ವರ್ಷದ ಹಿಂದೆ ಆರಂಭವಾದ ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್ ಯೋಜನೆ ಮಾರ್ಚ್ 31ರವರೆಗೂ ಲಭ್ಯ ಇದೆ. ಮಹಿಳೆಯರಿಗೆ ಮಾತ್ರವೇ ಇರುವ ಈ ಯೋಜನೆಯು ಫಿಕ್ಸೆಡ್ ಡೆಪಾಸಿಟ್ ರೀತಿಯ ಪ್ಲಾನ್ ಆಗಿದೆ. ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್ ಯೋಜನೆಯ ಅಡಿ ಪೋಸ್ಟ್ ಆಫೀಸ್ ಮತ್ತು ಬ್ಯಾಂಕುಗಳಲ್ಲಿ ಖಾತೆ ಆರಂಭಿಸಬಹುದು. ಶೇ. 7.5ರಷ್ಟು ವಾರ್ಷಿಕ ರಿಟರ್ನ್ ಅನ್ನು ಈ ಎಫ್ಡಿ ಪ್ಲಾನ್ನಲ್ಲಿ ಪಡೆಯಬಹುದು. ಹಣಕಾಸು ಸಚಿವಾಲಯದಿಂದ ಈ ಸ್ಕೀಮ್ ನಡೆಸಲಾಗುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಮಾಹಿತಿ ಪ್ರಕಾರ ಅಕ್ಟೋಬರ್ 10ರವರೆಗೆ ದೇಶಾದ್ಯಂತ 43 ಲಕ್ಷ ಖಾತೆಗಳನ್ನು ಈ ಸ್ಕೀಮ್ ಅಡಿ ಆರಂಭಿಸಲಾಗಿದೆಯಂತೆ.
ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್ ಯೋಜನೆಯಲ್ಲಿ ಠೇವಣಿ ಅವಧಿ ಎರಡು ವರ್ಷ ಇರಲಿದೆ. ಕನಿಷ್ಠ ಹೂಡಿಕೆ 1,000 ರೂ ಇದ್ದರೆ, ಗರಿಷ್ಠ ಹೂಡಿಕೆ 2,00,000 ರೂ ಇದೆ. ಅಂದರೆ ನೀವು ಎರಡು ಲಕ್ಷ ರೂವರೆಗೆ ಲಂಪ್ಸಮ್ ಆಗಿ ಈ ಸ್ಕೀಮ್ನಲ್ಲಿ ಠೇವಣಿ ಇಡಬಹುದು.
ಇದನ್ನೂ ಓದಿ: ಮುಂಬರುವ ಬಜೆಟ್ನಲ್ಲಿ ಮಧ್ಯಮ ವರ್ಗದವರಿಗೆ ಭರ್ಜರಿ ರಿಲೀಫ್ ಕಾದಿದೆಯಾ? ಇಲ್ಲಿದೆ ಖುಷಿ ಸುದ್ದಿ
ಈ ಠೇವಣಿ ಯೋಜನೆಗೆ ವಾರ್ಷಿಕವಾಗಿ ಶೇ. 7.5ರಷ್ಟು ಬಡ್ಡಿ ನೀಡಲಾಗುತ್ತದೆ. ಪ್ರತೀ ಮೂರು ತಿಂಗಳಿಗೊಮ್ಮೆ ಬಡ್ಡಿ ಹಣವನ್ನು ಖಾತೆಗೆ ಜಮೆ ಮಾಡಲಾಗುತ್ತದೆ. ನೀವು ಎರಡು ಲಕ್ಷ ರೂ ಹಣವನ್ನು ಠೇವಣಿ ಇರಿಸಿದರೆ, ಎರಡು ವರ್ಷಕ್ಕೆ ಮೆಚ್ಯೂರ್ ಆದಾಗ ನಿಮ್ಮ ಖಾತೆಗೆ ಸುಮಾರು 32,000 ರೂನಷ್ಟು ಹೆಚ್ಚು ಹಣ ಜಮೆ ಆಗಿರುತ್ತದೆ.
ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್ ಯೋಜನೆಯು ಮಹಿಳೆಯರಿಗೆ ಸೀಮಿತವಾಗಿದೆ. ಯಾವುದೇ ವಯಸ್ಸಿನ ಮಹಿಳೆಯರು ಅಕೌಂಟ್ ತೆರೆಯಬಹುದು. ಅಪ್ರಾಪ್ತೆಯರಾಗಿದ್ದರೆ ಅವರ ಹೆಸರಿನಲ್ಲಿ ಪಾಲಕರು ಅಕೌಂಟ್ ತೆರೆಯಬಹುದು.
ಈ ಸ್ಕೀಮ್ ವಿಶೇಷತೆ ಎಂದರೆ, ಒಬ್ಬ ವ್ಯಕ್ತಿ ಎಷ್ಟು ಬೇಕಾದರೂ ಎಂಎಸ್ಎಸ್ಸಿ ಖಾತೆಗಳನ್ನು ತೆರೆಯಬಹುದು. ಆದರೆ, ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಮೂರು ತಿಂಗಳ ಅಂತರ ಇರಬೇಕು. ಅಂದರೆ ಇವತ್ತು ಯಾರಾದರೂ ಹೂಡಿಕೆ ಮಾಡುವುದಾದರೆ, ಮಾರ್ಚ್ 31ರವರೆಗೆ ಎರಡು ಖಾತೆಗಳನ್ನು ತೆರೆಯಲು ಮಾತ್ರ ಅವಕಾಶ ಇರುತ್ತದೆ.
ಇದನ್ನೂ ಓದಿ: ಮ್ಯೂಚುವಲ್ ಫಂಡ್ನಲ್ಲಿ ಎಷ್ಟು ವಿಧ, ಹೇಗೆ ಹೂಡಿಕೆ? ಇಲ್ಲಿದೆ ಮಾಹಿತಿ
ಇಲ್ಲಿ ಅವಧಿಗೆ ಮುನ್ನ ಹಣ ವಿತ್ಡ್ರಾ ಮಾಡಲು ನಿರ್ಬಂಧಗಳಿವೆ. ಆ ರೀತಿ ಮಾಡಲು ಕನಿಷ್ಠ ಒಂದು ವರ್ಷ ಹೂಡಿಕೆ ಅವಧಿ ಇರಬೇಕು. ಆಗ ಶೇ. 40ರಷ್ಟು ಹಣವನ್ನು ವಿತ್ಡ್ರಾ ಮಾಡಲು ಅವಕಾಶ ಇರುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ