ಆರ್ಬಿಐನ ಡಿಜಿಟಲ್ ಕರೆನ್ಸಿಯ ವ್ಯಾಪ್ತಿ ಹೆಚ್ಚಿಸುವ ಉದ್ದೇಶದಿಂದ ಇ–ರುಪೀ ವೋಚರ್ಗಳನ್ನು (e-RUPI Vouchers) ವಿತರಿಸಲು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೂ ಅವಕಾಶ ಕೊಡಲಾಗಿದೆ. ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ (RBI Governor Shaktikanta Das) ಜೂನ್ 8ರಂದು ಎಂಪಿಸಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ಪ್ರಕಟಿಸಿದ್ದಾರೆ. ನಿರ್ದಿಷ್ಟ ಉದ್ದೇಶಕ್ಕೆ ಬಳಸುವಂತಹ ಇ–ರುಪೀ ಡಿಜಿಟಲ್ ವೋಚರ್ಗಳನ್ನು ಸದ್ಯಕ್ಕೆ ಬ್ಯಾಂಕುಗಳು ಮಾತ್ರ ವಿತರಿಸುವ ಅಧಿಕಾರ ಹೊಂದಿವೆ. ಇದನ್ನು ವಿಸ್ತರಿಸಲು ಮತ್ತು ಇ–ರುಪೀ ವ್ಯಾಪ್ತಿಯನ್ನು ಹೆಚ್ಚಿಸಲು ಮೂರು ಕ್ರಮಗಳನ್ನು ಆರ್ಬಿಐ ಕೈಗೊಂಡಿದೆ. ಒಂದು, ಬ್ಯಾಂಕೇತರ ಸಂಸ್ಥೆಗಳಿಂದಲೂ ಇರುಪೀ ವೋಚರ್ ವಿತರಿಸುವ ಸೌಲಭ್ಯ ಕೊಡಲಾಗಿದೆ. ಎರಡನೆಯದು, ವ್ಯಕ್ತಿಗಳ ಪರವಾಗಿ ಇ–ರುಪೀ ವೋಚರ್ಗಳನ್ನು ವಿತರಿಸು ಅವಕಾಶ. ಹಾಗೆಯೇ, ಕೊನೆಯದಾಗಿ, ಇ–ರುಪೀ ವಿತರಿಸುವ ಪ್ರಕ್ರಿಯೆ ಮತ್ತು ಅದನ್ನು ಬಳಸುವ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ.
ಇ–ರುಪೀ ಅಥವಾ ಎಲೆಕ್ಟ್ರಾನಿಕ್ ರುಪಾಯಿಯು ಆರ್ಬಿಐನ ಉದ್ದೇಶಿತ ಡಿಜಿಟಲ್ ಕರೆನ್ಸಿಯ ರಚನೆಯ ಮೊದಲ ಹಂತ ಎಂದೆನ್ನಲಾಗಿದೆ. ಇದು ಸರ್ಕಾರದ ವಿವಿಧ ಯೋಜನೆಗಳ ಹಣವನ್ನು ನಿರ್ದಿಷ್ಟ ವರ್ಗದ ಜನರಿಗೆ ತಲುಪಿಸಲು ಉಪಯೋಗವಾಗುತ್ತದೆ. ಫಲಾನುಭವಿಗಳ ಮೊಬೈಲ್ಗಳಿಗೆ ಕ್ಯೂಆರ್ ಕೋಡ್ ಅಥವಾ ಎಸ್ಸೆಮ್ಮೆಸ್ ಆಧಾರಿತ ವೋಚರ್ ಅನ್ನು ಕಳುಹಿಸಲಾಗುತ್ತದೆ. ಇದನ್ನು ಬಳಸಿ ಫಲಾನುಭವಿಗಳು ಹಣ ಪಡೆಯಬಹುದು. ಇದನ್ನು ಬಳಸಲು ಪೇಟಿಎಂ ಇತ್ಯಾದಿ ಯಾವುದೇ ಆ್ಯಪ್ ಬೇಕಿಲ್ಲ. ಬ್ಯಾಂಕ್ ಖಾತೆಯೂ ಇರಬೇಕೆಂದಿಲ್ಲ. ಕ್ಯೂಆರ್ ಕೋಡ್ ಅಥವಾ ಎಸ್ಸೆಮ್ಮೆಸ್ನಲ್ಲಿ ಪೂರ್ವನಿಗದಿತ ಮೊತ್ತ ದಾಖಲಾಗಿರುತ್ತದೆ.
ಇದನ್ನೂ ಓದಿ: RBI: ಈ ಹಣಕಾಸು ವರ್ಷ ಹಣದುಬ್ಬರ ಶೇ. 5.1, ಜಿಡಿಪಿ ಶೇ. 6.5; ಆರ್ಬಿಐ ಅಂದಾಜು
ಸದ್ಯಕ್ಕೆ ರಸಗೊಬ್ಬರದ ಸಬ್ಸಿಡಿ, ಮಗು ಮತ್ತು ತಾಯಿ ಕಲ್ಯಾಣ ಯೋಜನೆಯಲ್ಲಿನ ಪೌಷ್ಟಿಕಾಂಶ ನೆರವು, ಟಿಬಿ ನಿರ್ಮೂಲನೆ ಯೋಜನೆ, ಆಯುಷ್ಮಾನ್ ಭಾರತ್ ಪಿಎಂ ಆರೋಗ್ಯ ಯೋಜನೆಗಳು ಮೊದಲಾದವನ್ನು ಇ ರುಪೀ ಕವರ್ ಮಾಡುತ್ತದೆ.
ಖಾಸಗಿ ವಲಯದಲ್ಲೂ ಇ–ರುಪೀ ಬಹಳ ಉಪಯೋಗಕ್ಕೆ ಬರಬಹುದು. ಉದ್ಯೋಗಿಯ ಬ್ಯುಸಿನೆಸ್ ಟ್ರಿಪ್, ಆಹಾರ, ಆರೋಗ್ಯ ವೆಚ್ಚಕ್ಕೆ ಸಂಸ್ಥೆಗಳು ಇ–ರುಪೀ ವೋಚರ್ಗಳನ್ನು ನೀಡಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ