ತಂತ್ರಜ್ಞಾನದ (Technology) ಬಳಕೆ ಹೆಚ್ಚಳದೊಂದಿಗೆ ಆನ್ಲೈನ್ ತಾಣಗಳಲ್ಲಿ ಉದ್ಯೋಗಾವಕಾಶಗಳೂ ಹೆಚ್ಚಾಗಿವೆ. ವ್ಯಾಪಾರ, ಮಾರ್ಕೆಟಿಂಗ್ ವಿಧಾನಗಳಲ್ಲಿಯೂ ಗಣನೀಯ ಬದಲಾವಣೆಗಳಾಗಿದ್ದು, ಸ್ವ ಉದ್ಯಮ, ಸಣ್ಣ ಉದ್ದಿಮೆಗಳಿಗೂ (Small Business) ವಿಪುಲ ಅವಕಾಶಗಳು ಸೃಷ್ಟಿಯಾಗಿವೆ. ಮನೆಯಲ್ಲೇ ಕುಳಿತುಕೊಂಡು ಆನ್ಲೈನ್ ಮೂಲಕ ಉದ್ಯಮ ನಡೆಸುವುದರೊಂದಿಗೆ ಹೆಚ್ಚು ಸಂಪಾದನೆ ಮಾಡಲು ಅನೇಕ ಅವಕಾಶಗಳು ಸೃಷ್ಟಿಯಾಗಿವೆ. ಅನೇಕ ಮಂದಿಗೆ ಸ್ವಂತ ಉದ್ಯಮ ನಡೆಸಬೇಕೆಂಬ ಬಯಕೆ ಇರುತ್ತದೆ. ಆದರೆ, ಹೂಡಿಕೆಗೆ ಬಂಡವಾಳದ ಸಮಸ್ಯೆ ಇರುತ್ತದೆ. ಇಂಥ ಸನ್ನಿವೇಶದಲ್ಲಿ, ಕಡಿಮೆ ಹೂಡಿಕೆಯೊಂದಿಗೆ (Investment) ಹೆಚ್ಚು ಆದಾಯ ಗಳಿಸಬಹುದಾದ ಕೆಲವು ಉದ್ಯಮಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
ಬಟ್ಟೆಗಳ ಮಾರಾಟಕ್ಕೆ ಇ-ಕಾಮರ್ಸ್ ವೆಬ್ಸೈಟ್ ಆರಂಭಿಸುವ ಮೂಲಕ ನೀವು ಉದ್ಯಮ ಕ್ಷೇತ್ರಕ್ಕೆ ಕಾಲಿಡಬಹುದು. ಇದಕ್ಕೆ ಚಿಲ್ಲರೆ ಮಳಿಗೆ ತೆರೆಯಲು ಬೇಕಾದಷ್ಟು ದೊಡ್ಡ ಮೊತ್ತದ ಹೂಡಿಕೆ ಅಗತ್ಯವಿಲ್ಲ. ವೆಬ್ಸೈಟ್ ಆರಂಭಿಸುವ ಮೂಲಕ ವಿವಿಧ ವಯಸ್ಸಿನ ಜನರಿಗೆ ವಿವಿಧ ಆಯ್ಕೆಯ ಬಟ್ಟೆಗಳನ್ನು ಮಾರಾಟ ಮಾಡಬಹುದು. ಆನ್ಲೈನ್ ಶಾಪಿಂಗ್ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಇದೊಂದು ಉತ್ತಮ ಆಯ್ಕೆಯಾಗಬಲ್ಲದು. ಇನ್ಸ್ಟಾಗ್ರಾಂ, ಫೇಸ್ಬುಕ್ನಂಥ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಪ್ರಚಾರವನ್ನೂ ಮಾಡಬಹುದಾಗಿದೆ. ಇದಕ್ಕೆ ಹೆಚ್ಚಿನ ಹೂಡಿಕೆ ಅಗತ್ಯವಿರುವುದಿಲ್ಲ.
ಗೃಹಾಲಂಕಾರ ಮತ್ತು ಪೀಠೋಪಕರಣಗಳ ಆನ್ಲೈನ್ ಮಾರಾಟ ಉದ್ಯಮವನ್ನೂ ಆರಂಭಿಸಬಹುದು. ಇದಕ್ಕೂ ಹೆಚ್ಚಿನ ಹೂಡಿಕೆ ಮಾಡಬೇಕಾಗಿಲ್ಲ. ಆನ್ಲೈನ್ ಮೂಲಕವೇ ಹೋಲ್ಸೇಲ್ ಮಾರಾಟಗಾರರಿಂದ ಖರೀದಿಸಿ ಚಿಲ್ಲರೆ ಮಾರಾಟ ಮಾಡುವುದರಿಂದ ಹೆಚ್ಚಿನ ಲಾಭವನ್ನೂ ಗಳಿಸಬಹುದು. ಯಾವ ರೀತಿಯ ವಸ್ತುಗಳಿಗೆ ಹೆಚ್ಚಿನ ಬೇಡಿಕೆ ಇದೆ, ಯಾವ ರೀತಿಯಲ್ಲಿ ಉದ್ಯಮ ನಡೆಸಬಹುದು ಎಂಬ ಬಗ್ಗೆ ತುಸು ಅಧ್ಯಯನ ಮಾಡಬೇಕಾಗುತ್ತದೆ. ಈ ಕ್ಷೇತ್ರದಲ್ಲಿ ನೀವು ಆಸಕ್ತರಾಗಿದ್ದರಂತೂ ಇದೊಂದು ಉತ್ತಮ ಆಯ್ಕೆಯಾಗಬಲ್ಲದು.
ಸೌಂದರ್ಯ ಸಾಧನಗಳು ಮತ್ತು ಇತರ ಪ್ರಸಾಧನಗಳಿಗೆ ಮಾರುಕಟ್ಟೆಯಲ್ಲಿ ಬಹು ಬೇಡಿಕೆ ಇದೆ. ಇ-ಕಾಮರ್ಸ್ ತಾಣದ ಮೂಲಕ ಸೌಂದರ್ಯ ಸಾಧನಗಳ ಮಾರಾಟ ಉದ್ಯಮವನ್ನು ಕಡಿಮೆ ಖರ್ಚಿನೊಂದಿಗೆ ಆರಂಭಿಸಬಹುದು. ಕೈಗೆಟಕುವ ಬೆಲೆಯಲ್ಲಿ ಉತ್ತಮ ಸಾಧನಗಳನ್ನು ನೀಡುವ ಮೂಲಕ ಉದ್ಯಮದಲ್ಲಿ ಯಶಸ್ಸು ಕಾಣಬಹುದು. ಬ್ಲಾಗ್, ಯೂಟ್ಯೂಬ್, ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಚಾರವನ್ನೂ ಮಾಡಬಹುದು.
ಆನ್ಲೈನ್ ಮೂಲಕ ಆಟಿಕೆಗಳ ಮಾರಾಟ ಉದ್ಯಮ ಆರಂಭಿಸುವುದು ಕೂಡ ಉತ್ತಮ ಆದಾಯ ತಂದುಕೊಡಬಲ್ಲದು. ಇದಕ್ಕೆ ಹೆಚ್ಚಿನ ಹೂಡಿಕೆ ಅಗತ್ಯ ಇರುವುದಿಲ್ಲ. ಸಗಟು ಅಥವಾ ಹೋಲ್ಸೇಲ್ ಪೂರೈಕೆದಾರರಿಂದ ಹೆಚ್ಚಿನ ಸಂಖ್ಯೆಯ ಆಟಿಕೆಗಳನ್ನು ಕಡಿಮೆ ದರಕ್ಕೆ ಖರೀದಿಸಿ ಆನ್ಲೈನ್ ಮೂಲಕ ಮಾರಾಟ ಮಾಡುವುದರಿಂದ ಹೆಚ್ಚು ಆದಾಯ ಹಾಗೂ ಲಾಭ ಗಳಿಸಬಹುದು.
ಇತ್ತೀಚಿನ ದಿನಗಳಲ್ಲಿ ಇ-ಕಾಮರ್ಸ್ ತಾಣಗಳಲ್ಲಿ ಕಸ್ಟಮೈಸ್ಡ್ ಮುದ್ರಿತ ಸರಕುಗಳ ಬೇಡಿಕೆ ಹೆಚ್ಚಾಗಿದೆ. ಜನರು ತಮ್ಮ ನೆಚ್ಚಿನ ಫೋಟೋಗಳು ಅಥವಾ ಸಂದೇಶಗಳನ್ನು ಟಿ-ಶರ್ಟ್‌ಗಳು, ಮಗ್‌ಗಳು, ನೋಟ್‌ಬುಕ್‌ಗಳಲ್ಲಿ ಮುದ್ರಿಸಲು ಬಯಸುತ್ತಾರೆ. ಪ್ರಿಂಟರ್ ಖರೀದಿಸಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಸ್ತುಗಳ ಮೇಲೆ ಮುದ್ರಿಸಿ ಆನ್ಲೈನ್ ಮೂಲಕ ಮಾರಾಟ ಮಾಡುವ ಉದ್ದಿಮೆ ಆರಂಭಿಸುವುದು ಪ್ರಸಕ್ತ ಸನ್ನಿವೇಶದಲ್ಲಿ ಹೆಚ್ಚು ಆದಾಯ ತಂದುಕೊಡುವ ಮತ್ತು ಲಾಭದಾಯಕವಾಗಬಹುದು.
Published On - 12:30 pm, Mon, 26 December 22