SBI Amrit Kalash: ಎಸ್​ಬಿಐಯಿಂದ ಅಮೃತ ಕಲಶ್ ಡಿಪಾಸಿಟ್ ಠೇವಣಿ ಯೋಜನೆ​; ಸಿಗಲಿದೆ ಹೆಚ್ಚು ಬಡ್ಡಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೊಸದಾಗಿ ಅಮೃತ ಕಲಶ್ ಡಿಪಾಸಿಟ್ ಟರ್ಮ್ ಡಿಪಾಸಿಟ್ ಯೋಜನೆ ಆರಂಭಿಸಿದೆ. ನಿರ್ದಿಷ್ಟ ಅವಧಿಗೆ ಹೆಚ್ಚು ಬಡ್ಡಿ ಸೇರಿದಂತೆ ಹಲವು ಪ್ರಯೋಜನಗಳನ್ನು ಈ ಯೋಜನೆಯಿಂದ ಠೇವಣಿದಾರರು ಪಡೆಯಬಹುದಾಗಿದೆ.

SBI Amrit Kalash: ಎಸ್​ಬಿಐಯಿಂದ ಅಮೃತ ಕಲಶ್ ಡಿಪಾಸಿಟ್ ಠೇವಣಿ ಯೋಜನೆ​; ಸಿಗಲಿದೆ ಹೆಚ್ಚು ಬಡ್ಡಿ
ಸಾಂದರ್ಭಿಕ ಚಿತ್ರ
Updated By: Ganapathi Sharma

Updated on: Mar 04, 2023 | 9:00 AM

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಹೊಸದಾಗಿ ಅಮೃತ ಕಲಶ್ ಡಿಪಾಸಿಟ್ (Amrit Kalash Deposit) ಟರ್ಮ್ ಡಿಪಾಸಿಟ್ ಯೋಜನೆ ಆರಂಭಿಸಿದೆ. ನಿರ್ದಿಷ್ಟ ಅವಧಿಗೆ ಹೆಚ್ಚು ಬಡ್ಡಿ ಸೇರಿದಂತೆ ಹಲವು ಪ್ರಯೋಜನಗಳನ್ನು ಈ ಯೋಜನೆಯಿಂದ ಠೇವಣಿದಾರರು ಪಡೆಯಬಹುದಾಗಿದೆ. ಅನಿವಾಸಿ ಬಾರತೀಯರೂ ಈ ಯೋಜನೆಯಡಿ ಠೇವಣಿ ಇಡಬಹುದಾಗಿದ್ದು, ಪ್ರಯೋಜನಗಳನ್ನು ಪಡೆಯಬಹುದು. 400 ದಿನಗಳ ಠೇವಣಿ ಯೋಜನೆ ಆಕರ್ಷಕ ಬಡ್ಡಿಯ ಆಫರ್ ನೀಡುತ್ತಿದೆ. ಈ ಠೇವಣಿ ಯೋಜನೆಯಡಿ ಹಿರಿಯ ನಾಗಕರಿಕರು ಶೇ 7.60 ವರೆಗೆ ಬಡ್ಡಿ ಪಡೆಯಬಹುದಾಗಿದೆ. ಈ ಯೋಜನೆಯಡಿ ಠೇವಣಿ ಖಾತೆ ತೆರೆಯಲು ಮಾರ್ಚ್​ 31ರ ವರೆಗೆ ಮಾತ್ರ ಅವಕಾಶವಿದೆ.

ಅಮೃತ್ ಕಲಶ್ ಡಿಪಾಸಿಟ್ ಠೇವಣಿಗಳು

ಅಮೃತ್ ಕಲಶ್ ಡಿಪಾಸಿಟ್ ಅಡಿಯಲ್ಲಿ ದೇಶೀಯ ರಿಟೇಲ್ ಟರ್ಮ್ ಡಿಪಾಸಿಟ್ (2 ಕೋಟಿ ರೂ), ಎನ್​ಆರ್​ಐ ರುಪೀ ಟರ್ಮ್ ಡಿಪಾಸಿಟ್ ಖಾತೆ ತೆರೆಯಬಹುದಾಗಿದೆ. ಹೊಸದಾಗಿ ಖಾತೆ ತೆರೆಯುವುದರ ಜತೆ ಹಳೆಯ ಠೇವಣಿಗಳನ್ನು ಅಮೃತ್ ಕಲಶ್​ಗೆ ನವೀಕರಿಸುವ ಅವಕಾಶವೂ ಇದೆ. ಟರ್ಮ್ ಮತ್ತು ಸ್ಪೆಷಲ್ ಟರ್ಮ್ ಡಿಪಾಸಿಟ್ ಆಯ್ಕೆಗಳು ಮಾತ್ರ ಯೋಜನೆಯಡಿ ಲಭ್ಯವಿವೆ.

ಬಡ್ಡಿ ಲೆಕ್ಕಾಚಾರ ಹೇಗೆ?

ಮಾಸಿಕ, ತ್ರೈಮಾಸಿಕ ಹಾಗೂ ಅರ್ಧವಾರ್ಷಿಕ ಬಡ್ಡಿ ಆಯ್ಕೆಗೆ ಅವಕಾಶವಿದೆ. ಮೆಚ್ಯೂರಿಟಿ ಅವಧಿಯ ಬಡ್ಡಿ ದರ ಆಯ್ದುಕೊಳ್ಳಲೂ ಅವಕಾಶವಿದೆ. ಈ ಯೋಜನೆಯಡಿ ದೊರೆಯುವ ಬಡ್ಡಿ ಆದಾಯ ತೆರಿಗೆ ಕಾಯ್ದೆಯ ಅಡಿಯಲ್ಲಿ ತೆರಿಗೆ ವ್ಯಾಪ್ತಿಗೆ ಒಳಪಡುತ್ತದೆ. ಅವಧಿಪೂರ್ವ ಹಿಂಪಡೆಯುವಿಕೆಗೆ ಅವಕಾಶ, ಸಾಲ ಸೌಲಭ್ಯವೂ ಇದೆ.

ಇತರ ಎಫ್​ಡಿಗಳು

ಎಸ್​​ಬಿಐ 2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಸ್ಥಿರ ಠೇವಣಿ ಅಥವಾ ಎಫ್​ಡಿ ಬಡ್ಡಿ ದರಗಳನ್ನು ಹೆಚ್ಚಳ ಸುಮಾರು 5 ಮೂಲಾಂಶದಷ್ಟು ಹೆಚ್ಚಳ ಮಾಡಿ 25 ಮೂಲಾಂಶ ನಿಗದಿಮಾಡಿದೆ. ಇದು ಫೆಬ್ರುವರಿ 15ರಿಂದಲೇ ಅಸ್ತಿತ್ವಕ್ಕೆ ಬಂದಿದೆ. ಬ್ಯಾಂಕ್ ಇದೀಗ ಸಾಮಾನ್ಯ ಗ್ರಾಹಕರ ಎಫ್​ಡಿಗಳಿಗೆ ಶೇ 3ರಿಂದ 7ರ ವರೆಗೆ ಬಡ್ಡಿ ನೀಡುತ್ತಿದ್ದು, ಹಿರಿಯ ನಾಗರಿಕರಿಗೆ ಶೇ 3.5ರಿಂದ 7.50 ವರೆಗೆ ಬಡ್ಡಿ ನೀಡುತ್ತಿದೆ.

ಆರ್​ಬಿಐ ಫೆಬ್ರುವರಿ ಮೊದಲ ವಾರದಲ್ಲಿ ರೆಪೊ ದರವನ್ನು 25 ಮೂಲಾಂಶ ಹೆಚ್ಚಿಸಿ ಶೇ 6.50ಕ್ಕೆ ನಿಗದಿಪಡಿಸಿತ್ತು. ಇದರ ಬೆನ್ನಲ್ಲೇ ಎಸ್​ಬಿಐ ಠೇವಣಿಗಳ ಮೇಲಿನ ಬಡ್ಡಿ ದರ ಹೆಚ್ಚಿಸಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ