ಹೊಸ ವರ್ಷ (New Year) ಸಮೀಪಿಸುತ್ತಿದೆ. 2023ರಲ್ಲಿ ಯಾವ ವೇದಿಕೆಯಲ್ಲಿ ಹೂಡಿಕೆ ಮಾಡಿದರೆ (Investment) ಉತ್ತಮ? ಎಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ರಿಟರ್ನ್ಸ್ (returns) ಗಳಿಸಬಹುದು? ಹೊಸ ವರ್ಷಕ್ಕೆ ಏನೇನು ಹಣಕಾಸು ನಿರ್ಣಯಗಳನ್ನು ಮಾಡಿಕೊಳ್ಳಬಹುದು ಎಂಬುದನ್ನು ಯೋಚಿಸಲು ಮತ್ತು ಸಾಧಕ ಬಾಧಕ ಲೆಕ್ಕಾಚಾರ ಹಾಕಲು ಇದು ಉತ್ತಮ ಸಮಯ. ಮ್ಯೂಚುವಲ್ ಫಂಡ್ನಲ್ಲಿ (Mutual Fund) ಹೂಡಿಕೆ ಮಾಡುವ ವಿಚಾರಕ್ಕೆ ಬಂದಾಗ ವ್ಯವಸ್ಥಿತ ಹೂಡಿಕೆ ಯೋಜನೆ ಅಥವಾ ಎಸ್ಐಪಿ (SIP) ವಿಧಾನದಲ್ಲಿ ಹೂಡಿಕೆ ಮಾಡುವುದು ಉತ್ತಮವೇ ಒಂದು ಬಾರಿಯ ಹೂಡಿಕೆ ಅಥವಾ ಲಂಸಮ್ (Lumpsum) ಹೂಡಿಕೆ ಒಳ್ಳೆಯದೇ ಎಂಬ ಪ್ರಶ್ನೆ ಮೂಡುತ್ತದೆ. ಈ ಎರಡೂ ವಿಧಾನದ ಹೂಡಿಕೆಯ ಸಾಧಕ ಬಾಧಕಗಳನ್ನು ಹಣಕಾಸು ತಜ್ಞರು ವಿವರಿಸಿದ್ದಾರೆ.
ನಿರೀಕ್ಷೆಗಿಂತಲೂ ಹೆಚ್ಚು ಕೆಳಮಟ್ಟದಲ್ಲಿ ಮಾರುಕಟ್ಟೆ ಕುಸಿದಿದ್ದ ಸಂದರ್ಭದಲ್ಲಾದರೆ ಲಂಸಮ್ ಹೂಡಿಕೆ ವಿಧಾನ ಉತ್ತಮ ಎಂದು ಕ್ಲಿಯರ್ ಟ್ಯಾಕ್ಸ್ ಸ್ಥಾಪಕ ಮತ್ತು ಸಿಇಒ ಅರ್ಚಿತ್ ಗುಪ್ತಾ ತಿಳಿಸಿರುವಾಗಿ ‘ಲೈವ್ ಮಿಂಟ್ ಡಾಟ್ಕಾಂ’ ವರದಿ ಮಾಡಿದೆ. ಇಂಥ ಸಂದರ್ಭದಲ್ಲಿ ಭವಿಷ್ಯದಲ್ಲಿ ಮಾರುಕಟ್ಟೆ ಚೇತರಿಸುವ ನಿರೀಕ್ಷೆಯೊಂದಿಗೆ ಹೂಡಿಕೆದಾರರು ಹೆಚ್ಚು ರಿಟರ್ನ್ಸ್ ನಿರೀಕ್ಷಿಸಬಹುದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Mutual Funds: ಉತ್ತಮ ರಿಟರ್ನ್ಸ್ ತಂದುಕೊಡುತ್ತಿರುವ ಮಿಡ್ಕ್ಯಾಪ್ ಮ್ಯೂಚುವಲ್ ಫಂಡ್ಗಳಿವು
ಜಾಗತಿಕ ಮಟ್ಟದಲ್ಲಿ ಆರ್ಥಿಕ ಹಿಂಜರಿತವಾದರೂ ಅದರ ಪರಿಣಾಮ ಸಣ್ಣ ಮಟ್ಟಿಗಾದರೂ ಭಾರತದ ಮೇಲೆ ಆಗಲಿದೆ. ವೆಚ್ಚದಾಯಕ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡಬೇಕೇ ಅಥವಾ ಚೀನಾದಂಥ ಮೌಲ್ಯವಾರು ಕಡಿಮೆ ವೆಚ್ಚದ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡುವುದು ಸೂಕ್ತವೇ ಎಂಬ ಬಗ್ಗೆ ವಿದೇಶಿ ಹೂಡಿಕೆದಾರರು ಚಿಂತನೆ ಮಾಡಲಿದ್ದಾರೆ ಎಂದು ಪ್ರೊಫಿಷಿಯೆಂಟ್ ಈಕ್ವಿಟೀಸ್ ಸ್ಥಾಪಕ, ನಿರ್ದೇಶಕ ಮನೋಜ್ ದಾಲ್ಮಿಯಾ ಹೇಳಿದ್ದಾರೆ.
ಮಾರುಕಟ್ಟೆ ಏರಿಳಿತದಿಂದ ಕೂಡಿದ್ದಾಗ ಎಸ್ಐಪಿ ವಿಧಾನದಲ್ಲಿ ಹೂಡಿಕೆ ಮಾಡುವ ಮೂಲಕ ರಿಟರ್ನ್ಸ್ ಅನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಿದೆ ಎಂದು ದಾಲ್ಮಿಯಾ ಹೇಳಿದ್ದಾರೆ. ನಮ್ಮಲ್ಲಿ ಮಾರುಕಟ್ಟೆಯ ಏರಿಳಿತಗಳ ಬಗ್ಗೆ ನಿಖರವಾಗಿ ಮುನ್ಸೂಚನೆ ನೀಡುವುದು ಕಷ್ಟ. ಹೀಗಾಗಿ ಎಸ್ಐಪಿ ಹೂಡಿಕೆ ಪ್ರಯೋಜನಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ. ಕಡಿಮೆ ಮೊತ್ತದೊಂದಿಗೆ ಹೂಡಿಕೆ ಆರಂಭಿಸಲು ಎಸ್ಐಪಿಯಲ್ಲಿ ಅವಕಾಶ ದೊರೆಯುತ್ತದೆ. ಇದು ಪ್ರಯೋಜನಕಾರಿ ಎಂದು ಅರ್ಚಿತ್ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.
ಅನೇಕ ಸಂದರ್ಭಗಳಲ್ಲಿ ಲಂಸಮ್ ಹೂಡಿಕೆಗಿಂತ ಎಸ್ಐಪಿಯೇ ಉತ್ತಮ ವಿಧಾನವಾಗಿರುತ್ತದೆ. ಜಾಗತಿಕ ಮಾರುಕಟ್ಟೆ ಅನಿಶ್ಚಿತತೆಯ ಸಂದರ್ಭದಲ್ಲಿ ಎಸ್ಐಪಿ ಉತ್ತಮ. ಮಾರುಕಟ್ಟೆ ಕುಸಿತವಾಗಿದ್ದಾಗ ಎಸ್ಐಪಿ ಮೊತ್ತ ಹೆಚ್ಚಿಸಬಹುದು. ಮಾರುಕಟ್ಟೆ ಏರಿಕೆಯ ಹಾದಿಯಲ್ಲಿದ್ದಾಗ ಹೂಡಿಕೆ ಮೊತ್ತ ಕಡಿಮೆ ಮಾಡುವ ಅವಕಾಶ ಈ ವಿಧಾನದಲ್ಲಿದೆ ಎಂದು ಟ್ರೆಂಡ್ಲೈನ್ ಸಹ ಸಂಸ್ಥಾಪಕ ಅಂಬರ್ ಪಬ್ರೆಜಾ ತಿಳಿಸಿದ್ದಾರೆ. ಮಾರುಕಟ್ಟೆ ಕುಸಿತವಾಗಿದ್ದರೂ ಅಥವಾ ಏರಿಕೆಯ ಹಾದಿಯಲ್ಲಿದ್ದರೂ ನಾವು ಹೂಡಿಕೆ ಮಾಡಿದ ಬಂಡವಾಳಕ್ಕೆ ಹೆಚ್ಚಿನ ಆಪತ್ತಿರುವುದಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: PPF Investment Plan: ಪಿಪಿಎಫ್ನಲ್ಲಿ ವಾರ್ಷಿಕ 1.5 ಲಕ್ಷ ರೂಪಾಯಿಗಿಂತ ಹೆಚ್ಚಿನ ಹೂಡಿಕೆಗೆ ಅವಕಾಶ ಇದೆಯೇ?
ಒಂದು ವೇಳೆ ನಿಮ್ಮ ಬಳಿ ದೊಡ್ಡ ಮೊತ್ತ ಇದ್ದು ಹೂಡಿಕೆ ಮಾಡುವ ಉದ್ದೇಶ ಹೊಂದಿದ್ದರೆ ಲಂಸಮ್ ಹೂಡಿಕೆ ಉತ್ತಮ. ಹೆಚ್ಚು ರಿಟರ್ನ್ಸ್ ತಂದುಕೊಡಬಹುದು. ಆರಂಭದಲ್ಲಿ ಡೆಬ್ಟ್ ಮ್ಯೂಚುವಲ್ ಫಂಡ್ಗಳಲ್ಲಿ ಲಂಸಮ್ ಹೂಡಿಕೆ ಮಾಡಿ ನಂತರ ಅದನ್ನು ವ್ಯವಸ್ಥಿತ ವರ್ಗಾವಣೆ ಯೋಜನೆಯಡಿ (STP) ಈಕ್ವಿಟಿ ಮ್ಯೂಚುವಲ್ ಫಂಡ್ಗೆ ಹೂಡಿಕೆ ಮಾಡಬಹುದು ಎಂದು ಪಬ್ರೆಜಾ ಸಲಹೆ ನೀಡಿದ್ದಾರೆ.
ಚೀನಾದಲ್ಲಿ ಕೋವಿಡ್ ಪರಿಸ್ಥಿತಿ ಬಿಗಡಾಯಿಸಿರುವುದರಿಂದ ವಿದೇಶಿ ಸಾಂಸ್ಥಿಕ ಹೂಡಿಕೆ ಮತ್ತು ಎಂಎಫ್ ಒಳಹರಿವು ಕಡಿಮೆ ಇದೆ. ಸದ್ಯದ ಪರಿಸ್ಥಿತಿಯಲ್ಲಿ ಎಸ್ಐಪಿ ಹೂಡಿಕೆಯೇ ಸೂಕ್ತ ಎಂದು ಪಬ್ರೆಜಾ ಸಲಹೆ ನೀಡಿದ್ದಾರೆ.