Mutual fund: 3 ವರ್ಷದಿಂದ ಶೇ. 44ರಷ್ಟು ವಾರ್ಷಿಕ ದರದಲ್ಲಿ ಲಾಭ ತಂದಿದೆ ಎಸ್ಬಿಐನ ಈ ಮ್ಯುಚುವಲ್ ಫಂಡ್
SBI Magnum Children's Benefit Fund: 2020ರ ಸೆಪ್ಟೆಂಬರ್ 29ರಂದು ಆರಂಭವಾದ ಎಸ್ಬಿಐ ಮ್ಯಾಗ್ನಂ ಚಿಲ್ಡ್ರನ್ಸ್ ಬೆನಿಫಿಟ್ ಫಂಡ್ 3 ವರ್ಷದಲ್ಲಿ ಹೂಡಿಕೆಯ ಮೊತ್ತವನ್ನು 3 ಪಟ್ಟು ಹೆಚ್ಚಿಸಿದೆ. ಇದರ ಮೇಲೆ ಹಣ ಹಾಕಿದವರಿಗೆ ಭರ್ಜರಿ ಲಾಭ ಸಿಕ್ಕಿದೆ. ಪ್ರಬಲ ವಲಯಗಳಲ್ಲಿರುವ ಕಂಪನಿಗಳ ಷೇರುಗಳ ಮೇಲೆ ಈ ಮ್ಯೂಚುವಲ್ ಫಂಡ್ ಹಣ ಹಾಕಿದೆ. ಇದರಿಂದ ಇಂಡೆಕ್ಸ್ ಫಂಡ್ಗಳಿಗಿಂತ ಇದು ಹೆಚ್ಚು ಬೆಳವಣಿಗೆ ಹೊಂದಿದೆ.
ಷೇರುಗಳ ಮೇಲೆ ಹೂಡಿಕೆ ಮಾಡಲು ಮ್ಯುಚುವಲ್ ಫಂಡ್ (Mutual fund) ಇದ್ದುದರಲ್ಲಿ ಹೆಚ್ಚು ಸುರಕ್ಷತೆಯ ದಾರಿ. ದೇಶದಲ್ಲಿ ಬಹಳಷ್ಟು ಮ್ಯುಚುವಲ್ ಫಂಡ್ಗಳಿವೆ. ಈ ಫಂಡ್ಗಳು ಹೂಡಿಕೆದಾರರ ಹಣವನ್ನು ವಿವಿಧ ಈಕ್ವಿಟಿ, ಡೆಟ್ (debt) ಇತ್ಯಾದಿ ಕಡೆ ವಿನಿಯೋಗಿಸಿ ಲಾಭ ಸೃಷ್ಟಿಸಲು ಯತ್ನಿಸುತ್ತವೆ. ಭಾರತದಲ್ಲಿ 40ಕ್ಕೂ ಹೆಚ್ಚು ಸೆಬಿ ನೊಂದಾಯಿತ ಮ್ಯುಚುವಲ್ ಫಂಡ್ ಕಂಪನಿಗಳಿವೆ. ಒಂದೂವರೆ ಸಾವಿರದಷ್ಟು ಮ್ಯುಚುವಲ್ ಫಂಡ್ ಸ್ಕೀಮ್ಗಳಿವೆ. ಎಲ್ಲಾ ಮ್ಯೂಚುವಲ್ ಫಂಡ್ಗಳೂ ಲಾಭ ತರುತ್ತವೆ ಎಂದಲ್ಲ. ಹಲವು ಮ್ಯೂಚುವಲ್ ಫಂಡ್ಗಳು ನಷ್ಟ ತಂದಿರುವುದುಂಟು. ಸರಾಸರಿಯಾಗಿ ಶೇ. 5ರಿಂದ 15ರಷ್ಟು ಲಾಭವನ್ನು ನಿರೀಕ್ಷಿಸಬಹುದು. ಇನ್ನೂ ಕೆಲ ಮ್ಯುಚುವಲ್ ಫಂಡ್ಗಳು ಅಚ್ಚರಿ ಹುಟ್ಟುವಷ್ಟು ಲಾಭ ತರುತ್ತವೆ. ಇಂಥ ಕೆಲ ಮ್ಯುಚುವಲ್ ಫಂಡ್ಗಳಲ್ಲಿ ಎಸ್ಬಿಐನ ಮ್ಯಾಗ್ನಂ ಚಿಲ್ಡ್ರನ್ಸ್ ಬೆನಿಫಿಟ್ ಫಂಡ್ ಒಂದು. 2020ರಲ್ಲಿ ಶುರುವಾದ ಈ ಸ್ಕೀಮ್ ಈ 3 ವರ್ಷದಲ್ಲಿ ಶೇ. 44.39ರ ಸಿಎಜಿಆರ್ ದರದಲ್ಲಿ ಲಾಭ ತಂದಿದೆ.
ಎಸ್ಬಿಐ ಮ್ಯಾಗ್ನಂ ಚಿಲ್ಡ್ರನ್ಸ್ ಬೆನಿಫಿಟ್ ಫಂಡ್ ತಂದ ಲಾಭವೆಷ್ಟು?
ಈ ಫಂಡ್ 2020ರ ಸೆಪ್ಟೆಂಬರ್ 29ರಂದು ಶುರುವಾಗಿದೆ. ಆಗ ಇದರ ನ್ಯೂ ಫಂಡ್ ಆಫರ್ನಲ್ಲಿ ನೀವು 10 ಲಕ್ಷ ರೂ ಹೂಡಿಕೆ ಮಾಡಿದ್ದರೆ ಇವತ್ತು ನಿಮ್ಮ ಹಣ 30 ಲಕ್ಷಕ್ಕಿಂತ ಹೆಚ್ಚಿರುತ್ತಿತ್ತು. ಇದೇ ಅವಧಿಯಲ್ಲಿ ಬಿಎಸ್ಇ ಸೆನ್ಸೆಕ್ಸ್ ಟಿಆರ್ಐ ಇಂಡೆಕ್ಸ್ ಫಂಡ್ನಲ್ಲಿ ನೀವು ಅಷ್ಟೇ ಹಣ ಹೂಡಿಕೆ ಮಾಡಿದ್ದರೆ 3 ವರ್ಷದಲ್ಲಿ 18 ಲಕ್ಷ ರೂ ಆಗುತ್ತಿತ್ತು. ಅಂದರೆ, ಎಸ್ಬಿಐನ ಮ್ಯಾಗ್ನಮ್ ಚಿಲ್ಡ್ರನ್ಸ್ ಬೆನಿಫಿಟ್ ಫಂಡ್ ಅದೆಷ್ಟು ಅಗಾಧವಾಗಿ ಯಶಸ್ಸು ಕಂಡಿರಬಹುದು…!
ಇದನ್ನೂ ಓದಿ: ಡೀಮ್ಯಾಟ್ ಅಕೌಂಟ್ ಇಲ್ಲದೇ ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಸಾಧ್ಯವಾ? ಫೋಲಿಯೋ ಮೂಲಕ ಇನ್ವೆಸ್ಟ್ ಮಾಡಬಹುದಾ?
ನೀವು ಒಮ್ಮೆಗೇ 10 ಲಕ್ಷ ರೂ ಹೂಡಿಕೆ ಮಾಡುವ ಬದಲು ಈ ಮ್ಯೂಚುವಲ್ ಫಂಡ್ನ ಎಸ್ಐಪಿ ಯೋಜನೆ ಅಡಿ ತಿಂಗಳಿಗೆ 10,000 ರೂನಂತೆ ಹೂಡಿಕೆ ಮಾಡುತ್ತಾ ಬಂದಿದ್ದರೆ ನಿಮ್ಮ ಈವರೆಗಿನ 3.60 ಲಕ್ಷ ರೂ ಹೂಡಿಕೆಯು 5.41 ಲಕ್ಷ ರೂ ಆಗಿರುತ್ತಿತ್ತು.
ಎಸ್ಬಿಐ ಮ್ಯಾಗ್ನಂ ಚಿಲ್ಡ್ರನ್ಸ್ ಬೆನಿಫಿಟ್ ಫಂಡ್ನ ವಿಶೇಷತೆ ಏನು?
ಈ ಫಂಡ್ ಯಾವುದೋ ಒಂದು ಕ್ಷೇತ್ರದ ಕಂಪನಿಗಳ ಷೇರುಗಳ ಮೇಲೆ ಹೂಡಿಕೆ ಮಾಡುವುದಿಲ್ಲ. ವಿವಿಧ ವಲಯಗಳಿಂದ ಕಂಪನಿಗಳನ್ನು ಹೆಕ್ಕಿ ಅವುಗಳ ಷೇರುಗಳ ಮೇಲೆ ಹೂಡಿಕೆ ಮಾಡಲಾಗುತ್ತದೆ. ಸರ್ಕಾರಿ ಬಾಂಡ್ ಇತ್ಯಾದಿ ಡೆಟ್ ಮಾರುಕಟ್ಟೆಗಳಲ್ಲೂ ಇದು ಹೂಡಿಕೆ ಮಾಡುತ್ತದೆ. ಹಾಗೆಯೇ, ವಿದೇಶೀ ಷೇರುಪೇಟೆಗಳಲ್ಲೂ ಹೂಡಿಕೆ ಮಾಡುತ್ತದೆ.
ಆರ್ ಶ್ರೀನಿವಾಸನ್ ಅವರು ಈಕ್ವಿಟಿ ಹೂಡಿಕೆಗಳನ್ನು ನಿರ್ವಹಿಸುತ್ತಾರೆ. ದಿನೇಶ್ ಅಹುಜಾ ಅವರು ನಿಶ್ಚಿತ ಠೇವಣಿಗಳಲ್ಲಿ ಹೂಡಿಕೆ ನಿರ್ವಹಿಸುತ್ತಾರೆ. ಮೋಹಿತ್ ಜೈನ್ ವಿದೇಶೀ ಷೇರುಗಳ ಮೇಲಿನ ಹೂಡಿಕೆಯನ್ನು ನೋಡಿಕೊಳ್ಳುತ್ತಾರೆ.
ಮೂರು ವರ್ಷಗಳ ಹಿಂದೆ ಆರಂಭವಾದ ಈ ಮ್ಯುಚುವಲ್ ಫಂಡ್ನಲ್ಲಿ ಹೂಡಿಕೆದಾರರ ಮೊತ್ತ 1,200 ಕೋಟಿ ರೂಗೂ ಹೆಚ್ಚಿದೆ. 29 ಕಂಪನಿಗಳ ಷೇರುಗಳ ಮೇಲೆ ಹೆಚ್ಚಿನ ಹೂಡಿಕೆ ಇದೆ. ಈ ಎಲ್ಲಾ ಕಂಪನಿಗಳು ಸಾಕಷ್ಟು ಲಾಭ ತಂದುಕೊಡುವ ವಲಯದಲ್ಲಿರುವಂಥವು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ