ಭಾರತೀಯ ರಿಸರ್ವ್ ಬ್ಯಾಂಕ್ ಸತತ ಐದು ಬಾರಿ ರೆಪೋ ದರಗಳನ್ನು (RBI Repo Rate) ಏರಿಸಿದ ಬಳಿಕ ಬ್ಯಾಂಕುಗಳೂ ತಮ್ಮ ವಿವಿಧ ಬಡ್ಡಿದರಗಳನ್ನು ಹೆಚ್ಚಿಸುತ್ತಾ ಬಂದಿವೆ. ಇದರಲ್ಲಿ ಠೇವಣಿಗಳು ಮತ್ತು ಸಾಲಗಳ ಬಡ್ಡಿ ಏರಿಕೆ ಆಗಿದೆ. ನಿಶ್ಚಿತ ಠೇವಣಿಗಳ ಮೇಲೆ ನೀಡುವ ಬಡ್ಡಿ ದರ ಆಕರ್ಷಕ ಎನಿಸುವಷ್ಟು ರೀತಿಯಲ್ಲಿ ಬ್ಯಾಂಕುಗಳು ಏರಿಕೆಯ ಪೈಪೋಟಿ ನೀಡುತ್ತಿವೆ. ಆರ್ಬಿಐನ ರೆಪೋ ದರ ಶೇ. 6.5 ಇದ್ದರೆ ಕೆಲ ಬ್ಯಾಂಕುಗಳು ಎಫ್ಡಿ ದರಗಳನ್ನು ಶೇ. 8ರವರೆಗೆ ಆಫರ್ ಮಾಡುತ್ತಿವೆ. ಇಲ್ಲಿ ಆರ್ಬಿಐನ ರೆಪೋ ದರ ಎಂದರೆ, ಕಮರ್ಷಿಯಲ್ ಬ್ಯಾಂಕುಗಳಿಗೆ ಆರ್ಬಿಐ ನೀಡುವ ಸಾಲಕ್ಕೆ ವಿಧಿಸಲಾಗುವ ಬಡ್ಡಿ ದರ ಆಗಿದೆ. ಈ ದರವು ಬ್ಯಾಂಕುಗಳಿಗೆ ಒಂದು ರೀತಿಯ ದರಸೂಚಿಯಾಗಿರುತ್ತದೆ. ಕಡ್ಡಾಯ ಎಂಬ ನಿಯಮ ಇಲ್ಲದಿದ್ದರೂ ಬ್ಯಾಂಕುಗಳು ಸಾಮಾನ್ಯವಾಗಿ ರೆಪೋ ದರಕ್ಕೆ ಅನುಗುಣವಾಗಿ ಬಡ್ಡಿ ದರ ಪರಿಷ್ಕರಿಸುತ್ತವೆ. ಹೀಗಾಗಿ, ಬಹುತೇಕ ಬ್ಯಾಂಕುಗಳು ಎಫ್ಡಿ (Fixed Deposits) ಮೇಲಿನ ಬಡ್ಡಿ ದರಗಳನ್ನು ಹೆಚ್ಚಿಸಿವೆ.
ದೇಶದ ಪ್ರಮುಖ ಬ್ಯಾಂಕುಗಳಾದ ಐಸಿಐಸಿಐ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್ಡಿಎಫ್ಸಿ ಬ್ಯಾಂಕ್ ಮತ್ತು ಆ್ಯಕ್ಸಿಸ್ ಬ್ಯಾಂಕುಗಳಲ್ಲಿ ನಿಶ್ಚಿತ ಠೇವಣಿ ದರಗಳು ಎಷ್ಟಿವೆ? ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ಖಾಸಗಿ ಬ್ಯಾಂಕ್ ಅದ ಎಚ್ಡಿಎಫ್ಸಿಯಲ್ಲಿ ನಿಶ್ಚಿತ ಠೇವಣಿಗಳಿಗೆ ಶೇ. 7.1ರವರೆಗೆ ಬಡ್ಡಿ ದರ ಸಿಗುತ್ತದೆ. ಹಿರಿಯ ನಾಗರಿಕರಿಗೆ ಶೇ. 7.6ರವರೆಗೆ ಬಡ್ಡಿ ದರ ಕೊಡಲಾಗುತ್ತಿದೆ. ಇಲ್ಲಿ ಠೇವಣಿಗಳು 7ದಿನಗಳಿಂದ ಆರಂಭವಾಗಿ 10 ವರ್ಷದ ಅವಧಿಯವರೆಗೂ ಇವೆ. ಫೆಬ್ರುವರಿ 21ರಿಂದ ಈ ಎಫ್ಡಿ ದರ ಜಾರಿಯಲ್ಲಿದೆ.
ಇದನ್ನೂ ಓದಿ: ಆಪದ್ಬಾಂಧವ ಚಿನ್ನದ ಮೇಲೆ ಸಾಲ ಪಡೆಯಬೇಕಾ? ಹಾಗಾದರೆ ಕಡಿಮೆ ಬಡ್ಡಿಗೆ ಸಾಲ ನೀಡುವ ಬ್ಯಾಂಕ್‌ಗಳು ಯಾವುವು?
2023 ಜನವರಿಯಿಂದ ಮಾರ್ಚ್ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಸಾಲ ಮತ್ತು ಠೇವಣಿಗಳಿಂದ ಭರ್ಜರಿ ಆದಾಯ ಗಳಿಸಿದ್ದ ಆ್ಯಕ್ಸಿಸ್ ಬ್ಯಾಂಕ್ನಲ್ಲಿ ನಿಶ್ಚಿತ ಠೇವಣಿಗಳ ಮೇಲೆ ಬಡ್ಡಿ ದರ ಆಕರ್ಷಕ ಪ್ರಮಾಣದಲ್ಲಿದೆ. ಸಾರ್ವಜನಿಕರಿಗೆ ಬಡ್ಡಿ ದರ ಶೇ. 3.50ರಿಂದ ಆರಂಭವಾಗಿ ಶೇ. 7.20ರವರೆಗೂ ಇದೆ. ಹಿರಿಯ ನಾಗರಿಕರಿಗೆ ಶೇ. 7.95ರವರೆಗೆ ಬಡ್ಡಿ ಕೊಡಲಾಗುತ್ತದೆ.
ಸರ್ಕಾರಿ ಸ್ವಾಮ್ಯದ ಐಸಿಐಸಿಐ ಬ್ಯಾಂಕ್ನಲ್ಲಿ ಸಾರ್ವಜನಿಕರ ಎಫ್ಡಿ ಠೇವಣಿಗಳಿಗೆ ಶೇ. 3ರಿಂದ ಶೇ. 7.10ರಷ್ಟು ಬಡ್ಡಿ ಕೊಡಲಾಗುತ್ತದೆ. 60 ವರ್ಷ ಮೇಲ್ಪಟ್ಟ ವಯಸ್ಸಿನ ಮಂದಿಗೆ ಶೇ. 3.50ರಿಂದ ಶೇ. 7.60ರಷ್ಟು ಬಡ್ಡಿ ಕೊಡಲಾಗುತ್ತದೆ.
ಭಾರತದ ನಂಬರ್ ಒನ್ ಬ್ಯಾಂಕ್ ಎನಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲೂ ಉತ್ತಮ ಎಫ್ಡಿ ದರಗಳಿವೆ. ಸಾರ್ವಜನಿಕರಿಗೆ ನೀಡಲಾಗುವ ಎಫ್ಡಿ ದರ ಶೇ. 3ರಿಂದ ಶೇ. 7.10ರಷ್ಟಿದೆ. ಹಿರಿಯ ನಾಗರಿಕರಿಗೆ ಶೇ. 7.60ರವರೆಗೆ ಬಡ್ಡಿ ಸಿಗುತ್ತದೆ.
ಗರಿಷ್ಠ ಬಡ್ಡಿ ದರವು ಕೆಲ ನಿರ್ದಿಷ್ಟ ಅವಧಿಯ ಠೇವಣಿಗಳಿಗೆ ಮಾತ್ರ ಅನ್ವಯ ಆಗುತ್ತದೆ. ಎಸ್ಬಿಐನ ಅಮೃತ್ ಕಳಶ್ ಎಫ್ಡಿ ಯೋಜನೆಯಲ್ಲಿ ಹಿರಿಯ ನಾಗರಿಕರ 400 ದಿನಗಳ ಠೇವಣಿಗೆ ಗರಿಷ್ಠ ಬಡ್ಡಿ ದರ ಸಿಗುತ್ತದೆ. ಬಹುತೇಕ ಬ್ಯಾಂಕುಗಳಲ್ಲಿ 1-2 ವರ್ಷ ಅವಧಿಯ ಠೇವಣಿಗಳಿಗೆ ಗರಿಷ್ಠ ಬಡ್ಡಿ ಸಿಗುತ್ತದೆ. ಈ ಮೇಲಿನ ನಾಲ್ಕು ಪ್ರಮುಖ ಬ್ಯಾಂಕುಗಳಲ್ಲಿ ಆ್ಯಕ್ಸಿಸ್ ಬ್ಯಾಂಕ್ನಲ್ಲಿ ಅತಿಹೆಚ್ಚು ಬಡ್ಡಿ ಸಿಗುತ್ತದೆ.