ಸಾರ್ವಜನಿಕ ಭವಿಷ್ಯ ನಿಧಿ (PPF) ತೆರಿಗೆ ಪ್ರಯೋಜನಗಳ ಜೊತೆಗೆ ಉತ್ತಮ ರಿಟರ್ನ್ಸ್ ಒದಗಿಸುವ ಸರ್ಕಾರಿ ಉಳಿತಾಯ ಯೋಜನೆಗಳಲ್ಲಿ ಪ್ರಮುಖವಾದದ್ದು. ಆದಾಯ ತೆರಿಗೆ ಕಾಯ್ದೆಯ (Income Tax Act) ಸೆಕ್ಷನ್ 80ಸಿ ಅಡಿ ತೆರಿಗೆ ವಿನಾಯಿತಿ ಪಡೆಯಲು ಇದೊಂದು ಉತ್ತಮ ಹೂಡಿಕೆ ಆಯ್ಕೆಯಾಗಿದೆ. ಪಿಪಿಎಫ್ ಖಾತೆಯಲ್ಲಿ ಹೂಡಿಕೆ ಮಾಡಿರುವ ಸಂಚಿತ ಮೊತ್ತಕ್ಕೆ ನೀಡಲಾಗುವ ಬಡ್ಡಿಗೆ ತೆರಿಗೆ ವಿನಾಯಿತಿ ಇದ್ದು, ಮೆಚ್ಯೂರಿಟಿ ಅವಧಿಯ ಬಳಿಕ ಹಿಂಪಡೆಯುವ ಬಡ್ಡಿಗೆ ತೆರಿಗೆ ಇರುವುದಿಲ್ಲ. ಆದರೆ, ಒಂದು ಹಣಕಾಸು ವರ್ಷದಲ್ಲಿ ಕನಿಷ್ಠ 500 ರೂ.ಗಳಿಂದ ಗರಿಷ್ಠ 1,50,000 ರೂ.ವರೆಗೆ ಮಾತ್ರ ಹೂಡಿಕೆಗೆ ಅವಕಾಶವಿದೆ.
ವಾರ್ಷಿಕ ಗರಿಷ್ಠ 1,50,000 ರೂ. ಮಾತ್ರ ಹೂಡಿಕೆ ಮಾಡಲು ಅವಕಾಶ ಇರುವುದರಿಂದ ಒಂದಕ್ಕಿಂತ ಹೆಚ್ಚು ಪಿಪಿಎಫ್ ಖಾತೆ ತೆರೆದು ಹೆಚ್ಚು ಮೊತ್ತ ಹೂಡಿಕೆ ಮಾಡಬಹುದೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆದರೆ, ಈ ರೀತಿಯ ಹೂಡಿಕೆಯನ್ನು ಸರ್ಕಾರ ನಿರ್ಬಂಧಿಸಿದೆ. 2019ರ ನಂತರ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚಿನ ಪಿಪಿಎಫ್ ಖಾತೆ ತೆರೆದಿದ್ದರೆ ಅಂಥ ಖಾತೆಗಳನ್ನು ವಿಲೀನಗೊಳಿಸುವಂತಿಲ್ಲ ಎಂದು ಹಣಕಾಸು ಮತ್ತು ಆರ್ಥಿಕ ವ್ಯವಹಾರಗಳ ಸಚಿವಾಲಯ ಈ ಹಿಂದೆಯೇ ನಿರ್ದೇಶನ ನೀಡಿದೆ. 2019ರ ಪಿಪಿಎಫ್ ನಿಯಮಗಳ ಅಡಿಯಲ್ಲಿ ಒಂದಕ್ಕಿಂತ ಹೆಚ್ಚು ಪಿಪಿಎಫ್ ಖಾತೆಗಳನ್ನು ವಿಲೀನಗೊಳಿಸುವಂತಿಲ್ಲ. ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪಿಪಿಎಫ್ ಖಾತೆ ಹೊಂದಿದ್ದರೆ ಅಂಥ ಖಾತೆಗಳನ್ನು ಬಡ್ಡಿ ನೀಡದೇ ಮುಚ್ಚಬೇಕು ಎಂದು ಸಚಿವಾಲಯ 2022ರ ಮಾರ್ಚ್ನಲ್ಲಿ ಸ್ಪಷ್ಟಪಡಿಸಿತ್ತು. ಇಂಥ ಖಾತೆಗಳ ವಿಲೀನಕ್ಕೆ ಪ್ರಸ್ತಾವ ಕಳುಹಿಸಬಾರದು ಎಂದೂ ಸಚಿವಾಲಯ ಹೇಳಿತ್ತು.
ಪಿಪಿಎಫ್ ಹೂಡಿಕೆ ಮಿತಿಯನ್ನು ಹೆಚ್ಚಿಸಬೇಕು ಎಂಬ ಬೇಡಿಕೆ ಈಗಾಗಲೇ ಸರ್ಕಾರದ ಮುಂದಿದೆ. ಉದ್ಯೋಗಿಗಳ ಅನೇಕ ಸಂಘಟನೆಗಳು ಈ ವಿಚಾರವಾಗಿ ಸರ್ಕಾರವನ್ನು ಆಗ್ರಹಿಸಿವೆ. ಪಿಪಿಎಫ್ ಹೂಡಿಕೆಯ ವಾರ್ಷಿಕ ಮಿತಿಯನ್ನು 1.5 ಲಕ್ಷ ರೂ.ನಿಂದ 3 ಲಕ್ಷ ರೂ.ಗೆ ಹೆಚ್ಚಳ ಮಾಡಬೇಕು ಎಂದು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ಇತ್ತೀಚೆಗಷ್ಟೇ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿತ್ತು. ಪಿಪಿಎಫ್ ಮಿತಿಯನ್ನು ಹೆಚ್ಚಿಸುವುದರಿಂದ ದೇಶೀಯ ಉಳಿತಾಯ ಹೆಚ್ಚಾಗಲಿದೆ. ಖಾತೆದಾರರಿಗೂ ಪ್ರಯೋಜನವಾಗಲಿದೆ ಎಂದು ಐಸಿಎಐ ಹೇಳಿತ್ತು.
ಇದನ್ನೂ ಓದಿ: PPF: ಪಿಪಿಎಫ್ ಹೂಡಿಕೆ ಮಿತಿ ಹೆಚ್ಚಿಸಿ; ಸರ್ಕಾರಕ್ಕೆ ಬಜೆಟ್ ಬೇಡಿಕೆ ಸಲ್ಲಿಸಿದ ಐಸಿಎಐ
ಪಿಪಿಎಫ್ ಖಾತೆಯಲ್ಲಿ ವಾರ್ಷಿಕ ಹೂಡಿಕೆಗೆ 1 ಲಕ್ಷ ರೂ. ಮಿತಿ ಇತ್ತು. 2014ರಲ್ಲಿ ಕೇಂದ್ರ ಸರ್ಕಾರ ಮಿತಿಯನ್ನು 1.5 ಲಕ್ಷ ರೂ.ಗೆ ಹೆಚ್ಚಿಸಿತ್ತು. ಇದೀಗ 3 ಲಕ್ಷ ರೂ.ವರೆಗೆ ಹೆಚ್ಚಿಸಬೇಕೆಂಬ ಬೇಡಿಕೆ ಇದೆ. 2023ರ ಫೆಬ್ರವರಿ 1ರಂದು 2023-24ನೇ ಸಾಲಿನ ಬಜೆಟ್ ಮಂಡನೆಯಾಗಲಿದ್ದು, ಈ ಬೇಡಿಕೆಯನ್ನು ಸರ್ಕಾರ ಈಡೇರಿಸುವ ನಿರೀಕ್ಷೆ ಇದೆ ಎನ್ನಲಾಗಿದೆ. ಆದರೆ, ಈ ವಿಚಾರವಾಗಿ ಸರ್ಕಾರ ಅಧಿಕೃತ ಹೇಳಿಕೆ ನೀಡಿಲ್ಲ.
Published On - 2:12 pm, Tue, 27 December 22