ಬೆಂಗಳೂರು, ಆಗಸ್ಟ್ 19: ಇತ್ತೀಚಿನ ದಿನಗಳಲ್ಲಿ ಯೂನಿಟ್ ಲಿಂಕ್ಡ್ ಇನ್ಷೂರೆನ್ಸ್ ಪ್ಲಾನ್ಗಳ ಸಂಖ್ಯೆ ಹೆಚ್ಚುತ್ತಿದೆ. ಈ ಬಗ್ಗೆ ಝೀರೋಧ ಬ್ರೋಕರೇಜ್ ಸಂಸ್ಥೆಯ ಸಂಸ್ಥಾಪಕ ನಿತಿನ್ ಕಾಮತ್ ಅಸಮಾಧಾನಗೊಂಡಿದ್ದಾರೆ. ‘ಯುಲಿಪ್ (ಯೂನಿಟ್ ಲಿಂಕ್ಡ್ ಇನ್ಷೂರೆನ್ಸ್ ಪ್ಲಾನ್) ಯೋಜನೆಗಳು ಹೂಡಿಕೆ ಮತ್ತು ವಿಮೆ ಎರಡನ್ನೂ ಒಳಗೊಳ್ಳುತ್ತವೆಂದು ಹೇಳಲಾಗುತ್ತದೆ. ಆದರೆ, ವಾಸ್ತವದಲ್ಲಿ ಎರಡೂ ಸೇವೆ ಸರಿಯಾಗಿ ಸಿಗುವುದಿಲ್ಲ,’ ಎಂದು ನಿತಿನ್ ಕಾಮತ್ ತಮ್ಮ ಲಿಂಕ್ಡ್ಇನ್ ಪೋಸ್ಟ್ನಲ್ಲಿ ಬರೆದಿದ್ದಾರೆ. ಯುಲಿಪ್ಗಳ ಮಾರಾಟ ಹೆಚ್ಚಲು ಬ್ಯಾಂಕುಗಳ ಕಮಿಷನ್ ಆಸೆ ಕಾರಣ ಎಂದೂ ಕಾಮತ್ ಅಪವಾದ ಮಾಡಿದ್ದಾರೆ.
‘ಬ್ಯಾಂಕುಗಳು ಯುಲಿಪ್ಗಳ ಮಾರಾಟಕ್ಕೆ ಹೆಚ್ಚು ಆಸಕ್ತಿ ತೋರುತ್ತಿವೆ. ಅದಕ್ಕೆ ಕಾರಣ ಆಕರ್ಷಕ ಕಮಿಷನ್ಗಳು. ಈ ಪ್ಲಾನ್ಗಳು ಒದಗಿಸುವ ವಿಮಾ ಕವರೇಜ್ ಸಾಕಷ್ಟಾಗಲ್ಲ,’ ಎಂದು ನಿತಿನ್ ಕಾಮತ್ ಅಭಿಪ್ರಾಯಪಟ್ಟಿದ್ದಾರೆ.
ಜನರು ತಮ್ಮ ಹೂಡಿಕೆ ಮತ್ತು ವಿಮೆ ಅಗತ್ಯತೆಯನ್ನು ಒಂದೇ ತಕ್ಕಡಿಯಲ್ಲಿ ಹಾಕಲು ಹೋಗಬಾರದು. ನೀವು ಹೂಡಿಕೆ ಮಾಡಬೇಕೆಂದರೆ ನೇರವಾಗಿ ಮ್ಯೂಚುವಲ್ ಫಂಡ್ಗಳಲ್ಲಿ ಹಣ ಹಾಕಿರಿ. ಒಂದು ಟರ್ಮ್ ಇನ್ಷೂರೆನ್ಸ್ ಪಾಲಿಸಿ ಪಡೆಯಿರಿ. ಇದು ಉತ್ತಮ ಆಯ್ಕೆ. ಈ ಟರ್ಮ್ ಇನ್ಷೂರೆನ್ಸ್ ಪ್ಲಾನ್ಗಳಿಗೆ ಪ್ರೀಮಿಯಮ್ ಹಣ ಬಹಳ ಕಡಿಮೆ. ಹೆಚ್ಚು ವಿಮಾ ಕವರೇಜ್ ಇರುತ್ತದೆ. ಯುಲಿಪ್ನಂತಹ ಕೆಟ್ಟ ಇನ್ಷೂರೆನ್ಸ್ ಉತ್ಪನ್ನಗಳ ಸಹವಾಸ ಬೇಡ ಎಂದು ನಿತಿನ್ ಕಾಮತ್ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಕಡಿಮೆ ಬೆಲೆಗೆ ಒಳ್ಳೆಯ ಲಾಭ ತರಬಲ್ಲ ಮಲ್ಟಿಬ್ಯಾಗರ್ ಷೇರು ಪತ್ತೆ ಮಾಡುವುದು ಹೇಗೆ?
ಯುಲಿಪ್ ಎಂದರೆ ಯೂನಿಟ್ ಲಿಂಕ್ಡ್ ಇನ್ಷೂರೆನ್ಸ್ ಪ್ಲಾನ್. ಇದರಲ್ಲಿ ಪಾವತಿಸಲಾಗುವ ಪ್ರೀಮಿಯಮ್ನಲ್ಲಿ ಒಂದು ಭಾಗವನ್ನು ಲೈಫ್ ಇನ್ಷೂರೆನ್ಸ್ಗೆ ಸೇರಿಸಲಾಗುತ್ತದೆ. ಇನ್ನುಳಿದ ಮೊತ್ತವನ್ನು ಈಕ್ವಿಟಿ ಅಥವಾ ಬಾಂಡ್ಗಳಲ್ಲಿ, ಅಂದರೆ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗುತ್ತದೆ. ಈ ಯುಲಿಪ್ಗಳನ್ನು ಹೂಡಿಕೆ ಮತ್ತು ವಿಮಾ ಅಗತ್ಯತೆಗಳಿಗೆ ಹೇಳಿಮಾಡಿಸಿದ ಉತ್ಪನ್ನಗಳೆಂದು ವಿಮಾ ಸಂಸ್ಥೆಗಳು ಮತ್ತು ಬ್ಯಾಂಕುಗಳು ಪ್ರಚಾರ ಮಾಡುತ್ತಿವೆ.
ಆದರೆ, ಇನ್ಷೂರೆನ್ಸ್ ನಿಯಂತ್ರಣ ಪ್ರಾಧಿಕಾರವಾದ ಐಆರ್ಡಿಎಐ ಎರಡು ತಿಂಗಳ ಹಿಂದೆ ಹೊರಡಿಸಿದ ಸುತ್ತೋಲೆ ಪ್ರಕಾರ ಯುಲಿಪ್ ಅನ್ನು ಹೂಡಿಕೆ ಉತ್ಪನ್ನವೆಂದು ಪ್ರಚಾರ ಮಾಡಬಾರದು ಎಂದಿದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ