ಜೀವನದ ಭದ್ರತೆಗೆ (Life security) ಹಣ ಗಳಿಸುವುದು ಅಗತ್ಯ. ಅದೇ ರೀತಿ ಗಳಿಸಿದ ಹಣವನ್ನು ಉಳಿಸಿಕೊಳ್ಳುವುದೂ ಮುಖ್ಯ. ನಮಗೆ ಪ್ರಮುಖವಾಗಿರುವ ಹಣದ ವಿಚಾರದಲ್ಲಿ ಈ ವರ್ಷ ಕೆಲ ಪ್ರಮುಖ ಬದಲಾವಣೆಗಳು ಬಂದಿವೆ, ಬರುತ್ತಿವೆ. ಈ ಕೆಲ ಬದಲಾವಣೆಗಳು (Financial rules changes in 2023) ನಮ್ಮಲ್ಲಿ ಯಾರಿಗಾದರೂ ಒಂದಷ್ಟು ಪರಿಣಾಮ ಬೀರುವಂಥದ್ದೇ. ಬ್ಯಾಂಕ್ ಲಾಕರ್ ನಿಯಮ, ಎನ್ಪಿಎಸ್ ಹಣ ಹಿಂಪಡೆಯುವಿಕೆ, ಬ್ಯಾಂಕ್ ಪಾಸ್ಬುಕ್, ಟ್ಯಾಕ್ಸ್ ಡಿಕ್ಲೆರೇಶನ್, ಇನ್ಷೂರೆನ್ಸ್ ಕೆವೈಸಿ ಇವೇ ಮೊದಲಾದ ನಿಯಮಗಳಲ್ಲಿ ಬದಲಾವಣೆಗಳಾಗಿವೆ. 2023 ಜನವರಿಯಿಂದ ಹೊಸ ನಿಯಮಗಳು ಜಾರಿಗೆ ಬಂದಿವೆ. ಅವುಗಳ ವಿವರ ಇಲ್ಲಿದೆ.
ನಾವು ಕಂಪನಿಗಳಲ್ಲಿ ನೌಕರಿಯಲ್ಲಿದ್ದರೆ ಸಾಮಾನ್ಯವಾಗಿ ಜನವರಿಯಲ್ಲಿ ಟ್ಯಾಕ್ಸ್ ಡಿಕ್ಲೆರೇಶನ್ ಸಲ್ಲಿಸುವಂತೆ ಸೂಚಿಸಲಾಗುತ್ತದೆ. ಫೆಬ್ರವರಿ ಅಥವಾ ಮಾರ್ಚ್ ತಿಂಗಳವರೆಗೂ ತೆರಿಗೆ ಘೋಷಣೆಗೆ ಗಡುವು ಕೊಡಲಾಗುತ್ತದೆ. ಮನೆ ಬಾಡಿಗೆ, ಇನ್ಷೂರೆನ್ಸ್ ಪಾಲಿಸಿ, ಹೂಡಿಕೆ, ಸಾಲ ಇತ್ಯಾದಿ ಬಗ್ಗೆ ಟ್ಯಾಕ್ಸ್ ಡಿಕ್ಲರೇಶನ್ ನಲ್ಲಿ ನಾವು ನಮೂದಿಸಬೇಕಾಗುತ್ತದೆ. ಸಂಬಳದಲ್ಲಿ ನೇರವಾಗಿ ತೆರಿಗೆ ಕಡಿತ ಮಾಡಿಕೊಳ್ಳುವುದನ್ನು ತಪ್ಪಿಸಲು ಇದು ಬಹಳ ಅವಶ್ಯಕ. ಮೇಲಿನ ಹೂಡಿಕೆಗಳಿಗೆ ನಾವು ಮಾಡುವ ವೆಚ್ಚಕ್ಕೆ ತೆರಿಗೆ ವಿನಾಯಿತಿ ಇರುತ್ತದೆ. ಒಂದು ವೇಳೆ ನಾವು ಟ್ಯಾಕ್ಸ್ ಡಿಕ್ಲೆರೇಶನ್ ಮಾಡದಿದ್ದರೆ ಸಂಬಳದಲ್ಲಿ ಹೆಚ್ಚು ಟಿಡಿಎಸ್ ಮುರಿದುಕೊಳ್ಳಲಾಗುತ್ತದೆ. ಒಂದು ವೇಳೆ ಟ್ಯಾಕ್ಸ್ ಡಿಕ್ಲೆರೇಶನ್ ಮಾಡಲು ವಿಫಲವಾಗಿ ಹೆಚ್ಚು ತೆರಿಗೆ ಕಡಿತಗೊಂಡರೂ ಐಟಿ ರಿಟರ್ನ್ ಫೈಲ್ ಮಾಡುವಾಗ ಟ್ಯಾಕ್ಸ್ ಡಿಕ್ಲೆರೇಶನ್ ಮಾಡಿ ಆ ಹಣವನ್ನು ಮರಳಿ ಕ್ಲೈಮ್ ಮಾಡಲು ಸಾಧ್ಯ ಎಂಬುದು ಬೇರೆ ವಿಚಾರ.
ಇನ್ಷೂರೆನ್ಸ್ ಖರೀದಿದಾರರು ತಪ್ಪದೇ ಕೆವೈಸಿ ಪ್ರಕ್ರಿಯೆ ಪಾಲಿಸಬೇಕು ಎಂದು ಹೊಸ ನಿಯಮ ಮಾಡಲಾಗಿದೆ. ಇನ್ಷೂರೆನ್ಸ್ ನಿಯಮ ಪ್ರಾಧಿಕಾರವಾದ ಐಆರ್ಡಿಎಐ ರೂಪಿಸಿರುವ ಹೊಸ ನಿಯಮ ಜನವರಿ 1ರಿಂದಲೇ ಜಾರಿಗೆ ಬಂದಿದೆ. ಈ ನಿಯಮದ ಪ್ರಕಾರ ಆರೋಗ್ಯ ವಿಮೆ, ಪ್ರಯಾಣ ವಿಮೆ, ಕಾರು ವಿಮೆ ಪಾಲಿಗಳನ್ನು ಖರೀದಿಸುವವರು ಪಾನ್ ಕಾರ್ಡ್, ಆಧಾರ್ ಕಾರ್ಡ್, ವೋಟರ್ ಐಡಿ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾಸ್ ಪೋರ್ಟ್ ಇತ್ಯಾದಿ ಐಡಿ ಮತ್ತು ಅಡ್ರೆಸ್ ಪ್ರೂಫ್ ಗಳನ್ನು ಒದಗಿಸಬೇಕು. ಸಾಮಾನ್ಯವಾಗಿ ವಿಮಾ ಕಂಪನಿಗಳು ಈ ದಾಖಲೆಗಳನ್ನು ತಪ್ಪದೇ ಪಡೆಯುತ್ತವೆಯಾದರೂ ಪ್ರಾಧಿಕಾರ ಇದನ್ನು ಅಧಿಕೃತವಾಗಿ ಕಡ್ಡಾಯಗೊಳಿಸಿದೆ. ಈವರೆಗೂ ಇದ್ದ ನಿಯಮದ ಪ್ರಕಾರ, ಇನ್ಷೂರೆನ್ಸ್ ಹಣವನ್ನು ಕ್ಲೇಮ್ ಮಾಡುವ ಸಂದರ್ಭದಲ್ಲಿ ಮಾತ್ರ ಪಾನ್ ಮತ್ತು ಆಧಾರ್ ಕಾರ್ಡ್ ಸಲ್ಲಿಸುವುದನ್ನು ಕಡ್ಡಾಯಗೊಳಿಸಲಗಿತ್ತು. ಈಗ ವಿಮೆ ಖರೀದಿ ವೇಳೆಯೇ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು.
ಮ್ಯುಚುವಲ್ ಫಂಡ್ ಸ್ಕೀಮ್ ಗಳಲ್ಲಿ ಹೂಡಿಕೆ ಮಾಡುವಾಗ ಕೆವೈಸಿ ಪ್ರಕ್ರಿಯೆಯಲ್ಲಿ ಅಡ್ರೆಸ್ ಪ್ರೂಫ್ ಆಗಿ ಇನ್ಮುಂದೆ ಬ್ಯಾಂಕ್ ಸ್ಟೇಟ್ಮೆಂಟ್ ಆಗಲೀ ಪಾಸ್ ಬುಕ್ ಆಗಲೀ ನೀಡಲು ಬರುವುದಿಲ್ಲ. ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ನರೇಗಾ ಜಾಬ್ ಕಾರ್ಡ್, ರಾಷ್ಟ್ರೀಯ ಜನಸಂಖ್ಯೆ ನೊಂದಣಿ ದಾಖಲೆ, ಪಾಸ್ಪೋರ್ಟ್ ಪ್ರತಿಗಳನ್ನು ಅಡ್ರೆಸ್ ಪ್ರೂಫ್ ದಾಖಲೆಗಳಾಗಿ ಕೊಡಬೇಕು. ಆದರೆ, ಹಿಂದೂ ಅವಿಭಜಿತ ಕುಟುಂಬದ ಘಟಕಗಳು ಅಡ್ರೆಸ್ ಪ್ರೂಫ್ ಆಗಿ ಬ್ಯಾಂಕ್ ಪಾಸ್ಬುಕ್ ನೀಡಲು ಅಡ್ಡಿ ಇಲ್ಲ. ಇಂಥ ಘಟಕಗಳಿಗೆ ಪ್ರತ್ಯೇಕವಾಗಿ ಆಧಾರ್ ಕಾರ್ಡ್, ವೋಟರ್ ಐಡಿ ಇತ್ಯಾದಿ ಇರುವುದಿಲ್ಲ.
ರಾಷ್ಟ್ರೀಯ ಪಿಂಚಣಿ ಯೋಜನೆಗಳಲ್ಲಿ (ಎನ್ಪಿಎಸ್) ನಾವು ಹೊಂದಿರುವ ಹಣದಲ್ಲಿ ಸ್ವಲ್ಪ ಭಾಗವನ್ನು ಹಿಂಪಡೆಯಬಯಸುವ ಕೇಂದ್ರ ಸರ್ಕಾರಿ ಉದ್ಯೋಗಿಗಳು ಸಂಬಂಧಿತ ನೋಡಲ್ ಅಧಿಕಾರಿಗಳಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಮಕ್ಕಳ ಮದುವೆ, ಮಕ್ಕಳ ಉನ್ನತ ಶಿಕ್ಷಣ, ಮನೆ ನಿರ್ಮಾಣ, ಅನಾರೋಗ್ಯ ಇತ್ಯಾದಿ ನಿರ್ದಿಷ್ಟ ಕಾರಣಗಳಿದ್ದರೆ ಮಾತ್ರ ಹಣ ವಿತ್ ಡ್ರಾ ಮಾಡಲು ಸಾಧ್ಯ. ಈ ಕಾರಣಗಳಿಗೆ ಪೂರಕವಾಗಿರುವ ದಾಖಲೆಗಳನ್ನು ಅರ್ಜಿದಾರರು ಸಲ್ಲಿಸುವುದು ಅವಶ್ಯಕ.
ಈ ತಿಂಗಳು ಆಗಿರುವ ಒಂದು ಪ್ರಮುಖ ನಿಯಮ ಬದಲಾವಣೆ ಬ್ಯಾಂಕ್ ಲಾಕರ್ನದ್ದು. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಆರ್ಬಿಐ ಹೊಸ ನಿಯಮಾವಳಿಗಳನ್ನು ಮಾಡಿ ಬ್ಯಾಂಕ್ ಗಳಿಗೆ ನಿರ್ದೇಶನ ನೀಡಿದೆ. ಜನವರಿ 1ರಿಂದಲೇ ಈ ಹೊಸ ನಿಯಮ ಜಾರಿಗೆ ಬಂದಿದೆ. ಬ್ಯಾಂಕ್ಗಳು ಹೊಸ ನಿಯಮ ಅಳವಡಿಕೆಗೆ ಜನವರಿ 23ರವರೆಗೆ ಕಾಲಾವಕಾಶ ಹೊಂದಿದ್ದರೂ ಹಲವು ಬ್ಯಾಂಕುಗಳು ಈಗಾಗಲೇ ಜಾರಿಯ ಪ್ರಕ್ರಿಯೆಯಲ್ಲಿವೆ. ಗ್ರಾಹಕರೊಂದಿಗೆ ಈ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಿಸುತ್ತಿವೆ.
ಇದನ್ನೂ ಓದಿ: New Bank Locker Rules; ಬ್ಯಾಂಕ್ ಲಾಕರ್ ನಿಯಮದಲ್ಲಿ ಆರ್ಬಿಐ ಮಹತ್ವದ ಬದಲಾವಣೆ; ಇಲ್ಲಿದೆ ಮಾಹಿತಿ
ಬ್ಯಾಂಕ್ ಲಾಕರ್ನಲ್ಲಿ ಇಟ್ಟಿರುವ ಮಹತ್ವದ ವಸ್ತು ಕಳೆದುಹೋದರೆ ಆ ಗ್ರಾಹಕರಿಗೆ ಲಾಕರ್ ಬಾಡಿಕೆ ಶುಲ್ಕದ 100 ಪಟ್ಟು ಮೊತ್ತದ ಪರಿಹಾರ ನೀಡಬೇಕು. ಬ್ಯಾಂಕ್ ಲಾಕರ್ ತೆರೆದಾಗ ಆ ಬಗ್ಗೆ ಗ್ರಾಹಕರಿಗೆ ಇಮೇಲ್ ಮತ್ತು ಎಸ್ಸೆಮ್ಮೆಸ್ ಮೂಲಕ ಅಲರ್ಟ್ ಮೆಸೇಜ್ ರವಾನಿಸುವುದನ್ನು ಬ್ಯಾಂಕುಗಳಿಗೆ ಕಡ್ಡಾಯಗೊಳಿಸಲಾಗಿದೆ. ಬ್ಯಾಂಕ್ ಲಾಕರ್ ಸೇವೆ ಹೆಸರಿನಲ್ಲಿ ಬ್ಯಾಂಕುಗಳು ಗ್ರಾಹಕರಿಂದ ಬೇಕಾಬಿಟ್ಟಿ ಶುಲ್ಕ ವಸೂಲಿ ಮಾಡುವಂತಿಲ್ಲ. ಖಾಲಿ ಲಾಕರ್ಗಳು, ವೈಟಿಂಗ್ ಲಿಸ್ಟ್ನಲ್ಲಿರುವ ಲಾಕರ್ಗಳ ವಿವರವನ್ನು ಬ್ಯಾಂಕುಗಳು ಪ್ರಕಟಿಸಬೇಕು. ಲಾಕರ್ ಕೊಠಡಿಗೆ ಭೇಟಿ ನೀಡುವ ಮತ್ತು ಅಲ್ಲಿ ಉಪಸ್ಥಿತ ಇರುವ ಪ್ರತಿಯೊಬ್ಬ ವ್ಯಕ್ತಿ ಮೇಲೂ ಸಿಸಿಟಿವಿ ಮೂಲಕ ನಿಗಾ ಇರಿಸಬೇಕು, ಇವೇ ಮುಂತಾದ ಪರಿಷ್ಕೃತ ನಿಯಮಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಮಾಡಿದೆ.