2022ನೇ ವರ್ಷಾಂತ್ಯ ಸಮೀಪಿಸಿದೆ. ಕೋವಿಡ್ ಸಾಂಕ್ರಾಮಿಕದಿಂದ (Covid-19) ದೇಶ ತುಸು ಚೇತರಿಸಿಕೊಂಡ ಬಳಿಕ ಹಣದುಬ್ಬರ (Inflation) ಏರಿಕೆ, ಆರ್ಥಿಕ ಬೆಳವಣಿಗೆ ಕುಂಠಿತ (Economic Slowdown), ಕ್ರಿಪ್ಟೋ ಕರೆನ್ಸಿ ಕುಸಿತ, ಬಡ್ಡಿ ದರ ಹೆಚ್ಚಳ, ರೆಪೊ ದರ ಏರಿಕೆ (Repo Rate Hike), ಕಂಪನಿಗಳಲ್ಲಿ ಉದ್ಯೋಗ (Layoffs) ಕಡಿತ… ಹೀಗೆ ಅನೇಕ ಸಮಸ್ಯೆಗಳನ್ನು ಎದುರಿಸಿದ ವರ್ಷವಿದು. ಈ ಎಲ್ಲದರ ಮಧ್ಯೆಯೂ 2020 ಮತ್ತು 2021ಕ್ಕೆ ಹೋಲಿಸಿದರೆ ದುಡಿಯುವ ವೇತನದಾರ ವರ್ಗಕ್ಕೆ ಈ ವರ್ಷ ತುಸು ರಿಲೀಫ್ ನೀಡಿದ ವರ್ಷವಾಗಿತ್ತು. ಅನೇಕ ಕಂಪನಿಗಳು ವೇತನ ಹೆಚ್ಚಳ ಸೇರಿದಂತೆ ಉದ್ಯೋಗಿಗಳ ಪರ ನಿರ್ಣಯ ಕೈಗೊಂಡಿದ್ದವು. ಜನರು ಈ ವರ್ಷ ಯಾವ ರೀತಿಯ ಹೂಡಿಕೆಯಲ್ಲಿ ತೊಡಗಿಸಿಕೊಂಡರು? ಈ ವರ್ಷದಿಂದ ಕಲಿಯಬೇಕಾದ ಹಣಕಾಸು ಪಾಠಗಳೇನು? ಇಲ್ಲಿದೆ ಒಂದು ಸಣ್ಣ ಹಿನ್ನೋಟ.
ಜಾಗತಿಕ ಆರ್ಥಿಕ ಹಿಂಜರಿತ ಭೀತಿ, ರಷ್ಯಾ-ಉಕ್ರೇನ್ ಯುದ್ಧ, ಪೂರೈಕೆ ಸರಪಳಿಯಲ್ಲಿ ವ್ಯತ್ಯಯ, ಜಾಗತಿಕ ಮಾರುಕಟ್ಟೆ ತಲ್ಲಣಗಳಿಂದಾಗಿ 2022ರಲ್ಲಿ ಮ್ಯೂಚುವಲ್ ಫಂಡ್ಗಳಲ್ಲಿನ ಹೂಡಿಕೆ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿತ್ತು. ಈ ಮಧ್ಯೆ ಆರ್ಬಿಐ ಸತತವಾಗಿ ರೆಪೊ ದರವನ್ನು ಹೆಚ್ಚಿಸಿದ್ದು ಮತ್ತು ಇದಕ್ಕನುಗುಣವಾಗಿ ಬ್ಯಾಂಕ್ಗಳು ಠೇವಣಿಗಳ ಮೇಲಿನ ಬಡ್ಡಿ ದರ ಹೆಚ್ಚಿಸಿದ್ದು, ವರ್ಷದ ಮಧ್ಯಭಾಗದಿಂದೀಚೆಗೆ ವೈಯಕ್ತಿಯ ಹೂಡಿಕೆದಾರರು ಮ್ಯೂಚುವಲ್ ಫಂಡ್ ಬದಲು ಬ್ಯಾಂಕ್ ಠೇವಣಿಗಳನ್ನು ಆಯ್ಕೆ ಮಾಡಿರಬಹುದು ಎಂದು ಅಂದಾಜಿಸಲಾಗಿದೆ. ಆದಾಗ್ಯೂ, 2023ರಲ್ಲಿ ಮ್ಯೂಚುವಲ್ ಫಂಡ್ ವಹಿವಾಟು ಶೇಕಡಾ 16ರಿಂದ 17ರಷ್ಟು ಹೆಚ್ಚಳ ಕಾಣುವ ಸಾಧ್ಯತೆ ಇದೆ ಎಂದು ಹೂಡಿಕೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆರ್ಬಿಐ ಮತ್ತೆ ರೆಪೊ ದರ ಹೆಚ್ಚಿಸುವ ನಿರೀಕ್ಷೆ ಇರುವುದರಿಂದ ಮ್ಯೂಚುವಲ್ ಫಂಡ್ ಅಥವಾ ಬ್ಯಾಂಕ್ ಹೂಡಿಕೆ ಮಾಡುವ ಮುನ್ನ ಸಾಕಷ್ಟು ವಿಮರ್ಶೆ ಮಾಡಿಕೊಳ್ಳುವುದು ಉತ್ತಮ.
ದಿಢೀರ್ ರಿಟರ್ನ್ಸ್ನಿಂದಾಗಿ ಕ್ರಿಪ್ಟೋಕರೆನ್ಸಿ ಹೂಡಿಕೆ 2022ರಲ್ಲಿ ಯುಜನರನ್ನು ಸೆಳೆದಿದ್ದು ನಿಜ. ಆದರೆ, ಅನಿಯಂತ್ರಿತ ಹೂಡಿಕೆ ತಾಣವಾಗಿರುವ ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡುವುದರಿಂದ ಅಪಾಯ ಸದಾ ಕಟ್ಟಿಟ್ಟ ಬುತ್ತಿ. ಜಾಗತಿಕ ಕ್ರಿಪ್ಟೊಕರೆನ್ಸಿ ಮಾರುಕಟ್ಟೆಯಲ್ಲಿ ತೀವ್ರ ಕುಸಿತವಾಗಿರುವ ಬಗ್ಗೆ ಇತ್ತೀಚಿನ ವರದಿಗಳು ಗಮನಾರ್ಹ. ಹೀಗಾಗಿ 2023ರಲ್ಲಿ ಹೂಡಿಕೆ ಮಾಡುವಾಗ ಬಹಳ ಎಚ್ಚರಿಕೆಯಿಂದ ಇರುವುದು ಒಳಿತು. ಅದರಲ್ಲೂ ಅನಿಯಂತ್ರಿತ ಹೂಡಿಕೆ ಮಾಡದಿರುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ ತಜ್ಞರು.
ಇದನ್ನೂ ಓದಿ: FD Rates: ಹಿರಿಯ ನಾಗರಿಕರ ಉಳಿತಾಯ ಯೋಜನೆ VS ಎಫ್ಡಿ; ಯಾವುದರಲ್ಲಿ ಹೂಡಿಕೆ ಉತ್ತಮ?
ಹೊಳೆಯುವುದೆಲ್ಲ ಚಿನ್ನವಲ್ಲ ಎಂಬುದನ್ನು ಕ್ರಿಪ್ಟೊಕರೆನ್ಸಿ ನಿರೂಪಿಸಿದೆ. ಹಣಕಾಸು ಉದ್ದೇಶಗಳು, ಹೂಡಿಕೆ ತಾಣಗಳು, ಅಪಾಯದ ಸಾಧ್ಯತೆ ಮತ್ತು ಇತರ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ಹೂಡಿಕೆ ಮಾಡಿ ಎಂದು ‘ಬ್ಯಾಂಕ್ಬಜಾರ್ ಡಾಟ್ಕಾಂ’ ಸಿಇಒ ಅದಿಲ್ ಶೆಟ್ಟಿ ಸಲಹೆ ನೀಡಿದ್ದಾರೆ.
2022ರ ಮೊದಲಾರ್ಧದಲ್ಲಿ ಜಾಗತಿಕ ಮಟ್ಟದಲ್ಲಿ ಷೇರು ಮಾರುಕಟ್ಟೆಗಳು ತೀವ್ರ ಕುಸಿತ ಕಂಡಿದ್ದವು. ರಷ್ಯಾ-ಉಕ್ರೇನ್ ಯುದ್ಧ, ಪೂರೈಕೆ ವ್ಯತ್ಯಯ ಇತ್ಯಾದಿ ಕಾರಣಗಳಿಂದ ಷೇರುಪೇಟೆಗಳಲ್ಲಿ ತಲ್ಲಣ ಕಾಣಿಸಿತ್ತು. ಆದರೆ, ಮಧ್ಯಭಾಗದ ನಂತರ ಚೇತರಿಕೆ ಕಾಣಲಾರಂಭಿಸಿತು. ಇದೀಗ ಮತ್ತೆ ಏರಿಳಿತದ ಟ್ರೆಂಡ್ ಕಾಣಿಸುತ್ತಿದೆ. ಹೀಗಾಗಿ ಷೇರು ಮಾರುಕಟ್ಟೆ ಹೂಡಿಕೆಗೆ ಮುಂದಾಗುವುದಾದರೆ ದೀರ್ಘಾವಧಿಯ ಲಾಭಕ್ಕೆ ಕಾಯುವ ತಾಳ್ಮೆ ಹೊಂದುವುದು ಒಳ್ಳೆಯದು. ದೀರ್ಘಾವಧಿಗೆ ಉತ್ತಮ ರಿಟರ್ನ್ಸ್ ಗಳಿಸುವ ಗುರಿಯೊಂದಿಗೆ ಹೂಡಿಕೆ ಮಾಡಬಬಹುದು. ಬದಲಿಗೆ ಅಲ್ಪಾವಧಿಯ ಉದ್ದೇಶ ಇಟ್ಟುಕೊಂಡರೆ ಕೈಸುಟ್ಟುಕೊಳ್ಳುವ ಸಾಧ್ಯತೆ ಹೆಚ್ಚು ಎಂದು ಸಲಹೆ ನೀಡಿದ್ದಾರೆ ಹೂಡಿಕೆ ತಜ್ಞರು.
ಆರ್ಬಿಐ ಮೇ ತಿಂಗಳ ನಂತರ ಒಟ್ಟಾರೆಯಾಗಿ ರೆಪೊ ದರದಲ್ಲಿ 225 ಮೂಲಾಂಶ ಹೆಚ್ಚಳ ಮಾಡಿದೆ. ಪರಿಣಾಮವಾಗಿ ಸಾಲದ ಬಡ್ಡಿ ದರಗಳೂ ಏರಿಕೆಯಾಗಿವೆ. ಇಎಂಐ ಮೊತ್ತವೂ ಹೆಚ್ಚಾಗಿದೆ. ಅವಧಿಪೂರ್ವ ಸಾಲ ಮರುಪಾವತಿ ಮಾಡಿದವರು ಹೆಚ್ಚು ಬಡ್ಡಿ ಪಾವತಿಸಬೇಕಾದ ಅನಿವಾರ್ಯತೆಯಿಂದ ಬಚಾವಾಗಿದ್ದಾರೆ. 2023ರ ಫೆಬ್ರವರಿಯಲ್ಲಿ ಮತ್ತೆ ಆರ್ಬಿಐ ರೆಪೊ ದರ ಹೆಚ್ಚಿಸುವ ಸಾಧ್ಯತೆ ಇದ್ದು, ಸಾಧ್ಯವಾದಲ್ಲಿ ಸಾಲದ ಅವಧಿಪೂರ್ವ ಮರುಪಾವತಿ ಮಾಡುವುದು ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಡಿಸೆಂಬರ್ ವರೆಗೆ ಒಟ್ಟಾರೆಯಾಗಿ ಸುಮಾರು 28 ಬ್ಯಾಂಕ್ಗಳು ಸ್ಥಿರ ಠೇವಣಿ ಅಥವಾ ಎಫ್ಡಿ ಬಡ್ಡಿ ದರ ಹೆಚ್ಚಳ ಮಾಡಿವೆ. ಸಾಮಾನ್ಯರಿಗೆ ಎಫ್ಡಿಗೆ ಶೇಕಡಾ 7 ಮತ್ತು ಇದಕ್ಕಿಂತ ಹೆಚ್ಚು ಬಡ್ಡಿ ದೊರೆಯುತ್ತಿದ್ದರೆ ಹಿರಿಯ ನಾಗರಿಕರಿಗೆ ಕೆಲವೊಂದು ಬ್ಯಾಂಕ್ಗಳಲ್ಲಿ ಶೇಕಡಾ 9ರ ವರೆಗೆ ಬಡ್ಡಿ ನೀಡಲಾಗುತ್ತಿದೆ. ಹೀಗಾಗಿ ಎಫ್ಡಿ ಖಾತೆಗಳನ್ನು ತೆರೆಯುವ ಮೂಲಕ ಉತ್ತಮ ರಿಟರ್ನ್ಸ್ ಪಡೆಯಲು ಇದೊಂದು ಉತ್ತಮ ಅವಕಾಶವಾಗಿದೆ.
ಜಾಗತಿಕ ಆರ್ಥಿಕ ಹಿಂಜರಿತದ ಪರಿಣಾಮವಾಗಿ ಅನೇಕ ಕಂಪನಿಗಳು, ಪ್ರಮುಖವಾಗಿ ಟೆಕ್ ಕಂಪನಿಗಳು ಉದ್ಯೋಗ ಕಡಿತದ ಮೊರೆ ಹೋಗಿವೆ. ಮತ್ತೊಂದೆಡೆ ಹಣದುಬ್ಬರವೂ ಹೆಚ್ಚುತ್ತಿದೆ. ಹೀಗಾಗಿ ತುರ್ತು ಸಂದರ್ಭಗಳಲ್ಲಿ ಜೀವನಾವಶ್ಯಕತೆಗಳಿಗಾಗಿ ಸೂಕ್ತ ಯೋಜನೆ ರೂಪಿಸಬೇಕಾದ ಸಮಯವಿದು. ಖರ್ಚು-ವೆಚ್ಚ, ಹೂಡಿಕೆ, ಉಳಿತಾಯದ ಬಗ್ಗೆ ನಾಗರಿಕರು ಸೂಕ್ತ ಯೋಜನೆ ರೂಪಿಸಿಕೊಂಡು ಎಚ್ಚರಿಕೆಯ ಹೆಜ್ಜೆ ಇಡಬೇಕು ಎಂದು ವೈಯಕ್ತಿಕ ಹಣಕಾಸು ಸಲಹಾ ತಜ್ಞರು ಸಲಹೆ ನೀಡಿದ್ದಾರೆ.
Published On - 3:41 pm, Mon, 26 December 22