ಡಿಜಿಟಲ್ ಇಂಡಿಯಾದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಿರುವ ಯುಪಿಐ ವ್ಯವಸ್ಥೆ (UPI Payment Service) ಬೇರೆ ಬೇರೆ ದೇಶಗಳ ಗಮನ ಕೂಡ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಹಾಗೆಯೇ, ಭಾರತದ ಹಣಕಾಸು ವಹಿವಾಟಿನಲ್ಲಿ ಸಾಮಾನ್ಯವಾಗಿ ಬಳಕೆಯಾಗುತ್ತಿರುವ ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್ ಅನ್ನು ದುರುಪಯೋಗಿಸಿಕೊಳ್ಳಲು ದುರುಳರು ನಡೆಸುತ್ತಿರುವ ಯತ್ನಗಳೂ ಹೆಚ್ಚಾಗಿವೆ. ಯುಪಿಐ ಸಂಬಂಧ ವಂಚನೆಗೊಳಗಾದ, ಹಣ ಕಳೆದುಕೊಂಡವರ ದೂರು ಹೆಚ್ಚಾಗಿದೆ. ಅಧಿಕೃತವಾಗಿ ಬೆಳಕಿಗೆ ಬಂದ ಪ್ರಕರಣಗಳೇ ಹೆಚ್ಚೂಕಡಿಮೆ ಒಂದು ಲಕ್ಷದಷ್ಟಿದೆ. ಭಾರತದಲ್ಲಿ ಕಳೆದ ವರ್ಷ (2002) ಯುಪಿಐ ಪ್ಲಾಟ್ಫಾರ್ಮ್ನಲ್ಲಿ ಜನರು ವಂಚಕರ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡ ಪ್ರಕರಣಗಳು 95,000 ಎಂಬ ಮಾಹಿತಿಯನ್ನು ಸ್ವತಃ ಹಣಕಾಸು ಸಚಿವಾಲಯವೇ ನೀಡಿದೆ. ಪೇಟಿಎಂ, ಫೋನ್ ಪೇ, ಗೂಗಲ್ ಪೇ ಇತ್ಯಾದಿ ವಿವಿಧ ಯುಪಿಐ ಆ್ಯಪ್ಗಳ ಮೂಲಕ ವಂಚಕರು ಜನರ ದುಡ್ಡನ್ನು ಲಪಟಾಯಿಸಿದ್ದಾರೆ. ಈ ಬಹುತೇಕ ಪ್ರಕರಣದಲ್ಲಿ ಜನರು ವಂಚಕರಿಗೆ ತಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಂಡು ಏಮಾರಿದ್ದಾರೆ. ಯುಪಿಐ ಪೇಮೆಂಟ್ ವ್ಯವಸ್ಥೆಯನ್ನು ದುಷ್ಕರ್ಮಿಗಳು ಹೇಗೆಲ್ಲಾ ದುರುಪಯೋಗಿಸಿಕೊಂಡು ಜನರನ್ನು ವಂಚಿಸುತ್ತಾರೆ, ಈ ವಿವರ ಮುಂದಿದೆ…
ಯುಪಿಐ ಪ್ಲಾಟ್ಫಾರ್ಮ್ನಲ್ಲಿ ಜನರು ಹೆಚ್ಚಾಗಿ ಹಣ ಕಳೆದುಕೊಳ್ಳುವುದು ಯುಪಿಐ ಪಿನ್ ಮೂಲಕ. ವಂಚಕರು ತಾವು ಹಣ ಕಳುಹಿಸುವುದಾಗಿ ಹೇಳಿ ಕ್ಯೂಆರ್ ಕೋಡ್ ಕಳುಹಿಸುತ್ತಾರೆ. ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಹಣ ನಿಮ್ಮ ಖಾತೆಗೆ ಸೇರುತ್ತದೆ ಎಂದು ನಂಬಿಸುತ್ತಾರೆ. ಈ ಕ್ಯೂ ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದರೆ ಪೇಮೆಂಟ್ಗೆ ಯುಪಿಐ ಪಿನ್ ನಂಬರ್ ಕೇಳಲಾಗುತ್ತದೆ. ಈಗಲೂ ಗ್ರಾಹಕರು ಅಪಾಯವನ್ನು ಅರಿತು ಎಚ್ಚೆತ್ತುಕೊಳ್ಳದೇ ಯುಪಿಐ ಪಿನ್ ನಂಬರ್ ಹಾಕಿಬಿಟ್ಟರೆ ಹಣ ಹೋದಂತೆಯೇ ಸರಿ.
ಇಂಥ ಘಟನೆಗಳು ಹೆಚ್ಚುತ್ತಿರುವ ಕಾರಣಕ್ಕೆ ಪೇಟಿಎಂ ಇತ್ಯಾದಿ ಯುಪಿಐ ಆ್ಯಪ್ಗಳು ನಿಮ್ಮ ಖಾತೆಯಿಂದ ಬೇರೆಯವರಿಗೆ ಹಣ ಹೋಗುವ ಮುನ್ನ ಒಂದು ಅಲರ್ಟ್ ಮೆಸೇಜ್ ಇರುವ ಪಾಪ್ ಅಪ್ ಪ್ರತ್ಯಕ್ಷವಾಗುತ್ತದೆ.
ಇದನ್ನೂ ಓದಿ: Tech Tips: ನಿಮ್ಮಲ್ಲಿರುವ ಸಿಮ್ ಅನ್ನು ಎಷ್ಟು ಬಾರಿ ಪೋರ್ಟ್ ಮಾಡಬಹುದು ಗೊತ್ತೇ?; ಇಲ್ಲಿದೆ ಮಾಹಿತಿ
ನಾವು ಯಾವುದಾದರೂ ಕಸ್ಟಮರ್ ಕೇರ್ ನಂಬರ್ ಬೇಕಾದರೆ ಗೂಗಲ್ನಲ್ಲಿ ಹುಡುಕಿ ಪಡೆಯುತ್ತೇವೆ. ಈ ವೇಳೆ ಕೆಲವೊಮ್ಮೆ ವಂಚಕರು ಸೃಷ್ಟಿಸಿದ ಲಿಂಕ್ಗಳು ಸರ್ಚ್ನಲ್ಲಿ ಸಿಗಬಹುದು. ಇಂತಹ ನಂಬರ್ಗೆ ಕರೆ ಮಾಡಿದಾಗ ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆ, ಸಿವಿವಿ ನಂಬರ್ ಇತ್ಯಾದಿ ವೈಯಕ್ತಿಕ ವಿವರಗಳನ್ನು ಪಡೆಯಬಹುದು. ನೀವು ನೋಡನೋಡುತ್ತಿದ್ದಂತೆಯೇ ನಿಮ್ಮ ಖಾತೆಯಿಂದ ಇದ್ದಬದ್ದ ದುಡ್ಡೆಲ್ಲಾ ದುರುಳ ಕೈಸೇರಿಹೋಗುತ್ತದೆ. ನಿಮ್ಮ ಮೊಬೈಲ್ ನಂಬರ್ಗೆ ಮೆಸೇಜ್ ಬಂದಾಗಲಷ್ಟೇ ನಿಮಗೆ ಹಣ ಲೂಟಿಯಾಗಿರುವ ವಿಚಾರ ಗೊತ್ತಾಗುವುದು.
ನಾವು ಸಾರ್ವಜನಿಕ ಸ್ಥಳದಲ್ಲಿ ಅಥವಾ ಹೋಟೆಲ್ಗಳಲ್ಲಿ ಫ್ರೀ ವೈಫೈ ಇದ್ದಾಗ ಅದನ್ನು ಬಳಸಲು ಮುಂದಾಗುತ್ತೇವೆ. ಆದರೆ, ಈ ಪಬ್ಲಿಕ್ ವೈಫೈಗಳು ನಿಮ್ಮ ಮೊಬೈಲ್ ಅನ್ನು ಹ್ಯಾಕ್ ಮಾಡಲು ದುರುಳರಿಗೆ ಪ್ರಮುಖ ಅಸ್ತ್ರಗಳಾಗಿರಬಹುದು. ನಿಮ್ಮ ಖಾತೆ ನಂಬರ್, ಯುಪಿಐ ಪಿನ್ ಇತ್ಯಾದಿ ಮಾಹಿತಿಯನ್ನು ಹ್ಯಾಕ್ ಮಾಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸಾರ್ವಜನಿಕ ವೈಫೈ ಬಳಕೆ ವೇಳೆ ಎಚ್ಚರದಿಂದಿರಿ. ಅದರಲ್ಲೂ ನಿಮ್ಮ ಬ್ಯಾಂಕಿಂಗ್ ಚಟುವಟಿಕೆಗೆ ಪಬ್ಲಿಕ್ ವೈಫೈ ಮಾತ್ರ ಬಳಸದಿರಿ.
ನಾವು ಕೆಲವೊಮ್ಮೆ ಎಟಿಎಂ ಕಾರ್ಡ್ ನಂಬರ್ ಮತ್ತು ಪಿನ್ ನಂಬರ್, ಸಿವಿವಿ ಇತ್ಯಾದಿ ಮಾಹಿತಿಯನ್ನು ದುಷ್ಕರ್ಮಿಗಳಿಗೆ ಕೊಡುವುದಿದೆ. ಅದೇ ರೀತಿ ಯುಪಿಐ ಪಿನ್ ನಂಬರ್ ಅನ್ನು ಶೇರ್ ಮಾಡಿ ಏಮಾರುವುದಿದೆ. ನೀವು ಬೇರೆ ಯಾರಿಗೂ ಯಾವುದೇ ಕಾರಣಕ್ಕೂ ಯುಪಿಐ ಪಿನ್ ನಂಬರ್ ಹಂಚಿಕೊಳ್ಳದಿರಿ. ನಿಮ್ಮ ಯುಪಿಐ ಪಿನ್ ನಂಬರ್ ಅನ್ನು ಆಗಾಗ್ಗೆ ಬದಲಿಸುತ್ತಿರಿ.
ಇದನ್ನೂ ಓದಿ: Credit Cards: ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್ ಹೊಂದಿದ್ದೀರಾ? ಸಾಧಕ-ಬಾಧಕಗಳು ಹೀಗಿವೆ ನೋಡಿ
ನಮ್ಮ ಮೊಬೈಲ್ಗಳಲ್ಲೇ ನಮ್ಮ ಎಲ್ಲಾ ವೈಯಕ್ತಿಕ ಬ್ಯಾಂಕಿಂಗ್ ಮಾಹಿತಿಯನ್ನು ಸಂಗ್ರಹಿಸಿಕೊಳ್ಳುತ್ತೇವೆ. ಅಂಥದ್ದನ್ನು ತಪ್ಪಿಸಿ. ನಿಮ್ಮ ಮೊಬೈಲ್ ಕಳುವಾದರೆ ನಿಮ್ಮೆಲ್ಲಾ ವಿವರಗಳು ದುರುಳರ ಕೈಸೇರುವ ಅಪಾಯ ಇರುತ್ತದೆ.
ಹಾಗೆಯೇ, ಜನರು ತಪ್ಪಾದ ನಂಬರ್ಗಳಿಗೆ ಹಣ ಕಳುಹಿಸಿದ ಹಲವು ಪ್ರಕರಣಗಳು ನಡೆದಿವೆ. ಇಲ್ಲಿ ಕೆಲ ದುಷ್ಕರ್ಮಿಗಳು ಕಳುಹಿಸುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಹಣ ರವಾನಿಸಿ ಏಮಾರುವವರು ಹೆಚ್ಚು. ಯುಪಿಐ ಮೂಲಕ ದೊಡ್ಡ ಮೊತ್ತದ ಹಣ ಕಳುಹಿಸುವಾಗ ಮೊದಲು ಸಣ್ಣ ಮೊತ್ತ ಕಳುಹಿಸಿ ಅದು ನಿಮಗೆ ಬೇಕಾದವರಿಗೆ ತಲುಪಿದೆಯಾ ಎಂದು ದೃಢಪಡಿಸಿಕೊಂಡು ಬಳಿಕ ಮಿಕ್ಕ ಹಣವನ್ನು ಕಳುಹಿಸುವುದು ಹೆಚ್ಚು ಸುರಕ್ಷಿತ.