RBI: ಈ ಹಣಕಾಸು ವರ್ಷ ಹಣದುಬ್ಬರ ಶೇ. 5.1, ಜಿಡಿಪಿ ಶೇ. 6.5; ಆರ್ಬಿಐ ಅಂದಾಜು
Prediction For 2023-24 FY: 2023-24ರ ಹಣಕಾಸು ವರ್ಷದಲ್ಲಿ ಭಾರತದಲ್ಲಿ ಹೆಡ್ಲೈನ್ ಅಥವಾ ಸಮಗ್ರ ಗ್ರಾಹಕ ಬೆಲೆ ಸೂಚಿ ಹಣದುಬ್ಬರ ಶೇ. 5.1ರಷ್ಟು ಇರಬಹುದು. ಜಿಡಿಪಿ ಶೇ. 6.5ರಷ್ಟು ಬೆಳೆಯಬಹುದು ಎಂದು ಆರ್ಬಿಐ ನಿರೀಕ್ಷಿಸಿದೆ.
ನವದೆಹಲಿ: ರೆಪೋ ದರವನ್ನು ಶೇ. 6.5ರಲ್ಲಿ ಮುಂದುವರಿಸಲು ನಿರ್ಧರಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್ನ ಹಣಕಾಸು ನೀತಿ ಸಮಿತಿಯು, ಈ ಹಣಕಾಸು ವರ್ಷದಲ್ಲಿ (2023-24) ದೇಶದ ಆರ್ಥಿಕ ಮತ್ತು ಹಣಕಾಸು ಸ್ಥಿತಿ ಹೇಗಿರಬಹುದು ಎಂದು ಮತ್ತೊಮ್ಮೆ ಅವಲೋಕಿಸಿದೆ. ಸಮಿತಿಯ ಪ್ರಕಾರ, ಈ ಹಣಕಾಸು ವರ್ಷದಲ್ಲಿ ಸಮಗ್ರ ಗ್ರಾಹಕ ಬೆಲೆ ಅನುಸೂಚಿ (Headline CPI Inflation) ಹಣದುಬ್ಬರ ಶೇ. 5.1ರಷ್ಟು ಇರಬಹುದು ಎಂದಿದೆ. ಈ ಹಿಂದಿನ ಅದರ ಅಂದಾಜಿನಲ್ಲಿ ಹಣದುಬ್ಬರ ಶೇ. 5.2ರಷ್ಟು ಇರಬಹುದು ಎಂದಿತ್ತು. ಈಗ ಮುಂಗಾರು ಮಳೆ ಉತ್ತಮವಾಗುವ ಸಾಧ್ಯತೆ ಇತ್ಯಾದಿ ಸಂಗತಿಗಳಿಂದ ಹಣದುಬ್ಬರ ನಿರೀಕ್ಷೆಗಿಂತ ತುಸು ಕಡಿಮೆ ಆಗಬಹುದು ಎಂಬ ಅಭಿಪ್ರಾಯಕ್ಕೆ ಬರಲಾಗಿದೆ.
2023-24ರ ಹಣಕಾಸು ವರ್ಷದಲ್ಲಿ ಹಣದುಬ್ಬರ ಅಂದಾಜು:
- ಇಡೀ ಹಣಕಾಸು ವರ್ಷದಲ್ಲಿ ಹಣದುಬ್ಬರ: ಶೇ. 5.1
- ಮೊದಲ ಕ್ವಾರ್ಟರ್ (2023 ಏಪ್ರಿಲ್ನಿಂದ ಜೂನ್ವರೆಗೂ): ಶೇ. 4.6
- ಎರಡನೇ ಕ್ವಾರ್ಟರ್ (2023 ಜುಲೈನಿಂದ ಸೆಪ್ಟೆಂಬರ್ವರೆಗೂ): ಶೇ. 5.2
- ಮೂರನೇ ಕ್ವಾರ್ಟರ್ (2023 ಅಕ್ಟೋಬರ್ನಿಂದ ಡಿಸೆಂಬರ್ವರೆಗೂ): ಶೇ. 5.4
- ನಾಲ್ಕನೇ ಕ್ವಾರ್ಟರ್ (2024 ಜನವರಿಯಿಂದ ಮಾರ್ಚ್ವರೆಗೂ): ಶೇ. 5.2.
ಜಿಡಿಪಿ ದರ 2023-24ರಲ್ಲಿ ಶೇ. 6.5 ಇರುವ ಸಾಧ್ಯತೆ
ಭಾರತೀಯ ರಿಸರ್ವ್ ಬ್ಯಾಂಕ್ 2023-24ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರ ಶೇ. 6.5ರಷ್ಟಿರಬಹುದು ಎಂದು ಅಂದಾಜು ಮಾಡಿತ್ತು. ಹಿಂದಿನ ವರ್ಷದಲ್ಲಿ, ಅಂದರೆ 2022-23 ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಶೇ. 7.1ರಷ್ಟು ಬೆಳೆದಿತ್ತು. ಈ ಹಣಕಾಸು ವರ್ಷದಲ್ಲಿ ಶೇ. 6.5ರಷ್ಟು ಬೆಳೆಯಬಹುದು. ಅಂದರೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಬೆಳವಣಿಗೆ ಸ್ವಲ್ಪ ಕುಂಠಿತಗೊಳ್ಳಬಹುದು. ಇನ್ನು, ತ್ರೈಮಾಸಿಕವಾರು ಬೆಳವಣಿಗೆ ಹೇಗಿರಬಹುದು ಎಂದು ಆರ್ಬಿಐ ಅಂದಾಜು ಮಾಡಿದ್ದು ಅದರ ವಿವರ ಕೆಳಕಂಡಂತಿದೆ…
- ಮೊದಲ ಕ್ವಾರ್ಟರ್ (2023 ಏಪ್ರಿಲ್ನಿಂದ ಜೂನ್ವರೆಗೂ): ಶೇ. 8.0
- ಎರಡನೇ ಕ್ವಾರ್ಟರ್ (2023 ಜುಲೈನಿಂದ ಸೆಪ್ಟೆಂಬರ್ವರೆಗೂ): ಶೇ. 6.5
- ಮೂರನೇ ಕ್ವಾರ್ಟರ್ (2023 ಅಕ್ಟೋಬರ್ನಿಂದ ಡಿಸೆಂಬರ್ವರೆಗೂ): ಶೇ. 6.0
- ನಾಲ್ಕನೇ ಕ್ವಾರ್ಟರ್ (2024 ಜನವರಿಯಿಂದ ಮಾರ್ಚ್ವರೆಗೂ): ಶೇ. 5.7
ಇದನ್ನೂ ಓದಿ: MSP List: ಕೇಂದ್ರದಿಂದ ಎಂಎಸ್ಪಿ ಹೆಚ್ಚಳ; ರಾಗಿ, ಭತ್ತ ಸೇರಿ ಯಾವ್ಯಾವ ಬೆಳೆಗೆ ಕನಿಷ್ಠ ಬೆಲೆ ಎಷ್ಟಿದೆ? ಇಲ್ಲಿದೆ ಪಟ್ಟಿ
ಆರ್ಬಿಐನ ರೆಪೋ, ರಿವರ್ಸ್ ರೆಪೋ ಮತ್ತಿತರ ದರಗಳು
- ರೆಪೋ ದರ: ಶೇ. 6.5
- ರಿವರ್ಸ್ ರಿಪೋ ದರ: ಶೇ. 3.35
- ಬ್ಯಾಂಕ್ ದರ: ಶೇ. 6.75
- ಕ್ಯಾಷ್ ರಿಸರ್ವ್ ರೇಷಿಯೋ: ಶೇ. 4.5
- ಎಸ್ಎಲ್ಆರ್: ಶೇ. 18
- ಎಂಸಿಎಲ್ಆರ್: ಶೇ. 7.90ರಿಂದ ಶೇ. 8.50
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ