ಇವತ್ತು ಬಹುತೇಕ ಎಲ್ಲಾ ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಇನ್ಷೂರೆನ್ಸ್ ಕವರೇಜ್ ಕೊಡುತ್ತವೆ. ಹೆಲ್ತ್ ಇನ್ಷೂರೆನ್ಸ್ ಕಂಪನಿಗಳ ಕಾರ್ಪೊರೇಟ್ ಪ್ಲಾನ್ ಪಡೆಯಲಾಗಿರುತ್ತದೆ. ಕೆಲ ಪ್ಲಾನ್ಗಳಲ್ಲಿ ಕವರೇಜ್ ಮಟ್ಟದಲ್ಲಿ ವ್ಯತ್ಯಾಸಗಳಿರುತ್ತವೆ. ನೀವು ಕೆಲಸ ಮಾಡುವ ಸಂಸ್ಥೆಯಿಂದ ಇನ್ಷೂರೆನ್ಸ್ ಸೌಲಭ್ಯ ಇದ್ದರೆ ಅದರಲ್ಲಿ ಏನೇನು ಸವಲತ್ತುಗಳಿವೆ ಎಂಬುದನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ಉದಾಹರಣೆಗೆ, ಮ್ಯಾಟರ್ನಿಟಿ ಅಥವಾ ತಾಯ್ತನ ವೆಚ್ಚವು ಇನ್ಷೂರೆನ್ಸ್ ಪ್ಲಾನ್ನಲ್ಲಿ ಯಾವ ರೀತಿ ಅಡಕವಾಗಿದೆ ಎಂಬುದನ್ನು ತಿಳಿದಿರಬೇಕು. ಇಲ್ಲವಾದರೆ, ಗರ್ಭಧಾರಣೆಯ ನಂತರದಿಂದ ಹಿಡಿದು ಬಾಣಂತನದವರೆಗೆ ಇವತ್ತು ತಾಯ್ತನದ ವೆಚ್ಚ ಕೆಲವಾರು ಲಕ್ಷಗಳೇ ಆಗಬಹುದು.
ನೀವು ಮಹಿಳೆಯಾಗಿದ್ದರೆ, ಅಥವಾ ನಿಮ್ಮ ಪತ್ನಿ ಇದ್ದು ಅವರು ಗರ್ಭಧಾರಣೆ ಮಾಡಿದ್ದರೆ ಇನ್ಷೂರೆನ್ಸ್ ಪಾಲಿಸಿಯಲ್ಲಿ ಮ್ಯಾಟರ್ನಿಟಿ ಕವರೇಜ್ ಹೇಗಿದೆ ಎಂಬುದನ್ನು ಮೊದಲು ವಿಚಾರಿಸಿರಿ.
ಸಾಮಾನ್ಯವಾಗಿ ಹೆಲ್ತ್ ಇನ್ಷೂರೆನ್ಸ್ಗಳು ಮ್ಯಾಟರ್ನಿಟಿಗೆಂದು ಪ್ರತ್ಯೇಕವಾಗಿ ಲಭ್ಯ ಇರುವುದಿಲ್ಲ. ಒಟ್ಟಾರೆ ಕವರೇಜ್ನಲ್ಲಿ ಮ್ಯಾಟರ್ನಿಟಿಗೆ ಸಬ್-ಲಿಮಿಟ್ ಇರುತ್ತದೆ. ಅಥವಾ ರೈಡರ್ ಆಗಿ ಲಭ್ಯ ಇರುತ್ತದೆ. ಉದಾಹರಣೆಗೆ, ನಿಮ್ಮ ಕಂಪನಿ ಮಾಡಿಸಿರುವ ಇನ್ಷೂರೆನ್ಸ್ ಪಾಲಿಸಿಯ ಒಟ್ಟು ಕವರೇಜ್ ವರ್ಷಕ್ಕೆ 5 ಲಕ್ಷ ರೂ ಎಂದಿದ್ದರೆ, ಅದರಲ್ಲಿ ಮ್ಯಾಟರ್ನಿಟಿ ವೆಚ್ಚದ ಮಿತಿ 50,000 ರೂನಿಂದ ಹಿಡಿದು ಒಂದೂವರೆ ಲಕ್ಷ ರೂವರೆಗೆ ಇರಬಹುದು. ನಿಮ್ಮ ಪಾಲಿಸಿಯಲ್ಲಿ ಈ ಮಿತಿ ಎಷ್ಟಿದೆ ಎಂದು ನೋಡಿರಿ.
ಇದನ್ನೂ ಓದಿ: ನಿಮಗೆ ಮತ್ತು ಕುಟುಂಬಕ್ಕೆ ಯಾವ ರೀತಿಯ ಇನ್ಷೂರೆನ್ಸ್ ಅಗತ್ಯ? ಹೇಗೆ ಆಯ್ಕೆ ಮಾಡುವುದು? ಇಲ್ಲಿದೆ ಸಿಂಪಲ್ ಟಿಪ್ಸ್
ಇನ್ನೂ ಕೆಲ ಪಾಲಿಸಿಗಳಲ್ಲಿ ಮ್ಯಾಟರ್ನಿಟಿ ವೆಚ್ಚ ಭರಿಸಬೇಕಾದರೆ ನಿರ್ದಿಷ್ಟ ಕಾಯುವಿಕೆ ಅವಧಿ ಇರುತ್ತದೆ. ಕೆಲ ಪಾಲಿಸಿಗಳು ಒಂದು ವರ್ಷ ವೈಟಿಂಗ್ ಪೀರಿಯಡ್ ಹೊಂದಿರಬಹುದು. ಇನ್ನೂ ಕೆಲ ಪಾಲಿಸಿಗಳು ಹೆಚ್ಚಿನ ವರ್ಷ ಕಾಯುವಿಕೆ ಅವಧಿ ಹೊಂದಿರಬಹುದು. ಕೆಲ ಪಾಲಿಸಿಗಳಲ್ಲಿ ಈ ವೇಯ್ಟಿಂಗ್ ಪೀರಿಯಡ್ ಇಲ್ಲದೇ ಇರಬಹುದು. ಇದನ್ನು ತಿಳಿದುಕೊಳ್ಳಿ.
ಕೆಲ ಇನ್ಷೂರೆನ್ಸ್ ಪಾಲಸಿಗಳು ಡೆಲಿವರಿ ವೆಚ್ಚಕ್ಕೆ ಮಾತ್ರ ಕವರೇಜ್ ನೀಡುತ್ತವೆ. ಮತ್ತೆ ಕೆಲ ಪಾಲಿಸಿಗಳು ಗರ್ಭಧಾರಣೆ ಅವಧಿಯಿಂದ ಹಿಡಿದು ಬಾಣಂತನ ಪಾಲನೆವರೆಗೂ ವೈದ್ಯರ ಸಮಾಲೋಚನೆ, ಚಿಕಿತ್ಸೆ ಇತ್ಯಾದಿ ವೆಚ್ಚವನ್ನೂ ಭರಿಸಬಹುದು. ಈ ಅಂಶಗಳು ನಿಮಗೆ ಮೊದಲೇ ತಿಳಿದಿದ್ದರೆ ಅವನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: ಟರ್ಮ್ ಇನ್ಷೂರೆನ್ಸ್ ಮತ್ತು ಲೈಫ್ ಇನ್ಷೂರೆನ್ಸ್ ಮಧ್ಯೆ ವ್ಯತ್ಯಾಸ ಏನು? ಯಾವುದು ಬೆಟರ್? ಎರಡರ ಹೋಲಿಕೆ ಇಲ್ಲಿದೆ…
ಸಹಜ ಗರ್ಭಧಾರಣೆ ಸಾಧ್ಯವಾಗದೇ ಐಯುಐ, ಐವಿಎಫ್ ಇತ್ಯಾದಿ ಫರ್ಟಿಲಿಟಿ ಟ್ರೀಟ್ಮೆಂಟ್ ತೆಗೆದುಕೊಳ್ಳುತ್ತಿದ್ದರೆ ಅದರ ವೆಚ್ಚವನ್ನು ನಿಮ್ಮ ಕಾರ್ಪೊರೇಟ್ ಇನ್ಷೂರೆನ್ಸ್ ಪ್ಲಾನ್ ಕವರ್ ಮಾಡುತ್ತದಾ ಎಂದು ವಿಚಾರಿಸಿರಿ. ಗರ್ಭಧಾರಣೆ ಬೇಡವೆಂದು ಫ್ಯಾಮಿಲಿ ಪ್ಲಾನಿಂಗ್ ಚಿಕಿತ್ಸೆಯನ್ನೂ ಕೆಲ ಪಾಲಿಸಿಗಳು ಭರಿಸಬಹುದು. ನೀವೇನಾದರೂ ಆ ರೀತಿಯ ಟ್ರೀಟ್ಮೆಂಟ್ ಅಥವಾ ಫ್ಯಾಮಿಲಿ ಪ್ಲಾನಿಂಗ್ಗೆ ಮುಂದಾಗಿದ್ದರೆ ವಿಮಾ ಸೌಲಭ್ಯ ಬಳಸಬಹುದು.
ಒಟ್ಟಾರೆ, ನಿಮ್ಮಲ್ಲಿರುವ ಇನ್ಷೂರೆನ್ಸ್ ಪ್ಲಾನ್ ಅನ್ನು ಮೊದಲು ಕೂಲಂಕಷವಾಗಿ ಓದಿ ಎಲ್ಲಾ ಅಂಶಗಳನ್ನು ತಿಳಿದುಕೊಳ್ಳಿ. ಅನುಮಾನಗಳಿದ್ದರೆ ನಿಮ್ಮ ಕಂಪನಿಯ ಎಚ್ಆರ್ ವಿಭಾಗದವರನ್ನು ಕೇಳಿ ನೋಡಿ. ಹಾಗೆಯೇ, ಕಂಪನಿಯ ಮ್ಯಾಟರ್ನಿಟಿ ಲೀವ್ ಪಾಲಿಸಿ ಹೇಗಿದೆ ಎಂಬುದನ್ನು ಮೊದಲೇ ತಿಳಿದಿರುವುದು ಒಳ್ಳೆಯದು. ಕೆಲ ಕಂಪನಿಗಳು ಗರ್ಭಧಾರಣೆಯಿಂದ ಹಿಡಿದು ಬಾಣಂತನದವರೆಗೆ ಆರು ತಿಂಗಳ ಸಂಬಳ ಸಹಿತ ರಜೆ ಕೊಡಬಹುದು. ಮತ್ತೆ ಕೆಲ ಕಂಪನಿಗಳು ಸಂಬಳ ರಹಿತ ರಜೆ ಕೊಡಬಹುದು. ರಜೆಗೆ ಮುನ್ನ ವೈದ್ಯರಿಂದ ಪ್ರಮಾಣಪತ್ರವೋ ಅಥವಾ ಇನ್ಯಾವುದಾದರೂ ದಾಖಲೆಯನ್ನು ಕಚೇರಿಯಲ್ಲಿ ಸಲ್ಲಿಸಬೇಕಾಗಬಹುದು. ಹೀಗಾಗಿ, ಮುಂಚಿತವಾಗಿ ಈ ಬಗ್ಗೆ ವಿಚಾರಿಸಿರುವುದು ಒಳ್ಳೆಯದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ