ಭಾರತದ ಹಣಕಾಸು ವರ್ಷದಲ್ಲಿ (fiscal year) ಮಾರ್ಚ್ ಮತ್ತು ಏಪ್ರಿಲ್ ಬಹಳ ಮುಖ್ಯ. ಮಾರ್ಚ್ ವರ್ಷಾಂತ್ಯದ ತಿಂಗಳಾದರೆ, ಏಪ್ರಿಲ್ ವರ್ಷಾರಂಭದ ತಿಂಗಳು. ಹೀಗಾಗಿ, ಎರಡೂ ತಿಂಗಳು ಹಣಕಾಸು ದೃಷ್ಟಿಯಿಂದ ಮಹತ್ವ ಪಡೆಯುತ್ತವೆ. ಮಾರ್ಚ್ ತಿಂಗಳಲ್ಲಿ ಹಲವು ಹಣಕಾಸು ಕಾರ್ಯಗಳಿಗೆ ಗಡುವು ಇರುತ್ತವೆ. ಈ ಮಾರ್ಚ್ ತಿಂಗಳಲ್ಲೂ ಕೆಲ ಪ್ರಮುಖ ಹಣಕಾಸು ಯೋಜನೆಗಳು ಕೊನೆಗೊಳ್ಳಲಿವೆ. ಇದರಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್, ಆಧಾರ್ ಅಪ್ಡೇಶನ್, ವಿಶೇಷ ಎಫ್ಡಿ ಇತ್ಯಾದಿ ಯೋಜನೆಗಳು ಸೇರಿವೆ. ಕೆಲ ಆಯ್ದ ಸ್ಕೀಮ್ಗಳ ವಿವರ ಇಲ್ಲಿದೆ…
ಆಧಾರ್ನಲ್ಲಿ ವಿಳಾಸ ಮತ್ತಿತರ ಮಾಹಿತಿ ಅಪ್ಡೇಟ್ ಮಾಡಲು ಅವಕಾಶ ಇದೆ. ಆಧಾರ್ ಕೇಂದ್ರಕ್ಕೆ ಹೋಗಿ ನಿರ್ದಿಷ್ಟ ಮೊತ್ತದ ಶುಲ್ಕ ಪಾವತಿಸಿ ಈ ಕಾರ್ಯ ಮಾಡಬಹುದು. ಆನ್ಲೈನ್ನಲ್ಲಿ ಉಚಿತವಾಗಿ ಈ ಕೆಲಸ ಮಾಡಬಹುದು. ಈ ಅವಕಾಶ ಮಾರ್ಚ್ 14ರವರೆಗೆ ಮಾತ್ರ ಇದೆ. ಅದಾದ ಬಳಿಕ ಆನ್ಲೈನ್ನಲ್ಲೂ ಶುಲ್ಕ ತೆತ್ತೇ ಆಧಾರ್ ಅಪ್ಡೇಟ್ ಮಾಡಬೇಕಾಗುತ್ತದೆ.
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ಗೆ ಆರ್ಬಿಐ ವಿಧಿಸಿರುವ ನಿರ್ಬಂಧ ಮಾರ್ಚ್ 15ರ ಬಳಿಕ ಜಾರಿಗೆ ಬರಲಿದೆ. ಮೊದಲಿಗೆ ಫೆಬ್ರುವರಿ 29ಕ್ಕೆ ಡೆಡ್ಲೈನ್ ನಿಗದಿ ಮಾಡಲಾಗಿತ್ತು. ಕಳೆದ ವಾರ, ಆರ್ಬಿಐ ಈ ಗಡುವನ್ನು ಮಾರ್ಚ್ 15ಕ್ಕೆ ವಿಸ್ತರಿಸಿದೆ. ಮಾರ್ಚ್ 16ರಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನ ಬಹುತೇಕ ವ್ಯವಹಾರ ನಿಂತುಹೋಗುತ್ತದೆ. ಯಾವುದೇ ಹೊಸ ಡೆಪಾಸಿಟ್ ಪಡೆಯುವಂತಿಲ್ಲ. ವ್ಯಾಲಟ್ಗೆ ಹಣ ಸೇರಿಸುವಂತಿಲ್ಲ.
ಇದನ್ನೂ ಓದಿ: ಎಸ್ಬಿಎಂನಲ್ಲಿ ಕೇವಲ 2,000 ರೂಗೆ ಎಫ್ಡಿ ಇಡಿ; ಸ್ಟೆಪಪ್ ಕ್ರೆಡಿಟ್ ಕಾರ್ಡ್ ಪಡೆಯಿರಿ
ಕೆಲ ಹೂಡಿಕೆ ಅಥವಾ ಹಣಕಾಸು ಯೋಜನೆಗಳಿಗೆ ತೆರಿಗೆ ವಿನಾಯಿತಿ ಸಿಗುತ್ತದೆ. ನೀವು ಸಂಬಳದಾರರಾಗಿದ್ದರೆ ನಿಮ್ಮ ಆದಾಯಕ್ಕನುಗುಣವಾಗಿ ಸಂಬಳದ ಹಣಕ್ಕೆ ಟಿಡಿಎಸ್ ಕಡಿತ ಮಾಡಲಾಗುತ್ತದೆ. ನೀವು ತೆರಿಗೆ ಉಳಿಸುವಂತಹ ಸ್ಕೀಮ್ಗಳಲ್ಲಿ ಹಣ ತೊಡಗಿಸಿಕೊಂಡಿದ್ದರೆ ಅದನ್ನು ತೋರಿಸಬೇಕು. ಅದಕ್ಕೆ ಮಾರ್ಚ್ 31 ಡೆಡ್ಲೈನ್ ಇದೆ. ಇಲ್ಲವಾದರೆ ಇಡೀ ಸಂಬಳಕ್ಕೆ ಟಿಡಿಎಸ್ ಅನ್ವಯ ಆಗುತ್ತದೆ.
ಐಡಿಬಿಐ ಬ್ಯಾಂಕ್ ಉತ್ಸವ್ ಹೆಸರಿನ ಕಾಲಬಲ್ ಎಫ್ಡಿ ಸ್ಕೀಮ್ ಬಿಟ್ಟಿದೆ. ಇದಕ್ಕೆ ವಾರ್ಷಿಕವಾಗಿ ಶೇ. 7.55ರವರೆಗೂ ಬಡ್ಡಿ ನೀಡಲಾಗುತ್ತದೆ. ಈ ಉತ್ಸವ್ ವಿಶೇಷ ಕಾಲಬಲ್ ಎಫ್ಡಿ ಪ್ಲಾನ್ಗೆ ಮಾರ್ಚ್ 31 ಡೆಡ್ಲೈನ್ ಇದೆ. ಇಲ್ಲಿ ಕಾಲಬಲ್ ಎಫ್ಡಿ ಎಂದರೆ ಅವಧಿಗಿಂತ ಮುಂಚಿತವಾಗಿ ಠೇವಣಿ ಹಿಂಪಡೆಯಲು ಅವಕಾಶ ಇರುತ್ತದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಹಲವು ವಿಶೇಷ ಪ್ಲಾನ್ಗಳಲ್ಲಿ ಅಮೃತ್ ಕಳಶ್ ಎಫ್ಡಿ ಸ್ಕೀಮ್ ಒಂದು. 400 ದಿನಗಳ ಅವಧಿಯ ಈ ಫಿಕ್ಸೆಡ್ ಡೆಪಾಸಿಟ್ನಲ್ಲಿ ಶೇ. 7.10ರಷ್ಟು ವಾರ್ಷಿಕ ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರಿಗೆ ಶೇ. 7.60 ಬಡ್ಡಿ ಬರುತ್ತದೆ.
ಇದನ್ನೂ ಓದಿ: ಜೀವನ ಭದ್ರತೆಗೆ ಎಷ್ಟು ಹಣ ಉಳಿಸಬೇಕು, ಎಷ್ಟು ಹೂಡಿಕೆ ಮಾಡಬೇಕು? ಇಲ್ಲಿದೆ ಟಿಪ್ಸ್
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವೀಕೇರ್ ಫಿಕ್ಸೆಡ್ ಡೆಪಾಸಿಟ್ ಹಿರಿಯ ನಾಗರಿಕರಿಗೆಂದು ರೂಪಿಸಲಾಗಿದೆ. ಇದಕ್ಕೆ ವಾರ್ಷಿಕ ಬಡ್ಡಿದರ ಶೇ. 7.50ರಷ್ಟಿದೆ. ಮಾರ್ಚ್ 31ರವರೆಗೂ ಇದಕ್ಕೆ ಅವಕಾಶ ಇದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗೃಹಸಾಲಗಳಿಗೆ ಡಿಸ್ಕೌಂಟ್ ನೀಡಲಾಗುತ್ತಿದೆ. ಗ್ರಾಹಕರ ಕ್ರೆಡಿಟ್ ಸ್ಕೋರ್ಗೆ ಅನುಗುಣವಾಗಿ ಬಡ್ಡಿಯಲ್ಲಿ ರಿಯಾಯಿತಿ ಕೊಡಲಾಗುತ್ತದೆ. ಈ ಸೌಲಭ್ಯಕ್ಕೆ ಅರ್ಜಿ ಹಾಕಲು ಮಾರ್ಚ್ 31ರವರೆಗೆ ಮಾತ್ರ ಅವಕಾಶ ಇದೆ.
ಸಿಬಿಲ್ ಸ್ಕೋರ್ 750ಕ್ಕೂ ಮೇಲ್ಪಟ್ಟಿದ್ದರೆ ಗೃಹಸಾಲಕ್ಕೆ ಬಡ್ಡಿದರ ಶೇ. 9.15ರಷ್ಟು ಇದ್ದದ್ದು ಶೇ. 8.60ಕ್ಕೆ ಇಳಿಸಲಾಗುತ್ತದೆ. ಕ್ರೆಡಿಟ್ ಸ್ಕೋರ್ 700ರಿಂದ 749ರ ನಡುವೆ ಇದ್ದರೆ ಬಡ್ಡಿದರ ಶೇ. 9.35ರಿಂದ ಶೇ. 8.70ಕ್ಕೆ ಇಳಿಸಲಾಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ