ITR: ಡೆಡ್​ಲೈನ್ ಮುಗಿಯಿತು; ಈವರೆಗೆ ಸಲ್ಲಿಕೆಯಾದ ಐಟಿಆರ್​ಗಳೆಷ್ಟು? ಹೊಸ ದಾಖಲೆ ಎಂದು ಐಟಿ ಇಲಾಖೆ ಟ್ವೀಟ್

|

Updated on: Aug 01, 2023 | 12:01 PM

Income Tax Return: ಆದಾಯ ತೆರಿಗೆ ಪೋರ್ಟಲ್​ನಲ್ಲಿರುವ ಮಾಹಿತಿ ಪ್ರಕಾರ ಈವರೆಗೂ 6.77 ಕೋಟಿಗೂ ಹೆಚ್ಚು ಮಂದಿ ಐಟಿ ರಿಟರ್ನ್ ಸಲ್ಲಿಸಿದ್ದಾರೆ. ಜುಲೈ 31ರಂದು ಐಟಿ ಇಲಾಖೆ ಟ್ವೀಟ್ ಮಾಡಿದ್ದು, ಈ ಬಾರಿ ದಾಖಲೆ ಪ್ರಮಾಣದಲ್ಲಿ ಐಟಿಆರ್ ಸಲ್ಲಿಸಲಾಗಿದೆ ಎಂದು ತಿಳಿಸಿದೆ.

ITR: ಡೆಡ್​ಲೈನ್ ಮುಗಿಯಿತು; ಈವರೆಗೆ ಸಲ್ಲಿಕೆಯಾದ ಐಟಿಆರ್​ಗಳೆಷ್ಟು? ಹೊಸ ದಾಖಲೆ ಎಂದು ಐಟಿ ಇಲಾಖೆ ಟ್ವೀಟ್
ಐಟಿ ರಿಟರ್ನ್
Follow us on

ನವದೆಹಲಿ, ಆಗಸ್ಟ್ 1: ನಾವು ಗಳಿಸುವ ಆದಾಯಕ್ಕೆ ತಕ್ಕಂತೆ ಸರ್ಕಾರಕ್ಕೆ ತೆರಿಗೆ ಸಲ್ಲಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಆದಾಯದ ಘೋಷಣೆ ಮಾಡುವ ಐಟಿಆರ್ (ITR) ಅನ್ನು ಪ್ರತೀ ವರ್ಷವೂ ಸಲ್ಲಿಕೆ ಮಾಡಬೇಕು. ಈ ವರ್ಷ ಜುಲೈ 31ರವರೆಗೆ ಗಡುವು ಕೊಡಲಾಗಿತ್ತು. ಅದೀಗ ಮುಗಿದಿದೆ. ಕಳೆದ ಬಾರಿಗಿಂತಲೂ ಈಗ ಹೆಚ್ಚು ಐಟಿಆರ್​ಗಳು ಸಲ್ಲಿಕೆ ಆಗಿವೆ. ಇನ್ಕಮ್ ಟ್ಯಾಕ್ಸ್ ಪೋರ್ಟಲ್​ನಲ್ಲಿರುವ ಮಾಹಿತಿ ಪ್ರಕಾರ, 2022-23ರ ಹಣಕಾಸು ವರ್ಷಕ್ಕೆ ಈವರೆಗೆ ಫೈಲ್ ಮಾಡಲಾಗಿರುವ ಐಟಿ ರಿಟರ್ನ್​ಗಳ ಸಂಖ್ಯೆ 6,77,42,303 ಇದೆ. ಅಂದರೆ 6.77 ಕೋಟಿಗೂ ಹೆಚ್ಚು.

ಆದಾಯ ತೆರಿಗೆ ಪೋರ್ಟಲ್​ನಲ್ಲಿ ನೊಂದಣಿ ಮಾಡಿಸಿರುವ ವೈಯಕ್ತಿಕ ತೆರಿಗೆ ಪಾವತಿದಾರರ ಸಂಖ್ಯೆ 11.59 ಕೋಟಿಯಷ್ಟಿದೆ. ಈ ಪೈಕಿ 6.77 ಕೋಟಿ ಮಂದಿ ರಿಟರ್ನ್ ಫೈಲ್ ಮಾಡಿದ್ದಾರೆ. ಇದರಲ್ಲಿ 5.62 ಕೋಟಿ ಐಟಿಆರ್​ಗಳ ವೆರಿಫಿಕೇಶನ್ ಮುಗಿದಿದ್ದು, 3.44 ಕೋಟಿ ಐಟಿಆರ್​ಗಳನ್ನು ಪ್ರೋಸಸ್ ಮಾಡಲಾಗಿದೆ.

ಇದನ್ನೂ ಓದಿ: ಆಗಸ್ಟ್​ನಲ್ಲಿನ ಬದಲಾವಣೆಗಳು; ನಿಯಮ, ಜಿಎಸ್​ಟಿ, ಗಡುವು, ಬೆಲೆ ವ್ಯತ್ಯಯಗಳ್ಯಾವುವು? ಇಲ್ಲಿದೆ ಪಟ್ಟಿ

ಇನ್ನು, ಆದಾಯ ತೆರಿಗೆ ಇಲಾಖೆ ಜುಲೈ 31 ಸಂಜೆ ಟ್ವೀಟ್ ಮಾಡಿದ್ದು, ಐಟಿಆರ್ ಸಲ್ಲಿಕೆಯಲ್ಲಿ ಹೊಸ ಮೈಲಿಗಲ್ಲು ತಲುಪಲಾಗಿದೆ ಎಂದು ಹೇಳಿದೆ. ಜುಲೈ 31ರ ಸಂಜೆ 6 ಗಂಟೆಯವರೆಗೆ ಒಟ್ಟು 6.50 ಕೋಟಿಗೂ ಹೆಚ್ಚು ಐಟಿಆರ್​ಗಳು ಸಲ್ಲಿಕೆಯಾಗಿವೆ. ಸೋಮವಾರ ಬೆಳಗ್ಗೆಯಿಂದ ಸಂಜೆ 6 ಗಂಟೆಯವರೆಗೂ 36.91 ಲಕ್ಷ ಐಟಿಆರ್​ಗಳನ್ನು ಫೈಲ್ ಮಾಡಲಾಗಿದೆ ಎಂದು ಐಟಿ ಇಲಾಖೆ ಟ್ವೀಟ್ ಮಾಡಿದೆ.


ಇನ್ನು, 2020-21ರ ಹಣಕಾಸು ವರ್ಷಕ್ಕೆ ಒಟ್ಟು 6.63 ಕೋಟಿ ಐಟಿಆರ್​ಗಳು ಸಲ್ಲಿಕೆಯಾಗಿದ್ದವು. ಐಟಿಆರ್ 1, ಐಟಿಆರ್ 3 ಮತ್ತು 4 ಫಾರ್ಮ್​ಗಳು ಅತಿಹೆಚ್ಚು ಸಲ್ಲಿಕೆಯಾಗಿದ್ದವು. ಈ ಬಾರಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಐಟಿಆರ್​​ಗಳು ಸಲ್ಲಿಕೆಯಾಗಿವೆ. ಡೆಡ್​ಲೈನ್ ಮುಗಿದರೂ ಇನ್ನೂ ಬಹಳಷ್ಟು ಮಂದಿ ರಿಟರ್ನ್ ಫೈಲ್ ಮಾಡುವುದು ಬಾಕಿ ಇದೆ. ಐಟಿಆರ್ ಸಲ್ಲಿಕೆ ಸಂಖ್ಯೆ ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ: IT Notice: ಐಟಿ ನೋಟೀಸ್ ಬಂದಾಗ ಗಾಬರಿಯಾಗದಿರಿ; ಏನು ಮಾಡಬೇಕು, ಮಾಡಬಾರದು, ಇಲ್ಲಿದೆ ವಿವರ

ಐಟಿಆರ್ ಸಲ್ಲಿಕೆ ತಡವಾದರೆ ಏನು?

ಐಟಿ ರಿಟರ್ನ್ ಅನ್ನು ಇನ್ನೂ ಸಲ್ಲಿಕೆ ಮಾಡದೇ ಇದ್ದರೆ ವಿಳಂಬ ಶುಲ್ಕ, ಬಡ್ಡಿ ಕಟ್ಟಿ ಐಟಿಆರ್ ಸಲ್ಲಿಸಬಹುದು. ಹೆಚ್ಚು ಡಿಡಕ್ಷನ್ ಕ್ಲೇಮ್ ಮಾಡಲು ಆಗದೇ ಹೋಗಬಹುದು. ಹಾಗೆಯೇ, ಯಾವುದಾದರೂ ವ್ಯವಹಾರದಲ್ಲಿ ನಷ್ಟವಾಗಿದ್ದರೆ ಆ ಲೆಕ್ಕವನ್ನು ಮುಂದಿನ ವರ್ಷಕ್ಕೆ ಮುಂದುವರಿಸಿಕೊಂಡು ಹೋಗಲು ಆಗದೇ ಹೋಗಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ