ಗೋಲ್ಡ್ ಇಟಿಎಫ್​ಗಳ ಮೇಲೆ ಹಣದ ಹೊಳೆ; ಭರಪೂರ ಲಾಭ ತರುವ ಇದರ ಮೇಲೆ ಹೂಡಿಕೆ ಹೇಗೆ?

Gold ETF investments explainer: ಗೋಲ್ಡ್ ಇಟಿಎಫ್​ಗಳ ಮೇಲೆ ದಿನೇ ದಿನೇ ಹೂಡಿಕೆಗಳು ಹೆಚ್ಚುತ್ತಲೇ ಇವೆ. ಭಾರತದಲ್ಲಿ ಕಳೆದ ನಾಲ್ಕು ತಿಂಗಳು ಸತತವಾಗಿ ಹೂಡಿಕೆ ಹೆಚ್ಚಿದೆ. ಗೋಲ್ಡ್ ಇಟಿಎಫ್ ಎಂದರೇನು? ಸಾಂಪ್ರದಾಯಿಕ ಚಿನ್ನ, ಡಿಜಿಟಲ್ ಚಿನ್ನಕ್ಕಿಂತ ಇದು ಹೇಗೆ ಭಿನ್ನ? ಗೋಲ್ಡ್ ಇಟಿಎಫ್ ಮೇಲೆ ಹೂಡಿಕೆ ಮಾಡಲು ಅರ್ಹತೆ ಏನು, ವಿಧಾನವೇನು? ಇತ್ಯಾದಿ ಮಾಹಿತಿ ಈ ಲೇಖನದಲ್ಲಿದೆ.

ಗೋಲ್ಡ್ ಇಟಿಎಫ್​ಗಳ ಮೇಲೆ ಹಣದ ಹೊಳೆ; ಭರಪೂರ ಲಾಭ ತರುವ ಇದರ ಮೇಲೆ ಹೂಡಿಕೆ ಹೇಗೆ?
ಗೋಲ್ಡ್ ಇಟಿಎಫ್

Updated on: Sep 08, 2025 | 12:23 PM

ವಿಶ್ವಾದ್ಯಂತ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಹೊಸ ಹೊಸದಾಗಿ ಸಾರ್ವಕಾಲಿಕ ದಾಖಲೆಗಳನ್ನು ಬರೆಯುತ್ತಲೇ ಇವೆ. ಸಾಕಷ್ಟು ಹೂಡಿಕೆದಾರರು ಚಿನ್ನದ ಖರೀದಿಗೆ ಮುಗಿಬಿದ್ದಿದ್ದಾರೆ. ಅದರಲ್ಲೂ ಗೋಲ್ಡ್ ಇಟಿಎಫ್​ಗಳ (Gold ETF) ಮೇಲೆ ಭರಪೂರ ಹೂಡಿಕೆ ಆಗುತ್ತಿದೆ. ಭಾರತದಲ್ಲಿ ಕಳೆದ ನಾಲ್ಕು ತಿಂಗಳಿಂದ ಸತತವಾಗಿ ಗೋಲ್ಡ್ ಇಟಿಎಫ್​ಗಳ ಮೇಲೆ ಹೂಡಿಕೆ ಹೆಚ್ಚುತ್ತಿದೆ. ಷೇರುಗಳಿಗಿಂತ ಗೋಲ್ಡ್ ಇಟಿಎಫ್​ಗಳು ಹೆಚ್ಚು ರಿಟರ್ನ್ಸ್ ತಂದುಕೊಡುತ್ತಿವೆ.

ಏನಿದು ಗೋಲ್ಡ್ ಇಟಿಎಫ್?

ಇಟಿಎಫ್ ಎಂದರೆ ಎಕ್ಸ್​ಚೇಂಜ್ ಟ್ರೇಡೆಡ್ ಫಂಡ್. ಒಂದು ರೀತಿಯ ಮ್ಯೂಚುವಲ್ ಫಂಡ್. ಇದು ನಿರ್ದಿಷ್ಟ ಷೇರು ಇಂಡೆಕ್ಸ್, ಚಿನ್ನ, ಬೆಳ್ಳಿ ಇತ್ಯಾದಿ ವಸ್ತುಗಳ ಮೇಲೆ ಹೂಡಿಕೆ ಮಾಡುವ ಫಂಡ್. ಗೋಲ್ಡ್ ಇಟಿಎಫ್ ಫಂಡ್​ಗಳು ಚಿನ್ನದ ಮೇಲೆ ಹೂಡಿಕೆ ಮಾಡುತ್ತವೆ. ಮ್ಯೂಚುವಲ್ ಫಂಡ್​ಗಳಿಗೆ ಹೋಲಿಸಿದರೆ ಇಟಿಎಫ್​ಗಳ ಎಕ್ಸ್​ಪೆನ್ಸ್ ರೇಶಿಯೋ ಬಹಳ ಕಡಿಮೆ. ಅಂದರೆ, ಹೂಡಿಕೆಗೆ ಹೆಚ್ಚು ಶುಲ್ಕ ಇರುವುದಿಲ್ಲ. ಹೀಗಾಗಿ, ಇಟಿಎಫ್​ಗಳು ಬಹಳ ಜನಪ್ರಿಯವಾಗಿವೆ.

ಗೋಲ್ಡ್ ಇಟಿಎಫ್​ಗಳಲ್ಲಿ ಹೇಗೆ ಹೂಡಿಕೆ ಮಾಡುವುದು?

ಇಟಿಎಫ್​ಗಳು ಷೇರು ವಿನಿಮಯ ಕೇಂದ್ರಗಳಲ್ಲಿ ವಹಿವಾಟು ಆಗುತ್ತವೆ. ಹೀಗಾಗಿ, ಇಟಿಎಫ್​ಗಳಲ್ಲಿ ಹೂಡಿಕೆ ಮಾಡಬೇಕೆಂದರೆ ಬ್ರೋಕರೇಜ್ ಸಂಸ್ಥೆಗಳಲ್ಲಿ ಡೀಮ್ಯಾಟ್ ಮತ್ತು ಟ್ರೇಡಿಂಟ್ ಅಕೌಂಟ್ ತೆರೆಯಬೇಕು.

ಇದನ್ನೂ ಓದಿ: ಷೇರು vs ಚಿನ್ನ vs ರಿಯಲ್ ಎಸ್ಟೇಟ್; ಕಳೆದ 20 ವರ್ಷದಲ್ಲಿ ಯಾವುದರಿಂದ ಸಿಕ್ಕಿದೆ ಹೆಚ್ಚು ಲಾಭ? ಇಲ್ಲಿದೆ ಡೀಟೇಲ್ಸ್

ಗೋಲ್ಡ್ ಇಟಿಎಫ್ ಹೂಡಿಕೆ ಸೇವೆ ನೀಡುವ ಹಲವು ಫಂಡ್​ಗಳಿವೆ. ಸ್ಟಾಕ್ ಎಕ್ಸ್​ಚೇಂಜ್ ಕಾರ್ಯಾವಧಿಯಲ್ಲಿ ಬ್ರೋಕರೇಜ್ ಪ್ಲಾಟ್​ಫಾರ್ಮ್ ತೆರೆದು, ಯಾವುದಾದರೂ ಗೋಲ್ಡ್ ಇಟಿಎಫ್ ಫಂಡ್ ಅನ್ನು ಆಯ್ದುಕೊಳ್ಳಿ. ನಿಮಗೆ ಬೇಕಷ್ಟು ಯೂನಿಟ್​ಗಳನ್ನು ಖರೀದಿಸಬಹುದು. ಒಂದು ಯುನಿಟ್ ಎಂದರೆ ಒಂದು ಗ್ರಾಮ್ ಚಿನ್ನ.

ನೀವು ನಿರ್ದಿಷ್ಟ ಮೊತ್ತದ ಹಣವನ್ನು ಗೋಲ್ಡ್ ಇಟಿಎಫ್​ನಲ್ಲಿ ಹೂಡಿಕೆ ಮಾಡಿದಾಗ, ಆ ಫಂಡ್ ಸಂಸ್ಥೆಯು ಅಷ್ಟು ಮೊತ್ತಕ್ಕೆ ಭೌತಿಕ ಚಿನ್ನವನ್ನು ಖರೀದಿಸಿ ಇಟ್ಟುಕೊಳ್ಳುತ್ತದೆ. ನೀವು ಹೂಡಿಕೆ ಹಿಂಪಡೆದಾಗ, ಅದು ಅಷ್ಟು ಚಿನ್ನವನ್ನು ಮಾರಿ ನಿಮಗೆ ಹಣ ವಾಪಸ್ ಕೊಡುತ್ತದೆ.

ಗೋಲ್ಡ್ ಇಟಿಎಫ್ ಅನುಕೂಲವೇನು?

ಭೌತಿಕ ಚಿನ್ನವಾಗಲೀ, ಡಿಜಿಟಲ್ ಗೋಲ್ಡ್ ಆಗಲೀ ನೀವು ಖರೀದಿಸಿದಾಗ ಜಿಎಸ್​ಟಿ ಅಥವಾ ಮೇಕಿಂಗ್ ಚಾರ್ಜ್ ಇತ್ಯಾದಿ ಪಾವತಿಸುತ್ತೀರಿ. ಆದರೆ, ಗೋಲ್ಡ್ ಇಟಿಎಫ್​ನಲ್ಲಿ ಎಕ್ಸ್​ಪೆನ್ಸ್ ರೇಶಿಯೋ ಬಿಟ್ಟರೆ ಬೇರೆ ವೆಚ್ಚ ಇರುವುದಿಲ್ಲ. ನೀವು ಯಾವಾಗ ಬೇಕಾದರೂ ಅದನ್ನು ಮಾರಿ ಹಣ ಪಡೆಯಬಹುದು. ಅಂದರೆ, ಷೇರು ವಿನಿಮಯ ಕೇಂದ್ರಗಳು ತೆರೆದಿರುವ ದಿನಗಳಲ್ಲಿ ಷೇರುಗಳ ರೀತಿ ಟ್ರೇಡಿಂಗ್ ಅವಧಿಯಲ್ಲಿ ಗೋಲ್ಡ್ ಇಟಿಎಫ್​ಗಳ ಖರೀದಿ, ಮಾರಾಟ ಮಾಡಲು ಅವಕಾಶ ಇದೆ.

ಇದನ್ನೂ ಓದಿ: ವಿವಿಧ ವಯಸ್ಸಲ್ಲಿ ಎಷ್ಟೆಷ್ಟು ಸೇವಿಂಗ್ಸ್ ಮಾಡಬೇಕು? ರಾಧಿಕಾ ಗುಪ್ತಾ 10-30-50 ನಿಯಮ

ಗೋಲ್ಡ್ ಇಟಿಎಫ್​ನ ಅನನುಕೂಲಗಳು

ನೀವು ಟ್ರೇಡಿಂಗ್ ಅವಧಿಯಲ್ಲಿ ಮಾತ್ರವೇ ಹೂಡಿಕೆ ಮಾಡಲು ಮತ್ತು ಮಾರಲು ಅವಕಾಶ ಇರುತ್ತದೆ. ಡಿಜಿಟಲ್ ಗೋಲ್ಡ್​ನಲ್ಲಿ ನೀವು ಯಾವಾಗ ಬೇಕಾದರೂ ವಹಿವಾಟು ನಡೆಸಬಹುದು.

ಗೋಲ್ಡ್ ಇಟಿಎಫ್​ನಲ್ಲಿ ಮತ್ತೊಂದು ಅನನುಕೂಲ ಎಂದರೆ ಹೂಡಿಕೆಯನ್ನು ಭೌತಿಕ ಚಿನ್ನವಾಗಿ ಪರಿವರ್ತಿಸಲು ಆಗುವುದಿಲ್ಲ. ನಿಮ್ಮ ಹೂಡಿಕೆ ತರುವ ಲಾಭವನ್ನು ಹಣದ ರೂಪದಲ್ಲೇ ಪಡೆಯಬೇಕು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:20 pm, Mon, 8 September 25