ಸಾಂದರ್ಭಿಕ ಚಿತ್ರ
ದೇಶದ ಬಹುಪಾಲು ವೇತನದಾರ ಮಧ್ಯಮ ವರ್ಗದವರು ಸಾಲರಿ ಅಕೌಂಟ್ (Salary account) ಅಥವಾ ವೇತನ ಖಾತೆ ಹೊಂದಿರುತ್ತಾರೆ ಮತ್ತು ಹೊಂದಲು ಬಯಸುತ್ತಾರೆ. ಸಾಲರಿ ಅಕೌಂಟ್ ಶೂನ್ಯ ಠೇವಣಿಯ ಖಾತೆ ಎಂಬುದೂ ಇದಕ್ಕೆ ಬಹುಮುಖ್ಯ ಕಾರಣ. ಇಷ್ಟೇ ಅಲ್ಲದೆ ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್ ಸೇರಿದಂತೆ ಅನೇಕ ಸೇವೆಗಳೂ ಸಾಲರಿ ಅಕೌಂಟ್ದಾರರಿಗೆ ದೊರೆಯುತ್ತದೆ. ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ಸರ್ಕಾರಿ ನೌಕರರಿಗೆ, ಕಾರ್ಪೊರೇಟರ್ಗಳಿಗೆ, ಖಾಸಗಿ ವಲಯದ ಉದ್ಯೋಗಿಗಳಿಗೆ ಅನೇಕ ಸೇವೆಗಳನ್ನು ನೀಡುತ್ತಿದೆ. ಆನ್ಲೈನ್ ಮೂಲಕವೇ ಸಾಲರಿ ಅಕೌಂಟ್ ತೆರೆಯುವ ಸುಲಭ ಆಯ್ಕೆಯನ್ನೂ ಗ್ರಾಹಕರಿಗೆ ನೀಡಿದೆ. ಈಗಾಗಲೇ ಅಸ್ತಿತ್ವದಲ್ಲಿರುವ ಉಳಿತಾಯ ಖಾತೆಯನ್ನು ಸಾಲರಿ ಅಕೌಂಟ್ ಆಗಿ ಪರಿವರ್ತಿಸಲೂ ಅವಕಾಶವಿದೆ. ಬ್ಯಾಂಕ್ ಯಾವೆಲ್ಲ ರೀತಿಯ ಸಾಲರಿ ಅಕೌಂಟ್ ಸೇವೆ ಒದಗಿಸುತ್ತಿದೆ? ಆನ್ಲೈನ್ ಮೂಲಕ ಸಾಲರಿ ಅಕೌಂಟ್ ಓಪನ್ ಮಾಡುವುದು ಹೇಗೆಂಬ ಮಾಹಿತಿ ಇಲ್ಲಿದೆ.
ಸಾಲರಿ ಅಕೌಂಟ್ನ ವಿಧಗಳು
- ಕೇಂದ್ರ ಸರ್ಕಾರದ ವೇತನ ಪ್ಯಾಕೇಜ್ (ಸಿಜಿಎಸ್ಪಿ)
- ರಾಜ್ಯ ಸರ್ಕಾರದ ವೇತನ ಪ್ಯಾಕೇಜ್ (ಎಸ್ಜಿಎಸ್ಪಿ)
- ರೈಲ್ವೆ ವೇತನ ಪ್ಯಾಕೇಜ್ (ಆರ್ಎಸ್ಪಿ)
- ರಕ್ಷಣಾ ವೇತನ ಪ್ಯಾಕೇಜ್ (ಡಿಎಸ್ಪಿ)
- ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ವೇತನ ಪ್ಯಾಕೇಜ್ (ಸಿಎಪಿಎಸ್ಪಿ)
- ಪೊಲೀಸ್ ವೇತನ ಪ್ಯಾಕೇಜ್ (ಪಿಎಸ್ಪಿ)
- ಭಾರತೀಯ ಕರಾವಳಿ ರಕ್ಷಣಾ ಪಡೆ ವೇತನ ಪ್ಯಾಕೇಜ್ (ಐಸಿಗಿಎಸ್ಪಿ)
- ಕಾರ್ಪೊರೇಟ್ ಸಾಲರಿ ಪ್ಯಾಕೇಜ್ (ಸಿಎಸ್ಪಿ)
- ಸ್ಟಾರ್ಟಪ್ ಸಾಲರಿ ಪ್ಯಾಕೇಜ್ (ಎಸ್ಯುಎಸ್ಪಿ)
ಸಾಲರಿ ಅಕೌಂಟ್ ಪ್ರಯೋಜನಗಳೇನು?
- ಶೂನ್ಯ ಬ್ಯಾಲೆನ್ಸ್ (ಝೀರೋ ಬ್ಯಾಲೆನ್ಸ್) ಅಕೌಂಟ್
- ಆಟೊ ಸ್ವೀಪ್ ಸರ್ವೀಸ್
- ವಿಶೇಷ ಸೌಲಭ್ಯಗಳೊಂದಿಗೆ ಉಚಿತ ಡೆಬಿಟ್ ಕಾರ್ಡ್
- ಎಸ್ಬಿಐ ಮತ್ತು ಇತರ ಬ್ಯಾಂಕ್ ಎಟಿಎಂಗಳಲ್ಲಿ ಅನಿಯಮಿತ ಟ್ರಾನ್ಸಾಕ್ಷನ್ಗೆ ಅವಕಾಶ
- ಡಿಡಿ ನೀಡಿಕೆಗೆ ಶುಲ್ಕ ವಿನಾಯಿತಿ
- ಮಲ್ಟಿ ಸಿಟಿ ಚೆಕ್ಗೆ ಶುಲ್ಕ ವಿನಾಯಿತಿ
- ಆಕರ್ಷಕ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ, ಕಾರು ಸಾಲ ಹಾಗೂ ಗೃಹ ಸಾಲ
- ಅರ್ಹತೆಗೆ ಅನುಗುಣವಾಗಿ ಓವರ್ಡ್ರಾಫ್ಟ್ ಸೌಲಭ್ಯ
- ಅರ್ಹತೆಗೆ ಅನುಗುಣವಾಗಿ ವಾರ್ಷಿಕ ಲಾಕರ್ ಬಾಡಿಗೆಯಲ್ಲಿ ವಿನಾಯಿತಿ
ಯಾವೆಲ್ಲ ದಾಖಲೆಗಳು ಬೇಕು?
- ಪಾಸ್ಪೋರ್ಟ್ ಸೈಜ್ನ ಫೋಟೊಗಳು
- ವಿಳಾಸದ ದೃಢೀಕರಣಕ್ಕೆ ದಾಖಲೆ
- ಉದ್ಯೋಗದ ದೃಢೀಕರಣಕ್ಕೆ ದಾಖಲೆ
- ಇತ್ತೀಚಿನ ಸಾಲರಿ ಸ್ಲಿಪ್
ಆನ್ಲೈನ್ ಮೂಲಕ ಎಸ್ಬಿಐ ಸಾಲರಿ ಅಕೌಂಟ್ ತೆರೆಯುವುದು ಹೇಗೆ?
- ಎಸ್ಬಿಐ ವೆಬ್ಸೈಟ್ಗೆ ಭೇಟಿ ನೀಡಿ ‘ರಿಕ್ವೆಸ್ಟ್ ಎ ಕಾಲ್ ಬ್ಯಾಕ್’ ಅರ್ಜಿಯನ್ನು ಭರ್ತಿ ಮಾಡಿ. ನಂತರ ಸಬ್ಮಿಟ್ ಕೊಡಿ.
- ಬ್ಯಾಂಕ್ನ ಪ್ರತಿನಿಧಿಯೊಬ್ಬರು ನಿಮ್ಮನ್ನು ಸಂಪರ್ಕಿಸುತ್ತಾರೆ. ಹಾಗೂ ಏನು ಮಾಡಬೇಕೆಂಬುದನ್ನು ಹಂತಹಂತವಾಗಿ ತಿಳಿಸಿಕೊಡುತ್ತಾರೆ.
- ಬ್ಯಾಂಕ್ ಶಾಖೆಗೆ ತೆರಳಿಯೂ ಕಾಯದೆ ಸುಲಭವಾಗಿ ಆನ್ಲೈನ್ ಮೂಲಕ ಸಾಲರಿ ಅಕೌಂಟ್ ತೆರೆಯಬಹುದು.