ಭವಿಷ್ಯದ ಜೀವನಕ್ಕೆ ಈಗಲೇ ಅಡಿಪಾಯ ಹಾಕುವುದು ಜಾಣತನ. ಅಂತೆಯೇ ಇವತ್ತಿನ ಅಗತ್ಯಗಳ ಜೊತೆಗೆ ನಾಳೆಯ ಜೀವನಕ್ಕೆ ಒಂದಷ್ಟು ಹಣ ಎತ್ತಿ ಇಡುವುದು (money savings) ಬಹಳ ಮುಖ್ಯ. ಹಣ ಉಳಿಸುವುದು ಮಾತ್ರವಲ್ಲ, ಆ ಹಣವನ್ನು ವಿವಿಧ ಹೂಡಿಕೆಗಳಲ್ಲಿ ಹಾಕಿ ಬೆಳೆಸುವುದು ಬಹಳ ಮುಖ್ಯ. ಠೇವಣಿ ಯೋಜನೆಗಳಿಂದ ಹಿಡಿದು ಮ್ಯೂಚುವಲ್ ಫಂಡ್ಗಳವರೆಗೆ ಹಲವು ರೀತಿಯ ಹೂಡಿಕೆ ಆಯ್ಕೆಗಳು ನಮ್ಮ ಮುಂದಿವೆ. ಅದರಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಥವಾ ಪಿಪಿಎಫ್ (PPF- public provident fund) ಒಂದು. ಇದು ದೀರ್ಘ ಕಾಲದ ಹೂಡಿಕೆಗೆ ಹೇಳಿ ಮಾಡಿಸಿದ ಯೋಜನೆ. ಸರ್ಕಾರೀ ಬೆಂಬಲಿತ ಯೋಜನೆ ಇದಾದ್ದರಿಂದ ದೀರ್ಘಕಾಲದ ಹೂಡಿಕೆಗೆ ಧೈರ್ಯ ಮಾಡಬಹುದು. ಸಾಮಾನ್ಯ ಎಫ್ಡಿಗಳಿಗಿಂತಲೂ ಇದಕ್ಕೆ ಬಡ್ಡಿದರ ಹೆಚ್ಚು.
ಚಿಕ್ಕ ವಯಸ್ಸಿನಲ್ಲೇ (30 ವರ್ಷ ಆಸುಪಾಸಿನಲ್ಲಿ) ನೀವು ಪಿಪಿಎಫ್ ಮೇಲೆ ಹೂಡಿಕೆ ಆರಂಭಿಸಿದರೆ ಗುರಿ ಈಡೇರಿಕೆ ಸಾಧ್ಯ. ಸಾಧ್ಯವಾದರೆ ಪಿಪಿಎಫ್ ಮತ್ತು ಮ್ಯೂಚುವಲ್ ಫಂಡ್ ಎಸ್ಐಪಿ ಎರಡರಲ್ಲೂ ಹೂಡಿಕೆಗಳಿದ್ದರೆ ಇನ್ನೂ ಉತ್ತಮ.
ಪಿಪಿಎಫ್ನಲ್ಲಿ ಸದ್ಯ ವಾರ್ಷಿಕ ಬಡ್ಡಿ ದರ ಶೇ. 7.1ರಷ್ಟಿದೆ. ಈ ದರವನ್ನು ಸರ್ಕಾರ ಪ್ರತೀ ವರ್ಷ ಪರಿಷ್ಕರಿಸುತ್ತದೆ. ಪಿಪಿಎಫ್ನಲ್ಲಿ ನೀವು ಒಂದು ವರ್ಷದಲ್ಲಿ ಕನಿಷ್ಠ 500 ರೂನಿಂದ ಆರಂಭಿಸಿ 1.5 ಲಕ್ಷ ರೂವರೆಗೆ ಹಣ ಹಾಕಬಹುದು.
ಇದನ್ನೂ ಓದಿ: ಬ್ಯಾಂಕ್ ಸಾಲ ಸಿಗುತ್ತಿಲ್ಲವಾ? ಪರ್ಸನಲ್ ಲೋನ್ಗಿಂತಲೂ ಕಡಿಮೆ ದರಕ್ಕೆ ನಿಮಗೆ ಸುಲಭವಾಗಿ ಸಿಗುತ್ತದೆ ಈ ಸಾಲ
ಈ ಸ್ಕೀಮ್ 15 ವರ್ಷದ ಅವಧಿಯದ್ದಾಗಿರುತ್ತದೆ. ನಿಮಗೆ ಬೇಕೆಂದರೆ 15 ವರ್ಷದ ಬಳಿಕ ಪ್ರತೀ ಐದು ವರ್ಷಕ್ಕೆ ಯೋಜನೆ ವಿಸ್ತರಿಸಿಕೊಂಡು ಹೋಗಬಹುದು. ಪಿಪಿಎಫ್ನ ಇನ್ನೊಂದು ಅನುಕೂಲವೆಂದರೆ ಇದರಲ್ಲಿರುವ ಹೂಡಿಕೆಯ ಹಣಕ್ಕೆ ತೆರಿಗೆ ವಿನಾಯಿತಿ ಸಿಗುತ್ತದೆ.
ಈ ಸ್ಕೀಮ್ನಲ್ಲಿ ವರ್ಷಕ್ಕೆ ಒಂದೂವರೆ ಲಕ್ಷ ರೂವರೆಗೆ ಹೂಡಿಕೆ ಸಾಧ್ಯ. ಅಂದರೆ ತಿಂಗಳಿಗೆ 12,500 ರೂ ಹೂಡಿಕೆ ಮಾಡಬಹುದು. ನೀವು ಈ ರೀತಿ 25 ವರ್ಷ ಕಾಲ ಇಷ್ಟು ಮೊತ್ತವನ್ನು ಹೂಡಿಕೆ ಮಾಡುತ್ತಾ ಹೋದರೆ ಒಟ್ಟು ಮೊತ್ತ 37.5 ಲಕ್ಷ ರೂ ಹೂಡಿಕೆ ಮಾಡಿದಂತಾಗುತ್ತದೆ. ಇದಕ್ಕೆ ಈಗಿನ ಶೇ. 7.1ರ ಬಡ್ಡಿದರದ ಪ್ರಕಾರ ಲೆಕ್ಕಹಾಕಿದರೆ ಒಟ್ಟು ಬಡ್ಡಿಮೊತ್ತ 65 ಲಕ್ಷ ರೂಗೂ ಹೆಚ್ಚಾಗುತ್ತದೆ. ನಿಮಗೆ ಸಿಗುವ ರಿಟರ್ನ್ 1.03 ಕೋಟಿ ರೂ ಆಗುತ್ತದೆ.
ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಮಿತಿಮೀರಿ ಬಳಸಿದರೆ ಏನಾಗುತ್ತದೆ? ಬಳಕೆ ಮಾಡದೇ ಬಿಟ್ಟರೆ ಏನಾಗುತ್ತದೆ? ಈ ಮಾಹಿತಿ ತಿಳಿದಿರಿ
ಇದರ ಜೊತೆಗೆ ಪ್ರತೀ ವರ್ಷ ನಿಮಗೆ ಸಿಗುವ ತೆರಿಗೆ ವಿನಾಯಿತಿಯನ್ನೂ ಸೇರಿಸಿದರೆ ವಾಸ್ತವಿಕ ಲಾಭ ಇನ್ನೂ ಹೆಚ್ಚಾಗುತ್ತದೆ. ಒಂದು ಸರಾಸರಿ ಮ್ಯೂಚುವಲ್ ಫಂಡ್ ಎಸ್ಐಪಿಯಲ್ಲಿ ಸಿಗುವ ರಿಟರ್ನ್ಗೆ ಹೋಲಿಸಿದರೆ ಪಿಪಿಎಫ್ ತುಸು ಕಡಿಮೆ ರಿಟರ್ನ್ ಕೊಡುತ್ತದಾದರೂ ರಿಸ್ಕ್ ಇರುವುದಿಲ್ಲ. ನಿಮ್ಮ ಹೂಡಿಕೆ ಸುರಕ್ಷಿತವಾಗಿರುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ