ಲಿ ಡಿಜಿಟಲ್ ರೂಪದಲ್ಲಿ ಚಿನ್ನ ಖರೀದಿಸಬಹುದು. ಪೇಟಿಎಂ, ಫೋನ್ ಪೇ ಇತ್ಯಾದಿ ಪ್ಲಾಟ್ಫಾರ್ಮ್ಗಳು ಡಿಜಿಟಲ್ ಗೋಲ್ಡ್ನಲ್ಲಿ ಹೂಡಿಕೆಗೆ ಅವಕಾಶ ಕೊಡುತ್ತವೆ.
ಇದಲ್ಲದೇ, ಗೋಲ್ಡ್ ಇಟಿಎಫ್ ಮತ್ತು ಗೋಲ್ಡ್ ಮ್ಯೂಚುವಲ್ ಫಂಡ್ಗಳಲ್ಲೂ ಹೂಡಿಕೆ ಮಾಡಬಹುದು. ಇವು ಭೌತಿಕ ಚಿನ್ನ ಪಡೆಯಲು ಅವಕಾಶ ಕೊಡುವುದಿಲ್ಲ. ಬದಲಾಗಿ, ಚಿನ್ನದ ಬೆಲೆಗೆ ಅನುಗುಣವಾಗಿ ರಿಟರ್ನ್ಸ್ ಅಥವಾ ಲಾಭ ತಂದುಕೊಡುತ್ತವೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ