FD Rates: ಹಿರಿಯ ನಾಗರಿಕರ ಉಳಿತಾಯ ಯೋಜನೆ VS ಎಫ್​ಡಿ; ಯಾವುದರಲ್ಲಿ ಹೂಡಿಕೆ ಉತ್ತಮ?

| Updated By: Ganapathi Sharma

Updated on: Dec 26, 2022 | 2:37 PM

ಅನೇಕ ಸಣ್ಣ ಬ್ಯಾಂಕ್​ಗಳು ಮತ್ತು ಹಣಕಾಸು ಸಂಸ್ಥೆಗಳು ಎಫ್​ಡಿಗೆ ಶೇಕಡಾ 9ರ ವರೆಗೆ ಬಡ್ಡಿ ನೀಡುತ್ತಿವೆ. ಹೀಗಾಗಿ ಹಿರಿಯ ನಾಗರಿಕರು ಎಸ್​​ಸಿಎಸ್​ಎಸ್​ನಲ್ಲಿ ಹೂಡಿಕೆ ಮಾಡುವುದು ಒಳ್ಳೆಯದೇ ಅಥವಾ ಎಫ್​ಡಿ ಠೇವಣಿ ಇಡುವುದು ಸೂಕ್ತವೇ? ತಜ್ಞರ ಅಭಿಪ್ರಾಯ ಆಧರಿತ ಸಲಹೆ ಇಲ್ಲಿದೆ.

FD Rates: ಹಿರಿಯ ನಾಗರಿಕರ ಉಳಿತಾಯ ಯೋಜನೆ VS ಎಫ್​ಡಿ; ಯಾವುದರಲ್ಲಿ ಹೂಡಿಕೆ ಉತ್ತಮ?
ಹಿರಿಯ ನಾಗರಿಕರ ಹೂಡಿಕೆ ಯೋಜನೆ (ಸಾಂದರ್ಭಿಕ ಚಿತ್ರ)
Image Credit source: Reuters
Follow us on

ಸ್ಥಿರ ಠೇವಣಿಗಳ (FD) ಮೇಲಿನ ಬಡ್ಡಿ ದರ 2020ರಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಕುಸಿದಾಗ ಹಿರಿಯ ನಾಗರಿಕರಿಗೆ (Senior citizens) ತೀವ್ರ ಸಮಸ್ಯೆಯಾಗಿತ್ತು. ಆ ಸಂದರ್ಭದಲ್ಲಿ ಅವರ ಕೈಹಿಡಿದದ್ದು ‘ಹಿರಿಯ ನಾಗರಿಕರ ಉಳಿತಾಯ ಯೋಜನೆ ಅಥವಾ ಎಸ್​​ಸಿಎಸ್​ಎಸ್’ (SCSS). ಎಸ್​​ಸಿಎಸ್​ಎಸ್ ಶೇಕಡಾ 7.4ರ ಬಡ್ಡಿ ನೀಡುತ್ತಿತ್ತು. ಆಗ ಬ್ಯಾಂಕ್​ಗಳಲ್ಲಿ ಹಿರಿಯ ನಾಗರಿಕರ ದೀರ್ಘಾವಧಿಯ ಎಫ್​ಡಿಗಳ ಮೇಲೆ ಶೇಕಡಾ 6.25ರ ವರೆಗಿನ ಬಡ್ಡಿ ದೊರೆಯುತ್ತಿತ್ತಷ್ಟೆ. ಆದರೆ ಇದೀಗ ಪರಿಸ್ಥಿತಿ ಬದಲಾಗಿದೆ. ಆರ್​ಬಿಐ (RBI) ರೆಪೊ ದರ (repo rate) ಸತತವಾಗಿ ಹೆಚ್ಚಿಸುತ್ತಾ ಬಂದಿರುವುದರಿಂದ ಬ್ಯಾಂಕ್​ಗಳು ಎಫ್​ಡಿ ಬಡ್ಡಿ ದರವನ್ನೂ ಹೆಚ್ಚಿಸಿವೆ. ಅನೇಕ ಸಣ್ಣ ಬ್ಯಾಂಕ್​ಗಳು ಮತ್ತು ಹಣಕಾಸು ಸಂಸ್ಥೆಗಳು ಎಫ್​ಡಿಗೆ ಶೇಕಡಾ 9ರ ವರೆಗೆ ಬಡ್ಡಿ ನೀಡುತ್ತಿವೆ. ಹೀಗಾಗಿ ಹಿರಿಯ ನಾಗರಿಕರು ಎಸ್​​ಸಿಎಸ್​ಎಸ್​ನಲ್ಲಿ ಹೂಡಿಕೆ ಮಾಡುವುದು ಒಳ್ಳೆಯದೇ ಅಥವಾ ಎಫ್​ಡಿ ಠೇವಣಿ ಇಡುವುದು ಸೂಕ್ತವೇ? ತಜ್ಞರ ಅಭಿಪ್ರಾಯ ಆಧರಿತ ಸಲಹೆ ಇಲ್ಲಿದೆ.

ಎಸ್​​ಸಿಎಸ್​ಎಸ್​ನ ಸಣ್ಣ ಉಳಿತಾಯ ಯೋಜನೆಯ ಬಡ್ಡಿಯನ್ನು ಸೆಪ್ಟೆಂಬರ್​ನಲ್ಲಿ ಹೆಚ್ಚಿಸಲಾಗಿದೆ. ಅಗತ್ಯ ಎನಿಸಿದಲ್ಲಿ ಪ್ರತಿ ತ್ರೈಮಾಸಿಕ ಅವಧಿಯಲ್ಲಿ ಪರಿಷ್ಕರಿಸುವ ಅಧಿಕಾರವನ್ನು ಎಸ್​​ಸಿಎಸ್​ಎಸ್ ಕೂಡ ಹೊಂದಿದೆ. ಸೆಪ್ಟೆಂಬರ್​ನಲ್ಲಿ ಎಸ್​​ಸಿಎಸ್​ಎಸ್​ನ ಅಡಿಯಲ್ಲಿ ಬರುವ ಕೆಲವೇ ಯೋಜನೆಗಳ ಬಡ್ಡಿ ದರವನ್ನು ಮಾತ್ರ ಸರ್ಕಾರ ಪರಿಷ್ಕರಿಸಿತ್ತು. ಶೇಕಡಾ 7.4ರಿಂದ 7.6ಕ್ಕೆ ಬಡ್ಡಿ ದರ ಹೆಚ್ಚಿಸಿತ್ತು. ಇದು ಎಸ್​​ಸಿಎಸ್​ಎಸ್​ನ ಯೋಜನೆಗಳ ಪೈಕಿ ಸದ್ಯ ಅತಿಹೆಚ್ಚು ಬಡ್ಡಿ ದೊರೆಯುತ್ತಿರುವ ಯೋಜನೆಯಾಗಿದೆ.

ಎಸ್​​ಸಿಎಸ್​ಎಸ್ ಬಡ್ಡಿ ದರ ನಿಗದಿ ಆರ್​ಬಿಐ ಫಾರ್ಮುಲಾಕ್ಕಿಂತ ಭಿನ್ನ

ಎಸ್​​ಸಿಎಸ್​ಎಸ್ ಯೋಜನೆಯಡಿ ಬಡ್ಡಿ ದರ ಆರ್​ಬಿಐ ಫಾರ್ಮುಲಾಕ್ಕಿಂತ ಕಡಿಮೆ ಇರುತ್ತದೆ. ಈ ಲೆಕ್ಕಾಚಾರದ ಪ್ರಕಾರ ತುಲನೆ ಮಾಡಿದರೆ, ಅಕ್ಟೋಬರ್ – ಡಿಸೆಂಬರ್ ಅವಧಿಯ ಎಸ್​​ಸಿಎಸ್​ಎಸ್ ಬಡ್ಡಿ ದರ ಶೇಕಡಾ 8.4ರಷ್ಟು ಇರಬೇಕಿತ್ತು. ಆದರೆ, ಶೇಕಡಾ 0.44 ಕಡಿಮೆ ಇದೆ. ಜತೆಗೆ, ಡಿಸೆಂಬರ್​​ನಲ್ಲಿ ಇನ್ನುಳಿದ ನಾಲ್ಕು ದಿನಗಳಲ್ಲಿ ಎಸ್​​ಸಿಎಸ್​ಎಸ್ ಬಡ್ಡಿ ದರ ಪರಿಷ್ಕರಿಸುವ ಅಥವಾ ಹೆಚ್ಚಿಸುವ ಸಾಧ್ಯತೆ ಕಡಿಮೆ ಇದೆ ಎಂದು ‘ಎಕನಾಮಿಕ್ ಟೈಮ್ಸ್​’ ವರದಿ ಮಾಡಿದೆ. ‘ಆರ್​ಬಿಐ ಈಗಾಗಲೇ ಮೇ ನಂತರ ಈವರೆಗೆ ರೆಪೊ ದರದಲ್ಲಿ 225 ಮೂಲಾಂಶ ಹೆಚ್ಚಳ ಮಾಡಿದೆ. ಹೀಗಾಗಿ ಕೆಲವು ಬ್ಯಾಂಕ್​ಗಳಲ್ಲಿ ಎಫ್​ಡಿಗೆ ಶೇಕಡಾ 9ರ ವರೆಗೆ ಬಡ್ಡಿ ದರ ದೊರೆಯುತ್ತಿದೆ. ಸರ್ಕಾರ ಕೂಡ ಉಳಿತಾಯ ಯೋಜನೆಗಳ ಬಡ್ಡಿ ದರ ಹೆಚ್ಚಿಸುವ ಸಾಧ್ಯತೆ ಇದೆ’ ಎಂದು ಪೈಸಾ ಬಜಾರ್​ನ ಹಿರಿಯ ನಿರ್ದೇಶಕ ಗೌರವ್ ಅಗರ್​ವಾಲ್ ತಿಳಿಸಿದ್ದಾರೆ.

ಇದನ್ನೂ ಓದಿ: FD Rates: ಎಸ್​ಬಿಐ, ಎಚ್​ಡಿಎಫ್​ಸಿ, ಐಸಿಐಸಿಐ; ಯಾವ ಬ್ಯಾಂಕಲ್ಲಿ ಹಿರಿಯ ನಾಗರಿಕರ ಎಫ್​ಡಿಗೆ ಹೆಚ್ಚು ಬಡ್ಡಿ?

ಆದರೆ ಎಸ್​​ಸಿಎಸ್​ಎಸ್ ಈಗಾಗಲೇ ಬಡ್ಡಿ ದರ ಪರಿಷ್ಕರಿಸಿದ್ದರಿಂದ ಮತ್ತೆ ಹೆಚ್ಚಿಸುವ ಸಾಧ್ಯತೆ ಕಡಿಮೆ. ಒಂದು ವೇಳೆ ಹೆಚ್ಚಿಸಿದರೂ ಬ್ಯಾಂಕ್​ಗಳ ಎಫ್​​ಡಿ ದರಕ್ಕೆ ಸಮನಾಗಿ ಹೆಚ್ಚಳವಾಗದು ಎನ್ನಲಾಗಿದೆ.

ಅಲ್ಪಾವಧಿಗೆ ಬ್ಯಾಂಕ್​ಗಳಲ್ಲಿ ಎಫ್​ಡಿ ಇಡುವುದು ಉತ್ತಮ

ಆರ್​ಬಿಐ ಹಣಕಾಸು ನೀತಿಗೆ ಅನುಗುಣವಾಗಿ ಬ್ಯಾಂಕ್​ಗಳು ಎಫ್​ಡಿ ಬಡ್ಡಿ ದರ ಹೆಚ್ಚಿಸಿರುವುದು, ಇನ್ನೂ ಹೆಚ್ಚಿಸುವ ಸಾಧ್ಯತೆ ಇರುವುದರಿಂದ ಹಿರಿಯ ನಾಗರಿಕರು ಎಫ್​ಡಿ ಹೂಡಿಕೆ ಮಾಡುವುದು ಸದ್ಯದ ಪರಿಸ್ಥಿತಿಯಲ್ಲಿ ಉತ್ತಮ ಆಯ್ಕೆಯಾಗಬಲ್ಲದು. ಆದರೆ, ದೀರ್ಘಾವಧಿಗೆ ಬದಲಾಗಿ 2ರಿಂದ 4 ವರ್ಷಗಳ ಅವಧಿಗೆ ಹೂಡಿಕೆ ಮಾಡುವುದು ಉತ್ತಮ. ಬ್ಯಾಂಕ್​ಗಳು, ಸಣ್ಣ ಹಣಕಾಸು ಸಂಸ್ಥೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಹೆಚ್ಚಿನ ಬಡ್ಡಿ ಪಡೆಯಬಹುದು. ಆದರೆ ಸಣ್ಣ ಹಣಕಾಸು ಸಂಸ್ಥೆಗಳಲ್ಲಿ ಹೂಡಿಕೆ ಮಾಡುವಾಗ ಹಣಕಾಸು ಅಪಾಯಗಳ ಬಗ್ಗೆ ಎಚ್ಚರವಹಿಸಬೇಕು. ಹಣಕಾಸು ಸಂಸ್ಥೆಗಳ ಪೂರ್ವಾಪರಗಳನ್ನು ಸರಿಯಾಗಿ ತಿಳಿದುಕೊಂಡು ಹೂಡಿಕೆ ಮಾಡಬೇಕು ಎಂದಿದ್ದಾರೆ ತಜ್ಞರು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:36 pm, Mon, 26 December 22