IT Notice: ಐಟಿ ನೋಟೀಸ್ ಬಂದಾಗ ಗಾಬರಿಯಾಗದಿರಿ; ಏನು ಮಾಡಬೇಕು, ಮಾಡಬಾರದು, ಇಲ್ಲಿದೆ ವಿವರ
Know What To Do: ಐಟಿ ರಿಟರ್ನ್ ಫೈಲ್ ಮಾಡಿದಾಗ ಕೆಲವೊಮ್ಮೆ ತಪ್ಪುಗಳಾಗಬಹುದು. ಆ ಸಂದರ್ಭದಲ್ಲಿ ಹೆಚ್ಚಿನ ವ್ಯತ್ಯಾಸಗಳು ಕಂಡುಬಂದಲ್ಲಿ ಆದಾಯ ತೆರಿಗೆ ನೋಟೀಸ್ ಜಾರಿ ಮಾಡುತ್ತದೆ. ಹೀಗಾದಲ್ಲಿ ಗಾಬರಿಪಡುವ ಅವಶ್ಯಕತೆ ಇಲ್ಲ. ಇಲಾಖೆ ಕೇಳುವ ಮಾಹಿತಿ ನೀಡಿದರೆ ಸುಖಾಂತ್ಯವಾಗುತ್ತದೆ.
ಬೆಂಗಳೂರು, ಜುಲೈ 28: ಬಹಳಷ್ಟು ತೆರಿಗೆದಾರರು ತಮಗೆ ಐಟಿ ಇಲಾಖೆಯಿಂದ ನೋಟೀಸ್ (Income Tax Notice) ಬಂದಿರುವುದಾಗಿ ಹೇಳಿಕೊಂಡಿದ್ದಾರೆ. ಕೆಲವರು ಯಾವುದೋ ಗಂಡಂತಾರವಾಯಿತೆಂಬಂತೆ ಕಂಗಾಲಾಗಿರುವುದುಂಟು. ಆದರೆ, ಒಂದಂತೂ ಗೊತ್ತಿರಲಿ, ನೋಟೀಸ್ ಎಂಬುದು ನಿಮ್ಮ ಮೇಲೆ ಪ್ರಕರಣ ದಾಖಲಿಸಿದಂತಲ್ಲ. ನಿಮ್ಮ ಆದಾಯಕ್ಕೆ ತಕ್ಕಂತೆ ತೆರಿಗೆ ಪಾವತಿಸಿಲ್ಲ ಎಂದು ಅನಿಸಿದಲ್ಲಿ, ಅಥವಾ ನಿಮಗೆ ಯಾವುದೋ ಮೂಲದಿಂದ ಹೆಚ್ಚುವರಿ ಆದಾಯ ಬಂದಿರುವುದು, ಅದಕ್ಕೆ ತಕ್ಕಂತೆ ತೆರಿಗೆ ಕಟ್ಟಿಲ್ಲದಿರಬಹುದು ಎಂದು ತೆರಿಗೆ ಇಲಾಖೆಗೆ ಅನಿಸಿದಲ್ಲಿ ನಿಮಗೆ ನೋಟೀಸ್ ಜಾರಿ ಮಾಡಬಹುದು. ಅಥವಾ ಇನ್ಯಾವುದೋ ಕಾರಣಕ್ಕೆ ನೋಟೀಸ್ ಬಂದಿರಬಹುದು. ಹೆಚ್ಚುವರಿ ಮಾಹಿತಿ ಕೋರಲಾದರೂ ನೋಟೀಸ್ ಬಂದಿರಬಹುದು. ನೋಟೀಸ್ ಯಾವುದೇ ಸ್ತರದ್ದಾದರೂ ಅದಕ್ಕೆ ಸ್ಪಂದಿಸುವುದನ್ನು ತಪ್ಪಿಸಬೇಡಿ. ಆದಾಯ ತೆರಿಗೆ ಇಲಾಖೆ ಕೇಳುವ ಮಾಹಿತಿಯನ್ನು ತಪ್ಪದೇ ನೀಡಿ. ಇಲ್ಲದಿದ್ದರೆ ಅದು ಅಪರಾಧವಾಗುತ್ತದೆ.
ಐಟಿ ಇಲಾಖೆ ಕಳುಹಿಸುವ ನೋಟೀಸ್ಗಳು
ಮಾಹಿತಿ ಕೋರಿಕೆ: ನಿಮ್ಮ ಟ್ಯಾಕ್ಸ್ ರಿಟರ್ನ್ ಬಗ್ಗೆ ಇಲಾಖೆಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ಈ ರೀತಿಯ ನೋಟೀಸ್ ನೀಡಲಾಗುತ್ತದೆ.
ಆಡಿಟ್ ನೋಟಿಫಿಕೇಶನ್: ನಿಮ್ಮ ಟ್ಯಾಕ್ಸ್ ರಿಟರ್ನ್ ಅನ್ನು ಆಡಿಟ್ ಮಾಡುವಾಗ ಈ ರೀತಿಯ ನೋಟೀಸ್ ಕಳುಹಿಸಲಾಗುತ್ತದೆ.
ಪೆನಾಲ್ಟಿ ನೋಟೀಸ್: ಆದಾಯ ತೆರಿಗೆ ಕಾಯ್ದೆಯ ನಿಯಮಗಳನ್ನು ನೀವು ಉಲ್ಲಂಘಿಸಿದ್ದರೆ ಈ ನೋಟೀಸ್ ಬರುತ್ತದೆ.
ಇದನ್ನೂ ಓದಿ: AIS: ನಿಮ್ಮ ಆದಾಯ, ತೆರಿಗೆಗಳ ಪೂರ್ಣ ವಿವರ ಎಐಎಸ್ನಲ್ಲಿ; ಐಟಿಆರ್ ಸಲ್ಲಿಸುವ ಮುನ್ನ ಒಮ್ಮೆ ಕಣ್ಣಾಡಿಸಿ
ಐಟಿ ನೋಟೀಸ್ ನಿರ್ಲಕ್ಷಿಸಿದರೆ ಯಾವ ದಂಡ ವಿಧಿಸುತ್ತದೆ?
ಒಂದು ವೇಳೆ ನೀವು ಐಟಿ ಇಲಾಖೆಯಿಂದ ಬರುವ ನೋಟೀಸ್ ಅನ್ನು ಕಡೆಗಣಿಸಿದ್ದೇ ಆದಲ್ಲಿ ದಂಡ ವಿಧಿಸಲಾಗುತ್ತದೆ. ನೋಟೀಸ್ ಯಾವ ಸ್ತರದ್ದು ಮತ್ತು ನಿಯಮ ಉಲ್ಲಂಘನೆ ಯಾವ ಸ್ವರೂಪದ್ದು ಎಂಬುದರ ಮೇಲೆ ದಂಡ ಅವಲಂಬಿತವಾಗುತ್ತದೆ. ಕೆಲ ಸಾಮಾನ್ಯ ಪೆನಾಲ್ಟಿಗಳು ಇಲ್ಲಿವೆ:
ಹೆಚ್ಚುವರಿ ತೆರಿಗೆ: ನೀವು ಕಡಿಮೆ ತೆರಿಗೆ ಕಟ್ಟಿದ್ದಲ್ಲಿ ಹೆಚ್ಚುವರಿ ತೆರಿಗೆಯನ್ನು ದಂಡವಾಗಿ ಪಡೆಯಲಾಗುತ್ತದೆ.
ಬಡ್ಡಿ: ನೀವು ಪಾವತಿಸದೇ ಇರುವ ತೆರಿಗೆ ಬಾಕಿಯ ಹಣಕ್ಕೆ ಬಡ್ಡಿಯನ್ನೂ ಸೇರಿಸಿ ಕೊಡಬೇಕಾಗುತ್ತದೆ.
ಅಪರಾಧ ಕ್ರಮ: ಕೆಲ ಪ್ರಕರಣಗಳಲ್ಲಿ ಐಟಿ ನೋಟೀಸ್ ನಿರ್ಲಕ್ಷಿಸಿದಲ್ಲಿ ಕ್ರಿಮಿನಲ್ ಪ್ರಾಸಿಕ್ಯೂಷನ್ ಎದುರಿಸಬೇಕಾಗಬಹುದು.
ಐಟಿ ನೋಟೀಸ್ ಬಂದರೆ ಏನು ಮಾಡಬೇಕು?
- ಐಟಿ ಇಲಾಖೆಯಿಂದ ನೋಟೀಸ್ ಬಂದರೆ ಅದಕ್ಕೆ ತಪ್ಪದೇ ಸ್ಪಂದಿಸಬೇಕು.
- ನಿಮ್ಮ ಐಟಿ ರಿಟರ್ನ್ನಲ್ಲಿ ವ್ಯತ್ಯಾಸ ಇದ್ದರೆ ಅದನ್ನು ಸರಿಪಡಿಸುವ ಅವಕಾಶ ಇರುತ್ತದೆ. ಪರಿಷ್ಕೃತ ರಿಟರ್ನ್ ಫೈಲ್ ಮಾಡಬಹುದು.
- ಐಟಿಆರ್ ತಪ್ಪಾಗಿದ್ದು, ಅಸೆಸ್ಮೆಂಟ್ ವರ್ಷದ ಅವಧಿ ಮುಗಿದುಹೋಗಿದ್ದರೆ ಆದಾಯ ತೆರಿಗೆ ಮೇಲ್ಮನವಿ ಕೇಂದ್ರಕ್ಕೆ ಮನವಿ ಸಲ್ಲಿಸಿ, ದಾಖಲೆ ಸರಿಪಡಿಸುವ ಅವಕಾಶ ಇರುತ್ತದೆ.
- ನೋಟೀಸ್ನಲ್ಲಿರುವ ಅಂಶದ ಬಗ್ಗೆ ಗೊಂದಲ ಇದ್ದರೆ ತೆರಿಗೆ ವೃತ್ತಿಪರರೊಬ್ಬರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಉತ್ತಮ.
- ನಿಮ್ಮ ಟ್ಯಾಕ್ಸ್ ರಿಟರ್ನ್ ಅನ್ನು ಇಲಾಖೆ ಆಡಿಟ್ ಮಾಡುತ್ತಿದ್ದರೆ ಆಗಲೂ ಕೂಡ ಟ್ಯಾಕ್ಸ್ ಪ್ರೊಫೆಷನಲ್ ಅವರ ಸಹಾಯ ಯಾಚಿಸಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ